ಪವನ್ ಕಲ್ಯಾಣ್ (Pawan Kalyan) ಈಗ ರಾಜಕೀಯದಲ್ಲಿ ಬ್ಯುಸಿಯಾಗಿದ್ದಾರೆ. ಹಾಗೆಂದು ಚಿತ್ರರಂಗದಿಂದ ಸಂಪೂರ್ಣವಾಗಿ ದೂರಾಗಿಲ್ಲ. ಇತ್ತೀಚೆಗಷ್ಟೆ ಮಾತನಾಡಿದ ಅವರು, ನಾನು ಜೀವನ ನಡೆಸಲು ಸಿನಿಮಾಗಳಲ್ಲಿ ನಟಿಸುತ್ತಲೇ ಇರಬೇಕು, ನನಗೆ ಬೇರೆ ಆದಾಯ ಮೂಲಗಳಿಲ್ಲ ಎಂದಿದ್ದಾರೆ. ಕಳೆದ ಆಂಧ್ರ ವಿಧಾನಸಭೆ ಚುನಾವಣೆಗೆ ಮುಂಚೆ ಪವನ್ ಕಲ್ಯಾಣ್ ಮೂರು ಸಿನಿಮಾಗಳ ಶೂಟಿಂಗ್ ಒಟ್ಟಿಗೆ ನಡೆಸುತ್ತಿದ್ದರು. ಆದರೆ ಚುನಾವಣೆ ಕಾರಣಕ್ಕೆ ಮೂರು ಸಿನಿಮಾಗಳ ಚಿತ್ರೀಕರಣವನ್ನು ಅರ್ಧಕ್ಕೆ ಬಿಟ್ಟು ಪ್ರಚಾರಕ್ಕೆ ಧುಮುಕಿದ್ದರು. ಈಗ ಪವನ್ ಕಲ್ಯಾಣ್ ಆಂಧ್ರದ ಉಪ ಮುಖ್ಯಮಂತ್ರಿ. ಆದರೆ ಅವರು ಅರ್ಧ ನಟಿಸಿದ್ದ ಕೆಲ ಸಿನಿಮಾಗಳು ನಿಂತು ಹೋಗಿವೆ ಎನ್ನಲಾಗುತ್ತಿದೆ. ಈ ಬಗ್ಗೆ ನಿರ್ಮಾಪಕರು ಮಾತನಾಡಿದ್ದಾರೆ.
ಚುನಾವಣೆ ಪ್ರಚಾರಕ್ಕೆ ಹೋಗುವ ಮುಂಚೆ ಪವನ್ ಕಲ್ಯಾಣ್, ‘ಹರಿಹರ ವೀರ ಮಲ್ಲು’, ‘ಓಜಿ’ ಮತ್ತು ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾಗಳಲ್ಲಿ ನಟಿಸುತ್ತಿದ್ದರು. ಇವುಗಳಲ್ಲಿ ‘ಹರಿಹರ ವೀರ ಮಲ್ಲು’ ಸಿನಿಮಾದ ಉಳಿದ ಭಾಗವನ್ನು ಇತ್ತೀಚೆಗಷ್ಟೆ ಪವನ್ ಮುಗಿಸಿಕೊಟ್ಟಿದ್ದಾರೆ. ಆ ಸಿನಿಮಾದ ಬಿಡುಗಡೆ ದಿನಾಂಕವನ್ನೂ ಸಹ ಘೋಷಿಸಲಾಗಿದೆ. ‘ಓಜಿ’ ಸಿನಿಮಾದ ಬಗ್ಗೆ ಸ್ವತಃ ಪವನ್ ಕಲ್ಯಾಣ್ಗೆ ಹೆಚ್ಚು ಆಸಕ್ತಿ ಇರುವ ಕಾರಣ ಆ ಸಿನಿಮಾವನ್ನೂ ಸಹ ಮುಗಿಸಿಕೊಡಲಿದ್ದಾರೆ ಎನ್ನಲಾಗುತ್ತಿದೆ. ಆದರೆ ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾ ಬಗ್ಗೆ ಯಾವುದೇ ಸುದ್ದಿ ಇಲ್ಲ. ಈ ಸಿನಿಮಾ ನಿಂತು ಹೋಗಿದೆ ಎನ್ನಲಾಗುತ್ತಿದೆ.
‘ಉಸ್ತಾದ್ ಭಗತ್ ಸಿಂಗ್’ ಸಿನಿಮಾ ಅನ್ನು ‘ಪುಷ್ಪ’ ಖ್ಯಾತಿಯ ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣ ಮಾಡುತ್ತಿದ್ದು, ಹ್ಯಾರಿಸ್ ಶಂಕರ್ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾದಲ್ಲಿ ಪವನ್ ಕಲ್ಯಾಣ್ ಜೊತೆಗೆ ಶ್ರೀಲೀಲಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಸಿನಿಮಾದ ಪ್ರೋಮೋ ಸಹ ಈಗಾಗಲೇ ಬಿಡುಗಡೆ ಆಗಿದ್ದು, ಸಿನಿಮಾನಲ್ಲಿ ಠಪೋರಿ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಪವನ್ ಕಲ್ಯಾಣ್ ನಟಿಸುತ್ತಿದ್ದಾರೆ. ಆದರೆ ಈಗ ಪವನ್, ಜವಾಬ್ದಾರಿಯುತ ಸ್ಥಾನದಲ್ಲಿದ್ದು, ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾ ತಮ್ಮ ಈಗಿನ ಇಮೇಜಿಗೆ ಧಕ್ಕೆ ತರುವ ಸಾಧ್ಯತೆ ಇದೆ ಎಂಬ ಕಾರಣಕ್ಕೆ ಈ ಸಿನಿಮಾದಲ್ಲಿ ನಟಿಸದಿರಲು ಪವನ್ ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ.
ಇದನ್ನೂ ಓದಿ:ದಳಪತಿ ವಿಜಯ್ಗೆ ಸಂದೇಶ ಕೊಟ್ಟ ಪವನ್ ಕಲ್ಯಾಣ್; ಹೇಳಿದ ಕಿವಿಮಾತೇನು?
ಇತ್ತೀಚೆಗಷ್ಟೆ ‘ರಾಬಿನ್ಹುಡ್’ ಸಿನಿಮಾದ ಪ್ರಚಾರದ ಸಂದರ್ಭದಲ್ಲಿ ಮೈತ್ರಿ ಮೂವಿ ಮೇಕರ್ಸ್ನ ನಿರ್ಮಾಪಕರಿಗೆ ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾದ ಬಗ್ಗೆ ಪ್ರಶ್ನೆ ಕೇಳಲಾಯ್ತು. ಆ ಸಿನಿಮಾ ನಿಂತು ಹೋಗಿದೆಯೇ ಎಂಬ ಪತ್ರಕರ್ತರ ಅನುಮಾನಕ್ಕೆ ಉತ್ತರಿಸಿದ ನಿರ್ಮಾಪಕರು. ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾ ನಿಂತು ಹೋಗಿಲ್ಲ, ಖಂಡಿತ ನಾವು ಆ ಸಿನಿಮಾ ಪೂರ್ಣಗೊಳಿಸುತ್ತೇವೆ. ನಾವು ಪವನ್ ಕಲ್ಯಾಣ್ ಅವರು ಡೇಟ್ಸ್ ಕೊಡಲೆಂದು ಕಾಯುತ್ತಿದ್ದೇವೆ. ಬಹುಷಃ ಇದೇ ವರ್ಷವೇ ನಾವು ಆ ಸಿನಿಮಾದ ಚಿತ್ರೀಕರಣ ಮುಗಿಸುವ ಆಲೋಚನೆಯಲ್ಲಿದ್ದೇವೆ. ಮುಂದಿನ ವರ್ಷ ಸಿನಿಮಾ ಬಿಡುಗಡೆ ಮಾಡಲಿದ್ದೇವೆ. ಅದ್ಭುತವಾದ ಕತೆಯನ್ನು ಆ ಸಿನಿಮಾಕ್ಕಾಗಿ ಹ್ಯಾರಿಸ್ ಮಾಡಿಕೊಂಡಿದ್ದಾರೆ ಎಂದಿದ್ದಾರೆ. ಪವನ್ ಕಲ್ಯಾಣ್ ನಟನೆಯ‘ಹರಿಹರ ವೀರ ಮಲ್ಲು’ ಸಿನಿಮಾ ಮೇ 9ಕ್ಕೆ ಬಿಡುಗಡೆ ಆಗಲಿದೆ. ‘ಓಜಿ’ ಸಿನಿಮಾದ ಚಿತ್ರೀಕರಣ ಇನ್ನೇನು ಶುರುವಾಗಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ