ಪವನ್ ಕಲ್ಯಾಣ್ ನಟನೆಯ ಹೊಸ ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ
Pawan Kalyan: ನಟ ಪವನ್ ಕಲ್ಯಾಣ್ ಈಗ ಆಂಧ್ರ ಪ್ರದೇಶದ ಉಪ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ರಾಜಕಾರಣಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಜೊತೆಗೆ ಸಿನಿಮಾ ನಟನಾಗಿಯೂ ತಮ್ಮ ಕೆಲಸ ಮಾಡುತ್ತಲೇ ಬರುತ್ತಿದ್ದಾರೆ. ಇದೀಗ ಪವನ್ ಕಲ್ಯಾಣ್ ನಟನೆಯ ‘ಹರಿಹರ ವೀರಮಲ್ಲು’ ಸಿನಿಮಾದ ಬಿಡುಗಡೆ ದಿನಾಂಕ ಇದೀಗ ಘೋಷಣೆ ಆಗಿದೆ. ಪವನ್ ಡಿಸಿಎಂ ಆದ ಬಳಿಕ ಬಿಡುಗಡೆ ಆಗುತ್ತಿರುವ ಅವರ ಮೊದಲ ಸಿನಿಮಾ ಇದು.

ಪವನ್ ಕಲ್ಯಾಣ್ (Pawan Kalyan) ಈಗ ಆಂಧ್ರ ಪ್ರದೇಶದ ಉಪ ಮುಖ್ಯಮಂತ್ರಿ. ರಾಜಕೀಯದಲ್ಲಿ ಬ್ಯುಸಿಯಾಗಿರುವ ಪವನ್ ಕಲ್ಯಾಣ್ ಕಳೆದ ಕೆಲ ತಿಂಗಳುಗಳಿಂದಲೂ ಚಿತ್ರರಂಗದಿಂದ ದೂರವೇ ಉಳಿದಿದ್ದರು. ಆದರೆ ಚುನಾವಣೆಗೆ ಮುಂಚೆ ಪವನ್ ಕಲ್ಯಾಣ್ ಕೈಯಲ್ಲಿ ಬರೋಬ್ಬರಿ ನಾಲ್ಕು ಸಿನಿಮಾಗಳಿದ್ದವು. ಅವುಗಳಲ್ಲಿ ಮೂರು ಸಿನಿಮಾಗಳ ಚಿತ್ರೀಕರಣ ಅರ್ಧ ನಡೆದಿತ್ತು. ಚುನಾವಣೆ ನಡೆದು, ಉಪ ಮುಖ್ಯಮಂತ್ರಿ ಆದ ಬಳಿಕ ಬಿಡುವು ಪಡೆದು ಮತ್ತೆ ಚಿತ್ರೀಕರಣದಲ್ಲಿ ಪಾಲ್ಗೊಂಡ ಪವನ್ ಕಲ್ಯಾಣ್, ಇದೀಗ ಒಂದು ಸಿನಿಮಾದ ಚಿತ್ರೀಕರಣ ಮುಗಿಸಿದ್ದು, ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆ ಆಗಿದೆ.
ಚುನಾವಣೆಗೆ ಮೊದಲು ಪವನ್ ಕಲ್ಯಾಣ್, ‘ಹರಿ ಹರ ವೀರ ಮಲ್ಲು’, ‘ಭಗತ್ ಸಿಂಗ್’ ಮತ್ತು ‘ಓಜಿ’ ಸಿನಿಮಾಗಳ ಚಿತ್ರೀಕರಣಗಳಲ್ಲಿ ತೊಡಗಿಕೊಂಡಿದ್ದರು. ಅದರಲ್ಲೂ ‘ಹರಿಹರ ವೀರ ಮಲ್ಲು’ ಪವನ್ ಕಲ್ಯಾಣ್ ನಟಿಸುತ್ತಿರುವ ಮೊದಲ ಐತಿಹಾಸಿಕ ಕತೆಯುಳ್ಳ ಸಿನಿಮಾ ಆಗಿತ್ತು. ಚುನಾವಣೆಗೆ ಮುಂಚೆ ಶೇ.70 ಭಾಗ ಚಿತ್ರೀಕರಣವನ್ನು ಸಹ ಮುಗಿಸಲಾಗಿತ್ತು. ಆದರೆ ಪವನ್ ಕಲ್ಯಾಣ್, ಸಿನಿಮಾ ಅನ್ನು ನಿಲ್ಲಿಸಿ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡರು. ಚುನಾವಣೆಯಲ್ಲಿ ಭರ್ಜರಿ ಜಯಭೇರಿ ಭಾರಿಸಿದ ಪವನ್, ಉಪ ಮುಖ್ಯಮಂತ್ರಿಯೂ ಆದರು. ಆರಂಭದ ಕೆಲ ಸಮಯ ಸರ್ಕಾರಿ ಕೆಲಸಗಳಲ್ಲಿ ತೊಡಗಿಕೊಂಡಿದ್ದ ಪವನ್ ಕಲ್ಯಾಣ್, ನಿರ್ಮಾಪಕರ ಒತ್ತಾಯದ ಮೇರೆಗೆ ಚಿತ್ರೀಕರಣದಲ್ಲಿ ಭಾಗವಹಿಸಿ ಲಗುಬಗೆಯಲ್ಲಿ ಚಿತ್ರೀಕರಣ ಮುಗಿಸಿದ್ದಾರೆ.
‘ಹರಿಹರ ವೀರಮಲ್ಲು’ ಸಿನಿಮಾ ಈ ಮೊದಲು ಹಬ್ಬಿದ್ದ ಸುದ್ದಿಯಂತೆ ಏಪ್ರಿಲ್ ತಿಂಗಳಲ್ಲಿ ಬಿಡುಗಡೆ ಆಗಬೇಕಿತ್ತು. ಆದರೆ ಅನಿವಾರ್ಯ ಕಾರಣಗಳಿಂದಾಗಿ ಸಿನಿಮಾದ ಬಿಡುಗಡೆ ದಿನಾಂಕವನ್ನು ಮೇ ತಿಂಗಳಿಗೆ ಮುಂದೂಡಲಾಗಿದೆ. ಇದೀಗ ‘ಹರಿಹರ ವೀರಮಲ್ಲು’ ಸಿನಿಮಾ ಮೇ 9ರಂದು ತೆರೆಗೆ ಬರಲಿದೆ. ಈ ಸಿನಿಮಾದ ಮೊದಲ ಭಾಗವಷ್ಟೆ ಈಗ ಬಿಡುಗಡೆ ಆಗುತ್ತಿದೆ. ಸಿನಿಮಾದ ಎರಡನೇ ಭಾಗ ಸಹ ಬರುವುದಕ್ಕಿದೆ. ಸಿನಿಮಾ ಅನ್ನು ಖ್ಯಾತ ನಿರ್ದೇಶಕ ಕ್ರಿಶ್ ನಿರ್ದೇಶಿಸಿದ್ದಾರೆ. ಈ ಹಿಂದೆ ‘ಗಾಯಂ’, ‘ವೇದಂ’, ‘ಗೌತಮಿಪುತ್ರ ಶಾತಕರ್ಣಿ’, ‘ಮಣಿಕರ್ಣಿಕಾ’, ‘ಎನ್ಟಿಆರ್’ ಸಿನಿಮಾಗಳನ್ನು ಇವರು ನಿರ್ದೇಶಿಸಿದ್ದಾರೆ. ‘ಹರಿಹರ ವೀರಮಲ್ಲು’ ಸಿನಿಮಾಕ್ಕೆ ಸಂಗೀತ ನೀಡಿರುವುದು ಆಸ್ಕರ್ ವಿಜೇತ ಎಂಎಂ ಕೀರವಾಣಿ.
ಇದನ್ನೂ ಓದಿ:ಹಿಂದಿ ಹೇರಿಕೆ ಗಲಾಟೆ; ತಮಿಳು ಸಿಎಂ ಸ್ಟಾಲಿನ್ಗೆ ಟಾಂಗ್ ಕೊಟ್ಟ ಪವನ್ ಕಲ್ಯಾಣ್
‘ಹರಿಹರ ವೀರಮಲ್ಲು’ ಸಿನಿಮಾ ಬಿಡುಗಡೆ ಆಗುತ್ತಿದ್ದಂತೆ ಇನ್ನುಳಿದ ಎರಡು ಸಿನಿಮಾಗಳ ಚಿತ್ರೀಕರಣದಲ್ಲಿ ಪವನ್ ಕಲ್ಯಾಣ್ ತೊಡಗಿಕೊಳ್ಳಲಿದ್ದಾರೆ. ‘ಹರಿಹರ ವೀರಮಲ್ಲು’ ಸಿನಿಮಾದ ಬಳಿಕ ‘ಓಜಿ’ ಸಿನಿಮಾದ ಚಿತ್ರೀಕರಣದಲ್ಲಿ ಪವನ್ ತೊಡಗಿಸಿಕೊಳ್ಳಲಿದ್ದಾರೆ. ಇದೊಂದು ಅಂಡರ್ವಲ್ಡ್ ಕತೆಯಾಗಿದ್ದು, ಸ್ವತಃ ಪವನ್ ಕಲ್ಯಾಣ್ ಪ್ರಚಾರದ ಸಮಯದಲ್ಲಿ ಹೇಳಿದ್ದಂತೆ ‘ಓಜಿ’ ಸಿನಿಮಾ ಬಹಳ ಚೆನ್ನಾಗಿ ಮೂಡಿ ಬರುತ್ತಿದೆಯಂತೆ. ‘ಓಜಿ’ ಬಳಿಕ ಅವರು ‘ಭಗತ್ ಸಿಂಗ್’ ಸಿನಿಮಾದಲ್ಲಿ ನಟಿಸಲಿದ್ದಾರೆ. ಈ ಸಿನಿಮಾದಲ್ಲಿ ನಟಿ ಶ್ರೀಲೀಲಾ ನಾಯಕಿ. ಕೆಲವು ಮೂಲದ ಪ್ರಕಾರ ‘ಭಗತ್ ಸಿಂಗ್’ ಪಕ್ಕಾ ಕಮರ್ಶಿಯಲ್ ಸಿನಿಮಾ ಆಗಿರುವ ಕಾರಣ ಈ ಸಿನಿಮಾದಲ್ಲಿ ಪವನ್ ನಟಿಸುವುದಿಲ್ಲ ಎಂಬ ಮಾತುಗಳು ಸಹ ಕೇಳಿ ಬರುತ್ತಿವೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ