ಹಿಂದಿ ಹೇರಿಕೆ ಗಲಾಟೆ; ತಮಿಳು ಸಿಎಂ ಸ್ಟಾಲಿನ್ಗೆ ಟಾಂಗ್ ಕೊಟ್ಟ ಪವನ್ ಕಲ್ಯಾಣ್
ತಮಿಳುನಾಡು ಸರ್ಕಾರದ ಹಿಂದಿ ವಿರೋಧ ಮತ್ತು ಕೇಂದ್ರ ಸರ್ಕಾರದ ತ್ರಿಭಾಷಾ ನೀತಿಯ ಬಗ್ಗೆ ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರು ಮಾತನಾಡಿದ್ದಾರೆ. ತಮಿಳು ಚಲನಚಿತ್ರಗಳನ್ನು ಹಿಂದಿಗೆ ಡಬ್ ಮಾಡಿ ಆರ್ಥಿಕ ಲಾಭ ಪಡೆಯುವ ರಾಜಕಾರಣಿಗಳು ಹಿಂದಿಯನ್ನು ವಿರೋಧಿಸುವುದು ಸರಿ ಅಲ್ಲ ಎಂದಿದ್ದಾರೆ.

ತಮಿಳುನಾಡು ಸರ್ಕಾರ ಹಿಂದಿ ಹೇರಿಕೆಯನ್ನು ವಿರೋಧಿಸುತ್ತಾ ಬಂದಿದೆ. ಕೇಂದ್ರ ಸರ್ಕಾರವು ತ್ರಿಭಾಷಾ ನೀತಿಯ (NEP) ಮೂಲಕ ಹಿಂದಿ ಹೇರಿಕೆಗೆ ಪ್ರಯತ್ನಿಸುತ್ತಿದೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಇತ್ತೀಚೆಗೆ ಆರೋಪಿಸಿದ್ದರು. ಈ ಬಗ್ಗೆ ಆಂಧ್ರ ಪ್ರದೇಶ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ (Pawan Kalyan) ಅವರು ಮಾತನಾಡಿದ್ದಾರೆ. ‘ಈ ನಾಯಕರು ಹಿಂದಿಯನ್ನು ವಿರೋಧಿಸುತ್ತಾರೆ. ಆದರೆ, ಆರ್ಥಿಕ ಲಾಭಕ್ಕಾಗಿ ತಮಿಳು ಚಲನಚಿತ್ರಗಳನ್ನು ಹಿಂದಿಗೆ ಡಬ್ ಮಾಡುತ್ತಾರೆ’ ಎಂದು ಟೀಕೆ ಮಾಡಿದ್ದಾರೆ. ಅವರ ಹೇಳಿಕೆ ಸಂಚಲನ ಮೂಡಿಸಿದೆ.
ಕಾಕಿನಾಡಿನ ಪಿತಾಂಪುರಂನಲ್ಲಿ ನಡೆದ ಜನಸೇನಾ ಪಕ್ಷದ 12ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಪವನ್ ಕಲ್ಯಾಣ್ ಮಾತನಾಡಿದ್ದಾರೆ. ‘ಕೆಲವರು ಸಂಸ್ಕೃತ, ಹಿಂದಿಯನ್ನು ಏಕೆ ಟೀಕಿಸುತ್ತಾರೆ ಗೊತ್ತಿಲ್ಲ. ಆರ್ಥಿಕ ಲಾಭಕ್ಕಾಗಿ ತಮ್ಮ ಸಿನಿಮಾಗಳನ್ನು ಹಿಂದಿಗೆ ಡಬ್ ಮಾಡಲು ಅವಕಾಶ ನೀಡುವ ತಮಿಳುನಾಡಿನ ರಾಜಕಾರಣಿಗಳು ಹಿಂದಿ ಭಾಷೆಯನ್ನು ಏಕೆ ವಿರೋಧಿಸುತ್ತಾರೆ? ಅವರು ಬಾಲಿವುಡ್‌ನಿಂದ ಹಣ ಮಾಡಲು ಬಯಸುತ್ತಾರೆ. ಆದರೆ, ಹಿಂದಿಯನ್ನು ಸ್ವೀಕರಿಸಲು ನಿರಾಕರಿಸುತ್ತಾರೆ, ಇದು ಯಾವ ರೀತಿಯ ತರ್ಕ’ ಎಂದು ಪ್ರಶ್ನೆ ಮಾಡಿದ್ದಾರೆ.
‘ತಮಿಳು ಸೇರಿದಂತೆ ಭಾರತಕ್ಕೆ ಎಲ್ಲಾ ಭಾಷೆಗಳು ಬೇಕು. ಯಾವುದೋ ಎರಡು ಭಾಷೆ ಮಾತ್ರ ಸಾಕಾಗಲ್ಲ. ನಾವು ಭಾಷಾ ವೈವಿಧ್ಯತೆಯನ್ನು ಅಳವಡಿಸಿಕೊಳ್ಳಬೇಕು. ನಮ್ಮ ದೇಶದ ಸಮಗ್ರತೆಯನ್ನು ಕಾಪಾಡಿಕೊಳ್ಳುವುದರ ಜೊತೆಗೆ ನಮ್ಮ ಜನರಲ್ಲಿ ಪ್ರೀತಿ ಮತ್ತು ಏಕತೆಯನ್ನು ಉತ್ತೇಜಿಸಲು ಭಾಷಾ ವೈವಿಧ್ಯತೆಯ ಅಗತ್ಯವಿದೆ’ ಎಂದಿದ್ದಾರೆ ಅವರು.
ಸ್ಟಾಲಿನ್ ಹೇಳಿದ್ದೇನು?
ಮಾರ್ಚ್ 13ರಂದು ತಮಿಳುನಾಡು ಸಿಎಂ ಸ್ಟಾಲಿನ್ ಅವರು ‘ಎನ್ಇಪಿ’ಯನ್ನು ವಿರೋಧಿಸಿದ್ದರು. ಇದನ್ನು ಹಿಂದಿಯನ್ನು ಉತ್ತೇಜಿಸಲು ವಿನ್ಯಾಸಗೊಳಿಸಲಾದ ‘ಕೇಸರಿ ನೀತಿ’ ಎಂದು ಹೇಳಿದ್ದರು. ಈ ನೀತಿಯು ತಮಿಳುನಾಡಿನ ಶಿಕ್ಷಣ ವ್ಯವಸ್ಥೆಯನ್ನು ನಾಶಮಾಡುತ್ತದೆ ಎಂದಿದ್ದರು.
‘ರಾಷ್ಟ್ರೀಯ ಶಿಕ್ಷಣ ನೀತಿಯು, ಶಿಕ್ಷಣ ನೀತಿಯಲ್ಲ, ಅದು ಕೇಸರೀಕರಣದ ನೀತಿ ಆಗಿದೆ. ಈ ನೀತಿಯನ್ನು ಭಾರತದ ಅಭಿವೃದ್ಧಿಗಾಗಿ ಅಲ್ಲ, ಹಿಂದಿಯ ಅಭಿವೃದ್ಧಿಗಾಗಿ ಮಾಡಲಾಗಿದೆ. ಈ ನೀತಿಯು ತಮಿಳುನಾಡಿನ ಶಿಕ್ಷಣ ವ್ಯವಸ್ಥೆಯನ್ನು ಸಂಪೂರ್ಣವಾಗಿ ನಾಶಪಡಿಸುತ್ತದೆ ಎಂಬ ಕಾರಣಕ್ಕಾಗಿ ನಾವು ಇದನ್ನು ವಿರೋಧಿಸುತ್ತಿದ್ದೇವೆ. NEP ಜಾರಿಗೆ ತರಲು ರಾಜ್ಯದ ಮೇಲೆ ಒತ್ತಡ ಹೇರಲು ಕೇಂದ್ರ ಸರ್ಕಾರವು ಹಣವನ್ನು ತಡೆಹಿಡಿಯುತ್ತಿದೆ’ ಎಂದು ಸ್ಟಾಲಿನ್ ಆರೋಪಿಸಿದ್ದರು.
ಇದನ್ನೂ ಓದಿ: ಭಾಷಾ ವಿವಾದ; ತಮಿಳುನಾಡಿನಲ್ಲಿ ಹಿಂದಿಯ ರೂಪಾಯಿ ಚಿಹ್ನೆಯ ಬದಲು ತಮಿಳು ಭಾಷೆಯ ರೂ. ಬಳಕೆಗೆ ನಿರ್ಧಾರ
ರೂಪಾಯಿ ಚಿಹ್ನೆ ಬದಲು
ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ನೇತೃತ್ವದ ತಮಿಳುನಾಡು ಸರ್ಕಾರವು ರಾಜ್ಯ ಬಜೆಟ್‌ನ ಅಧಿಕೃತ ಲೋಗೋದಲ್ಲಿ ಭಾರತೀಯ ರೂಪಾಯಿ ಚಿಹ್ನೆಯಾದ ₹ ಬದಲಿಗೆ ತಮಿಳು ಅಕ್ಷರವಾದ ರೂ. ಬಳಸಲು ನಿರ್ಧರಿಸಿದೆ. ಈ ಬಗ್ಗೆ ಆದೇಶ ಕೂಡ ಹೊರಡಿಸಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 10:13 am, Sat, 15 March 25