ಕೂಡಲೆ ಮಕ್ಕಳನ್ನು ಮಾಡಿಕೊಳ್ಳಿ; ನವವಿವಾಹಿತರಿಗೆ ಸಿಎಂ ಸ್ಟಾಲಿನ್ ಮನವಿ
ಜನಸಂಖ್ಯೆಯನ್ನು ಆಧರಿಸಿ ಲೋಕಸಭಾ ಕ್ಷೇತ್ರಗಳ ಪುನರ್ ವಿಂಗಡನೆಗೆ ಮುಂದಾಗಿರುವ ಕೇಂದ್ರ ಸರ್ಕಾರದ ವಿರುದ್ಧ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಕಿಡಿ ಕಾರುತ್ತಲೇ ಇದ್ದಾರೆ. ಇಂದು ಮದುವೆ ಸಮಾರಂಭವೊಂದರಲ್ಲಿ ಮಾತನಾಡಿದ ಸಿಎಂ ಸ್ಟಾಲಿನ್, ನವವಿವಾಹಿತರು ಆದಷ್ಟು ಬೇಗ ಮಕ್ಕಳನ್ನು ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ. ಈ ಮೂಲಕ ತಮಿಳುನಾಡಿನ ಜನಸಂಖ್ಯೆ ಹೆಚ್ಚಾಗುವಂತೆ ನೋಡಿಕೊಳ್ಳಬೇಕೆಂದು ಬೇಡಿಕೆಯಿಟ್ಟಿದ್ದಾರೆ.

ಚೆನ್ನೈ (ಮಾರ್ಚ್ 3): ಹಿಂದೆಲ್ಲ ಮನೆಯ ಅಜ್ಜ-ಅಜ್ಜಿಯರು, ಅಪ್ಪ-ಅಮ್ಮಂದಿರು ಆ ಕುಟುಂಬದಲ್ಲಿ ಮದುವೆಯಾಗುವ ನವಜೋಡಿಗೆ ‘ಶೀಘ್ರ ಮೇವ ಸಂತಾನ ಪ್ರಾಪ್ತಿರಸ್ತು’ ಎಂದು ಆಶೀರ್ವಾದ ಮಾಡುತ್ತಿದ್ದರು. ನಾನು ಸಾಯುವ ಮೊದಲು ನಿನ್ನ ಮಕ್ಕಳನ್ನು ಎತ್ತಿ ಮುದ್ದಾಡಬೇಕೆಂದು ಎಮೋಷನಲ್ ಬ್ಲಾಕ್ಮೇಲ್ ಮಾಡುತ್ತಿದ್ದರು. ಮದುವೆಯಾಗಿ 4 ತಿಂಗಳಾಗುವಷ್ಟರಲ್ಲೇ ಏನೂ ವಿಶೇಷ ಇಲ್ವಾ? ಎಂಬ ಪ್ರಶ್ನೆ ಶುರು ಮಾಡುತ್ತಿದ್ದರು. ಆದರೆ, ಇದೀಗ ತಮಿಳುನಾಡಿನ ಮುಖ್ಯಮಂತ್ರಿ ಕೂಡ ತಮ್ಮ ರಾಜ್ಯದ ನವವಿವಾಹಿತರಿಗೆ ಆದಷ್ಟು ಬೇಗ ಮಕ್ಕಳನ್ನು ಹೆತ್ತು ಕೊಡಿ ಎಂದು ಬೇಡಿಕೆ ಇಟ್ಟಿದ್ದಾರೆ! “ಹೊಸದಾಗಿ ಮದುವೆಯಾದವರು ಫ್ಯಾಮಿಲಿ ಪ್ಲಾನಿಂಗ್ ಎಲ್ಲ ಬದಿಗಿಟ್ಟು ಆದಷ್ಟು ಬೇಗ ಹೆಚ್ಚೆಚ್ಚು ಮಕ್ಕಳನ್ನು ಹೆರುವತ್ತ ಯೋಚಿಸಿ” ಎಂದು ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರೇ ಮನವಿ ಮಾಡಿದ್ದಾರೆ. ಅದಕ್ಕೆ ಕಾರಣ ಇಲ್ಲಿದೆ.
ಕೇಂದ್ರದ ಗಡಿ ನಿರ್ಣಯ ಯೋಜನೆಗಳನ್ನು ವ್ಯಂಗ್ಯವಾಗಿ ಟೀಕಿಸಿದ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್, “ಜನಸಂಖ್ಯೆಯ ಆಧಾರದ ಮೇಲೆ ಕೇಂದ್ರ ಸರ್ಕಾರ ಲೋಕಸಭಾ ಕ್ಷೇತ್ರಗಳನ್ನು ಮರುವಿಂಗಡಣೆ ಮಾಡಲು ಹೊರಡಿದೆ. ಹೀಗಾಗಿ, ಫ್ಯಾಮಿಲಿ ಪ್ಲಾನಿಂಗ್ ಬಿಟ್ಟು ನವವಿವಾಹಿತ ದಂಪತಿ ಆದಷ್ಟು ಬೇಗ ಮಕ್ಕಳನ್ನು ಮಾಡಿಕೊಳ್ಳುವ ಮೂಲಕ ತಮಿಳುನಾಡಿನ ಜನಸಂಖ್ಯೆಯನ್ನು ಹೆಚ್ಚಿಸಬೇಕು. ಈ ಮೂಲಕ ತಮಿಳುನಾಡಿಗೆ ರಾಜಕೀಯವಾಗಿ ಆಗುವ ತಾರತಮ್ಯವನ್ನು ತಡೆಯಬೇಕು” ಎಂದು ಒತ್ತಾಯಿಸಿದ್ದಾರೆ.
Nagapattinam | Tamil Nadu CM MK Stalin says, “You all know well what problem we are facing now. The Union government is planning to forcibly implement 3-language policy. Similarly, they( Union Government ) are focusing on decreasing the number and rights of Tamil Nadu through… pic.twitter.com/dbKTWE0aac
— ANI (@ANI) March 3, 2025
ಇದನ್ನೂ ಓದಿ: ಮತ್ತೊಂದು ಭಾಷಾ ಸಮರಕ್ಕೆ ತಮಿಳುನಾಡು ಸಿದ್ಧ; ಕೇಂದ್ರ ಸರ್ಕಾರದ ವಿರುದ್ಧ ಸಿಎಂ ಸ್ಟಾಲಿನ್ ಗುಡುಗು
ತಮಿಳುನಾಡಿನ ನಾಗಪಟ್ಟಣಂನಲ್ಲಿ ಡಿಎಂಕೆ ಜಿಲ್ಲಾ ಕಾರ್ಯದರ್ಶಿಯ ವಿವಾಹ ಸಮಾರಂಭದಲ್ಲಿ ಮಾತನಾಡಿದ ಸಿಎಂ ಸ್ಟಾಲಿನ್, “ಮೊದಲೆಲ್ಲ ನಾನು ಕೂಡ ಮದುವೆಯಾದ ಕೂಡಲೆ ಮಕ್ಕಳನ್ನು ಮಾಡಿಕೊಳ್ಳಬೇಡಿ, ಇಬ್ಬರಿಗೂ ಅರ್ಥ ಮಾಡಿಕೊಳ್ಳಲು ಸ್ವಲ್ಪ ಸಮಯಾವಕಾಶ ಕೊಡಿ ಎಂದು ಹೇಳುತ್ತಿದ್ದೆ. ಆದರೆ, ಈಗ ಪರಿಸ್ಥಿತಿ ಬದಲಾಗಿದೆ. ನಮ್ಮಲ್ಲಿ ಹೆಚ್ಚಿನ ಜನಸಂಖ್ಯೆ ಇದ್ದರೆ ಮಾತ್ರ ನಮಗೆ ಹೆಚ್ಚಿನ ಸಂಸದರು ಸಿಗುವ ಪರಿಸ್ಥಿತಿ ಇದೆ. ಪರಿಣಾಮಕಾರಿ ಜನಸಂಖ್ಯಾ ನಿಯಂತ್ರಣದಲ್ಲಿ ನಾವು ಯಶಸ್ವಿಯಾಗಿದ್ದರಿಂದ ಈ ಪರಿಸ್ಥಿತಿ ಉದ್ಭವಿಸಿದೆ. ಹೀಗಾಗಿ, ಆದಷ್ಟು ಬೇಗ ಮಕ್ಕಳನ್ನು ಪಡೆಯಿರಿ. ಅವರಿಗೆ ಸುಂದರವಾದ ತಮಿಳು ಹೆಸರುಗಳನ್ನು ನೀಡಿ” ಎಂದು ಮನವಿ ಮಾಡಿದ್ದಾರೆ.
VIDEO | Tamil Nadu Chief Minister MK Stalin said he has changed his views on family planning and would not advise newly married to now wait before having children.
“Earlier, I used to ask the newly weds to take time before expanding their family. Now with the delimitation that… pic.twitter.com/0ewDETXAs6
— Press Trust of India (@PTI_News) March 3, 2025
“ತಮಿಳುನಾಡು ರಾಜ್ಯದ ಯಶಸ್ವಿ ಕುಟುಂಬ ಯೋಜನಾ ಕ್ರಮಗಳು ಈಗ ನಮ್ಮನ್ನು ಅನಾನುಕೂಲಕ್ಕೆ ದೂಡಿವೆ. ಜನಸಂಖ್ಯೆ ಆಧಾರಿತ ಗಡಿ ನಿರ್ಣಯವು ಸಂಸತ್ತಿನಲ್ಲಿ ತಮಿಳುನಾಡಿನ ರಾಜಕೀಯ ಪ್ರಾತಿನಿಧ್ಯದ ಮೇಲೆ ಪರಿಣಾಮ ಬೀರಬಹುದು” ಎಂದು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಎಚ್ಚರಿಸಿದರು. ಹಾಗೇ, ಜನಗಣತಿ ಅಂಕಿ-ಅಂಶಗಳ ಆಧಾರದ ಮೇಲೆ ಗಡಿ ನಿರ್ಣಯವನ್ನು ಜಾರಿಗೆ ತರುವ ಸಾಧ್ಯತೆಯ ಬಗ್ಗೆ ತಮ್ಮ ಕಳವಳಗಳನ್ನು ವ್ಯಕ್ತಪಡಿಸಿದರು.
ಇದನ್ನೂ ಓದಿ: ತಮಿಳುನಾಡಿಗೆ ಕೇಂದ್ರ ಸರ್ಕಾರ 5 ಲಕ್ಷ ಕೋಟಿ ನೀಡಿದೆ; ಸಿಎಂ ಸ್ಟಾಲಿನ್ ವಿರುದ್ಧ ಅಮಿತ್ ಶಾ ವಾಗ್ದಾಳಿ
ಕೇಂದ್ರ ಸರ್ಕಾರವು ರಾಷ್ಟ್ರೀಯ ಶಿಕ್ಷಣ ನೀತಿಯ ಹೆಸರಿನಲ್ಲಿ ಹಿಂದಿಯನ್ನು ಹೇರಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ ಸ್ಟಾಲಿನ್, ಗಡಿ ನಿರ್ಣಯ ವಿಷಯದ ಕುರಿತು ಚರ್ಚಿಸಲು ಕರೆಯಲಾದ ಸರ್ವಪಕ್ಷ ಸಭೆಯನ್ನು ಬಹಿಷ್ಕರಿಸದಂತೆ ರಾಜ್ಯ ಬಿಜೆಪಿಗೆ ಮನವಿ ಮಾಡಿದರು. “ಕೇಂದ್ರ ಸರ್ಕಾರ ತಮಿಳುನಾಡಿಗೆ ಲೋಕಸಭಾ ಸ್ಥಾನಗಳ ಸಂಖ್ಯೆಯನ್ನು ಕಡಿಮೆ ಮಾಡುವ ಗಡಿ ನಿರ್ಣಯವನ್ನು ಜಾರಿಗೆ ತರಲು ಪ್ರಯತ್ನಿಸುತ್ತಿದೆ. ಗಡಿ ನಿರ್ಣಯದ ಕುರಿತು ನಮ್ಮ ನಿಲುವನ್ನು ಚರ್ಚಿಸಲು ಮಾರ್ಚ್ 5ರಂದು ನಾನು ಸರ್ವಪಕ್ಷ ಸಭೆಯನ್ನು ಕರೆದಿದ್ದೇನೆ. ಚುನಾವಣಾ ಆಯೋಗದಲ್ಲಿ ನೋಂದಾಯಿಸಲಾದ 40 ಜನರನ್ನು ಆಹ್ವಾನಿಸಲಾಗಿದೆ. ಅವರಲ್ಲಿ ಹೆಚ್ಚಿನವರು ಸಭೆಗೆ ಬರುತ್ತೇವೆ ಎಂದು ಹೇಳಿದ್ದಾರೆ. ಆದರೆ, ಕೆಲವರು ಅದನ್ನು ನಿರ್ಲಕ್ಷಿಸುತ್ತಿದ್ದಾರೆ. ಇದು ಡಿಎಂಕೆಯ ಸಮಸ್ಯೆಯಲ್ಲ, ಇಡೀ ರಾಜ್ಯದ ಸಮಸ್ಯೆ ಎಂದು ಅವರು ಅರ್ಥಮಾಡಿಕೊಳ್ಳಬೇಕು. ಆದ್ದರಿಂದ ಈ ರಾಜ್ಯದ ಕಲ್ಯಾಣ ಮತ್ತು ಅದರ ಹಕ್ಕುಗಳಿಗಾಗಿ ಎಲ್ಲರೂ ಒಟ್ಟಾಗಿ ನಿಲ್ಲಬೇಕೆಂದು ನಾನು ಮತ್ತೊಮ್ಮೆ ಒತ್ತಾಯಿಸುತ್ತೇನೆ” ಎಂದು ಸ್ಟಾಲಿನ್ ಹೇಳಿದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:22 pm, Mon, 3 March 25