ಜಾಮೀನು ಸಿಕ್ಕ ಮೇಲೂ ಜೈಲು, ಪೋಸಾನಿಯ ಕಾಡುತ್ತಿರುವ ಪವನ್ ಕಲ್ಯಾಣ್
Pawan Kalyan: ಪವನ್ ಕಲ್ಯಾಣ್ ವಿರುದ್ಧ ನೀಚ ಹೇಳಿಕೆಗಳನ್ನು ನೀಡಿದ್ದ ಪೋಸಾನಿ ಕೃಷ್ಣ ಮುರಳಿಗೆ ಸಂಕಷ್ಟಗಳು ಕಡಿಮೆ ಆಗುತ್ತಲೇ ಇಲ್ಲ. ಫೆಬ್ರವರಿ 26 ರಂದು ಬಂಧನಕ್ಕೆ ಒಳಗಾಗಿದ್ದ ಪೋಸಾನಿ ಕೃಷ್ಣ ಮುರಳಿಗೆ ಜಾಮೀನು ಸಿಕ್ಕರೂ ಸಹ ಜೈಲಿನಿಂದ ಬಿಡುಗಡೆ ಆಗಲಾಗುತ್ತಿಲ್ಲ. ಪವನ್ ಕಲ್ಯಾಣ್ ಅನ್ನು ಎದುರು ಹಾಕಿಕೊಂಡಿದ್ದಕ್ಕೆ ಈ ಶಿಕ್ಷೆಯೇ?

ವಾರದ ಹಿಂದೆ ಬಂಧನಕ್ಕೆ ಒಳಗಾಗಿದ್ದ ತೆಲುಗು ಚಿತ್ರರಂಗದ ಜನಪ್ರಿಯ ಪೋಷಕ ನಟ ಪೋಸಾನಿ ಕೃಷ್ಣ ಮುರಳಿ ಕರ್ನೂಲು ಜೈಲಿನಲ್ಲಿದ್ದರು. ಪೋಸಾನಿ ಪರ ವಕೀಲರು ನ್ಯಾಯಾಲಯದಲ್ಲಿ ವಾದ ಮಂಡಿಸಿ ಜಾಮೀನು ಪಡೆದಿದ್ದರು. ಇನ್ನೇನು ಪೋಸಾನಿ ಕೃಷ್ಣ ಮುರಳಿ ಜೈಲಿನಿಂದ ಬಿಡುಗಡೆ ಆಗುತ್ತಾರೆ ಎಂಬ ಸಮಯದಲ್ಲಿ ಪೊಲೀಸರು ಮತ್ತೆ ಕೆಲವು ಕೇಸುಗಳನ್ನು ದಾಖಲಿಸಿ ಜಾಮೀನಿನ ಮೇಲೆ ಪೋಸಾನಿ ಬಿಡುಗಡೆ ಆಗುವ ಮುಂಚೆಯೇ ಅವರನ್ನು ವಶಕ್ಕೆ ಪಡೆದು ಮತ್ತೆ ನ್ಯಾಯಾಲಯದಲ್ಲಿ ಹಾಜರು ಪಡಿಸಿದರು. ಇದರಿಂದಾಗಿ ಪೋಸಾನಿ, ಜಾಮೀನು ದೊರೆತರೂ ಇನ್ನೂ ಕೆಲ ದಿನಗಳ ಕಾಲ ಜೈಲಿನಲ್ಲೇ ಸಮಯ ಕಳೆಯಬೇಕಿದೆ.
ಈ ಹಿಂದೆ ಅನ್ನಮಯ್ಯ ಜಿಲ್ಲೆಯ ಪೊಲೀಸರು ಪೋಸಾನಿ ಕೃಷ್ಣ ಮುರಳಿಯನ್ನು ಜಾತಿ ನಿಂದನೆ, ಅವಾಚ್ಯ ಶಬ್ದಗಳಿಂದ ನಿಂದನೆ ಇನ್ನಿತರೆ ಪ್ರಕರಣಗಳಲ್ಲಿ ಫೆಬ್ರವರಿ 26 ರಂದು ಬಂಧಿಸಿದ್ದರು. ಪೋಸಾನಿ ವಿರುದ್ಧ ಹಲವು ಸೆಕ್ಷನ್ಗಳ ಅಡಿಯಲ್ಲಿ ಕೇಸು ದಾಖಲಿಸಲಾಗಿತ್ತು. ಪೋಸಾನಿ ಕೃಷ್ಣ ಮುರಳಿ ಬಹುತೇಕ ಎಲ್ಲ ಪ್ರಕರಣಗಳಲ್ಲಿಯೂ ಜಾಮೀನು ಪಡೆದಿದ್ದರು. ಆದರೆ ಇನ್ನೇನು ಬಿಡುಗಡೆ ಆಗಬೇಕು ಎನ್ನುವಾಗ ಗುಂಟೂರು ಸಿಐಡಿ ಪೊಲೀಸರು ಹೊಸದಾಗಿ ಪೋಸಾನಿ ವಿರುದ್ಧ ದೂರು ಸಲ್ಲಿಸಿ ಅವರನ್ನು ವಶಕ್ಕೆ ಪಡೆದರು.
ಪೋಸಾನಿ ಕೃಷ್ಣ ಮುರಳಿಯನ್ನು ನಿನ್ನೆ ಗುಂಟೂರು ಪೊಲೀಸರು ಸ್ಥಳೀಯ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ಈ ವೇಳೆ ನ್ಯಾಯಾಧೀಶರ ಮುಂದೆ ಕಣ್ಣೀರು ಹಾಕಿದ ಪೋಸಾನಿ ಕೃಷ್ಣ ಮುರಳಿ, ತಪ್ಪು ಮಾಡಿದ್ದರೆ ಶಿಕ್ಷೆ ನೀಡಿ ಆದರೆ ಹೀಗೆ ಚಿತ್ರಹಿಂಸೆ ಕೊಡಬೇಡಿ ಎಂದು ನ್ಯಾಯಾಧೀಶರ ಮುಂದೆ ಕಣ್ಣೀರು ಹಾಕಿದ್ದರು. ಅಲ್ಲದೆ ತಮಗೆ ಎರಡೆರಡು ಶಸ್ತ್ರಚಿಕಿತ್ಸೆ ಆಗಿದ್ದು, ಹೀಗೆಲ್ಲ ಚಿತ್ರಹಿಂಸೆ ಕೊಟ್ಟರೆ ನನಗೆ ಆತ್ಮಹತ್ಯೆ ಒಂದೇ ಉಳಿದಿರುವ ದಾರಿ ಎಂದು ಅಂಗಲಾಚಿದರು. ಆದರೆ ಯಾವುದಕ್ಕೂ ಬಗ್ಗದ ನ್ಯಾಯಾಧೀಶರು ಪೋಸಾನಿಗೆ 12 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದ್ದಾರೆ.
ಇದನ್ನೂ ಓದಿ:ನಟ ಪೋಸಾನಿ ಕೃಷ್ಣ ಮುರಳಿ ಬಂಧನ, ಪವನ್ ಕಲ್ಯಾಣ್ ಕೈವಾಡ?
ಪೋಸಾನಿ ಕೃಷ್ಣ ಮುರಳಿ ವಿರುದ್ಧ ಬರೋಬ್ಬರಿ 17 ಕೇಸುಗಳನ್ನು ಪೊಲೀಸರು ದಾಖಲಿಸಿದ್ದಾರೆ. ಹೀಗೆ ನಟನೊಬ್ಬನ ವಿರುದ್ಧ ಒಂದರ ಹಿಂದೊಂದರಂತೆ ಕೇಸು ದಾಖಲಿಸಿ ಜೈಲಿನಲ್ಲಿ ಸಮಯ ಕಳೆಯುವಂತೆ ಮಾಡುವಲ್ಲಿ ರಾಜಕೀಯ ದ್ವೇಷ ಅಡಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ನಟ ಪೋಸಾನಿ ಕೃಷ್ಣ ಮುರಳಿ, ವೈಸಿಪಿ ಪಕ್ಷದ ಮುಖಂಡರೂ ಆಗಿದ್ದು, ಸುದ್ದಿಗೋಷ್ಠಿಯಲ್ಲಿ ಪವನ್ ಕಲ್ಯಾಣ್ ವಿರುದ್ಧ ತೀರ ಕೆಳದರ್ಜೆಯ ಪದಗಳನ್ನು ಬಳಸಿ ನಿಂದಿಸಿದ್ದರು. ಪವನ್ ಕಲ್ಯಾಣ್ ಪತ್ನಿಗೆ ಅಕ್ರಮ ಸಂಬಂಧ ಇದೆ ಎಂದೆಲ್ಲ ನೀಚ ಆರೋಪಗಳನ್ನು ಮಾಡಿದ್ದರು. ಇದೇ ಕಾರಣಕ್ಕೆ ಇದೀಗ ಪವನ್ ಕಲ್ಯಾಣ್, ದ್ವೇಷ ತೀರಿಸಿಕೊಳ್ಳುತ್ತಿದ್ದಾರೆ ಎನ್ನಲಾಗುತ್ತಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ