ತೆಲುಗು ಬಿಗ್ಬಾಸ್ಗೆ ನಾಗಾರ್ಜುನ ಗುಡ್ಬೈ, ಹೊಸ ನಿರೂಪಕನಿಗೆ ಭಾರಿ ಸಂಭಾವನೆ
Telugu Bigg Boss: ತಮಿಳು ಬಿಗ್ಬಾಸ್ ನಿರೂಪಕರು ಈಗಾಗಲೇ ಬದಲಾಗಿದ್ದಾರೆ. ಕನ್ನಡ ಬಿಗ್ಬಾಸ್ ನಿರೂಪಣೆಗೆ ಸುದೀಪ್ ಸಹ ಗುಡ್ ಬೈ ಹೇಳಿದ್ದು, ಹೊಸ ನಿರೂಪಕರ ಹುಡುಕಾಟ ಚಾಲ್ತಿಯಲ್ಲಿದೆ. ಇದರ ನಡುವೆ ತೆಲುಗು ಬಿಗ್ಬಾಸ್ ನಿರೂಪಕನ ಸ್ಥಾನಕ್ಕೆ ನಟ ಅಕ್ಕಿನೇನಿ ನಾಗಾರ್ಜುನ ಸಹ ವಿದಾಯ ಹೇಳಿದ್ದಾರೆ. ಆದರೆ ಹೊಸ ನಿರೂಪಕ ಭಾರಿ ಸಂಭಾವನೆ ಕೇಳಿದ್ದಾರೆ. ಯಾರಾತ?

ಕನ್ನಡ ಬಿಗ್ಬಾಸ್ ಸೀಸನ್ 11 ಮುಗಿದು ಕೆಲ ತಿಂಗಳುಗಳಾಗಿವೆ. ನಟ ಸುದೀಪ್ ಅವರು ಇದೇ ನನ್ನ ಕೊನೆಯ ಸೀಸನ್ ಆಗಿರಲಿದೆ ಎಂದು ಈಗಾಗಲೇ ಘೋಷಣೆ ಮಾಡಿದ್ದಾರೆ. ಕನ್ನಡದಲ್ಲಿ ಬಿಗ್ಬಾಸ್ ಪ್ರಾರಂಭ ಆದಾಗಿನಿಂದಲೂ ಸುದೀಪ್ ಅವರೇ ಈ ಶೋ ನಡೆಸಿಕೊಂಡು ಬರುತ್ತಿದ್ದಾರೆ. ಇದೀಗ ಸುದೀಪ್ ಬದಲಿಗೆ ಯಾರು ನಿರೂಪಣೆ ಮಾಡಲಿದ್ದಾರೆ ಎಂಬ ಕುತೂಹಲ ಶುರುವಾಗಿದೆ. ತಮಿಳಿನಲ್ಲಿ ಕಳೆದ ಸೀಸನ್ನಲ್ಲಿ ನಿರೂಪಕರ ಬದಲಾವಣೆ ಆಗಿದೆ. ಕನ್ನಡದಂತೆ ತೆಲುಗಿನಲ್ಲೂ ಸಹ ಬಿಗ್ಬಾಸ್ ನಿರೂಪಕರ ಬದಲಾವಣೆ ಆಗುತ್ತಿದೆ. ನಾಗಾರ್ಜುನ ಬದಲು ಹೊಸ ನಾಯಕ ಬಿಗ್ಬಾಸ್ ನಿರೂಪಕರಾಗಲಿದ್ದಾರೆ.
ನಟ ನಾಗಾರ್ಜುನ ಈ ವರೆಗೆ ಬಿಗ್ಬಾಸ್ ತೆಲುಗಿನ ಏಳು ಸೀಸನ್ಗಳನ್ನು ನಿರೂಪಣೆ ಮಾಡಿದ್ದಾರೆ. ಕಳೆದ ಮೂರು ವರ್ಷದಿಂದ ತೆಲುಗು ಬಿಗ್ಬಾಸ್ ಟಿಆರ್ಪಿ ಬಹಳ ಚೆನ್ನಾಗಿಯೇ ಬರುತ್ತಿದೆ. ಹಾಗಿದ್ದರೂ ಸಹ ನಾಗಾರ್ಜುನ ಅವರು ಬಿಗ್ಬಾಸ್ ನಿರೂಪಣೆಯನ್ನು ತ್ಯಜಿಸಿದ್ದಾರೆ. ನಟನೆ, ಉದ್ಯಮ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ನಾಗಾರ್ಜುನ ಎಲ್ಲವನ್ನೂ ಒಟ್ಟೊಟ್ಟಿಗೆ ನಿಭಾಯಿಸಲು ಕಷ್ಟವಾಗುತ್ತಿರುವ ಕಾರಣದಿಂದ ಈ ನಿರ್ಣಯ ತೆಗೆದುಕೊಂಡಿದ್ದಾರೆ ಎನ್ನಲಾಗುತ್ತಿದೆ.
ಬಿಗ್ಬಾಸ್ ಮುಂದಿನ ಸೀಸನ್ ಅನ್ನು ನಟ ನಾಗಾರ್ಜುನ ಬದಲಿಗೆ ನಟ ವಿಜಯ್ ದೇವರಕೊಂಡ ನಿರೂಪಣೆ ಮಾಡಲಿದ್ದಾರೆ ಎನ್ನಲಾಗುತ್ತಿದೆ. ವಿಜಯ್ ದೇವರಕೊಂಡ, ಫ್ಯಾಮಿಲಿ ನಟರಾಗಿಯೂ ಗುರುತಿಸಿಕೊಂಡಿದ್ದು, ಯುವಕರಿಗೂ ಬಹಳ ಇಷ್ಟವಾಗುತ್ತಾರೆ. ಅಲ್ಲದೆ ವಿಜಯ್ ದೇವರಕೊಂಡಗೆ ಉತ್ತಮ ಸಂವಹನ ಪ್ರತಿಭೆ ಇದೆ. ಹಾಗಾಗಿ ವಿಜಯ್ ದೇವರಕೊಂಡ ಅವರನ್ನು ಬಿಗ್ಬಾಸ್ನ ಒಂಬತ್ತನೇ ಸೀಸನ್ ಅನ್ನು ನಿರೂಪಣೆ ಮಾಡಲು ಆಯ್ಕೆ ಮಾಡಲಾಗಿದೆ.
ಇದನ್ನೂ ಓದಿ:ವಿಜಯ್ ದೇವರಕೊಂಡ ಸಿನಿಮಾದಿಂದ ಹೊರಬಂದಿದ್ದೇಕೆ ನಟಿ ರುಕ್ಮಿಣಿ ವಸಂತ್
ಆದರೆ ವಿಜಯ್ ದೇವರಕೊಂಡ, ಬಿಗ್ಬಾಸ್ ನಿರೂಪಣೆಗೆ ಭಾರಿ ದೊಡ್ಡ ಸಂಭಾವನೆ ಕೇಳುತ್ತಿದ್ದಾರೆ. ವಿಜಯ್ ದೇವರಕೊಂಡ ಪ್ರತಿ ಸೀಸನ್ ನಿರೂಪಣೆ ಮಾಡಲು 15 ಕೋಟಿ ಸಂಭಾವನೆ ಕೇಳುತ್ತಿದ್ದಾರೆ ಎನ್ನಲಾಗುತ್ತಿದೆ. ಅಲ್ಲದೆ ಸೀಸನ್ನಿಂದ ಸೀಸನ್ಗೆ 20% ಸಂಭಾವನೆ ಹೆಚ್ಚು ಮಾಡುವ ಷರತ್ತನ್ನು ಸಹ ಇಟ್ಟಿದ್ದಾರೆ ಎನ್ನಲಾಗುತ್ತಿದೆ. ಬಿಗ್ಬಾಸ್ ಆಯೋಜಕರು, ವಿಜಯ್ ದೇವರಕೊಂಡ ಷರತ್ತುಗಳಿಗೆ ಒಪ್ಪಿದ್ದು, ಮುಂದಿನ ಸೀಸನ್ಗೆ ವಿಜಯ್ ನಿರೂಪಣೆ ಪಕ್ಕಾ ಎನ್ನಲಾಗುತ್ತಿದೆ.
ವಿಜಯ್ ದೇವರಕೊಂಡ ಅವರನ್ನು ಅಂತಿಮಗೊಳಿಸುವ ಮುಂಚೆ ನಂದಮೂರಿ ಬಾಲಕೃಷ್ಣ, ಮೆಗಾಸ್ಟಾರ್ ಚಿರಂಜೀವಿ ಹಾಗೂ ರಾಣಾ ದಗ್ಗುಬಾಟಿ ಅವರುಗಳನ್ನು ಬಿಗ್ಬಾಸ್ ಆಯೋಜಕರು ಭೇಟಿ ಮಾಡಿ ನಿರೂಪಣೆ ಆಫರ್ ನೀಡಿದ್ದರು. ಆದರೆ ಈ ನಟರುಗಳು ಆಫರ್ ನಿರಾಕರಿಸಿದ ಕಾರಣಕ್ಕೆ ಅಂತಿಮವಾಗಿ ವಿಜಯ್ ದೇವರಕೊಂಡ ಅವರನ್ನು ಫೈನಲ್ ಮಾಡಲಾಗಿದೆ. ನಟ ನಾನಿ ಮತ್ತು ಜೂ ಎನ್ಟಿಆರ್ ಅವರುಗಳು ಸಹ ಆಫರ್ ಅನ್ನು ತಿರಸ್ಕರಿಸಿದ್ದರು ಎನ್ನಲಾಗಿದೆ. ಇನ್ನು ತಮಿಳು ಬಿಗ್ಬಾಸ್ ಅನ್ನು ನಿರೂಪಣೆ ಮಾಡುತ್ತಿದ್ದ ಕಮಲ್ ಹಾಸನ್ ಕಳೆದ ಸೀಸನ್ಗೆ ನಿವೃತ್ತಿ ತೆಗೆದುಕೊಂಡಿದ್ದು, ನಟ ವಿಜಯ್ ಸೇತುಪತಿ ಕಳೆದ ಸೀಸನ್ ಅನ್ನು ನಿರೂಪಣೆ ಮಾಡಿದ್ದಾರೆ. ಕನ್ನಡದ ಮುಂದಿನ ಸೀಸನ್ ಯಾರು ನಿರೂಪಣೆ ಮಾಡಲಿದ್ದಾರೆ ಕಾದು ನೋಡಬೇಕಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:46 am, Thu, 13 March 25