ನಟ ಪೋಸಾನಿ ಕೃಷ್ಣ ಮುರಳಿ ಬಂಧನ, ಪವನ್ ಕಲ್ಯಾಣ್ ಕೈವಾಡ?
Posani Krishna Murali: ತೆಲುಗು ಚಿತ್ರರಂಗದ ಜನಪ್ರಿಯ ಪೋಷಕ ನಟ, ಚಿತ್ರಕತೆಗಾರ ಪೋಸಾನಿ ಕೃಷ್ಣ ಮುರಳಿಯನ್ನು ಆಂಧ್ರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ. ಆಂಧ್ರ ಡಿಸಿಎಂ ಪವನ್ ಕಲ್ಯಾಣ್, ಸಿಎಂ ಚಂದ್ರಬಾಬು ನಾಯ್ಡು ಇನ್ನೂ ಕೆಲ ನಾಯಕರ ವಿರುದ್ಧ ಕೀಳು ಹೇಳಿಕೆಗಳನ್ನು ಪೋಸಾನಿ ಕೃಷ್ಣ ಮುರಳಿ ನೀಡಿದ್ದರು. ಜಾತಿ ನಿಂದನೆ ಪ್ರಕರಣವನ್ನು ಸಹ ನಟನ ವಿರುದ್ಧ ಹೇರಲಾಗಿದೆ.

ಜನಪ್ರಿಯ ತೆಲುಗು ನಟ ನಟ ಪೋಸಾನಿ ಕೃಷ್ಣ ಮುರಳಿಯನ್ನು ಆಂಧ್ರ ಪ್ರದೇಶ ಪೊಲೀಸರು ನಿನ್ನೆ (ಫೆಬ್ರವರಿ 26) ರಾತ್ರಿ ಅವರ ನಿವಾಸದಿಂದ ಬಂಧಿಸಿ ಕರೆದೊಯ್ದಿದ್ದಾರೆ. ಪೋಸಾನಿ ಕೃಷ್ಣ ಮುರಳಿ, ತೆಲುಗು ಚಿತ್ರರಂಗದ ಜನಪ್ರಿಯ ನಟರಾಗಿರುವ ಜೊತೆಗೆ ವೈಸಿಆರ್ ಪಕ್ಷದ ಮುಖಂಡರೂ ಆಗಿದ್ದಾರೆ. ಕೃಷ್ಣ ಮುರಳಿಯನ್ನು ಪವನ್ ಕಲ್ಯಾಣ್ ಸೇರಿದಂತೆ ಇತರೆ ಕೆಲ ನಾಯಕರ ಬಗ್ಗೆ ಅವಾಚ್ಯ ಶಬ್ದಗಳ ಬಳಸಿ ನಿಂದಿಸಿದ ಹಾಗೂ ಜಾತಿ ನಿಂದನೆ ಮಾಡಿದ ಆರೋಪದಲ್ಲಿ ಬಂಧನ ಮಾಡಲಾಗಿದೆ.
ಪೋಸಾನಿ ಕೃಷ್ಣ ಮುರಳಿ ಈ ಹಿಂದೆ ಹಲವು ಬಾರಿ ನಟ ಪವನ್ ಕಲ್ಯಾಣ್ ಬಗ್ಗೆ ಅತ್ಯಂತ ನೀಚವಾಗಿ ಮಾತನಾಡಿದ್ದರು. ಪವನ್ ಕಲ್ಯಾಣ್ ಪತ್ನಿಯ ಬಗ್ಗೆಯೂ ಬಹಳ ನೀಚವಾಗಿ ಮಾತನಾಡಿದ್ದರು. ಪವನ್ ಕಲ್ಯಾಣ್ ಪತ್ನಿಗೆ ಕೆಲಸದವರ ಜೊತೆ ಅಕ್ರಮ ಸಂಬಂಧ ಇದೆ, ಆಕೆ ವೇಶ್ಯೆ ಎಂದೆಲ್ಲ ಮಾಧ್ಯಮಗಳ ಮುಂದೆ ಬಾಯಿಗೆ ಬಂದಂತೆ ಮುರಳಿ ಮಾತನಾಡಿದ್ದರು. ಆಗೆಲ್ಲ ಜನಸೇನಾ ಕಾರ್ಯಕರ್ತರು ಮುರಳಿ ವಿರುದ್ಧ ದಾಳಿಗಳನ್ನು ಸಹ ಮಾಡಿದ್ದರು. ಇತ್ತೀಚೆಗೆ ಸಹ ಮುರಳಿ, ಪವನ್ ವಿರುದ್ಧ ವಾಗ್ದಾಳಿ ಮಾಡಿದ್ದರು ಎನ್ನಲಾಗುತ್ತಿದೆ.
ಹೈದರಾಬಾದ್ನ ಯೆಲ್ಲರೆಡ್ಡಿ ಗುಡಾನಲ್ಲಿನ ನ್ಯೂ ಸೈನ್ಸ್ ಕಾಲೊನಿಯಲ್ಲಿ ವಾಸವಿರುವ ಮುರಳಿ ಮನೆಗೆ ಫೆಬ್ರವರಿ 26ರ ರಾತ್ರಿ ದಾಳಿ ನಡೆಸಿದ ಅನ್ನಮಯ ಜಿಲ್ಲೆ ಎಸ್ಪಿ ಬಿ ಕೃಷ್ಣ ರಾವ್, ಮುರಳಿಯವರನ್ನು ಬಂಧಿಸಿದ್ದಾರೆ. ಈ ವೇಳೆ ನಟ ಮುರಳಿ, ಪೊಲೀಸರೊಟ್ಟಿಗೆ ವಾಗ್ವಾದ ಸಹ ಮಾಡಿದ್ದಾರೆ. ‘ನಾನು ಬರುವುದಿಲ್ಲ, ನನಗೆ ಆಪರೇಷನ್ ಆಗಿದೆ. ಚಿಕಿತ್ಸೆ ಪಡೆದುಕೊಂಡು ಬರುತ್ತೇನೆ. ಆಂಧ್ರ ಪೊಲೀಸರು ಹೈದರಾಬಾದ್ಗೆ ಬಂದು ಏಕೆ ಬಂಧಿಸುತ್ತಿದ್ದೀರಿ?’ ಎಂದೆಲ್ಲ ಪ್ರಶ್ನೆ ಮಾಡಿದ್ದಾರೆ. ಆದರೆ ಮುರಳಿ ಪ್ರಶ್ನೆಗಳಿಗೆ ಸಮಾಧಾನದಿಂದ ಉತ್ತರಿಸಿದ ಪೊಲೀಸ್ ಅಧಿಕಾರಿ, ಮುರಳಿಯವರನ್ನು ಬಂಧಿಸಿ ಕರೆದೊಯ್ದಿದ್ದಾರೆ.
ಇದನ್ನೂ ಓದಿ:ತಮ್ಮದೇ ಸಿನಿಮಾ ಸೀನ್ ವಿವರಿಸಿದ ಪವನ್ ಕಲ್ಯಾಣ್, ನಕ್ಕು ಸುಸ್ತಾದ ಸಚಿವರು
ಮುರಳಿ ಬಂಧನದ ಬಳಿಕ ಅವರ ಪತ್ನಿಗೆ ನೀಡಿರುವ ನೊಟೀಸ್ನ ಪ್ರಕಾರ, ಮುರಳಿಯವರ ಮೇಲೆ ಬಿಎನ್ಎಸ್ ಸೆಕ್ಷನ್ 196, 111, ಬಿಎನ್ಎಸ್ಎಸ್ 47 (1), (2) ಪ್ರಕರಣಗಳನ್ನು ದಾಖಲಿಸಲಾಗಿದೆ. ‘ಆರೋಪಿಯ ಮೇಲಿನ ಆರೋಪಗಳು ಜಾಮೀನುರಹಿತವಾಗಿದ್ದು, ಆರೋಪಿಯನ್ನು ರಾಜಂಪೇಟೆಯ ಹೆಚ್ಚುವರಿ ಮ್ಯಾಜಿಸ್ಟ್ರೇಟ್ ಎದುರು ಹಾಜರುಪಡಿಸಲಾಗುವುದು’ ಎಂದಿದೆ.
ಕೆಲ ದಿನಗಳ ಹಿಂದಷ್ಟೆ ಗನ್ನವರಂ ಮಾಜಿ ಶಾಸಕ, ವೈಎಸ್ಆರ್ಸಿ ಪಕ್ಷದ ಮುಖಂಡ ವಲ್ಲಭನೇನಿ ವಂಶಿಯನ್ನು ಬಂಧಿಸಲಾಗಿದೆ. ಈ ವ್ಯಕ್ತಿ ಸಹ ಚುನಾವಣೆಗೆ ಮುಂಚೆ ಪವನ್ ಕಲ್ಯಾಣ್, ಚಂದ್ರಬಾಬು ನಾಯ್ಡು ಹಾಗೂ ಇತರೆ ಕೆಲವು ಟಿಡಿಪಿ ನಾಯಕರ ವಿರುದ್ಧ ಅತ್ಯಂತ ಕೀಳು ಭಾಷೆಗಳನ್ನು ಬಳಸಿ ಬೆದರಿಕೆ ಒಡ್ಡಿದ್ದ. ಚುನಾವಣೆ ಪ್ರಚಾರದ ಸಮಯದಲ್ಲಿ ಮಾತನಾಡಿದ್ದ ಪವನ್ ಕಲ್ಯಾಣ್, ಇಂದು ಯಾರು ಯಾರು ನನ್ನ ಬಗ್ಗೆ, ನನ್ನ ಕುಟುಂಬದ ಬಗ್ಗೆ ಗೆಳೆಯರ ಬಗ್ಗೆ ಮಾತನಾಡುತ್ತಿದ್ದೀರೋ ನನಗೆ ಗೊತ್ತಿದೆ, ಅವರಿಗೆ ತಕ್ಕ ಶಾಸ್ತಿ ಕಾದಿದೆ ಎಂದು ಎಚ್ಚರಿಕೆ ನೀಡಿದ್ದರು. ಅಂತೆಯೇ ಇದೀಗ ಒಬ್ಬೊಬ್ಬರಾಗಿ ಪೊಲೀಸರ ಅತಿಥಿಗಳಾಗುತ್ತಿದ್ದಾರೆ. ಮಾಜಿ ಶಾಸಕ ಕೊಡಲಿ ನಾನಿ, ನಟಿ ರೋಜಾ ಇನ್ನೂ ಕೆಲವರ ಬಂಧನ ಸಹ ಆಗುವ ಸಾಧ್ಯತೆ ಇದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ