ದಳಪತಿ ವಿಜಯ್ಗೆ ಸಂದೇಶ ಕೊಟ್ಟ ಪವನ್ ಕಲ್ಯಾಣ್; ಹೇಳಿದ ಕಿವಿಮಾತೇನು?
Pawan Kalyan: ಪವನ್ ಕಲ್ಯಾಣ್ ಅವರು ಆಂಧ್ರಪ್ರದೇಶದಲ್ಲಿ ರಾಜಕೀಯ ಯಶಸ್ಸು ಕಂಡಿದ್ದಾರೆ. ಈಗ ತಮಿಳುನಾಡು ಚುನಾವಣೆಯಲ್ಲಿ ಗೆದ್ದು ಸಿಎಂ ಆಗುವ ಆಸೆ ವಿಜಯ್ಗೆ ಇದೆ. ಇದಕ್ಕೆ ಪವನ್ ಕಿವಿ ಮಾತು ಹೇಳಿದ್ದಾರೆ. ಪಕ್ಷದ ಬಲಪಡಿಸುವಿಕೆ ಮತ್ತು ಸ್ಥಿರತೆಯ ಮಹತ್ವವನ್ನು ಪವನ್ ಒತ್ತಿ ಹೇಳಿದ್ದಾರೆ. ಜನರನ್ನು ತಲುಪುವ ಬಲವಾದ ವ್ಯವಸ್ಥೆಯ ಅಗತ್ಯವನ್ನೂ ಅವರು ಸೂಚಿಸಿದ್ದಾರೆ.

ಪವನ್ ಕಲ್ಯಾಣ್ (Pawan Kalyan) ಅವರು ಆಂಧ್ರ ಪ್ರದೇಶದ ರಾಜಕೀಯದಲ್ಲಿ ಯಶಸ್ಸು ಕಂಡಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಅವರು 100 ಪರ್ಸೆಂಟ್ ಸ್ಟ್ರೈಕ್ ರೇಟ್ ಕಾಪಾಡಿಕೊಂಡಿದ್ದಾರೆ. ಅಂದರೆ ಅವರ ಪಕ್ಷದಿಂದ ಶಾಸಕ ಸ್ಥಾನಕ್ಕೆ ಸ್ಪರ್ಧಿಸಿದ 21 ಎಂಎಲ್ಎಗಳು ಗೆಲುವು ಕಂಡಿದ್ದಾರೆ. ಸಂಸದ ಸ್ಥಾನಕ್ಕೆ ಸ್ಪರ್ಧಿಸಿದ ಇಬ್ಬರೂ ವಿಜಯ ಪತಾಕೆ ಹಾರಿಸಿದ್ದಾರೆ. ಅವರಿಗೆ ಈಗ ರಾಜಕೀಯದಲ್ಲಿ ಒಂದು ಹಿಡಿತ ಬಂದಿದೆ. ಈಗ ಪವನ್ ಕಲ್ಯಾಣ್ ಅವರು ಭವಿಷ್ಯದ ರಾಜಕಾರಣಿ ದಳಪತಿ ವಿಜಯ್ಗೆ ಕಿವಿಮಾತೊಂದನ್ನು ಹೇಳಿದ್ದಾರೆ.
ತಮಿಳುನಾಡು ಚುನಾವಣೆಯಲ್ಲಿ ಗೆದ್ದು ರಾಜ್ಯದ ಸಿಎಂ ಆಗುವ ಕನಸನ್ನು ವಿಜಯ್ ಕಾಣುತ್ತಾ ಇದ್ದಾರೆ. ಆದರೆ, ಪಕ್ಷ ಸ್ಥಾಪಿಸಿ ಜನರ ಮನಸ್ಸು ಗೆಲ್ಲುವುದು ಅಷ್ಟು ಸುಲಭದ ಮಾತು ಅಲ್ಲವೇ ಅಲ್ಲ. ಇದೇ ಮಾತನ್ನು ಪವನ್ ಕಲ್ಯಾಣ್ ಅವರು ಹೇಳಿದ್ದಾರೆ. ತಮಿಳು ಸಂದರ್ಶನ ಒಂದರಲ್ಲಿ ಮಾತನಾಡಿದ ಪವನ್ ಕಲ್ಯಾಣ್ ಅವರು ಈ ವಿಚಾರದ ಬಗ್ಗೆ ಹೇಳಿಕೆ ನೀಡಿದ್ದಾರೆ.
‘ವಿಜಯ್ ಅವರಿಗೆ ಹೇಳಲು ಹೆಚ್ಚೇನೂ ಇಲ್ಲ. ಅವರು ಸಾಕಷ್ಟು ಅನುಭವ ಹೊಂದಿದ್ದಾರೆ. ಅವರು ತಮ್ಮದೇ ಪ್ರಯಾಣ ಆರಂಭಿಸಿದ್ದಾರೆ. ನಾನು ಹೇಳುವ ಒಂದು ವಿಷಯ ಎಂದರೆ ಏನೇ ಆದರೂ ವ್ಯಕ್ತಿ ಒಂದೇ ವಿಷಯಕ್ಕೆ ಸ್ಟಿಕ್ ಆಗಿ ಇರಬೇಕು. ನಿಂದನೆಗಳು ಮತ್ತು ತೀವ್ರ ಒತ್ತಡ ಇರುತ್ತದೆ. ಆದರೆ ನಮ್ಮ ನೆಲೆಯನ್ನು ಹಿಡಿದಿಟ್ಟುಕೊಳ್ಳುವುದು ಮುಖ್ಯ. ರಾಜಕೀಯದಲ್ಲಿ ನೆಲೆ ಕಂಡುಕೊಳ್ಳುವುದು ಸುಲಭವಲ್ಲ. ಆದರೆ ನಮ್ಮ ಗುರಿಯನ್ನು ಸಾಧಿಸಲು ನಾವು ಕೊನೆಯವರೆಗೂ ಇರಬೇಕು’ ಎಂದು ಪವನ್ ಕಲ್ಯಾಣ್ ಅವರು ವಿಜಯ್ ಅವರಿಗೆ ಸಂದೇಶ ನೀಡಿದ್ದಾರೆ.
‘ಪಕ್ಷವನ್ನು ಮೂಲಭೂತ ಮಟ್ಟದಿಂದ ಬಲಪಡಿಸಬೇಕು. ಪಕ್ಷವನ್ನು ಸ್ಥಿರಗೊಳಿಸಬೇಕು. ಗೆಲುವು ಮತ್ತು ಸೋಲು ಆ ಬಳಿಕ ಬರುತ್ತದೆ. ಪಕ್ಷವನ್ನು ಸ್ಥಿರಗೊಳಿಸಿದ ಬಳಿಕ ಸಾರ್ವಜನಿಕರನ್ನು ತಲುಪಲು ಬಲವಾದ ಕಾರ್ಯವಿಧಾನವನ್ನು ರೂಪಿಸಬೇಕು. ಅದು ಅತ್ಯಂತ ಮುಖ್ಯವಾದ ವಿಷಯ’ ಎಂದು ಅವರು ಸೂಚಿಸಿದ್ದಾರೆ.
ಇದನ್ನೂ ಓದಿ: ಪವನ್ ಕಲ್ಯಾಣ್ ನಟನೆಯ ಹೊಸ ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ
ಪವನ್ ಕಲ್ಯಾಣ್ ಈಗಾಗಲೇ ರಾಜಕೀಯದಲ್ಲಿ ಬ್ಯುಸಿ ಇದ್ದಾರೆ. ಈ ಕಾರಣಕ್ಕೆ ಅವರ ಸಿನಿಮಾ ಕೆಲಸಗಳು ವೇಗ ಪಡೆದುಕೊಳ್ಳುತ್ತಿಲ್ಲ. ವಿಜಯ್ ಅವರು ಕೊನೆಯ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರಕ್ಕೆ ‘ಜನ ನಾಯಗನ್’ ಎನ್ನುವ ಟೈಟಲ್ ಇಡಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:00 am, Tue, 25 March 25