‘ಕನ್ನಡ ಸಿನಿಮಾ ಎಂದಾಗ ಬೇಸರ ಆಗೋದು ಏನು ಗೊತ್ತಾ?’; ವಿವರಿಸಿದ ಯಶ್
ಯಶ್ ಅವರು ಕನ್ನಡ ಚಿತ್ರರಂಗದ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. ಕನ್ನಡ ಸಿನಿಮಾಗಳನ್ನು ನೋಡದೆ ಇರುವಿಕೆಗೆ ಕಾರಣಗಳನ್ನು ಚರ್ಚಿಸಿ, ಉತ್ತಮ ಸಿನಿಮಾ ನಿರ್ಮಾಣದ ಮಹತ್ವವನ್ನು ಒತ್ತಿ ಹೇಳಿದ್ದಾರೆ. ಹೊಸಬರಿಗೆ ಅವಕಾಶ ನೀಡುವುದು ಮತ್ತು ಉದ್ಯಮದಲ್ಲಿ ಸ್ವಾಭಿಮಾನದಿಂದ ಕೆಲಸ ಮಾಡುವುದು ಮುಖ್ಯ ಎಂದು ಅವರು ತಿಳಿಸಿದ್ದಾರೆ.

ಕನ್ನಡ ಸಿನಿಮಾಗಳನ್ನು ನೋಡೋದಿಲ್ಲ ಎಂಬುದು ಅನೇಕರ ದೂರು. ಒಬ್ಬೊಬ್ಬರದ್ದು ಒಂದೊಂದು ರೀತಿಯ ಅಭಿಪ್ರಾಯ ಇದರಲ್ಲಿ ಇದೆ. ಕೆಲವರು ಉತ್ತಮ ಸಿನಿಮಾಗಳು ಬರುತ್ತಿಲ್ಲ ಎಂದು ಹೇಳಿದರೆ ಇನ್ನೂ ಕೆಲವರು, ಜನರುಗಳೇ ಸಿನಿಮಾ ನೋಡಲು ಹೋಗುತ್ತಿಲ್ಲ ಎಂಬ ಮಾತುಗಳನ್ನು ಹೇಳಿದ್ದಾರೆ. ಈಗ ರಾಕಿಂಗ್ ಸ್ಟಾರ್ ಯಶ್ (Yash) ಅವರು ಕನ್ನಡ ಚಿತ್ರರಂಗದ ಬಗ್ಗೆ ಮಾತನಾಡಿದ್ದಾರೆ. ಸಿನಿಮಾ ಪ್ರೇಕ್ಷಕರ ಬಳಿ ಅವರು ಒಂದು ಮನವಿಯನ್ನು ಮಾಡಿಕೊಂಡಿದ್ದಾರೆ.
‘ಕನ್ನಡ ಸಿನಿಮಾ ಎಂದಾಗ ಬೇಸರ ಆಗೋದು ಏನು ಗೊತ್ತಾ? ನಾವು ಗೋಳಾಡೋದಕ್ಕಿಂತ ಒಳ್ಳೆಯ ಸಿನಿಮಾ ಮಾಡಬೇಕು. ನಾನು ಕೂಡ ಒಮ್ಮೆ ಸಂದರ್ಶನದಲ್ಲಿ ಜನರು ಕನ್ನಡ ಸಿನಿಮಾಗಳನ್ನು ನೋಡಲ್ಲ ಎಂದು ಹೇಳಿದ್ದೆ. ಆಮೇಲೆ ಬಂದು ಮನೆಯಲ್ಲಿ ಕುಳಿತು ಯೋಚನೆ ಮಾಡಿದಾಗ ನನಗೆ ಅನ್ನಿಸಿತು. ನಮ್ಮ ಕೆಲಸ ನಾವು ಮಾಡಿ, ಒಳ್ಳೆಯ ಸಿನಿಮಾ ಕೊಟ್ಟರೆ ಕನ್ನಡಿಗರು ಯಾವಾಗಲೂ ಕೈ ಬಿಟ್ಟಿಲ್ಲ’ ಎಂದಿದ್ದಾರೆ ಯಶ್.
‘ಅಭಿಮಾನಿಗಳು ಒಳ್ಳೆಯ ಚಿತ್ರಗಳನ್ನು ಹರಸಿಯೇ ಹರಸುತ್ತಾರೆ. ಹೊಸಬರನ್ನು ಲಾಂಚ್ ಮಾಡಿ, ಹೊಸಬರ ಈವೆಂಟ್ಗೆ ಹೋಗಿ ಎಂದು ಕೇಳಿ ಕೊಳ್ಳುತ್ತಾರೆ. ನಾನು ಬಂದೆ ಎಂದು ಸಿನಿಮಾ ಗೆಲ್ಲಲ್ಲ. ನಿಜವಾದ ಗೆಲುವು ಸಿಗೋದು ನೀವು ಮಾಡೋ ಕೆಲಸದಿಂದ. ಚಿತ್ರರಂಗದವರ ಬಳಿ ಕೇಳೋದು ಒಂದೇ ಕೆಲಸ ಕಲಿಯೋಣ, ದೊಡ್ಡ ಗುರಿ ಇಟ್ಟುಕೊಳ್ಳೋಣ, ಸ್ವಾಭಿಮಾನ ಇಟ್ಟುಕೊಳ್ಳೋಣ, ಅದನ್ನು ಬೇಡೋದು ಬೇಡ. ಬೇರೆಯವರು ಗೌರವಿಸೋ ತರ ಕೆಲಸ ಮಾಡೋಣ. ನಟನೆ ಮಾತ್ರ ಸಿನಿಮಾ ಅಲ್ಲ. ಟ್ರೆಂಡ್ ಏನಾಗ್ತಿದೆ? ನಿಮ್ಮ ಜವಾಬ್ದಾರಿ ಏನು ಎಂದು ತಿಳಿದುಕೊಳ್ಳಬೇಕು’ ಎಂದು ಹೊಸ ಜನರೇಶನ್ಗೆ ಯಶ್ ಕೋರಿಕೊಂಡರು.
ಇದನ್ನೂ ಓದಿ: ‘ಆ ವ್ಯಕ್ತಿಯಿಂದ ನಾನು ಇಲ್ಲಿದ್ದೇನೆ’; ಮೊದಲ ಸಿನಿಮಾ ಅವಕಾಶ ಕೊಟ್ಟ ನಿರ್ಮಾಪಕನಿಗೆ ಯಶ್ ಧನ್ಯವಾದ
ಯಶ್ ಅವರ ಅಭಿಮಾನಿಗಳಿಗೆ ವಿಶೇಷ ಪ್ರೀತಿ ಇದೆ. ಈ ಬಗ್ಗೆ ಅವರು ಮಾತನಾಡಿದ್ದು, ‘ನಮ್ಮ ಅಭಿಮಾನಿಗಳ ಋಣ ಹೇಗೆ ತೀರಿಸಬೇಕೋ ಗೊತ್ತಾಗುತ್ತಿಲ್ಲ. ನಿಮ್ಮ ಧ್ವನಿ ನನಗೆ ದೊಡ್ಡಸ್ತಿಕೆ ತಂದುಕೊಡಲ್ಲ, ಜವಾಬ್ದಾರಿ ತಂದು ಕೊಡುತ್ತದೆ’ ಎಂದಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:29 am, Mon, 24 March 25