ಬಕಾಸುರನಂತೆ ಉಂಡು, ಕುಂಬಕರ್ಣನಂತೆ ಮಲಗಿದ ನಟ

Prabhas: ಪ್ರಭಾಸ್ ತಮ್ಮ ಸಿನಿಮಾಗಳಿಂದ ಮಾತ್ರವೇ ಅಲ್ಲದೆ ತಮ್ಮ ಆತಿಥ್ಯ ನೀಡುವ ವಿಧಾನದಿಂದಲೂ ಜನಪ್ರಿಯ. ತಮ್ಮ ಸಹನಟರಿಗೆ ಹೊಟ್ಟೆ ಬಿರಿಯುವಷ್ಟು ಊಟ ಮಾಡಿಸುತ್ತಾರಂತೆ. ಪ್ರಭಾಸ್ ಜೊತೆ ನಟಿಸಿರುವ ಹಲವು ನಟರು ಈ ಬಗ್ಗೆ ಹೇಳಿದ್ದಾರೆ. ಇದೀಗ ನಟರೊಬ್ಬರು ತಮಗೆ ಕಳಿಸಿರುವ ಊಟದ ವಿಡಿಯೋ ಮಾಡಿ ಹಾಕಿದ್ದಾರೆ. ಇದು ಪ್ರಭಾಸ್ ಕಳಿಸಿರುವ ಊಟ ಎನ್ನಲಾಗಿತ್ತು. ಆದರೆ ನಿಜ ಕತೆ ಬೇರೆಯೇ ಇದೆ.

ಬಕಾಸುರನಂತೆ ಉಂಡು, ಕುಂಬಕರ್ಣನಂತೆ ಮಲಗಿದ ನಟ
ಪ್ರಭಾಸ್ ಕಳಿಸಿರುವ ಊಟ
Follow us
ಮಂಜುನಾಥ ಸಿ.
|

Updated on:Dec 11, 2024 | 1:20 PM

ಪ್ರಭಾಸ್, ಭಾರತೀಯ ಚಿತ್ರರಂಗದ ಅತಿ ದೊಡ್ಡ ಪ್ಯಾನ್ ಇಂಡಿಯಾ ಸ್ಟಾರ್. ಅವರ ಸಿನಿಮಾಗಳು ಮೊದಲ ದಿನವೇ ನೂರಾರು ಕೋಟಿ ಹಣ ಗಳಿಸುತ್ತವೆ. ಪ್ರಭಾಸ್​ ತಮ್ಮ ನಟನೆ, ಸ್ಟಾರ್​ಡಮ್​ನಿಂದ ಮಾತ್ರವೇ ಅಲ್ಲದೆ, ಆತಿಥ್ಯ ನೀಡುವ ರೀತಿಯಿಂದಲೂ ಬಹಳ ಜನಪ್ರಿಯ. ಪ್ರಭಾಸ್ ಜೊತೆ ನಟಿಸಿದ ಎಲ್ಲ ನಟ-ನಟಿಯರು ಪ್ರಭಾಸ್ ನೀಡುವ ಆತಿಥ್ಯದ ಬಗ್ಗೆ ತಪ್ಪದೇ ಹೇಳಿಕೊಳ್ಳುತ್ತಾರೆ. ತಮ್ಮ ಸಹನಟರಿಗೆ ಹೊಟ್ಟೆ ಬಿರಿಯುವಷ್ಟು ಊಟ ಹಾಕಿಸುತ್ತಾರೆ ನಟ ಪ್ರಭಾಸ್. ಇದೀಗ ಪ್ರಭಾಸ್​ರ ಸಹ ನಟರೊಬ್ಬರು, ತಮಗೆ ಕಳಿಸಿರುವ ಊಟದ ವಿಡಿಯೋ ಮಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದು ಪ್ರಭಾಸ್ ಕಳಿಸಿರುವ ಊಟ ಎಂದು ವಿಡಿಯೋ ವೈರಲ್ ಆಗಿದೆ. ಆದರೆ ಅದು ಪ್ರಭಾಸ್ ಕಳಿಸಿದ ಊಟ ಅಲ್ಲ ಎನ್ನಲಾಗಿದೆ.

ಜನಪ್ರಿಯ ನಟ ಜಗಪತಿ ಬಾಬು, ಪ್ರಭಾಸ್​ರ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದೀಗ ಜಗಪತಿ ಬಾಬು ಹಳೆಯ ವಿಡಿಯೋ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಜಗಪತಿ ಬಾಬು ‘ದೇವರ’ ಸಿನಿಮಾದ ಶೂಟಿಂಗ್​ಗಾಗಿ ಭೀಮವರಂಗೆ ಹೋಗಿದ್ದರಂತೆ. ಜಗಪತಿ ಬಾಬು ಇದ್ದಲ್ಲಿಗೆ ಸ್ಥಳೀಯರೊಬ್ಬರು ಭಾರಿ ಭೋಜನ ಕಳಿಸಿದ್ದಾರೆ. ವೆಜ್, ನಾನ್ ವೆಜ್ ಸೇರಿ ಸುಮಾರು 20ಕ್ಕೂ ಹೆಚ್ಚು ಖಾದ್ಯಗಳನ್ನು ಪ್ರಭಾಸ್​, ಜಗಪತಿಬಾಬು ಅವರಿಗಾಗಿ ಮಾಡಿಸಿ ಕಳಿಸಿದ್ದರು. ಅದನ್ನು ಜಗಪತಿ ಬಾಬು ವಿಡಿಯೋ ಮಾಡಿಕೊಂಡಿದ್ದು, ಈಗ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

‘ಭೀಮವರಂಗೆ ಶೂಟಿಂಗ್​ಗೆಂದು ಬಂದಿದ್ದೆ, ಭೀಮವರಂ ರಾಜರ ಆತಿಥ್ಯ ಎಂದರೆ ತಮಾಷೆಯ ನೋಡಿ ಎಷ್ಟು ಊಟ ಕಳಿಸಿದ್ದಾರೆ ಎಂದು ಜಗಪತಿ ಬಾಬು ವಿಡಿಯೋ ಮಾಡಿದ್ದಾರೆ. ವಿಡಿಯೋದ ಕೊನೆಯಲ್ಲಿ ಬಕಾಸುರನಂತೆ ಊಟ ಮಾಡಿದೆ ಈಗ ಕುಂಭಕರ್ಣನಂತೆ ಮಲಗಿಕೊಳ್ಳುತ್ತೇನೆ, ಜೈ ಬಾಹುಬಲಿ, ಜೈ ಪ್ರಭಾಸ್’ ಎಂದಿದ್ದಾರೆ. ಜಗಪತಿ ಬಾಬು, ವಿಡಿಯೋನಲ್ಲಿ ಜೈ ಪ್ರಭಾಸ್​ ಎಂದಿದ್ದಕ್ಕೆ ಪ್ರಭಾಸ್ ಅವರೇ ಊಟ ಕಳಿಸಿದ್ದರು ಎಂದುಕೊಂಡಿದ್ದರು ಅಭಿಮಾನಿಗಳು. ಆದರೆ ಊಟ ಕಳಿಸಿದ್ದು ಪ್ರಭಾಸ್ ಅಲ್ಲ ಎನ್ನಲಾಗುತ್ತಿದೆ.

ಆದರೆ ಪ್ರಭಾಸ್ ತಮ್ಮ ಸಹನಟರಿಗೆ ಹೊಟ್ಟೆ ಬಿರಿಯುವಷ್ಟು ಊಟ ಕಳಿಸಿಕೊಡುವ ಕಾರ್ಯ ಮಾಡುತ್ತಲೇ ಬಂದಿದ್ದಾರೆ. ‘ಸಲಾರ್’ ಸಿನಿಮಾ ಶೂಟಿಂಗ್ ಸಮಯದಲ್ಲಿ ತಮ್ಮ ಸಹನಟ ಪೃಥ್ವಿರಾಜ್ ಸುಕುಮಾರನ್​ ಹಾಗೂ ಅವರ ಕುಟುಂಬಕ್ಕೆ ಹಲವಾರು ಥರದ ಊಟ ಕಳಿಸಿದ್ದರಂತೆ ಪ್ರಭಾಸ್. ಆ ಊಟವನ್ನು ಇಡಲೆಂದು ಪೃಥ್ವಿರಾಜ್ ಸುಕುಮಾರ್ ಇನ್ನೊಂದು ರೂಂ ಅನ್ನು ಬಾಡಿಗೆಗೆ ಸಹ ಪಡೆಯಬೇಕಾಯ್ತಂತೆ. ಅದೇ ಸಿನಿಮಾದಲ್ಲಿ ನಟಿಸಿದ್ದ ಶೃತಿ ಹಾಸನ್ ಸಹ ಈ ಮಾತು ಹೇಳಿದ್ದರು. ರಾಜಮೌಳಿ, ರಾಣಾ ದಗ್ಗುಬಾಟಿ, ‘ಆದಿಪುರುಷ್’ ಸಿನಿಮಾದಲ್ಲಿ ನಟಿಸಿದ್ದ ಸೈಫ್ ಅಲಿ ಖಾನ್​ಗೆ ಅವರ ಪತ್ನಿ ಕರೀನಾ ಕಪೂರ್​ಗಾಗಿಯೂ ಭರ್ಜರಿ ಊಟ ಕಳಿಸಿದ್ದರು. ‘ಕಲ್ಕಿ’ ಸಿನಿಮಾ ಶೂಟಿಂಗ್ ಸಮಯದಲ್ಲಿ ದೀಪಿಕಾ ಪಡುಕೋಣೆಗೂ ಭರ್ಜರಿ ಊಟ ಮಾಡಿಸಿದ್ದರು ಪ್ರಭಾಸ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:10 pm, Wed, 11 December 24