ಗುರು ರಾಯರ ನೆನೆದು ನಟ ಜಗ್ಗೇಶ್ ಭಾವುಕ: ಬರಲಿದೆ ಹೊಸ ಭಕ್ತಿ ಗೀತೆ

ನಟ ಜಗ್ಗೇಶ್ ಅವರಿಗೆ ರಾಘವೇಂದ್ರ ಸ್ವಾಮಿಗಳ ಬಗ್ಗೆ ಅಪಾರ ಭಕ್ತಿ ಇದೆ. ಆ ಕುರಿತು ಅವರು ಅನೇಕ ಬಾರಿ ಹೇಳಿಕೊಂಡಿದ್ದಾರೆ. ಈಗ ರಾಯರ ಕುರಿತಾಗಿ ಹೊಸದೊಂದು ಹಾಡು ಸಿದ್ಧವಾಗುತ್ತಿದ್ದು, ಅದರ ಸುದ್ದಿಗೋಷ್ಠಿಯಲ್ಲಿ ಜಗ್ಗೇಶ್ ಭಾಗಿ ಆಗಿದ್ದರು. ಇತ್ತೀಚೆಗೆ ಸುದ್ದಿಗೋಷ್ಠಿ ನಡೆಯಿತು. ಇಲ್ಲಿದೆ ಹೆಚ್ಚಿನ ಮಾಹಿತಿ..

ಗುರು ರಾಯರ ನೆನೆದು ನಟ ಜಗ್ಗೇಶ್ ಭಾವುಕ: ಬರಲಿದೆ ಹೊಸ ಭಕ್ತಿ ಗೀತೆ
Jaggesh Press Meet

Updated on: Dec 14, 2025 | 2:08 PM

ಮಂತ್ರಾಲಯ ಗುರು ಶ್ರೀರಾಘವೇಂದ್ರ ಸ್ವಾಮಿಗಳಿಗೆ ಕೋಟ್ಯಾಂತರ ಭಕ್ತರಿದ್ದಾರೆ. ಈಗಾಗಲೇ ರಾಯರ (Raghavendra Swamy) ಕುರಿತು ಅನೇಕ ಭಕ್ತಿಗೀತೆಗಳು ಬಂದಿದೆ. ಈಗ ಹೊಸದೊಂದು ಭಕ್ತಿಗೀತೆ ರಚನೆಗೆ ತಯಾರಿ ನಡೆದಿದೆ. ‘ರಾಯರ ದರ್ಶನ’ ಆಲ್ಭಂ ಮೂಲಕ ಈ ಗೀತೆ ಬರಲಿದೆ. ‘ಲಕ್ಷ್ಮೀ ಗಣೇಶ ಪ್ರೊಡಕ್ಷನ್ಸ್’ ಮತ್ತು ‘ದಿ ನ್ಯೂ ಇಂಡಿಯನ್ ಟೈಮ್ಸ್’ ಅಡಿಯಲ್ಲಿ ಸುಗುಣ ರಘು ಈ ಅಲ್ಭಂ ನಿರ್ಮಾಣ ಮಾಡುತ್ತಿದ್ದಾರೆ. ರಘು ಭಟ್ ಅವರು ಇದರ ಉಸ್ತುವಾರಿ ವಹಿಸಿದ್ದಾರೆ. ಈ ಕುರಿತು ಮಾಹಿತಿ ನೀಡಲು ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಂತ್ರಾಲಯದ ಮಾಧ್ಯಮ ಪ್ರತಿನಿಧಿ ಶ್ರೀನಿಧಿ ಕರಣಂ, ರಘು ಭಟ್, ಸುಗುಣ ರಘು, ಗೀತರಚನೆಕಾರ ನಾಗಾರ್ಜುನ ಶರ್ಮಾ ಹಾಗೂ ನಟ ಜಗ್ಗೇಶ್ (Jaggesh) ಪಾಲ್ಗೊಂಡಿದ್ದರು.

ಸುದ್ದಿಗೋಷ್ಠಿಯಲ್ಲಿ ರಘು ಭಟ್ ಮಾತನಾಡಿದರು. ‘ರಾಯರ ದರ್ಶನ ಆಲ್ಬಂ ಸಾಂಗ್ ನಿರ್ಮಾಣ ಆಗುತ್ತಿದೆ. ಈವರೆಗೂ ಯಾರು ಹೇಳಿರದ ಹಾಗೂ ನೋಡಿರದ ರಾಯರ ಕುರಿತಾದ ಕೆಲವು ವಿಷಯ ಈ ಆಲ್ಬಂ ಹಾಡಿನಲ್ಲಿ ಇರಲಿದೆ. ಡಿಸೆಂಬರ್ 23ರಿಂದ 7 ದಿನಗಳ ಕಾಲ ಮಂತ್ರಾಲಯದಲ್ಲಿ ಚಿತ್ರೀಕರಣಕ್ಕಾಗಿ ಶ್ರೀಗಳು ಸಮಯ ನೀಡಿದ್ದಾರೆ. ರಾಯರ ಭಕ್ತರಾದ ಅನೇಕ ಸೆಲೆಬ್ರಿಟಿಗಳು ಈ ಆಲ್ಬಂ ಹಾಡಿನಲ್ಲಿ ಅಭಿನಯಿಸಲಿದ್ದಾರೆ. ಹೆಸರಾಂತ ಸಂಗೀತ ನಿರ್ದೇಶಕರಾದ ಸಿ.ಆರ್. ಬಾಬಿ ಮತ್ತು ಅಜನೀಶ್ ಲೋಕನಾಥ್ ಅವರು ಸಂಗೀತ ಸಂಯೋಜಿಸಲಿದ್ದಾರೆ’ ಎಂದು ಹೇಳಿದರು.

ಫೆಬ್ರವರಿಯಲ್ಲಿ ಮಂತ್ರಾಲಯದಲ್ಲೇ ಅದ್ದೂರಿಯಾಗಿ ಆಲ್ಬಂ ಸಾಂಗ್ ಬಿಡುಗಡೆ ಆಗಲಿದೆ. ನಟ ಜಗ್ಗೇಶ್ ಅವರು ಮಾತನಾಡಿ, ‘ನಾನು ದೆಹಲಿಯಲ್ಲಿದ್ದೆ. ಶ್ರೀಗಳು ಫೋನ್ ಮಾಡಿ ಈ ಪತ್ರಿಕಾಗೋಷ್ಠಿಗೆ ಹೋಗಲು ಆದೇಶಿಸಿದ್ದರು. ರಾಯರ ಕೆಲಸವನ್ನು ಆಗಲ್ಲ ಎನ್ನುವ ಮಾತೇ ಇಲ್ಲ. ಏಕೆಂದರೆ ನನ್ನ ಉಸಿರೇ ರಾಯರು’ ಎನ್ನುತ್ತಾ ಭಾವುಕರಾದರು.

ತಮಗೆ ರಾಯರ ಮೇಲೆ ಭಕ್ತಿ ಬರಲು ತಾಯಿ ಕಾರಣ ಎಂದು ಜಗ್ಗೇಶ್ ಹೇಳಿದರು. ‘ನಮ್ಮ ತಾಯಿ 500 ರೂಪಾಯಿ ಕೊಟ್ಟು ನನ್ನನ್ನು ಮೊದಲ‌ ಬಾರಿಗೆ ಮಂತ್ರಾಲಯಕ್ಕೆ ಕಳಿಸಿದರು. ರಾಯರಿದ್ದಾರೆ ಎಂದು ಮನದಲ್ಲಿ ಬಿತ್ತಿದ್ದರು. ಆನಂತರ ನನ್ನ ಜೀವನದಲ್ಲಿ ಆಗಿರುವುದೆಲ್ಲ ರಾಯರ ಕರುಣೆ’ ಎಂದು ಅವರು ಹೇಳಿದರು. ರಾಯರ ಮಠದ ಮುಂದೆ ಇರುವಾಗಲೇ ‘ರಾಯರ ದರ್ಶನ’ ಹಾಡು ಬರೆಯಲು ರಘು ಭಟ್ ಅವರಿಂದ ಕರೆ ಬಂದ ವಿಷಯವನ್ನು ಗೀತರಚನೆಕಾರ ನಾಗಾರ್ಜುನ ಶರ್ಮ ತಿಳಿಸಿದರು.

ಇದನ್ನೂ ಓದಿ: ಜಗ್ಗೇಶ್ ಚಿತ್ರರಂಗಕ್ಕೆ ಕಾಲಿಟ್ಟು ಕಳೆಯಿತು 45 ವರ್ಷ; ನೆನಪಿನ ಪುಟ ತೆರೆದ ನವರಸ ನಾಯಕ

ಮಂತ್ರಾಲಯದಿಂದ ಆಗಮಿಸಿದ್ದ ಶ್ರೀನಿಧಿ ಕರಣಂ ಅವರು ಶ್ರೀಗುರುರಾಯರ ಮತ್ತು ಶ್ರೀ ಸುಬುಧೇಂದ್ರ ತೀರ್ಥರ ಕರುಣೆಯನ್ನು ನೆನೆದು ಭಾವುಕರಾದರು. ರಘು ಭಟ್ ಅವರ ಈ ಪ್ರಯತ್ನಕ್ಕೆ ಶ್ರೀಗಳ ಸಂಪೂರ್ಣ ಅನುಗ್ರಹವಿದೆ ಎಂದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.