
ಸೂಪರ್ಸ್ಟಾರ್ ರಜನಿಕಾಂತ್ ಅಭಿನಯದ ಬಹುನಿರೀಕ್ಷಿತ ‘ಜೈಲರ್ 2’ ಸಿನಿಮಾ ಬಿಡುಗಡೆಗೂ ಮುನ್ನವೇ ಬಾಕ್ಸ್ ಆಫೀಸ್ನಲ್ಲಿ ಹೊಸ ಇತಿಹಾಸ ಸೃಷ್ಟಿಸಲು ಸಜ್ಜಾಗಿದೆ. ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದ ಈ ಚಿತ್ರವು ಗುರುವಾರ (ಅಕ್ಟೋಬರ್ 15) ಅದ್ದೂರಿಯಾಗಿ ತೆರೆಕಾಣಲಿದೆ. ರಜನಿಕಾಂತ್ ಅವರ ವೃತ್ತಿಜೀವನದಲ್ಲಿನ ಕೆಲವೇ ಕೆಲವು ಸೀಕ್ವೆಲ್ಗಳಲ್ಲಿ ಇದೂ ಒಂದಾಗಿದೆ. ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿದೆ. ಚಿತ್ರದ ಮುಂಗಡ ಟಿಕೆಟ್ ಬುಕಿಂಗ್ ಟ್ರೆಂಡ್ ಕೂಡ ಅಷ್ಟೇ ಭರ್ಜರಿಯಾಗಿದ್ದು, ಬಿಡುಗಡೆಗೂ ಮೊದಲೇ ದೊಡ್ಡ ಮಟ್ಟದ ಸದ್ದು ಮಾಡುತ್ತಿದೆ.
ಅಕ್ಟೋಬರ್ 10ರಂದು ಭಾರತದಲ್ಲಿ ಆರಂಭವಾದ ‘ಜೈಲರ್ 2’ ಮುಂಗಡ ಟಿಕೆಟ್ ಬುಕಿಂಗ್, ವಿದೇಶಿ ಮಾರುಕಟ್ಟೆಗಳಲ್ಲಿ ಒಂದು ದಿನ ಮುಂಚಿತವಾಗಿಯೇ ಆರಂಭವಾಗಿತ್ತು. ಕೇವಲ ಪ್ರಿ-ಸೇಲ್ಸ್ ಮೂಲಕವೇ ಚಿತ್ರವು ವಿಶ್ವಾದ್ಯಂತ 50 ಕೋಟಿ ರೂ.ಗಳ ಗಡಿ ದಾಟಿತ್ತು. ಇನ್ನು ಬುಧವಾರ (ಅಕ್ಟೋಬರ್ 14) ಬೆಳಗಿನ ವೇಳೆಗೆ ಕೇವಲ ವಾರಾಂತ್ಯದ ಮುಂಗಡ ಬುಕಿಂಗ್ನಲ್ಲೇ ವಿಶ್ವಾದ್ಯಂತ 80 ಕೋಟಿ ರೂ.ಗಳನ್ನು ಬಾಚಿಕೊಂಡಿದೆ. ಹಿಂದಿ ಡಬ್ಬಿಂಗ್ ಆವೃತ್ತಿಗೆ ಆರಂಭದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಪ್ರತಿಕ್ರಿಯೆ ಸಿಗದಿದ್ದರೂ, ಚಿತ್ರದಲ್ಲಿ ಇತರೆ ಭಾಷೆಗಳ ತಾರೆಯರ ನಟನೆ ಹಾಗೂ ಹೃತಿಕ್ ರೋಷನ್ ಅವರ ವಿಶೇಷ ಅತಿಥಿ ಪಾತ್ರದ ಕಾರಣದಿಂದ ಸಿನಿಮಾಕ್ಕೆ ಪ್ಯಾನ್-ಇಂಡಿಯಾ ಮಟ್ಟದಲ್ಲಿ ದೊಡ್ಡ ಬೂಸ್ಟ್ ನೀಡುವ ಸಾಧ್ಯತೆಯಿದೆ.
ಬಿಡುಗಡೆಗೆ ಇನ್ನು ಒಂದೇ ದಿನ ಬಾಕಿ ಇರುವಂತೆ, ಚಿತ್ರದ ಮೊದಲ ದಿನದ ಮುಂಗಡ ಬುಕಿಂಗ್ ಭಾರತದಲ್ಲೇ ಬರೋಬ್ಬರಿ 27 ಕೋಟಿ ರೂ. ಗ್ರಾಸ್ ತಲುಪಿದೆ. ಇದು ರಜನಿ ಅವರ ‘ಕೂಲಿ’ ಚಿತ್ರದ 46 ಕೋಟಿ ರೂ.ಗಳ ದಾಖಲೆಯ ನಂತರದ ಎರಡನೇ ಅತಿ ದೊಡ್ಡ ಮುಂಗಡ ಬುಕಿಂಗ್ ಆಗಿದೆ. ಒಟ್ಟಾರೆಯಾಗಿ ಮೊದಲ ದಿನವೇ ಚಿತ್ರವು 50 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡುವುದು ಖಚಿತವಾಗಿದ್ದು, ಇದು 2023ರಲ್ಲಿ ಬಿಡುಗಡೆಯಾಗಿ 48 ಕೋಟಿ ರೂಪಾಯಿ ನೆಟ್ ಗಳಿಸಿದ್ದ ಮೊದಲ ಭಾಗದ ದಾಖಲೆಯನ್ನು ಮುರಿಯಲಿದೆ.
ವಿದೇಶಗಳಲ್ಲೂ ‘ಜೈಲರ್ 2’ ಅಬ್ಬರ ಜೋರಾಗಿದೆ. ‘ಜೈಲರ್’ ಮತ್ತು ದಳಪತಿ ವಿಜಯ್ ಅವರ ‘ಲಿಯೋ’ ಚಿತ್ರಗಳಿಗಿಂತಲೂ ಮಿಗಿಲಾಗಿ ಈ ಸಿನಿಮಾ ವಿದೇಶಿ ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡುತ್ತಿದೆ. ಈಗಾಗಲೇ ವಿದೇಶಗಳಲ್ಲಿ ಪ್ರಿ-ಸೇಲ್ಸ್ ಮೂಲಕ 3 ಮಿಲಿಯನ್ ಡಾಲರ್ ಗಡಿ ದಾಟಿದ್ದು, ಮೊದಲ ದಿನವೇ 7ರಿಂದ 8 ಮಿಲಿಯನ್ ಡಾಲರ್ ಗಳಿಸುವ ನಿರೀಕ್ಷೆಯಿದೆ. ಇದರೊಂದಿಗೆ ‘ಜೈಲರ್ 2’ ಸಿನಿಮಾವು ಮೊದಲ ದಿನವೇ ಜಾಗತಿಕ ಮಟ್ಟದಲ್ಲಿ 125 ಕೋಟಿ ರೂ.ಗಳಿಂದ 140 ಕೋಟಿ ರೂ.ಗಳವರೆಗೆ ಕಲೆಕ್ಷನ್ ಮಾಡುವ ಭಾರಿ ನಿರೀಕ್ಷೆಯಲ್ಲಿದೆ.
ಇದನ್ನೂ ಓದಿ: ‘ಜೈಲರ್ 2’ ಶೂಟಿಂಗ್ ಸೆಟ್ನಲ್ಲಿ ರಜನಿಕಾಂತ್ ಎದುರು ನಡುಗಿದ್ದ ವಿದ್ಯಾ ಬಾಲನ್
ಒಂದುವೇಳೆ ಈ ಸಿನಿಮಾದ ಮೊದಲ ದಿನದ ಗಳಿಕೆ 140 ಕೋಟಿ ರೂಪಾಯಿ ದಾಟಿದರೆ, ತಮಿಳು ಸಿನಿಮಾ ಇತಿಹಾಸದಲ್ಲೇ ‘ಕೂಲಿ’ (151 ಕೋಟಿ) ಮತ್ತು ‘ಲಿಯೋ’ (142 ಕೋಟಿ) ಬಳಿಕ ಮೂರನೇ ಅತಿ ದೊಡ್ಡ ಓಪನಿಂಗ್ ಪಡೆದ ಚಿತ್ರವಾಗಿ ಹೊರಹೊಮ್ಮಲಿದೆ. ಅಲ್ಲದೆ, ಯಶ್ ಅಭಿನಯದ ‘ಟಾಕ್ಸಿಕ್’ (136 ಕೋಟಿ ರೂ.), ಶಾರುಖ್ ಖಾನ್ ಅವರ ‘ಜವಾನ್’ (129 ಕೋಟಿ ರೂ.) ಮತ್ತು ರಣಬೀರ್ ಕಪೂರ್ ಅವರ ‘ಅನಿಮಲ್’ (116 ಕೋಟಿ ರೂ.) ಚಿತ್ರಗಳ ಮೊದಲ ದಿನದ ಗಳಿಕೆಯ ದಾಖಲೆಯನ್ನು ಇದು ಸುಲಭವಾಗಿ ಹಿಂದಿಕ್ಕಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.