Happy Birthday Jr NTR: ಕೊಮರಾಮ್​ ಭೀಮ್​ ಅವತಾರದಲ್ಲಿ ಎದುರಾದ ಜ್ಯೂ. ಎನ್​ಟಿಆರ್

Komaram Bheem Poster: ಜ್ಯೂ. ಎನ್​ಟಿಆರ್​ ಬರ್ತ್​ಡೇ ಪ್ರಯುಕ್ತ, RRR ಸಿನಿಮಾದಲ್ಲಿ ಅವರು ನಿಭಾಯಿಸುತ್ತಿರುವ ಕೊಮರಾಮ್​ ಭೀಮ್​ ಪಾತ್ರದ ಝಲಕ್​ ಅನ್ನು ಅಭಿಮಾನಿಗಳಿಗೆ ತೋರಿಸಲಾಗಿದೆ. ಅದನ್ನು ಸೋಶಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿಕೊಳ್ಳುವ ಮೂಲಕ ಫ್ಯಾನ್ಸ್​ ಸಂಭ್ರಮಿಸುತ್ತಿದ್ದಾರೆ.

Happy Birthday Jr NTR: ಕೊಮರಾಮ್​ ಭೀಮ್​ ಅವತಾರದಲ್ಲಿ ಎದುರಾದ ಜ್ಯೂ. ಎನ್​ಟಿಆರ್
ಕೊಮರಾಮ್ ಭೀಮ್ ಪಾತ್ರದಲ್ಲಿ ಜ್ಯೂ. ಎನ್​ಟಿಆರ್​
Follow us
ಮದನ್​ ಕುಮಾರ್​
|

Updated on: May 20, 2021 | 10:20 AM

ಟಾಲಿವುಟ್​ ಖ್ಯಾತ ನಟ ಜ್ಯೂ. ಎನ್​ಟಿಆರ್​ ಅವರಿಗೆ ಇಂದು (ಮೇ 20) ಜನ್ಮದಿನ. ಆದರೆ ಕೊರೊನಾ ವೈರಸ್​ ಹಾವಳಿ ಮಿತಿ ಮೀರಿರುವುದರಿಂದ ಈ ಬಾರಿ ಸಾರ್ವಜನಿಕವಾಗಿ ಸಂಭ್ರಮಾಚರಣೆ ಮಾಡಲಾಗುತ್ತಿಲ್ಲ. ಈ ವೇಳೆ ಕೇವಲ ಸೋಶಿಯಲ್​ ಮೀಡಿಯಾ ಮೂಲಕ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಲಾಗುತ್ತಿದೆ. ಈಗಾಗಲೇ ಅಭಿಮಾನಿಗಳು ಕಾಮನ್​ ಡಿಪಿ ಹಂಚಿಕೊಂಡು ಸಂಭ್ರಮಿಸುತ್ತಿದ್ದಾರೆ. ಅದರ ಜೊತೆಗೆ ಜ್ಯೂ. ಎನ್​ಟಿಆರ್​ ಜನ್ಮದಿನದ ಖುಷಿ ಹೆಚ್ಚಿಸಲು ರಾಜಮೌಳಿ ನಿರ್ದೇಶನದ ಆರ್​ಆರ್​ಆರ್​ ಚಿತ್ರತಂಡ ಹೊಸ ಪೋಸ್ಟರ್​ ಬಿಡುಗಡೆ ಮಾಡಿದೆ. ಈ ಸಿನಿಮಾದಲ್ಲಿ ಕೊಮರಾಮ್​ ಭೀಮ್​ ಎಂಬ ಪಾತ್ರಕ್ಕೆ ಜ್ಯೂ. ಎನ್​ಟಿಆರ್​ ಬಣ್ಣ ಹಚ್ಚುತ್ತಿದ್ದಾರೆ.

ಬಾಹುಬಲಿ ಚಿತ್ರದ ಭಾರಿ ಯಶಸ್ಸಿನ ಬಳಿಕ ನಿರ್ದೇಶಕ ರಾಜಮೌಳಿ ಅವರು ‘ಆರ್​ಆರ್​ಆರ್​’ ಚಿತ್ರಕ್ಕೆ ಆ್ಯಕ್ಷನ್​-ಕಟ್​ ಹೇಳುತ್ತಿದ್ದಾರೆ. ಹಾಗಾಗಿ ಈ ಸಿನಿಮಾ ಮೇಲೆ ಅಭಿಮಾನಿಗಳಿಗೆ ಹೆಚ್ಚು ನಿರೀಕ್ಷೆ ಇದೆ. ಮುಖ್ಯಭೂಮಿಕೆಯಲ್ಲಿ ರಾಮ್​ ಚರಣ್​ ಮತ್ತು ಜ್ಯೂ. ಎನ್​ಟಿಆರ್​ ಅಭಿನಯಿಸುತ್ತಿದ್ದಾರೆ. ಬಾಲಿವುಡ್​ ಕಲಾವಿದರಾದ ಆಲಿಯಾ ಭಟ್​, ಅಜಯ್​ ದೇವಗನ್​ ಕೂಡ ನಟಿಸುತ್ತಿದ್ದಾರೆ. ಇಂದು ಜ್ಯೂ. ಎನ್​ಟಿಆರ್​ ಬರ್ತ್​ಡೇ ಪ್ರಯುಕ್ತ, ಅವರು ನಿಭಾಯಿಸುತ್ತಿರುವ ಕೊಮರಾಮ್​ ಭೀಮ್​ ಪಾತ್ರದ ಝಲಕ್​ ಅನ್ನು ಅಭಿಮಾನಿಗಳಿಗೆ ತೋರಿಸಲಾಗಿದೆ.

ಕೊರೊನಾ ವೈರಸ್​ ಕಾರಣದಿಂದ ಆರ್​ಆರ್​ಆರ್​ ಸಿನಿಮಾದ ಶೂಟಿಂಗ್​ಗೆ ಬ್ರೇಕ್​ ಹಾಕಲಾಗಿದೆ. ಮೇ 10ರಂದು ಜ್ಯೂ. ಎನ್​ಟಿಆರ್​ ಅವರಿಗೂ ಕೊರೊನಾ ವೈರಸ್​ ಪಾಸಿಟಿವ್​ ಆಗಿತ್ತು. ಆ ಬಗ್ಗೆ ಅವರು ಸೋಶಿಯಲ್​ ಮೀಡಿಯಾ ಮೂಲಕ ಮಾಹಿತಿ ಹಂಚಿಕೊಂಡಿದ್ದರು. ಆಗಾಗ ಅವರು ತಮ್ಮ ಆರೋಗ್ಯದ ಬಗ್ಗೆ ಅಪ್​ಡೇಟ್​ ನೀಡುತ್ತಿದ್ದಾರೆ. ಇನ್ನೂ ಅವರು ಕೊವಿಡ್​ನಿಂದ ಗುಣಮುಖರಾಗಿಲ್ಲ. ಅವರು ಮತ್ತು ಅವರ ಕುಟುಂಬದ ಸದಸ್ಯರು ಐಸೊಲೇಟ್​ ಆಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

‘ಪ್ರೀತಿಯ ಅಭಿಮಾನಿಗಳೇ, ನಿಮ್ಮೆಲ್ಲರಿಗೂ ಧನ್ಯವಾದಗಳು. ನಿಮ್ಮ ಮೆಸೇಜ್​, ವಿಡಿಯೋಗಳು ಹಾಗೂ ಶುಭ ಹಾರೈಕೆಗಳನ್ನು ನೋಡಿದ್ದೇನೆ. ನಿಮ್ಮ ಪ್ರೀತಿಗೆ ನಾನು ಋಣಿ ಆಗಿದ್ದೇನೆ. ಕೊವಿಡ್​ನಿಂದ ನಾನು ಚೇತರಿಸಿಕೊಳ್ಳುತ್ತಿದ್ದೇನೆ. ಆದಷ್ಟು ಬೇಗ ನೆಗೆಟಿವ್​ ರಿಪೋರ್ಟ್​ ಬರಲಿದೆ ಎಂಬ ನಂಬಿಕೆ ಇದೆ. ಪ್ರತಿವರ್ಷ ನೀವೆಲ್ಲ ನನ್ನ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಮಾಡುತ್ತಿದ್ದಿರಿ. ಆದರೆ ಈ ಕಷ್ಟದ ಸಮಯದಲ್ಲಿ ನೀವೆಲ್ಲರೂ ಮನೆಯಲ್ಲಿ ಸುರಕ್ಷಿತವಾಗಿದ್ದರೆ ಅದೇ ನನಗೆ ಬಹುದೊಡ್ಡ ಉಡುಗೊರೆ’ ಎಂದು ಜ್ಯೂ. ಎನ್​ಟಿಆರ್​ ಟ್ವೀಟ್​ ಮಾಡಿದ್ದಾರೆ.

ಇದನ್ನೂ ಓದಿ:

ಕೊರೊನಾ ಬಗ್ಗೆ ಕನ್ನಡದಲ್ಲೇ ಜಾಗೃತಿ ಮೂಡಿಸಿದ್ದ ಜೂ. ಎನ್​ಟಿಆರ್​ಗೆ ಕೊರೊನಾ ಸೋಂಕು ದೃಢ​

ಉಲ್ಟಾಪಲ್ಟಾ ಆಯ್ತು ರಾಜಮೌಳಿ ಲೆಕ್ಕಾಚಾರ; ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ಬೇಸರ

(Jr NTR Birthday: Komaram Bheem New Poster released by Rajamouli directorial RRR film)