ಮುನಿಸು ಮರೆತು, ಮಾವ, ಚಿಕ್ಕಪ್ಪನಿಗೆ ಶುಭ ಕೋರಿದ ಜೂ ಎನ್​ಟಿಆರ್

|

Updated on: Jun 05, 2024 | 5:11 PM

ಆಂಧ್ರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಗೆದ್ದ ಮಾವ ಚಂದ್ರಬಾಬು ನಾಯ್ಡು, ಚಿಕ್ಕಪ್ಪ ಬಾಲಕೃಷ್ಣ ಸೇರಿದಂತೆ ಈ ಚುನಾವಣೆಯಲ್ಲಿ ಗೆದ್ದ ಇತರೆ ಕುಟುಂಬ ಸದಸ್ಯರಿಗೆ ಮುನಿಸು ಮರೆತು ಶುಭಾಶಯ ಕೋರಿದ್ದಾರೆ ಜೂ ಎನ್​ಟಿಆರ್.

ಮುನಿಸು ಮರೆತು, ಮಾವ, ಚಿಕ್ಕಪ್ಪನಿಗೆ ಶುಭ ಕೋರಿದ ಜೂ ಎನ್​ಟಿಆರ್
Follow us on

ಆಂಧ್ರ ಪ್ರದೇಶದಲ್ಲಿ ನಂದಮೂರಿ (Nandamuri) ಕುಟುಂಬದ ನಾಯತ್ವವಿರುವ ಟಿಡಿಪಿ ಪಕ್ಷ ಭರ್ಜರಿ ವಿಜಯ ಸಾಧಿಸಿದೆ. ಚಂದ್ರಬಾಬು ನಾಯ್ಡು ಮತ್ತೊಮ್ಮೆ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ನಂದಮೂರಿ ಕುಟುಂಬದ ಐದು ಮಂದಿ ಈ ಬಾರಿ ಚುನಾವಣೆಯಲ್ಲಿ ಗೆದ್ದಿದ್ದು ನಾಲ್ಕು ಮಂದಿಗೆ ಸರ್ಕಾರದಲ್ಲಿ ದೊಡ್ಡ ಹುದ್ದೆಗಳು ಸಿಗಲಿವೆ. ಆದರೆ ಈ ಬಾರಿಯ ಚುನಾವಣೆಯಿಂದ ನಂದಮೂರಿ ಕುಟುಂಬದ ಜನಪ್ರಿಯ ವ್ಯಕ್ತಿ, ನಟ ಜೂ ಎನ್​ಟಿಆರ್ ದೂರ ಉಳಿದಿದ್ದರು. ಅದಕ್ಕೆ ಕಾರಣ ಕುಟುಂಬದಲ್ಲಿನ ಆಂತರಿಕ ಸಮಸ್ಯೆ. ಆದರೆ ಈಗ ಚುನಾವಣಾ ಫಲಿತಾಂಶ ಬಂದು ಒಂದು ದಿನದ ಬಳಿಕ ಜೂ ಎನ್​ಟಿಆರ್ ಮುನಿಸು ಮರೆತು ಚುನಾವಣೆ ಗೆದ್ದ ಮಾವ ಚಂದ್ರಬಾಬು ನಾಯ್ಡು ಹಾಗೂ ಚಿಕ್ಕಪ್ಪ ನಂದಮೂರಿ ಬಾಲಕೃಷ್ಣಗೆ ಅಭಿನಂದನೆ ಸಲ್ಲಿಸಿದ್ದಾರೆ.

ಈ ಹಿಂದೆ ಟಿಡಿಪಿ ಪರವಾಗಿ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿದ್ದ ನಟ ಜೂ ಎನ್​ಟಿಆರ್, ಟಿಡಿಪಿಯ ಸ್ಟಾರ್ ಪ್ರಚಾರಕ ಆಗಿದ್ದರು. ಆದರೆ ಈ ಬಾರಿ ಚುನಾವಣೆಯಿಂದ ಬಹು ದೂರವೇ ಉಳಿದಿದ್ದ ಜೂ ಎನ್​ಟಿಆರ್ ಪ್ರಚಾರಕ್ಕೂ ಹೋಗಿರಲಿಲ್ಲ, ಟ್ವೀಟ್ ಸಹ ಮಾಡಿರಲಿಲ್ಲ. ಇದು ಟಿಡಿಪಿಯ ಕಾರ್ಯಕರ್ತರು ಹಾಗೂ ಕೆಲವರ ನಾಯಕರ ಅಸಮಾಧಾನಕ್ಕೆ ಕಾರಣವಾಗಿತ್ತು. ಕೆಲವು ಟಿಡಿಪಿ ನಾಯಕರು ನೇರವಾಗಿಯೇ ಜೂ ಎನ್​ಟಿಆರ್ ಅನ್ನು ಟೀಕಿಸಿದ್ದರು. ನಂದಮೂರಿ ಕುಟುಂಬಕ್ಕೂ ಜೂ ಎನ್​ಟಿಆರ್​ಗೂ ಸಂಬಂಧವಿಲ್ಲ ಎಂದಿದ್ದರು.

ಆದರೆ ಈಗ ಜೂ ಎನ್​ಟಿಆರ್ ಟ್ವೀಟ್ ಮಾಡಿದ್ದಾರೆ, ಚುನಾವಣೆಯಲ್ಲಿ ಗೆದ್ದ ತಮ್ಮ ಕುಟುಂಬ ಸದಸ್ಯರಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ‘ಆಂಧ್ರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಅಭೂತಪೂರ್ವ ವಿಜಯ ಸಾಧಿಸಿದ ಪ್ರಿಯ ಮಾವಯ್ಯ ಚಂದ್ರಬಾಬು ನಾಯ್ಡು ಅವರಿಗೆ ಹೃದಯಪೂರ್ವಕ ಅಭಿನಂದನೆಗಳು. ನಿಮ್ಮ ಈ ವಿಜಯ, ಆಂಧ್ರ ಪ್ರದೇಶವನ್ನು ಅಭಿವೃದ್ಧಿಯ ಕಡೆಗೆ ಕರೆದುಕೊಂಡು ಹೋಗುತ್ತದೆಂದು ನಂಬಿದ್ದೇನೆ’ ಎಂದಿದ್ದಾರೆ.

ಇದನ್ನೂ ಓದಿ:‘ಲೋಕೇಶ್ ನೋಡಿ ಕಲಿ, ಸಿನಿಮಾ ಬಿಟ್ಟು ಬಾ’: ಜೂ ಎನ್​ಟಿಆರ್ ಬಗ್ಗೆ ಟಿಡಿಪಿ ನಾಯಕ ಆಕ್ರೋಶ

ಮುಂದುವರೆದು, ಚಂದ್ರಬಾಬು ನಾಯ್ಡು ಪುತ್ರ ನಾರಾ ಲೋಕೇಶ್​ಗೂ ಅಭಿನಂದನೆ ತಿಳಿಸಿದ್ದಾರೆ. ಹಿಂದೂಪುರದಿಂದ ಮೂರನೇ ಬಾರಿ ಗೆದ್ದಿರುವ ಬಾಲಕೃಷ್ಣ ಚಿಕ್ಕಪ್ಪನಿಗೂ ಅಭಿನಂದನೆ ಎಂದಿದ್ದಾರೆ. ಅಲ್ಲದೆ ಬಾಲಕೃಷ್ಣ ಅವರ ಅಳಿಯ ಆಗಿರುವ ಶ್ರೀಭರತ್ ಮುತ್ತುಕುಮಲಿಗೂ ಅಭಿನಂದನೆ ಸಲ್ಲಿಸಿದ್ದಾರೆ. ಇವರೆಲ್ಲ ಟಿಡಿಪಿ ಪಕ್ಷದಿಂದ ಗೆದ್ದಿದ್ದಾರೆ. ಇದರ ಜೊತೆಗೆ ಕಾಂಗ್ರೆಸ್ ಪಕ್ಷದಿಂದ ಗೆದ್ದಿರುವ ತನ್ನ ಅತ್ತೆ ದಗ್ಗುಬಾಟಿ ಪುರಂದರೇಶ್ವರಿಗೂ ಜೂ ಎನ್​ಟಿಆರ್ ಅಭಿನಂದನೆ ತಿಳಿಸಿದ್ದಾರೆ. ಮುಂದುವರೆದು ಮತ್ತೊಂದು ಟ್ವೀಟ್​ನಲ್ಲಿ, ‘ಅದ್ಭುತವಾದ ವಿಜಯ ಸಾಧಿಸಿರುವ ಪವನ್ ಕಲ್ಯಾಣ್ ಅವರಿಗೂ ನಾನು ಹೃದಯಪೂರ್ವ ಶುಭಾಶಯಗಳನ್ನು ತಿಳಿಸುತ್ತೇನೆ’ ಎಂದಿದ್ದಾರೆ.

ಕೆಲವು ದಿನಗಳ ಹಿಂದಷ್ಟೆ ಜೂ ಎನ್​ಟಿಆರ್ ಅವರ ದೊಡ್ಡಪ್ಪನ ಮಗ ನಂದಮೂರಿ ಚೈತನ್ಯ ಕೃಷ್ಣ ಕೆಲವು ದಿನಗಳ ಹಿಂದಷ್ಟೆ ಜೂ ಎನ್​ಟಿಆರ್ ಅನ್ನು ನೇರವಾಗಿ ಗುರಿಯಾಗಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಎಚ್ಚರಿಕೆ ನೀಡಿದ್ದರು. ನಿನ್ನೆಯಷ್ಟೆ ಟಿಡಿಪಿ ನಾಯಕ ಎಸ್​ವಿಎಸ್​ಎನ್ ವರ್ಮಾ ಸಹ ಜೂ ಎನ್​ಟಿಆರ್ ಬಗ್ಗೆ ಲಘುವಾಗಿ ಮಾತನಾಡಿದ್ದರು. ನಾರಾ ಲೋಕೇಶ್ ಜೊತೆಗೆ ಜೂ ಎನ್​ಟಿಆರ್ ಅನ್ನು ಹೋಲಿಸಿ ಜೂ ಎನ್​ಟಿಆರ್ ಕೆಲಸಕ್ಕೆ ಬಾರದವನು ಎಂಬರ್ಥದ ಮಾತುಗಳನ್ನಾಡಿದ್ದರು. ಏನೇ ಆದರೂ ಜೂ ಎನ್​ಟಿಆರ್ ಅದನ್ನೆಲ್ಲ ಮರೆತು ತಮ್ಮ ಕುಟುಂಬ ಸದಸ್ಯರಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ