‘ಲೋಕೇಶ್ ನೋಡಿ ಕಲಿ, ಸಿನಿಮಾ ಬಿಟ್ಟು ಬಾ’: ಜೂ ಎನ್ಟಿಆರ್ ಬಗ್ಗೆ ಟಿಡಿಪಿ ನಾಯಕ ಆಕ್ರೋಶ
ಟಿಡಿಪಿ ಪಕ್ಷ ಆಂಧ್ರ ವಿಧಾನಸಭೆ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಕಂಡ ಕೂಡಲೇ ಕೆಲವು ಟಿಡಿಪಿ ನಾಯಕರು ಜೂ ಎನ್ಟಿಆರ್ ವಿರುದ್ಧ ನಾಲಗೆ ಹರಿಬಿಡುತ್ತಿದ್ದಾರೆ. ಇದು ಜೂ ಎನ್ಟಿಆರ್ ಅಭಿಮಾನಿಗಳ ಸಿಟ್ಟಿಗೆ ಕಾರಣವಾಗಿದೆ.
ಆಂಧ್ರ ವಿಧಾನಸಭೆ ಚುನಾವಣೆಗೆ (Andhra Pradesh Assembly Election) ಫಲಿತಾಂಶ ರಾಜ್ಯದ ರಾಜಕೀಯದಲ್ಲಿ ದೊಡ್ಡ ಬದಲಾವಣೆ ತಂದಿದೆ. ಅಧಿಕಾರ ಕಳೆದುಕೊಂಡಿದ್ದ ಚಂದ್ರಬಾಬು ನಾಯ್ಡು ಮತ್ತೆ ಅಧಿಕಾರ ಪಡೆದುಕೊಂಡಿದ್ದಾರೆ. ರಾಜಕೀಯ ನೆಲೆಗಾಗಿ ಹೋರಾಡುತ್ತಿದ್ದ ಪವನ್ ಕಲ್ಯಾಣ್ ತಮ್ಮ ಜನಸೇನಾದ ಅಭ್ಯರ್ಥಿಗಳನ್ನು 21 ಕ್ಷೇತ್ರಗಳಲ್ಲಿ ಗೆಲ್ಲಿಸಿಕೊಳ್ಳುವ ಮೂಲಕ ಆಂಧ್ರ ವಿಧಾನಸಭೆಗೆ ಭರ್ಜರಿ ಎಂಟ್ರಿ ಕೊಟ್ಟಿದ್ದಾರೆ. ಆಂಧ್ರದಲ್ಲಿ ನೆಲೆಗಾಗಿ ಹುಡುಕಾಡುತ್ತಿದ್ದ ಬಿಜೆಪಿಗೆ ಸಹ 8 ಸೀಟುಗಳು ದೊರೆತಿವೆ. ಟಿಡಿಪಿ ಗೆದ್ದ ಬೆನ್ನಲ್ಲೆ ಜೂ ಎನ್ಟಿಆರ್ ವಿರುದ್ಧ ಟಿಡಿಪಿಯ ನಾಯಕರು ಕೆಲವರು ನಾಲಗೆ ಹರಿಬಿಡಲು ಆರಂಭಿಸಿದ್ದಾರೆ.
ಪವನ್ ಕಲ್ಯಾಣ್ ಗೆದ್ದಿರುವ ಪೀಠಾಪುರಂ ಕ್ಷೇತ್ರದ ಮಾಜಿ ಶಾಸಕ, ಟಿಡಿಪಿ ಮುಖಂಡ ಎಸ್ವಿಎಸ್ಎನ್ ವರ್ಮಾ, ಜೂ ಎನ್ಟಿಆರ್ ಬಗ್ಗೆ ಮಾತನಾಡಿದ್ದು, ‘ಜೂ ಎನ್ಟಿಆರ್, ನಾರಾ ಲೋಕೇಶ್ (ಚಂದ್ರಬಾಬು ನಾಯ್ಡು ಪುತ್ರ) ನೋಡಿ ಕಲಿಯಬೇಕು. ಆ ಇಬ್ಬರಿಗೂ ಹೋಲಿಕೆಯೇ ಇಲ್ಲ. ನಾರಾ ಲೋಕೇಶ್, ಟಿಡಿಪಿ ಪಕ್ಷಕ್ಕಾಗಿ ಪ್ರತಿದಿನ ಕೆಲಸ ಮಾಡುತ್ತಾರೆ. ತ್ಯಾಗಗಳನ್ನು ಮಾಡಿದ್ದಾರೆ. ಪಕ್ಷಕ್ಕೆ 60 ಲಕ್ಷ ಹೊಸ ಸದಸ್ಯರನ್ನು ಸೇರಿಸಿದ್ದಾರೆ. ಪಕ್ಷಕ್ಕೆ ಹೊಸ ತಂತ್ರಜ್ಞಾನದ ಪರಿಚಯ ಮಾಡಿಸಿದ್ದಾರೆ. ಕಾರ್ಯಕರ್ತರಿಗೆ ವಿಮೆ ವ್ಯವಸ್ಥೆ ಮಾಡಿಸಿದ್ದಾರೆ’ ಎಂದಿದ್ದಾರೆ.
‘ಜೂ ಎನ್ಟಿಆರ್ ಟಿಡಿಪಿ ಪಕ್ಷಕ್ಕೆ ಬರಬೇಕೆಂದರೆ ಸಿನಿಮಾಗಳನ್ನು ಬಿಟ್ಟು ಇಲ್ಲಿಗೆ ಬರಬೇಕು, ಆಗ ಬೇಕಾದರೆ ಯಾವುದಾದರೂ ಒಂದು ಸ್ಥಾನ ಕೊಟ್ಟು ಅವರನ್ನು ಬದಿಗಿ ಕೂಡಿಸಬಹುದು. ಅವರು ಪಕ್ಷಕ್ಕಾಗಿ ಕೆಲಸ ಮಾಡುತ್ತೇನೆಂದು ಬಂದರೆ ನಾನೇ ಅವರಿಗೆ ಯಾವುದಾದರೂ ಒಂದು ಹುದ್ದೆ ಕೊಡಿಸುತ್ತೇನೆ. ಅದನ್ನು ಬಿಟ್ಟು ಮನೆಯಲ್ಲಿ ಕೂತಿದ್ದರೆ ಯಾರೂ ಸಹ ಹುದ್ದೆಗಳನ್ನು ಕೊಡುವುದಿಲ್ಲ. ಅಲ್ಲದೆ ನಂದಮೂರಿ ಕುಟುಂಬದವರಿಗೆ ಜೂ ಎನ್ಟಿಆರ್ ಬಗ್ಗೆ ಇಲ್ಲದ ಕಾಳಜಿ ಬೇರೆಯವರಿಗೆ ಏಕೆ?’ ಎಂದು ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ:ಪ್ರಶಾಂತ್ ನೀಲ್-ಜೂ ಎನ್ಟಿಆರ್ ಸಿನಿಮಾಕ್ಕೆ ಯುವ ನಾಯಕ ನಟ ಎಂಟ್ರಿ
ತೆಲುಗುದೇಶಂ ಪಾರ್ಟಿ (ಟಿಡಿಪಿ), ನಂದಮೂರಿ ಕುಟುಂಬದ ರಾಜಕೀಯ ಪಕ್ಷ. ಸೀನಿಯರ್ ಎನ್ಟಿಆರ್ ಕಟ್ಟಿ ಬೆಳೆಸಿದ ಪಕ್ಷವದು. ಜೂ ಎನ್ಟಿಆರ್ ಸಹ 2009 ರ ವರೆಗೆ ಟಿಡಿಪಿ ಪರವಾಗಿ ಅಬ್ಬರದ ಪ್ರಚಾರ ಮಾಡಿದ್ದರು. ಟಿಡಿಪಿ ಪರವಾಗಿ ಕ್ರೌಡ್ ಪುಲ್ಲರ್ ಆಗಿದ್ದ ಜೂ ಎನ್ಟಿಆರ್, ಟಿಡಿಪಿಯ ತಾರಾ ಪ್ರಚಾರಕ ಆಗಿದ್ದರು. ಆದರೆ ಆ ನಂತರದ ದಿನಗಳಲ್ಲಿ ಚಂದ್ರಬಾಬು ನಾಯ್ಡು ಹಾಗೂ ನಂದಮೂರಿ ಬಾಲಕೃಷ್ಣ ಜೂ ಎನ್ಟಿಆರ್ ಅನ್ನು ಪಕ್ಷದಿಂದ ದೂರ ಇರಿಸಿದರು.
ಚಂದ್ರಬಾಬು ನಾಯ್ಡು ಪುತ್ರ ನಾರಾ ಲೋಕೇಶ್ ಹಾಗೂ ನಂದಮೂರಿ ಬಾಲಕೃಷ್ಣ ಪುತ್ರ ಮೋಕ್ಷಜ್ಞ ಅವರನ್ನು ಟಿಡಿಪಿ ಪಕ್ಷದ ಭವಿಷ್ಯದ ನಾಯಕರನ್ನಾಗಿ ಮಾಡಬೇಕೆಂಬ ಉದ್ದೇಶದಿಂದ ಜೂ ಎನ್ಟಿಆರ್ ಅನ್ನು ದೂರ ಇಡಲಾಯ್ತು. ಈ ಹಿಂದೆ ನಂದಮೂರಿ ಬಾಲಕೃಷ್ಣ ಹಲವು ಬಾರಿ ಜೂ ಎನ್ಟಿಆರ್ ವಿಷಯವಾಗಿ ಬಹಿರಂಗವಾಗಿಯೇ ಖಾರವಾಗಿ ಮಾತನಾಡಿದ್ದಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ