‘ಕತ್ರಿನಾಗೆ ಒಂದು ಲೈನ್ ಡೈಲಾಗ್ ಹೇಳಲೂ ಬರುತ್ತಿರಲಿಲ್ಲ’: ಅಸಲಿ ವಿಷಯ ತಿಳಿಸಿದ ನಟ
ನಟಿ ಕತ್ರಿನಾ ಕೈಫ್ ಅವರು ಚಿತ್ರರಂಗಕ್ಕೆ ಕಾಲಿಟ್ಟಿದ್ದು 2003ರಲ್ಲಿ ತೆರೆಕಂಡ ‘ಬೂಮ್’ ಚಿತ್ರದ ಮೂಲಕ. ‘ಕತ್ರಿನಾ ಕೈಫ್ ಅವರನ್ನು ನೋಡಿ. ಬೂಮ್ ಸಿನಿಮಾದ ಚಿತ್ರೀಕರಣಕ್ಕೆ ಬಂದಾಗ ಅವರಿಗೆ ನಿಂತುಕೊಳ್ಳಲು ಬರುತ್ತಿರಲಿಲ್ಲ. ಅವರಿಗೆ ಒಂದು ಸಾಲಿನ ಡೈಲಾಗ್ ಹೇಳಲು ಬರುತ್ತಿರಲಿಲ್ಲ. ಡ್ಯಾನ್ಸ್ ಕೂಡ ಬರುತ್ತಿರಲಿಲ್ಲ’ ಎಂದಿದ್ದಾರೆ ಶೇಖರ್ ಸುಮನ್.
ಖ್ಯಾತ ನಟ ಶೇಖರ್ ಸುಮನ್ ಅವರು ‘ಹೀರಾಮಂಡಿ’ (Heeramandi) ವೆಬ್ ಸರಣಿಯಲ್ಲಿ ಒಂದು ಪ್ರಮುಖ ಪಾತ್ರ ಮಾಡಿದ್ದಾರೆ. ಇದರಲ್ಲಿ ನಟಿಸಿದ ಬಳಿಕ ಅವರ ಜನಪ್ರಿಯತೆ ಇನ್ನಷ್ಟು ಹೆಚ್ಚಾಗಿದೆ. ಇದೇ ವೆಬ್ ಸಿರೀಸ್ನಲ್ಲಿ ಶೇಖರ್ ಸುಮನ್ ಅವರ ಪುತ್ರ ಅಧ್ಯಾಯನ್ ಸುಮನ್ ಕೂಡ ಒಂದು ಪುಟ್ಟ ಪಾತ್ರ ಮಾಡಿದ್ದಾರೆ. ಇಬ್ಬರೂ ಜೊತೆಯಾಗಿ ಬಾಲಿವುಡ್ ಹಂಗಾಮಾಗೆ ಸಂದರ್ಶನ ನೀಡಿದ್ದಾರೆ. ಈ ವೇಳೆ ಶೇಖರ್ ಸುಮನ್ ಅವರು ಕತ್ರಿನಾ ಕೈಫ್ (Katrina Kaif) ಬಗ್ಗೆ ಮಾತನಾಡಿದ್ದಾರೆ. ಆರಂಭದ ದಿನಗಳಲ್ಲಿ ಕತ್ರಿನಾ ಕೈಫ್ ಅವರ ಪರಿಸ್ಥಿತಿ ಹೇಗಿತ್ತು ಎಂಬುದನ್ನು ಅವರು ವಿವರಿಸಿದ್ದಾರೆ. ಅಲ್ಲದೇ, ಕತ್ರಿನಾ ಕೈಫ್ ಅವರಿಂದ ಅಧ್ಯಾಯನ್ ಸುಮನ್ ಸ್ಫೂರ್ತಿ ಪಡೆದುಕೊಳ್ಳಬೇಕು ಎಂದು ಶೇಖರ್ ಸುಮನ್ (Shekhar Suman) ಸಲಹೆ ನೀಡಿದ್ದಾರೆ.
ಕತ್ರಿನಾ ಕೈಫ್ ಅವರು ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದು 2003ರಲ್ಲಿ ಬಿಡುಗಡೆ ಆದ ‘ಬೂಮ್’ ಸಿನಿಮಾದ ಮೂಲಕ. ಆ ಸಿನಿಮಾದ ಶೂಟಿಂಗ್ಗೆ ಬಂದಾಗ ಕತ್ರಿನಾ ಕೈಫ್ ಅವರಿಗೆ ನಟನೆಯಲ್ಲಿ ಯಾವುದೇ ಅನುಭವ ಇರಲಿಲ್ಲ. ‘ಬೇರೆಯವರನ್ನು ನೋಡಿ ಕಲಿಯಬೇಕು. ಕತ್ರಿನಾ ಕೈಫ್ ಅವರನ್ನು ನೋಡಿ. ಬೂಮ್ ಸಿನಿಮಾದ ಶೂಟಿಂಗ್ಗೆ ಬಂದಾಗ ಅವರಿಗೆ ನಿಂತುಕೊಳ್ಳಲು ಬರುತ್ತಿರಲಿಲ್ಲ’ ಎಂದಿದ್ದಾರೆ ಶೇಖರ್ ಸುಮನ್.
‘ಕತ್ರಿನಾ ಕೈಫ್ ಅವರಿಗೆ ಒಂದು ಸಾಲಿನ ಡೈಲಾಗ್ ಹೇಳಲು ಬರುತ್ತಿರಲಿಲ್ಲ. ಡ್ಯಾನ್ಸ್ ಕೂಡ ಬರುತ್ತಿರಲಿಲ್ಲ. ಆದರೆ ಆ ಬಳಿಕ ಅವರು ಎಲ್ಲಿಗೆ ತಲುಪಿದರು ಎಂಬುದನ್ನು ನೋಡಿ. ‘ರಾಜ್ನೀತಿ’, ‘ಜಿಂದಗಿ ನಾ ಮಿಲೇಗಿ ದೊಬಾರ’, ‘ಧೂಮ್ 3’ ಸಿನಿಮಾಗಳಲ್ಲಿ ಅವರ ಅಭಿನಯವನ್ನು ನೋಡಿ. ಇದು ಅದೇ ಹುಡುಗಿ ಎಂದು ನೀವು ಹೇಳಲು ಸಾಧ್ಯವಿಲ್ಲ. ಅತ್ಯುತ್ತಮ ಜನರ ಜೀವನದಲ್ಲಿ ಹೀಗೆ ಆಗುತ್ತದೆ’ ಎಂದು ಶೇಖರ್ ಸುಮನ್ ಹೇಳಿದ್ದಾರೆ.
ಇದನ್ನೂ ಓದಿ: ಸಲ್ಮಾನ್ ಖಾನ್ಗೆ ಕತ್ರಿನಾ ಮೇಲಿರೋ ಪ್ರೀತಿ ಎಂಥದ್ದು? ಈ ಘಟನೆಯೇ ಸಾಕ್ಷಿ
ಅದೇ ರೀತಿ ದೀಪಿಕಾ ಪಡುಕೋಣೆ ಮತ್ತು ಅನನ್ಯಾ ಪಾಂಡೆ ಅವರ ಉದಾಹರಣೆಯನ್ನೂ ಶೇಖರ್ ಸುಮನ್ ನೀಡಿದ್ದಾರೆ. ‘ದೀಪಿಕಾ ಪಡುಕೋಣೆ ಕೂಡ ಉತ್ತಮ ನಟಿಯಾಗಿ ಬೆಳೆದರು. ‘ಕೋ ಗಯೇ ಹಮ್ ಕಹಾ’ ಸಿನಿಮಾ ಬರುವ ತನಕ ನಟಿ ಅನನ್ಯಾ ಪಾಂಡೆ ಅವರು ಕೂಡ ಸಾಕಷ್ಟು ಟ್ರೋಲ್ ಎದುರಿಸಬೇಕಾಯಿತು. ಅದನ್ನೆಲ್ಲ ನೀವು ಹಾಸ್ಯದಿಂದಲೇ ಸ್ವೀಕರಿಸಬೇಕು’ ಎಂದು ಹೊಸ ಕಲಾವಿದರಿಗೆ ಶೇಖರ್ ಸುಮನ್ ಸಲಹೆ ನೀಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.