ಜೂ ಎನ್​ಟಿಆರ್ ಅಭಿಮಾನಿಗಳ ಹುಚ್ಚಾಟ, ‘ಸಿಹಾಂದ್ರಿ’ ರಿರಿಲೀಸ್​ ವೇಳೆ ಚಿತ್ರಮಂದಿರದೊಳಗೆ ಬೆಂಕಿ

|

Updated on: May 22, 2023 | 5:29 PM

Jr NTR Fans: ಜೂ ಎನ್​ಟಿಆರ್ ಅಭಿಮಾನಿಗಳು ಮತ್ತೊಮ್ಮೆ ಹುಚ್ಚಾಟ ಮೆರೆದಿದ್ದಾರೆ. ಸಿಂಹಾದ್ರಿ ಸಿನಿಮಾ ಪ್ರದರ್ಶನವಾಗುತ್ತಿದ್ದ ಚಿತ್ರಮಂದಿರದ ಒಳಗೆ ಬೆಂಕಿ ಹಚ್ಚಿದ್ದಾರೆ.

ಜೂ ಎನ್​ಟಿಆರ್ ಅಭಿಮಾನಿಗಳ ಹುಚ್ಚಾಟ, ಸಿಹಾಂದ್ರಿ ರಿರಿಲೀಸ್​ ವೇಳೆ ಚಿತ್ರಮಂದಿರದೊಳಗೆ ಬೆಂಕಿ
ಜೂ ಎನ್​ಟಿಆರ್
Follow us on

ತೆಲುಗು ಚಿತ್ರರಂಗದ (Telugu Movie Industry) ಸ್ಟಾರ್ ನಟರ ಅಭಿಮಾನಿಗಳ (Star Actor Fans) ಹುಚ್ಚಾಟ ದಿನೇ-ದಿನೇ ಮಿತಿ ಮೀರುತ್ತಿದೆ. ಈ ಹಿಂದೆ ಪವನ್ ಕಲ್ಯಾಣ್ (Pawan Kalyan) ಹಾಗೂ ಪ್ರಭಾಸ್ (Prabhas) ಅಭಿಮಾನಿಗಳು ಮೆಚ್ಚಿನ ನಟನ ಸಿನಿಮಾ ಬಿಡುಗಡೆ ವೇಳೆ ಚಿತ್ರಮಂದಿರಗಳಿಗೆ ಹಾನಿ ಮಾಡಿದ್ದರು. ಇದೀಗ ಜೂ ಎನ್​ಟಿಆರ್ (Jr NTR) ಅಭಿಮಾನಿಗಳು, ತಮ್ಮ ಮೆಚ್ಚಿನ ನಟನ ಹಳೆಯ ಹಿಟ್ ಸಿನಿಮಾ ರಿ ರಿಲೀಸ್ ವೇಳೆ ಚಿತ್ರಮಂದಿರದೊಳಗೆ ಪಟಾಕಿ ಹೊಡೆದು ಸೀಟುಗಳಿಗೆ ಬೆಂಕಿ ಹಚ್ಚಿದ್ದಾರೆ.

ಜೂ ಎನ್​ಟಿಆರ್​ರ ಹುಟ್ಟುಹಬ್ಬದ ವಿಶೇಷವಾಗಿ ಮೇ 20 ಜೂ ಎನ್​ಟಿಆರ್​ರ 2003 ರ ಸೂಪರ್ ಹಿಟ್ ಸಿನಿಮಾ ‘ಸಿಂಹಾದ್ರಿ’ ಮರು ಬಿಡುಗಡೆ ಮಾಡಲಾಗಿದೆ. ಈ ಮರುಬಿಡುಗಡೆಗಾಗಿ ವಿಶೇಷ ಪ್ರೀ ರಿಲೀಸ್ ಕಾರ್ಯಕ್ರಮವನ್ನೂ ಆಯೋಜಿಸಲಾಗಿತ್ತು. ನಿರೀಕ್ಷೆಯಂತೆಯೇ ಸಿಂಹಾದ್ರಿ ಪ್ರೀ ರಿಲೀಸ್​ಗೆ ಅದ್ಭುತ ಪ್ರತಿಕ್ರಿಯೆ ಅಭಿಮಾನಿಗಳಿಂದ ವ್ಯಕ್ತವಾಗಿದೆ. ಆದರೆ ಕೆಲವೆಡೆ ಜೂ ಎನ್​ಟಿಆರ್ ಅಭಿಮಾನಿಗಳು ಅತಿರೇಕದ ವರ್ತನೆ ತೋರಿದ್ದರಿಂದ ಚಿತ್ರಮಂದಿರಗಳಿಗೆ ಹಾನಿ ಆಗಿದೆ.

ವಿಜಯವಾಡದ ಅಪ್ಸರಾ ಚಿತ್ರಮಂದಿರದಲ್ಲಿ ಸಿಂಹಾದ್ರಿ ಸಿನಿಮಾ ರೀ ರಿಲೀಸ್​ ಆಗಿತ್ತು ಜೂ ಎನ್​ಟಿಆರ್ ಅಭಿಮಾನಿಗಳು ಕೂಗಾಡುತ್ತಾ ಕಿರುಚಾಡುತ್ತಾ ಅತ್ಯುತ್ಸಾಹಭರಿತವಾಗಿ ಸಿನಿಮಾ ನೋಡುವ ವೇಳೆ ಕೆಲವು ಅಭಿಮಾನಿಗಳು ಚಿತ್ರಮಂದಿರದ ಒಳಗೆ ಪಟಾಕಿ ಹಚ್ಚಿದ್ದಾರೆ. ಇದರಿಂದಾಗಿ ಚಿತ್ರಮಂದಿರದ ಒಳಗೆ ಬೆಂಕಿ ಹೊತ್ತುಕೊಂಡಿದೆ. ಚಿತ್ರಮಂದಿರದ ಹಲವು ಸೀಟುಗಳು ಬೆಂಕಿಗೆ ಆಹುತಿಯಾಗಿವೆ. ಈ ಕಾರಣದಿಂದ ಸಿನಿಮಾ ಪ್ರದರ್ಶನವನ್ನು ಸ್ಥಗಿತಗೊಳಿಸಿ ಪ್ರೇಕ್ಷಕರನ್ನು ಹೊರಗೆ ಕಳಿಸಲಾಗಿದೆ.

ಜೂ ಎನ್​ಟಿಆರ್ ಅಭಿಮಾನಿಗಳ ಈ ಉದ್ಧಟತನದ ವರ್ತನೆಯನ್ನು ಹಲವು ನೆಟ್ಟಿಗರು ಖಂಡಿಸಿದ್ದಾರೆ. ಇಂಥಹಾ ಅತಿರೇಕದ ವರ್ತನೆಯನ್ನು ಸಹಿಸಲಾಗದು, ಈ ಕೃತ್ಯ ಎಸಗಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ನಿಮ್ಮ ಅಭಿಮಾನಕ್ಕೆ, ಖುಷಿಗೆ ಚಿತ್ರಮಂದಿರದ ಮಾಲೀಕ ಬೆಲೆ ತೆರಬೇಕಾಗಿದೆ ಹೀಗೆ ಮಾಡಬೇಡಿ ಎಂದು ಕೆಲವು ಜೂ ಎನ್​ಟಿಆರ್ ಅಭಿಮಾನಿಗಳು ಅನುಕಂಪ ವ್ಯಕ್ತಪಡಿಸಿದ್ದಾರೆ.

ಕೆಲವು ದಿನಗಳ ಹಿಂದೆ ಮಚಲಿಪಟ್ಟಣದಲ್ಲಿ ಸಹ ಜೂ ಎನ್​ಟಿಆರ್ ಅಭಿಮಾನಿಗಳು ಹುಚ್ವಾಟ ಪ್ರದರ್ಶಿಸಿದ್ದರು. ಜೂ ಎನ್​ಟಿಆರ್​ರ ಹೊಸ ಸಿನಿಮಾ ದೇವರ ಪೋಸ್ಟರ್​ ಅನ್ನು ದೊಡ್ಡದಾಗಿ ಪ್ರಿಂಟ್ ಹಾಕಿಸಿ ಅದರ ಮುಂದೆ ಮೇಕೆಯೊಂದನ್ನು ಬಹಿರಂಗವಾಗಿ ಕಡಿದು ಅದರ ರಕ್ತದಿಂದ ದೇವರ ಸಿನಿಮಾದ ಪೋಸ್ಟರ್​ಗೆ ಅಭಿಷೇಕ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಹಲವರು ಈ ಬಹಿರಂಗ ಹಿಂಸೆಯನ್ನು ಖಂಡಿಸಿದ್ದಾರೆ. ಮಾಂಸಕ್ಕಾಗಿ ಪ್ರಾಣಿಗಳನ್ನು ಕಡಿಯುವುದು ಸರಿ, ಆದರೆ ಪೋಸ್ಟರ್​ಗೆ ರಕ್ತದ ಅಭಿಷೇಕ ಮಾಡಲು ಅದೂ ಬಹಿರಂಗವಾಗಿ ಹೀಗೆ ಹಿಂಸೆ ಮೆರೆದಿರುವುದು ಸರಿಯಲ್ಲ ಎಂದು ಹಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ಜೂ ಎನ್​ಟಿಆರ್​ಗೆ ಟ್ವಿಟರ್​ನಲ್ಲಿ ಟ್ಯಾಗ್ ಮಾಡಿ ನಿಮ್ಮ ಅಭಿಮಾನಿಗಳಗೆ ತುಸು ಬುದ್ಧಿಹೇಳಿ ಎಂದು ಒತ್ತಾಯಿಸಿದ್ದಾರೆ. ಇನ್ನು ಕೆಲವರು ಇವರ ವಿರುದ್ಧ ಪೊಲೀಸ್ ಪ್ರಕರಣ ದಾಖಲಾಗಬೇಕೆಂದು ಒತ್ತಾಯಿಸಿದ್ದಾರೆ.

ಇದನ್ನೂ ಓದಿ:ಜೂ ಎನ್​ಟಿಆರ್ ಅಭಿಮಾನಿಗಳ ಹುಚ್ಚಾಟ, ಬುದ್ಧಿ ಹೇಳಿ ಎಂದ ನೆಟ್ಟಿಗರು

ಜೂ ಎನ್​ಟಿಆರ್ ನಟಿಸಿ, ಎಸ್​ಎಸ್ ರಾಜಮೌಳಿ ನಿರ್ದೇಶನ ಮಾಡಿದ್ದ ‘ಸಿಂಹಾದ್ರಿ’ ಸಿನಿಮಾವು 2003 ರಲ್ಲಿ ಬಿಡುಗಡೆ ಆಗಿತ್ತು. ಭೂಮಿಕಾ, ಅಂಕಿತಾ, ಬ್ರಹ್ಮಾನಂದಂ, ನಾಸರ್ ಇನ್ನೂ ಹಲವರು ನಟಿಸಿದ್ದ ಈ ಸಿನಿಮಾ ಬಿಡುಗಡೆ ಆಗಿದ್ದ ಸಮಯದಲ್ಲಿ ದೊಡ್ಡ ಹಿಟ್ ಆಗಿತ್ತು. ಇದೀಗ ಅದೇ ಸಿನಿಮಾ 4ಕೆ ತಂತ್ರಜ್ಞಾನದೊಟ್ಟಿಗೆ ಮರು ಬಿಡುಗಡೆ ಆಗಿದೆ. ಜೂ ಎನ್​ಟಿಆರ್ ಅಭಿಮಾನಿಗಳು ಮುಗಿಬಿದ್ದು ಸಿನಿಮಾ ವೀಕ್ಷಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ