ನಟ ಪುನೀತ್ ರಾಜ್ಕುಮಾರ್ ಅವರಿಗೆ ಮರಣೋತ್ತರವಾಗಿ ‘ಕರ್ನಾಟಕ ರತ್ನ’ ಪ್ರಶಸ್ತಿ ನೀಡಲಾಯಿತು. ವಿಧಾನಸೌಧದ ಮೆಟ್ಟಿಲುಗಳ ಮೇಲೆ ಮಂಗಳವಾರ (ನ.1) ಕನ್ನಡ ರಾಜ್ಯೋತ್ಸವದ ಶುಭ ಸಂದರ್ಭದಲ್ಲಿ ನಡೆದ ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೆ ಖ್ಯಾತ ನಟ ಜೂನಿಯರ್ ಎನ್ಟಿಆರ್ (Jr NTR) ಅವರು ಮುಖ್ಯ ಅತಿಥಿ ಆಗಿದ್ದರು. ಅವರ ಬಂದು ಹೋಗಿದ್ದು ಕರುನಾಡಿನಲ್ಲಿನ ಅಭಿಮಾನಿಗಳಿಗೆ ಸಾಕಷ್ಟು ಖುಷಿ ನೀಡಿದೆ. ಅದರ ಬೆನ್ನಲ್ಲೇ ಹೊಸ ಚಿತ್ರದ ಬಗ್ಗೆ ಒಂದು ಗುಸುಗುಸು ಕೇಳಿಬಂದಿದೆ. ಮೂಲಗಳ ಪ್ರಕಾರ ಜೂನಿಯರ್ ಎನ್ಟಿಆರ್ ಅವರು ‘ಸೀತಾ ರಾಮಂ’ (Sita Ramam) ಚಿತ್ರದ ನಿರ್ದೇಶಕ ಹನು ರಾಘವಪುಡಿ (Hanu Raghavapudi) ಜೊತೆ ಕೈ ಜೋಡಿಸುವ ಸಾಧ್ಯತೆ ಇದೆ. ಈಗಾಗಲೇ ಇವರಿಬ್ಬರು ಒಂದು ಸ್ಕ್ರಿಪ್ಟ್ ಕುರಿತು ಮಾತುಕಥೆ ನಡೆಸಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
ರಾಜಮೌಳಿ ನಿರ್ದೇಶನದ ‘ಆರ್ಆರ್ಆರ್’ ಸಿನಿಮಾ ಗೆಲುವಿನ ಬಳಿಕ ಜೂನಿಯರ್ ಎನ್ಟಿಆರ್ ಅವರ ಮಾರುಕಟ್ಟೆ ಹಿರಿದಾಗಿದೆ. ಟಾಲಿವುಡ್ನಲ್ಲಿ ಮಾತ್ರವಲ್ಲದೇ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಅವರು ಬಹುಬೇಡಿಕೆಯ ನಟನಾಗಿ ಗುರುತಿಸಿಕೊಂಡಿದ್ದಾರೆ. ಪ್ರತಿ ಚಿತ್ರದ ಸ್ಕ್ರಿಪ್ಟ್ ಆಯ್ಕೆಯಲ್ಲಿ ಅವರು ಸಖತ್ ಕಾಳಜಿ ವಹಿಸುತ್ತಿದ್ದಾರೆ. ಈಗ ಅವರು ‘ಸೀತಾ ರಾಮಂ’ ನಿರ್ದೇಶಕ ಹನು ರಾಘವಪುಡಿ ಜೊತೆ ಕೈ ಜೋಡಿಸುವ ಸಾಧ್ಯತೆ ದಟ್ಟವಾಗಿದೆ ಎನ್ನಲಾಗುತ್ತಿದೆ.
ರಶ್ಮಿಕಾ ಮಂದಣ್ಣ, ದುಲ್ಕರ್ ಸಲ್ಮಾನ್, ಮೃಣಾಲ್ ಠಾಕೂರ್ ನಟನೆಯ ‘ಸೀತಾ ರಾಮಂ’ ಸಿನಿಮಾ ಈ ವರ್ಷ ಸೂಪರ್ ಹಿಟ್ ಆಯಿತು. ಆ ಬಳಿಕ ನಿರ್ದೇಶಕ ಹನು ರಾಘವಪುಡಿ ಅವರು ರಾಷ್ಟ್ರಮಟ್ಟದಲ್ಲಿ ಖ್ಯಾತಿ ಗಳಿಸಿದ್ದಾರೆ. ಈಗ ಅವರು ಜೂನಿಯರ್ ಎನ್ಟಿಆರ್ ಅವರನ್ನು ಭೇಟಿ ಮಾಡಿ ಒಂದು ಕಥೆ ಹೇಳಿದ್ದಾರೆ ಎಂದು ಕೆಲವೆಡೆ ವರದಿ ಆಗಿದೆ. ಈ ಬಗ್ಗೆ ಯಾರಿಂದಲೂ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಆದರೂ ಬೆಂಕಿ ಇಲ್ಲದೆ ಹೊಗೆ ಆಡಲ್ಲ ಎನ್ನುತ್ತಿದ್ದಾರೆ ಗಾಸಿಪ್ ಮಂದಿ.
‘ಆರ್ಆರ್ಆರ್’ ತೆರೆಕಂಡ ಬಳಿಕ ಜೂನಿಯರ್ ಎನ್ಟಿಆರ್ ಅವರು ಬೇರೆ ಯಾವುದೇ ಸಿನಿಮಾವನ್ನೂ ಸದ್ಯಕ್ಕೆ ಶುರು ಮಾಡಿಲ್ಲ. ಕೆಲವು ಚಿತ್ರಗಳಿಗೆ ಸಹಿ ಮಾಡಿದ್ದಾರಾದರೂ ಶೂಟಿಂಗ್ ಪ್ರಾರಂಭ ಆಗಿಲ್ಲ. ನಿರ್ದೇಶಕ ಕೊರಟಾಲ ಶಿವ ಅವರ ಜೊತೆ ಜೂನಿಯರ್ ಎನ್ಟಿಆರ್ ಕೈ ಜೋಡಿಸಿರುವ ‘ಎನ್ಟಿಆರ್30’ ಚಿತ್ರ ಕೂಡ ಸೆಟ್ಟೇರುವುದು ತಡವಾಗುತ್ತಿದೆ. ಈ ಗ್ಯಾಪ್ನಲ್ಲಿಯೇ ಅವರು ಹನು ರಾಘವಪುಡಿ ಜೊತೆ ಹೊಸ ಸ್ಕ್ರಿಪ್ಟ್ ಬಗ್ಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:19 am, Wed, 2 November 22