
ತೆಲುಗಿನ ಸ್ಟಾರ್ ನಟ ಜೂ ಎನ್ಟಿಆರ್ (Jr NTR) ಅವರ ರಾಜಕೀಯ ಪ್ರವೇಶದ ಬಗ್ಗೆ ಕೆಲ ವರ್ಷಗಳಿಂದಲೂ ಸುದ್ದಿ ಹರಿದಾಡುತ್ತಲೇ ಇದೆ. ನಂದಮೂರಿ ಕುಟುಂಬ ದಶಕಗಳಿಂದಲೂ ಆಂಧ್ರ ಪ್ರದೇಶ (ಅವಿಭಜಿತ ಮತ್ತು ವಿಭಜನೆ ಬಳಿಕ) ರಾಜಕೀಯದಲ್ಲಿ ಬಲು ಸಕ್ರಿಯವಾಗಿದೆ. ಈಗಲೂ ಸಹ ನಂದಮೂರಿ ಕುಟುಂಬದವೇ ಸ್ಥಾಪಿಸಿದ ಟಿಡಿಪಿ ಪಕ್ಷ ಆಂಧ್ರದಲ್ಲಿ ಅಧಿಕಾರದಲ್ಲಿದೆ. ಆದರೆ ಕಳೆದ ಕೆಲ ವರ್ಷಗಳಲ್ಲಿ ನಂದಮೂರಿ ಕುಟುಂಬದಲ್ಲಿ ಆಗಿರುವ ಆಂತರಿಕ ಮನಸ್ಥಾಪಗಳಿಂದ ಜೂ ಎನ್ಟಿಆರ್ ಅವರನ್ನು ಪಕ್ಷದಿಂದ ದೂರ ಇಡಲಾಗಿದೆ. ಇದರ ನಡುವೆ ಜೂ ಎನ್ಟಿಆರ್ ಅವರು ಸ್ವತಂತ್ರ್ಯವಾಗಿ ಪಕ್ಷ ಕಟ್ಟಿ ರಾಜಕೀಯಕ್ಕೆ ಧುಮುಕಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದ್ದು, ಇದೀಗ ಜೂ ಎನ್ಟಿಆರ್ ಹೆಸರಿನಲ್ಲಿ ಹೊಸ ಸಂಘವೊಂದು ಹುಟ್ಟಿಕೊಂಡಿದ್ದು, ಸಂಘವು ಪ್ರಣಾಳಿಕೆಯನ್ನು ಸಹ ಬಿಡುಗಡೆ ಮಾಡಿದೆ.
ಜೂ ಎನ್ಟಿಆರ್ ಅಭಿಮಾನಿಗಳು ಸೇರಿಕೊಂಡು ‘ರಾ ಎನ್ಟಿಆರ್’ (RAW NTR) ಹೆಸರಿನ ಸಂಘವೊಂದನ್ನು ಸ್ಥಾಪಿಸಿದ್ದು, ವೆಬ್ ಸೈಟ್ ಲಾಂಚ್ ಮಾಡಿ, ಪ್ರಣಾಳಿಕೆಯನ್ನು ಸಹ ಬಿಡುಗಡೆ ಮಾಡಿದ್ದಾರೆ. ರಕ್ತದಾನ, ಮಹಿಳೆಯರಿಗೆ ಸಹಾಯ, ಸ್ವಚ್ಛತೆ, ಯುವ ಸಬಲೀಕರಣ, ಗ್ರಾಮ ವಿಕಾಸ ಹೀಗೆ ಹಲವು ವಿಷಯಗಳು ಅವರ ಪ್ರಣಾಳಿಕೆಯಲ್ಲಿವೆ. ಸಂಘದ ಪ್ರಮುಖರು ಕೆಲ ದಿನಗಳ ಹಿಂದಷ್ಟೆ ಸುದ್ದಿಗೋಷ್ಠಿ ಸಹ ನಡೆಸಿದ್ದು, ತಮ್ಮ ಮುಂದಿನ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಸಹ ಹಂಚಿಕೊಂಡಿದ್ದಾರೆ.
ಜೂ ಎನ್ಟಿಆರ್ ಅವರು ರಾಜಕೀಯ ಪ್ರವೇಶಕ್ಕೆ ಯತ್ನಿಸುತ್ತಿದ್ದು, ಅದರ ಭಾಗವಾಗಿಯೇ ಈ ಸಂಘ ಇದೆ ಎಂಬ ಚರ್ಚೆ ಜೋರಾಗಿ ಹರಿದಾಡುತ್ತಿದೆ. ತಮಿಳುನಾಡಿನ ವಿಜಯ್ ಸಹ ತಮ್ಮ ಅಭಿಮಾನಿ ಸಂಘದ ಮೂಲಕ ಸಾಮಾಜಿಕ ಸೇವೆ ನಡೆಸಿ ಬಳಿಕ ರಾಜಕೀಯಕ್ಕೆ ಎಂಟ್ರಿ ಕೊಟ್ಟು ಸಿಎಂ ಆದರು. ಅದೇ ಮಾದರಿಯನ್ನು ಜೂ ಎನ್ಟಿಆರ್ ಸಹ ಪ್ರಯೋಗಿಸುತ್ತಿದ್ದಾರೆ ಎಂಬ ಚರ್ಚೆ ಜೋರಾಗಿ ನಡೆಯುತ್ತಿದೆ.
ಇದನ್ನೂ ಓದಿ:ನಟ ಜೂ ಎನ್ಟಿಆರ್ ಸಿಎಂ ಆಗಲಿದ್ದಾರೆ: ಶಾಸಕ ಹೇಳಿಕೆ
ಇದರ ನಡುವೆ ನಟ ಜೂ ಎನ್ಟಿಆರ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ತಮಗೂ ‘ರಾ ಎನ್ಟಿಆರ್’ಗೂ ಯಾವುದೇ ನೇರ ಸಂಬಂಧ ಇಲ್ಲವೆಂದು ಹೇಳಿದ್ದಾರೆ. ಜೂ ಎನ್ಟಿಆರ್ ಅವರ ತಂಡ ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿದ್ದು, ಜೂ ಎನ್ಟಿಆರ್ ಅವರಿಗೆ ರಾಜಕೀಯಕ್ಕೆ ಪ್ರವೇಶಿಸುವ ಆಸಕ್ತಿ ಇಲ್ಲವೆಂದು, ಜೊತೆಗೆ ತಮ್ಮ ಹೆಸರಲ್ಲಿ ಪ್ರಣಾಳಿಕೆ ಬಿಡುಗಡೆ ಮಾಡಿರುವ ‘ರಾ ಎನ್ಟಿಆರ್’ ಜೊತೆಗೆ ಅವರಿಗೆ ಯಾವುದೇ ಸಂಬಂಧ ಇಲ್ಲವೆಂದು ಹೇಳಿದ್ದಾರೆ.
ಜೂ ಎನ್ಟಿಆರ್ ಅವರು ಪ್ರಸ್ತುತ ‘ಡ್ರ್ಯಾಗನ್’ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿ ಆಗಿದ್ದಾರೆ. ಸಿನಿಮಾವನ್ನು ಪ್ರಶಾಂತ್ ನೀಲ್ ನಿರ್ದೇಶನ ಮಾಡುತ್ತಿದ್ದಾರೆ. ಇದಾದ ಬಳಿಕ ಜೂ ಎನ್ಟಿಆರ್ ಅವರು ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನ ಮಾಡಲಿರುವ ‘ಮುರುಗನ್: ಲಾರ್ಡ್ ಆಫ್ ದಿ ವಾರ್ಸ್’ ಸಿನಿಮಾನಲ್ಲಿ ನಟಿಸಲಿದ್ದಾರೆ. ಅದಾದ ಬಳಿಕ ಅವರು ‘ದೇವರ 2’ ಸಿನಿಮಾನಲ್ಲಿ ನಟಿಸಲಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ