ಸೂರ್ಯನ ವಿವಾಹ ಆದಾಗಿನಿಂದ ಜ್ಯೋತಿಕಾಗೆ ಸಂಕಷ್ಟ; ಎದುರಿಸಿದ ಕಷ್ಟಗಳೇನು?
ದಕ್ಷಿಣ ಭಾರತದ ನಟಿ ಜ್ಯೋತಿಕಾ ಅವರು ಸಿನಿಮಾ ರಂಗದಲ್ಲಿ ಎದುರಿಸಿದ ಲಿಂಗ ತಾರತಮ್ಯದ ಬಗ್ಗೆ ಮಾತನಾಡಿದ್ದಾರೆ. ಸೂರ್ಯ ಅವರೊಂದಿಗಿನ ಮದುವೆಯ ನಂತರ ಈ ತಾರತಮ್ಯ ಹೆಚ್ಚಾಗಿದೆ ಎಂದು ಅವರು ಹೇಳಿದ್ದಾರೆ. ತಮ್ಮ ವೃತ್ತಿಪರ ಜೀವನದಲ್ಲಿ ಸ್ವಾತಂತ್ರ್ಯವನ್ನು ಆರಿಸಿಕೊಂಡಿರುವ ಬಗ್ಗೆಯೂ ಜ್ಯೋತಿಕಾ ಹೇಳಿಕೆ ನೀಡಿದ್ದಾರೆ.

ನಟಿ ಜ್ಯೋತಿಕಾ ಅವರು ದಕ್ಷಿಣದ ಬೇಡಿಕೆಯ ನಟಿ ಎನಿಸಿಕೊಂಡಿದ್ದಾರೆ. ಅವರು 1997ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟರು. ಅಲ್ಲಿಂದ ಇಲ್ಲಿಯವರೆಗೆ ನಿರಂತರವಾಗಿ ಸಿನಿಮಾಗಳಲ್ಲಿ ನಟಿಸುತ್ತಲೇ ಬರುತ್ತಿದ್ದಾರೆ. ಇತ್ತೀಚೆಗೆ ಜ್ಯೋತಿಕಾ ಅವರು ಬಾಲಿವುಡ್ನಲ್ಲಿ ಬ್ಯುಸಿ ಆಗಿದ್ದಾರೆ. ಜ್ಯೋತಿಕಾ ಚಿತ್ರರಂಗದಲ್ಲಿ ತಾವು ಎದುರಿಸಿದ ತಾರತಮ್ಯದ ಬಗ್ಗೆ ಮಾತನಾಡಿದ್ದಾರೆ. ಸೂರ್ಯನ ಮದುವೆ ಆದ ಬಳಿಕ ಇದು ಹೆಚ್ಚಿದೆ ಎಂದಿದ್ದಾರೆ.
‘ನಾನು ಸೂರ್ಯ ಅವರನ್ನು ಮದುವೆಯಾಗಿರುವುದು ನನ್ನ ಅದೃಷ್ಟ. ಅವರು ನಿಜವಾಗಿಯೂ ಒಳ್ಳೆಯ ವ್ಯಕ್ತಿ ಎಂದು ಜನರು ಹೇಳುತ್ತಾರೆ. ಒಳ್ಳೆಯ ಮಹಿಳೆಯನ್ನು ನಾನು ಮದುವೆ ಆದೆ ಎಂದು ಸೂರ್ಯ ಹೇಳಿದ ಎಂದಿಟ್ಟುಕೊಳ್ಳಿ.. ಆಗ ಜನರು ಸೂರ್ಯನ ಬಗ್ಗೆಯೇ ಯೋಚಿಸುತ್ತಾರೆ. ಸೂರ್ಯ ಎಂತಹ ಒಳ್ಳೆಯ ವ್ಯಕ್ತಿ, ಪತ್ನಿ ಬಗ್ಗೆಯೇ ಯೋಚಿಸುತ್ತಾರೆ ಎಂದು ಜನರು ಅಂದುಕೊಳ್ಳುತ್ತಾರೆ’ ಎಂದು ಹೇಳುವ ಮೂಲಕ ಸಮಾಜದಲ್ಲಿ ಇರುವ ಲಿಂಗಭೇದದ ಬಗ್ಗೆ ಮಾತನಾಡಿದ್ದಾರೆ.
‘ಕೆಲವೊಮ್ಮೆ ಇದು ಯಾವ ಹಂತಕ್ಕೆ ತಲುಪುತ್ತದೆ ಎಂದರೆ ನಿಮಗೆ ಅಸ್ಮಿತತೆಯ ಕೊರತೆ ಕಾಣಿಸುತ್ತದೆ. ಈ ರೀತಿಯ ಹಲವು ನಿದರ್ಶನಗಳು ಇವೆ. ಅದನ್ನು ನಾನು ಎತ್ತಿ ಹೇಳಬಹುದು’ ಎಂದು ಜ್ಯೋತಿಕಾ ಅವರು ಬೇಸರ ಹೊರಹಾಕಿದ್ದಾರೆ.
‘ಓರ್ವ ಮಹಿಳೆ ತನ್ನ ಅಸ್ಮಿತತೆಯನ್ನು ಹೊಂದುವುದು ಬಹಳಷ್ಟು ನಿರ್ಧಾರಗಳನ್ನು ತೆಗೆದುಕೊಳ್ಳಲು ಮತ್ತು ತಮ್ಮದೇ ಆದ ಆಯ್ಕೆಗಳನ್ನು ಮಾಡಲು ಪ್ರೇರೇಪಿಸುತ್ತದೆ. ನಾನು ನನ್ನ ವೃತ್ತಿಜೀವನದ ಹಾದಿಯನ್ನು ಆರಿಸಿಕೊಂಡಿದ್ದೇನೆ’ ಎಂದು ಜ್ಯೋತಿಕಾ ಹೇಳಿದ್ದಾರೆ.
ಜ್ಯೋತಿಕಾ ನಟನೆಯ ‘ಡಬ್ಬಾ ಕಾರ್ಟೆಲ್’ ಸಿನಿಮಾ ನೆಟ್ಫ್ಲಿಕ್ಸ್ ಒಟಿಟಿ ಮೂಲಕ ಪ್ರಸಾರ ಕಾಣಲು ರೆಡಿ ಆಗಿದೆ. ಐದು ಸಾಮಾನ್ಯ ಮಹಿಳೆಯರ ಕಥೆಯನ್ನು ಇದು ಹೊಂದಿದೆ. ಇವರು ಡ್ರಗ್ಸ್, ಗನ್ಸ್ಗಳ ಮಧ್ಯೆ ಸಿಕ್ಕಿ ಬಿಳುತ್ತಾರೆ. ಇತ್ತೀಚೆಗೆ ಜ್ಯೋತಿಕಾ ಹಾಗೂ ಸೂರ್ಯ ಅವರು ಡಿವೋರ್ಸ್ ಪಡೆಯಲಿದ್ದಾರೆ ಎನ್ನುವ ಸುದ್ದಿ ಹರಿದಾಡಿತ್ತು.
ಇದನ್ನೂ ಓದಿ: ಕೊಲ್ಲೂರು ಚಂಡಿಕಾಯಾಗದಲ್ಲಿ ಕಾಲಿವುಡ್ ದಂಪತಿ; ದರ್ಶನ ಪಡೆದ ಸೂರ್ಯ-ಜ್ಯೋತಿಕಾ
ಸದ್ಯ ಜ್ಯೋತಿಕಾ ಬಾಲಿವುಡ್ ಸಿನಿಮಾ ಹಾಗೂ ಮಕ್ಕಳ ಶಿಕ್ಷಣದ ಕಾರಣಕ್ಕೆ ಅವರು ಮುಂಬೈನಲ್ಲಿ ವಾಸಿಸುತ್ತಿದ್ದಾರೆ. ಸೂರ್ಯ ಕೂಡ ಅಲ್ಲಿಯೇ ಶಿಫ್ಟ್ ಆಗಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಅವರು ಈ ಮೊದಲು ಹೇಳಿಕೊಂಡಿದ್ದರು. ಪತ್ನಿಗಾಗಿ ಈ ತ್ಯಾಗ ಮಾಡಿದ್ದಾಗಿ ಅವರು ಹೇಳಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




