ಬಾಲಿವುಡ್​ ಕಲಾವಿದ ಕಬೀರ್​ ಬೇಡಿ ಇಟಲಿಯಲ್ಲಿ ‘ಮಾದಕ ನಟ’ ಎನಿಸಿಕೊಳ್ಳಲು ಕಾರಣ ಆಗಿದ್ದು ಆ ಒಂದು ಧಾರಾವಾಹಿ

|

Updated on: May 02, 2021 | 9:24 AM

ಇಷ್ಟು ವರ್ಷಗಳ ತಮ್ಮ ಸಿನಿಮಾ ಪಯಣ ಮತ್ತು ವೈಯಕ್ತಿಕ ಜೀವನದ ಬಗ್ಗೆ ಕಬೀರ್​ ಬೇಡಿ ಆತ್ಮಚರಿತ್ರೆ ಬರೆದಿದ್ದಾರೆ. ‘ಸ್ಟೋರೀಸ್​ ಐ ಮಸ್ಟ್​ ಟೆಲ್​’ ಹೆಸರಿನ ಈ ಪುಸ್ತಕದಲ್ಲಿ ಹಲವು ಘಟನೆಗಳನ್ನು ಮೆಲುಕು ಹಾಕಲಾಗಿದೆ.

ಬಾಲಿವುಡ್​ ಕಲಾವಿದ ಕಬೀರ್​ ಬೇಡಿ ಇಟಲಿಯಲ್ಲಿ ‘ಮಾದಕ ನಟ’ ಎನಿಸಿಕೊಳ್ಳಲು ಕಾರಣ ಆಗಿದ್ದು ಆ ಒಂದು ಧಾರಾವಾಹಿ
ಕಬೀರ್ ಬೇಡಿ
Follow us on

ನಟ ಕಬೀರ್​ ಬೇಡಿ ಅವರು ಸಿನಿಮಾ ಕ್ಷೇತ್ರದಲ್ಲಿ ತಮ್ಮದೇ ಛಾಫು ಮೂಡಿಸಿದವರು. ಬಾಲಿವುಡ್​ಗೆ ಮಾತ್ರ ಅವರ ಪ್ರತಿಭೆ ಸೀಮಿತ ಆಗಿರಲಿಲ್ಲ. 1970ರ ದಶಕದಿಂದಲೂ ಬಣ್ಣದ ಲೋಕದಲ್ಲಿ ಸಕ್ರಿಯರಾಗಿರುವ ಅವರು ಬೇರೆ ದೇಶಗಳಲ್ಲೂ ಫೇಮಸ್​ ಆಗಿದ್ದಾರೆ. ಅಮೆರಿಕ ಮತ್ತು ಇಟಲಿಯಲ್ಲೂ ಈ ನಟನಿಗೆ ಅಭಿಮಾನಿಗಳಿದ್ದಾರೆ. ಟಿವಿ, ಸಿನಿಮಾ ಮತ್ತು ರಂಗಭೂಮಿಯಲ್ಲಿ ಗುರುತಿಸಿಕೊಂಡ ಕಬೀರ್​ ಬೇಡಿ ಅವರು ಇಟಲಿಯಲ್ಲಿ ಮಾದಕ ನಟ ಎಂಬ ಖ್ಯಾತಿಗೆ ಒಳಗಾಗಿದ್ದರು.

ಇಷ್ಟು ವರ್ಷಗಳ ತಮ್ಮ ಸಿನಿಮಾ ಪಯಣ ಮತ್ತು ವೈಯಕ್ತಿಕ ಜೀವನದ ಬಗ್ಗೆ ಕಬೀರ್​ ಬೇಡಿ ಆತ್ಮಚರಿತ್ರೆ ಬರೆದಿದ್ದಾರೆ. ‘ಸ್ಟೋರೀಸ್​ ಐ ಮಸ್ಟ್​ ಟೆಲ್​’ ಹೆಸರಿನ ಈ ಪುಸ್ತಕದಲ್ಲಿ ಹಲವು ಘಟನೆಗಳನ್ನು ಮೆಲುಕು ಹಾಕಲಾಗಿದೆ. ವಿಶೇಷವಾಗಿ ‘ಸಾಂಡುಕಾನ್​’ ಧಾರಾವಾಹಿ ಬಗ್ಗೆ ಕಬೀರ್ ಬೇಡಿ ನೆನಪಿಸಿಕೊಂಡಿದ್ದಾರೆ. 1976ರಲ್ಲಿ ಸಾಂಡುಕಾನ್​ ಸೀರಿಯಲ್​ ಇಟಲಿಯಲ್ಲಿ ಮೂಡಿಬಂದಿತ್ತು. ಆ ಧಾರಾವಾಹಿಯಲ್ಲಿ ಕಥಾನಾಯಕನ (ಸಾಂಡುಕಾನ್​) ಪಾತ್ರ ಮಾಡಿದವರು ಕಬೀರ್​ ಬೇಡಿ.

ಈ ಧಾರಾವಾಹಿಯಲ್ಲಿ ನಟಿಸಿದ ಬಳಿಕ ಕಬೀರ್​ ಬೇಡಿಗೆ ಇಡೀ ಯೂರೋಪ್​ನಲ್ಲಿ ಜನಪ್ರಿಯತೆ ಸಿಕ್ಕಿತು. ಬಳಿಕ ಅವರು ಹಾಲಿವುಡ್​ಗೂ ಕಾಲಿಡುವಂತಾಯಿತು. ಅಚ್ಚರಿ ಎಂದರೆ ಸಾಂಡುಕಾನ್​ ಧಾರಾವಾಹಿಯಲ್ಲಿ ನಟಿಸಿದ ಬಳಿಕ ಕಬೀರ್​ ಬೇಡಿ ಅವರು ಇಟಲಿಯ ಪ್ರೇಕ್ಷಕರಿಂದ ‘ಮಾದಕ ನಟ’ ಎಂದು ಕರೆಸಿಕೊಳ್ಳಬೇಕಾಯಿತು. ಅದಕ್ಕೆ ಕಾರಣ ಅವರು ಮಾಡಿದ ಆ ಪಾತ್ರ. ಬ್ರಿಟಿಷರ ವಿರುದ್ಧ ಸೇಡು ತೀರಿಸಿಕೊಳ್ಳುವ ಪೈರೇಟ್​ ಆಗಿ ಕಬೀರ್ ಬೇಡಿ ಕಾಣಿಸಿಕೊಂಡಿದ್ದರು.

ಆ ಸಮಯಕ್ಕೆ ಸಾಂಡುಕಾನ್​ ಸೀರಿಯಲ್​ನಿಂದ ಕಬೀರ್​ಗೆ ಎಷ್ಟು ಜನಪ್ರಿಯತೆ ಸಿಕ್ಕಿತ್ತು ಎಂದರೆ ಇಟಲಿಯ ಅನೇಕ ಪೋಷಕರು ತಮ್ಮ ಮಕ್ಕಳಿಗೆ ಕಬೀರ್​ ಎಂದು ಹೆಸರಿಡಲು ನೋಂದಣಿ ಕಚೇರಿ ಎದುರು ಸಾಲುಗಟ್ಟಿ ನಿಂತಿದ್ದರು ಎಂಬುದನ್ನು ಈ ಪುಸ್ತಕದಲ್ಲಿ ಅವರು ನೆನಪಿಸಿಕೊಂಡಿದ್ದಾರೆ. ಬ್ರಿಟಿಷ್​ ಹುಡುಗಿಯ ಜೊತೆಗೆ ಸಾಂಡುಕಾನ್​ಗೆ ಲವ್​ ಆಗುತ್ತದೆ. ಪ್ರೀತಿ-ಪ್ರೇಮದ ದೃಶ್ಯಗಳಲ್ಲಿ ಕಬೀರ್​ ಎಲ್ಲರನ್ನೂ ಸೆಳೆದುಕೊಂಡಿದ್ದರು. ಆ ಕಾರಣಕ್ಕಾಗಿ ಅವರಿಗೆ ಮಾದಕ ನಟ ಎಂಬ ಇಮೇಜ್​ ಸಿಕ್ಕಿತು.

ಕೇವಲ 6 ಎಪಿಸೋಡ್​ಗಳನ್ನು ಹೊಂದಿದ್ದ ಆ ಧಾರಾವಾಹಿಗೆ ಇಟಲಿ ಜನರು ಫಿದಾ ಆಗಿದ್ದರು. ಫ್ರೆಂಚ್, ಡಚ್​, ಸ್ಪ್ಯಾನಿಶ್​, ಜರ್ಮನ್​ ಭಾಷೆಗಳಲ್ಲೂ ಈ ಧಾರಾವಾಹಿ ಮೂಡಿಬಂದಿತ್ತು. 2012ರಲ್ಲಿ ಇದು ಹಿಂದಿಗೂ ಡಬ್​ ಆಗಿ, ಡಿವಿಡಿಗಳ ಮೂಲಕ ಭಾರತದಲ್ಲೂ ವೀಕ್ಷಣೆಗೆ ಲಭ್ಯವಾಯಿತು. ಸಾಂಡುಕಾನ್​ ಸೀರಿಯಲ್​ ಮಾತ್ರವಲ್ಲದೆ ಅನೇಕ ವಿಚಾರಗಳ ಬಗ್ಗೆ ತಮ್ಮ ಆತ್ಮಚರಿತ್ರೆಯಲ್ಲಿ ಕಬೀರ್​ ಬೇಡಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ:

ಚಿತ್ರರಂಗಕ್ಕೆ ಶಾಪವಾದ ಕೊರೊನಾ; ಬಾಲಿವುಡ್​ನ ಖ್ಯಾತ ನಟ ಕೊವಿಡ್​​ಗೆ ಬಲಿ

ದೊಡ್ಡ ಹೀರೋಗಳು ತಲೆಮರೆಸಿಕೊಂಡಿದ್ದಾರೆ, ಬಾಲಿವುಡ್​ ಉಳಿಯೋದು ನನ್ನಿಂದಲೇ: ಕಂಗನಾ