ಒಂದೆಡೆ ರಿಯಲ್ ಸ್ಟಾರ್ ಉಪೇಂದ್ರ…ಮತ್ತೊಂದೆಡೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್…ಇನ್ನೊಂದೆಡೆ ಟಾಲಿವುಡ್ ಸೆನ್ಸೇಷನ್ ನಟ ಜಗಪತಿ ಬಾಬು…ಇವೆಲ್ಲದರ ಜೊತೆ ರೆಟ್ರೋ ಲುಕ್ಗಳು. ಒಂದು ಸಿನಿಮಾ ಕ್ರೇಜ್ ಸೃಷ್ಟಿಸಲು ಇಷ್ಟೇ ಸಾಕು. ಈ ಕ್ರೇಜ್ ಮೂಲಕವೇ ಇಡೀ ಚಿತ್ರರಂಗದ ಬಾಕ್ಸಾಫೀಸ್ನ್ನು ‘ಕಬ್ಜ’ ಮಾಡಿಕೊಳ್ಳಲು ಮುಂದಾಗುತ್ತಿದ್ದಾರೆ ನಿರ್ದೇಶಕ ಆರ್. ಚಂದ್ರು. ಸ್ಯಾಂಡಲ್ವುಡ್ನಲ್ಲಿ ಈಗಾಗಲೇ ಸಖತ್ ಸೌಂಡ್ ಮಾಡುತ್ತಿರುವ ಕಬ್ಜ ಚಿತ್ರವು 70ರ ದಶಕದ ಅಂಡರ್ವರ್ಲ್ಡ್ ಕಹಾನಿಯನ್ನು ತಿಳಿಸಲಿದೆ. ಆದರೆ ಈ ಕಥೆಯನ್ನು 7 ಭಾಷೆಗಳಲ್ಲಿ ತೋರಿಸುವುದಾಗಿ ಈ ಹಿಂದೆ ನಿರ್ದೇಶಕರು ಘೋಷಿಸಿದ್ದರು.
ಅದರಂತೆ ಸಪ್ತ ಭಾಷೆಯಲ್ಲಿ ಸಪ್ತ ಸಾಗರದಾಚೆ ತಲುಪುವ ಪ್ಲ್ಯಾನ್ನೊಂದಿಗೆ ಡಬ್ಬಿಂಗ್ ಕೂಡ ಶುರುವಾಗಿತ್ತು. ಆದರೀಗ ಇಷ್ಟೇ ಕಬ್ಜ ಮಾಡಿದ್ರೆ ಸಾಕಾಗಲ್ಲ ಅಂತಿದ್ದಾರೆ ನಿರ್ದೇಶಕ ಆರ್. ಚಂದ್ರು. ಈಗಾಗಲೇ ಕನ್ನಡ ಚಿತ್ರಕ್ಕೆ ಪ್ಯಾನ್ ಇಂಡಿಯಾ ಸಿನಿ ಮಾರುಕಟ್ಟೆ ತೆರೆದುಕೊಂಡಿದ್ದು, ಅದನ್ನೇ ಬಂಡವಾಳ ಮಾಡಿಕೊಳ್ಳಲು ಕಬ್ಜ ಟೀಮ್ ರೆಡಿಯಾಗಿದೆ. ಅದಕ್ಕಾಗಿ ಕಬ್ಜ ಚಿತ್ರವನ್ನು ಬರೋಬ್ಬರಿ ಮತ್ತೆರೆಡು ವಿದೇಶಿ ಭಾಷೆಗಳಿಗೂ ಡಬ್ ಮಾಡಲು ಮುಂದಾಗಿದ್ದಾರೆ.
ಸಾಮಾನ್ಯವಾಗಿ ಪ್ಯಾನ್ ಇಂಡಿಯಾ ಸಿನಿಮಾ ಎಂದರೆ ಪಂಚ ಭಾಷೆಯಲ್ಲಿ ಬಿಡುಗಡೆಯಾಗುವುದು ಹೆಚ್ಚು. ಅದರಂತೆ ಕನ್ನಡ, ತಮಿಳು, ಮಲಯಾಳಂ, ತೆಲುಗು ಹಾಗೂ ಹಿಂದಿಯಲ್ಲಿ ಚಿತ್ರ ಬಿಡುಗಡೆಯಾಗುತ್ತದೆ. ಆದರೆ ಈ ಐದು ಭಾಷೆಗಳೊಂದಿಗೆ ಕಬ್ಜ ಚಿತ್ರವನ್ನು ಒಡಿಯಾ (ಒರಿಸ್ಸಾ) ಹಾಗೂ ಬೆಂಗಾಳಿ ಭಾಷೆಯಲ್ಲೂ ಬಿಡುಗಡೆ ಮಾಡುವುದಾಗಿ ನಿರ್ದೇಶಕ ಆರ್ ಚಂದ್ರು ಘೋಷಿಸಿದ್ದಾರೆ. ಈಗಾಗಲೇ ಮಗಧೀರ, ಆರ್ಆರ್ಆರ್, ಬೀಸ್ಟ್, ಪುಷ್ಪಾ ಚಿತ್ರಗಳ ಡಬ್ಬಿಂಗ್ ನಿರ್ವಹಣೆಯನ್ನು ಮಾಡಿದ್ದ ವರದರಾಜ್ ಎಂಬುವವರು ಇದೀಗ ಕಬ್ಜ ಚಿತ್ರದ 7 ಭಾಷೆಗಳ ಡಬ್ಬಿಂಗ್ ಕಾರ್ಯವನ್ನು ಕೈಗೆತ್ತಿಕೊಂಡಿದ್ದಾರೆ.
ಭಾರತೀಯ ಭಾಷೆಗಳಲ್ಲಿನ ಡಬ್ಬಿಂಗ್ ಕಾರ್ಯಗಳು ಮುಗಿಯುತ್ತಿದ್ದಂತೆ ವಿದೇಶಿ ಭಾಷೆಗಳ ಡಬ್ಬಿಂಗ್ ಶುರುವಾಗಲಿದೆ. ಅದರಂತೆ ಕನ್ನಡ ಚಿತ್ರವೊಂದು ಚೈನೀಸ್ ಹಾಗೂ ಜಪಾನೀಸ್ ಭಾಷೆಗಳಿಗೂ ಡಬ್ ಆಗಲಿದೆ. ಈ ಮೂಲಕ ಕಬ್ಜ ಚಿತ್ರವನ್ನು 9 ಭಾಷೆಗಳಲ್ಲಿ ಪ್ರೇಕ್ಷಕರ ಮುಂದಿಡಲು ನಿರ್ದೇಶಕ ಆರ್. ಚಂದ್ರು ಬಯಸಿದ್ದಾರೆ. ಈ ಮೂಲಕ 9 ಭಾಷೆಗಳ ಬಾಕ್ಸಾಫೀಸ್ ಬೇಟೆಯಾಡಲು ಕಬ್ಜ ಟೀಮ್ ಭರ್ಜರಿ ಪ್ಲ್ಯಾನ್ ರೂಪಿಸಿದೆ.
ಈ ಚಿತ್ರವು ಈಗಾಗಲೇ ಸ್ಯಾಂಡಲ್ವುಡ್ನಲ್ಲಿ ಹೊಸ ಸೆನ್ಸೇಷನ್ ಸೃಷ್ಟಿಸಿದೆ. ಇದಕ್ಕೆ ಮುಖ್ಯ ಕಾರಣ ಉಪ್ಪಿ-ಕಿಚ್ಚ ಮತ್ತೆ ಒಂದಾಗಿರುವುದು. ಮುಕುಂದ ಮುರಾರಿ ಮೂಲಕ ಮೋಡಿ ಮಾಡಿದ್ದ ಸುದೀಪ್ – ಉಪೇಂದ್ರ ಜೋಡಿ ಇದೀಗ ಹಳೆಯ ಗೆಟಪ್ನಲ್ಲಿ ತೆರೆ ಹಂಚಿಕೊಳ್ಳಲು ರೆಡಿಯಾಗಿದ್ದಾರೆ. ಇವರಲ್ಲದೆ ಈ ಚಿತ್ರದಲ್ಲಿ ನಾಯಕಿಯಾಗಿ ಶ್ರೇಯಾ ಸರಣ್, ವಿಲನ್ಗಳಾಗಿ ಜಗಪತಿ ಬಾಬು, ಕಬೀರ್ ದುರ್ಹಾನ್ ಸಿಂಗ್, ರಾಹುಲ್ ದೇವ್ ಕಾಣಿಸಿಕೊಂಡಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.