‘ಕಲ್ಕಿ 2898 ಎಡಿ’ ಕಲೆಕ್ಷನ್ 70% ಇಳಿಕೆ, 1000 ಕೋಟಿ ಮುಟ್ಟುವುದು ಅನುಮಾನ
‘ಕಲ್ಕಿ 2898 ಎಡಿ’ ಸಿನಿಮಾ 1000 ಕೋಟಿ ಗಳಿಕೆ ಮಾಡುವ ನಿರೀಕ್ಷೆ ಚಿತ್ರತಂಡಕ್ಕೆ ಹಾಗೂ ಪ್ರಭಾಸ್ ಅಭಿಮಾನಿಗಳಿಗೂ ಇತ್ತು. ಆದರೆ ಸೋಮವಾರ ಆಗಿರುವ ಕಲೆಕ್ಷನ್ ನೋಡಿದರೆ 1000 ಕೋಟಿ ಗುರಿ ತಲುಪುವುದು ಅನುಮಾನ ಎನ್ನಲಾಗುತ್ತಿದೆ.
ಪ್ರಭಾಸ್ ನಟನೆಯ ‘ಕಲ್ಕಿ 2898 ಎಡಿ’ ಸಿನಿಮಾ ಬಿಡುಗಡೆ ಆದ ಮೊದಲ ವಾರ ಭರ್ಜರಿ ಕಲೆಕ್ಷನ್ ಮಾಡಿತ್ತು. ಬಿಡುಗಡೆ ಆದ ಮೊದಲ ಮೂರು ದಿನಗಳಲ್ಲಿಯೇ ಕೆಲವು ದಾಖಲೆಗಳನ್ನು ಮುರಿದಿತ್ತು. ಸಿನಿಮಾ ಸುಲಭವಾಗಿ 1000 ಕೋಟಿ ಗಳಿಕೆ ದಾಟಲಿದೆ ಎಂದೇ ಊಹಿಸಲಾಗಿತ್ತು. ಆದರೆ ಸೋಮವಾರದ ಕಲೆಕ್ಷನ್ ಚಿತ್ರತಂಡ ಹಾಗೂ ಪ್ರಭಾಸ್ ಅಭಿಮಾನಿಗಳ ಆಸೆಗೆ ತಣ್ಣೀರೆರಚಿದೆ. ಸಿನಿಮಾದ ಕಲೆಕ್ಷನ್ನಲ್ಲಿ ಸೋಮವಾರ ತೀವ್ರ ಇಳಿಕೆ ಉಂಟಾಗಿದ್ದು ಅಭಿಮಾನಿಗಳ ನಿರೀಕ್ಷೆಯಂತೆ ಈ ಸಿನಿಮಾ 1000 ಕೋಟಿ ಗಡಿ ದಾಟುವುದು ಅನುಮಾನ ಎನ್ನಲಾಗುತ್ತಿದೆ.
ಕಳೆದ ಒಂದು ವಾರದಿಂದ ಭರ್ಜರಿ ಕಲೆಕ್ಷನ್ ಮಾಡಿದ್ದ ‘ಕಲ್ಕಿ 2898 ಎಡಿ’ ಸಿನಿಮಾ ಎರಡನೇ ವಾರದ ಮೊದಲ ದಿನವಾದ ಸೋಮವಾರ (ಜುಲೈ 09) ಮಕಾಡೆ ಮಲಗಿದೆ. ಸೋಮವಾರದಂದು ‘ಕಲ್ಕಿ 2898 ಎಡಿ’ ಸಿನಿಮಾದ ಕಲೆಕ್ಷನ್ ಬರೋಬ್ಬರಿ 70% ಇಳಿಕೆಯಾಗಿದೆ. ಅಲ್ಲದೆ ಮುಂದಿನ ದಿನಗಳಲ್ಲಿ ಕಲೆಕ್ಷನ್ ಇನ್ನಷ್ಟು ಇಳಿಯುವ ಸೂಚನೆಯಿದ್ದು, ಈ ಶುಕ್ರವಾರದ ವೇಳೆ 50% ಕ್ಕಿಂತಲೂ ಹೆಚ್ಚಿನ ಚಿತ್ರಮಂದಿರಗಳಿಂದ ಜಾಗ ಖಾಲಿ ಮಾಡುವ ಸಾಧ್ಯತೆ ದಟ್ಟವಾಗಿದೆ.
ಶನಿವಾರ ಮತ್ತು ಭಾನುವಾರ ‘ಕಲ್ಕಿ 2898 ಎಡಿ’ ಸಿನಿಮಾ 78.50 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಅದರಲ್ಲಿಯೂ ಭಾನುವಾರ ಒಂದೇ ದಿನ 44.35 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಆದರೆ ಸೋಮವಾರ ಕಲೆಕ್ಷನ್ ಧಾರುಣವಾಗಿ ಕುಸಿದಿದ್ದು, ಸೋಮವಾರದ ಒಟ್ಟಾರೆ ಕಲೆಕ್ಷನ್ ಕೇವಲ 11.35 ಕೋಟಿ ರೂಪಾಯಿಗಳಾಗಿದೆ. ಅಲ್ಲಿಗೆ 74.41% ಕಲೆಕ್ಷನ್ ಇಳಿಕೆಯಾಗಿದೆ. ಸಿನಿಮಾ ಬಿಡುಗಡೆ ಆದ ಬಳಿಕ ಇದು ಎರಡನೇ ಸೋಮವಾರ ಆಗಿದ್ದು, ಸೋಮವಾರದ ಈ ಕಲೆಕ್ಷನ್ ಇಳಿಕೆ ಚಿತ್ರತಂಡಕ್ಕೆ ಸಣ್ಣ ಆತಂಕವನ್ನಂತೂ ತಂದಿದೆ.
ಇದನ್ನೂ ಓದಿ:‘ಕಲ್ಕಿ 2898 ಎಡಿ’ ಸೀಕ್ವೆಲ್ನಲ್ಲಿ ಏನಾಗಲಿದೆ? ಊಹೆ ಮಾಡಿದ ‘ಮಹಾಭಾರತ’ ನಟ
ವಿಶ್ವದಾದ್ಯಂತ 2000 ಕೋಟಿಗೂ ಹೆಚ್ಚಿನ ಗಳಿಕೆ ಮಾಡದ್ದ ಆಮಿರ್ ಖಾನ್ರ ‘ದಂಗಲ್’ ಸಿನಿಮಾ ಬಿಡುಗಡೆ ಆದ ಎರಡನೇ ವಾರದಲ್ಲಿ 13.70 ಕೋಟಿ ಗಳಿಸಿತ್ತು. ‘ದಂಗಲ್’ ಸಿನಿಮಾದ ಕಲೆಕ್ಷನ್ ದಾಖಲೆ ಮುರಿಯುವ ಉತ್ಸಾಹದಲ್ಲಿದ್ದ ‘ಕಲ್ಕಿ 2898 ಎಡಿ’ ಸಿನಿಮಾ ಎರಡನೇ ಸೋಮವಾರದ ಹೊಡೆತ ತಿಂದಿದ್ದು, ಇನ್ನು ಮುಂದೆ ಚೇತರಿಸಿಕೊಳ್ಳುವುದು ಕಷ್ಟ ಎನ್ನಲಾಗುತ್ತಿದೆ. ಏನೇ ಆದರೂ ‘ಕಲ್ಕಿ 2898 ಎಡಿ’ ಸಿನಿಮಾ ಈವರೆಗೆ ಉತ್ತಮ ಗಳಿಕೆಯನ್ನೇ ಕಂಡಿದೆ. ಸಿನಿಮಾ ಸುಮಾರು 800 ಕೋಟಿಗೂ ಅಧಿಕ ಮೊತ್ತವನ್ನು ಬಾಕ್ಸ್ ಆಫೀಸ್ನಲ್ಲಿ ಕಲೆ ಹಾಕಿದೆ.
‘ಕಲ್ಕಿ 2898 ಎಡಿ’ ಸಿನಿಮಾದ ಮೊದಲ ಭಾಗವಷ್ಟೆ ಇದೀಗ ಬಿಡುಗಡೆ ಆಗಿದ್ದು, ಎರಡನೇ ಭಾಗದ ಚಿತ್ರೀಕರಣ ಬಾಕಿ ಇದೆ. ಮೊದಲ ಭಾಗದಿಂದಲೇ ಎರಡನೇ ಭಾಗಕ್ಕೆ ಬೇಕಾಗಿರುವ ಬಜೆಟ್ ಅನ್ನು ನಿರ್ಮಾಪಕರು ಸಂಪಾದಿಸಿ ಆಗಿದೆ. ಎರಡನೇ ಭಾಗದಲ್ಲಿ ಬರುವ ಕಲೆಕ್ಷನ್ ಎಲ್ಲವೂ ನಿರ್ಮಾಪಕರ ಪಾಲಿಗೆ ಡಬಲ್ ಲಾಭದಂತೆಯೇ ಆಗಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ