ಕೊರೊನಾ ವೈರಸ್ ಎರಡನೇ ಅಲೆ ಜೋರಾಗಿರುವುದರಿಂದ ಬಹುತೇಕ ರಾಜ್ಯಗಳು ಲಾಕ್ಡೌನ್ ಘೋಷಣೆ ಮಾಡಿವೆ. ಇದರಿಂದ ಬಹುತೇಕ ಆರ್ಥಿಕ ಚಟುವಟಿಕೆ ನಿಂತಿದ್ದು, ಜನರು ಕೆಲಸ ಕಳೆದುಕೊಂಡು ಒದ್ದಾಡುತ್ತಿದ್ದಾರೆ. ಸಾಕಷ್ಟು ಕಲಾವಿದರು ಈ ಸಂದರ್ಭದಲ್ಲಿ ಆರ್ಥಿಕ ಮುಗ್ಗಟ್ಟಿಗೆ ಸಿಲುಕಿರುವ ಬಗ್ಗೆ ವಿಡಿಯೋ ಮಾಡಿ ಹಾಕಿದ್ದಾರೆ. ಈಗ ಸ್ಟಾರ್ ಕಲಾವಿದರು ಕೂಡ ತಮ್ಮ ತೊಂದರೆ ಹೇಳಿಕೊಳ್ಳಲು ಆರಂಭಿಸಿದ್ದಾರೆ. ನಟಿ ಕಂಗನಾ ರಣಾವತ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದನ್ನು ಹಾಕಿದ್ದು, ಟ್ಯಾಕ್ಸ್ ಕಟ್ಟಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿಕೊಂಡಿದ್ದಾರೆ.
ಕಂಗನಾ ರಣಾವತ್ ಬಾಲಿವುಡ್ನ ಸ್ಟಾರ್ ನಟಿಯರ ಸಾಲಿನಲ್ಲಿ ಮುಂಚೂಣಿಯಲ್ಲಿ ನಿಲ್ಲುತ್ತಾರೆ. ಸಾಕಷ್ಟು ಹಿಟ್ ಚಿತ್ರಗಳನ್ನು ನೀಡಿದ ಖ್ಯಾತಿ ಅವರಿಗಿದೆ. ಸದ್ಯ, ಅವರ ಕೈಯಲ್ಲಿ ಮೂರು ಚಿತ್ರಗಳಿದ್ದು, ಪ್ರತಿ ಸಿನಿಮಾಗೂ ಕೋಟ್ಯಂತರ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಆದಾಗ್ಯೂ ಕಂಗನಾಗೆ ತೆರಿಗೆ ಕಟ್ಟೋಕೆ ಅಸಾಧ್ಯವಾಗಿದೆಯಂತೆ. ಕಳೆದ ವರ್ಷದ ತೆರಿಗೆಯಲ್ಲಿ ಅರ್ಧದಷ್ಟನ್ನು ಮಾತ್ರ ಅವರು ಪಾವತಿ ಮಾಡಿದ್ದಾರೆ. ಅಲ್ಲದೆ, ಹೀಗಾಗಿದ್ದು ಇದೇ ಮೊದಲು ಎಂದು ಹೇಳಿಕೊಂಡಿದ್ದಾರೆ.
ಕಂಗನಾ ಈ ಬಗ್ಗೆ ಇನ್ಸ್ಟಾಗ್ರಾಂನಲ್ಲಿ ಸ್ಟೋರಿ ಒಂದನ್ನು ಹಾಕಿ ಈ ಬಗ್ಗೆ ಬರೆದುಕೊಂಡಿದ್ದಾರೆ. ‘ನನ್ನ ಒಟ್ಟು ಆದಾಯದಲ್ಲಿ ಶೇ.45 ತೆರಿಗೆ ಪಾವತಿ ಮಾಡುತ್ತೇನೆ. ಅತಿ ಹೆಚ್ಚು ತೆರಿಗೆ ಪಾವತಿ ಮಾಡುವ ನಟಿ ನಾನು. ಆದರೆ, ಕೆಲಸ ಇಲ್ಲದೆ, ಕಳೆದ ವರ್ಷದ ಅರ್ಧದಷ್ಟು ತೆರಿಗೆಯನ್ನು ಮಾತ್ರ ಪಾವತಿ ಮಾಡಿದ್ದೇನೆ. ಹೀಗಾಗಿದ್ದು ನನ್ನ ಜೀವನದಲ್ಲಿ ಇದೆ ಮೊದಲು’ ಎಂದಿದ್ದಾರೆ ಕಂಗನಾ .
ಈ ಮೊದಲಿನಿಂದಲೂ ಕಂಗನಾ ಮೋದಿ ಸರ್ಕಾರವನ್ನು ಬೆಂಬಲಿಸಿಕೊಂಡು ಬಂದಿದ್ದಾರೆ. ಸರ್ಕಾರದ ವಿರುದ್ಧ ಮಾತನಾಡಿದರೆ ಕಂಗನಾ ತಿರುಗಿ ಬೀಳುತ್ತಾರೆ. ಇಷ್ಟು ಕಷ್ಟವಿದ್ದರೂ ಮೋದಿ ಸರ್ಕಾರದ ಪರವಾಗಿಯೇ ಮಾತನಾಡಿದ್ದಾರೆ. ‘ನಾನು ತೆರಿಗೆ ಪಾವತಿ ಮಾಡುವುದು ವಿಳಂಬ ಮಾಡಿದರೆ ಸರ್ಕಾರ ಅದಕ್ಕೆ ಮತ್ತೆ ಬಡ್ಡಿ ವಿಧಿಸುತ್ತದೆ. ಇದನ್ನು ನಾನು ಸ್ವಾಗತಿಸುತ್ತೇನೆ. ಈ ಸಮಯ ನಮಗೆಲ್ಲರಿಗೂ ಕಠಿಣವಾಗಬಹುದು ಆದರೆ ನಾವು ಒಂದಾದರೆ ಸಮಯಕ್ಕಿಂತ ಕಠಿಣವಾಗಬಹುದು’ ಎಂದು ಸ್ಫೂರ್ತಿ ಮಾತುಗಳನ್ನಾಡಿದ್ದಾರೆ.
ಇದನ್ನೂ ಓದಿ:ಯಾಮಿ ಗೌತಮ್ ಪೋಸ್ಟ್ನಲ್ಲಿ ಕಂಗನಾ ಕಿರಿಕ್; ಬಾಲಿವುಡ್ ನಟನಿಗೆ ಚಪ್ಪಲಿ ತೋರಿಸುವ ಬಗ್ಗೆ ಮಾತನಾಡಿದ ನಟಿ