‘ಸ್ಟಾರ್ ನಟರು ಸೂರ್ಯ, ಚಂದ್ರರನ್ನೇ ಕೇಳುತ್ತಾರೆ’; ಕರಣ್ ಜೋಹರ್ ಅಸಮಾಧಾನ

| Updated By: ರಾಜೇಶ್ ದುಗ್ಗುಮನೆ

Updated on: Jul 10, 2024 | 7:58 AM

ಕರಣ್ ಜೋಹರ್ ಅವರು ಬಾಲಿವುಡ್​ನ ಹಲವು ಸಮಸ್ಯೆಗಳ ಬಗ್ಗೆ ಮಾತನಾಡಿದ್ದಾರೆ. ನಿರ್ಮಾಪಕರಿಂದ ಆಗುತ್ತಿರುವ ಸಮಸ್ಯೆಗಳು ಏನು ಎಂಬುದನ್ನು ಅವರು ವಿವರಿಸಿದ್ದಾರೆ. ನಟರು ದೊಡ್ಡ ಸಂಭಾವನೆ ಪಡೆಯುತ್ತಿದ್ದಾರೆ. ಇದು ನಿರ್ಮಾಪಕರಿಗೆ ಹೊರೆ ಆಗಿದೆ. ‘ನಟರು ಸೂರ್ಯ ಚಂದ್ರರನ್ನೇ ಕೇಳುತ್ತಾರೆ’ ಎಂದಿದ್ದಾರೆ ಅವರು.

‘ಸ್ಟಾರ್ ನಟರು ಸೂರ್ಯ, ಚಂದ್ರರನ್ನೇ ಕೇಳುತ್ತಾರೆ’; ಕರಣ್ ಜೋಹರ್ ಅಸಮಾಧಾನ
ಕರಣ್
Follow us on

ಹಿಂದಿ ಚಿತ್ರರಂಗ ಸೊರಗಿದೆ. ಯಾವ ಚಿತ್ರಗಳೂ ಅಂದುಕೊಂಡ ಮಟ್ಟದಲ್ಲಿ ಗಳಿಕೆ ಮಾಡುತ್ತಿಲ್ಲ. ಬಾಲಿವುಡ್​ನ ಖ್ಯಾತ ನಿರ್ಮಾಣ ಸಂಸ್ಥೆ ಪೂಜಾ ಎಂಟರ್​ಟೇನ್​ಮೆಂಟ್ ನಷ್ಟ ಅನುಭವಿಸುತ್ತಿದೆ. ಸತತವಾಗಿ ಅಕ್ಷಯ್ ಕುಮಾರ್ ಸಿನಿಮಾಗಳನ್ನು ನಿರ್ಮಾಣ ಮಾಡಿ ಇವರು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ಕರಣ್ ಜೋಹರ್ ಅವರು ಈ ಬಗ್ಗೆ ಮಾತನಾಡಿದ್ದಾರೆ. ‘ಬಾಲಿವುಡ್ ಸೆಲೆಬ್ರಿಟಿಗಳು ಸೂರ್ಯ, ಚಂದ್ರ ಹಾಗೂ ಭೂಮಿಯನ್ನೇ ಕೇಳುತ್ತಾರೆ. ಅಷ್ಟು ದೊಡ್ಡ ಮೊತ್ತದ ಸಂಭಾವನೆ ಪಡೆಯುತ್ತಿದ್ದಾರೆ’ ಎಂದಿದ್ದಾರೆ ಅವರು.

‘ಸದ್ಯ ಕ್ರಿಯಾಶೀಲತೆಯ ಕೊರತೆ ಕಾಣುತ್ತಿದೆ. ಜನರು ಥಿಯೇಟರ್​ಗೆ ಬರುತ್ತಿಲ್ಲ, ನಟರು ಹೆಚ್ಚು ಸಂಭಾವನೆ ಕೇಳುತ್ತಿದ್ದಾರೆ, ಸ್ಟುಡಿಯೋಗಳು ನೆಲಕಚ್ಚುತ್ತಿವೆ. ನಮ್ಮ ಉದ್ಯಮದಲ್ಲಿ ಸಾಕಷ್ಟು ಡ್ರಾಮಾಗಳು ನಡೆಯುತ್ತಿವೆ. ಮಲ್ಟಿಪ್ಲೆಕ್ಸ್​ನಿಂದ ಮಾತ್ರ ಹಣ ಮಾಡುತ್ತೀರಿ ಎಂದರೆ ಸಾಧ್ಯವಿಲ್ಲ. ಎ ಸೆಂಟರ್, ಬಿ ಸೆಂಟರ್ ಹಾಗೂ ಸಿ ಸೆಂಟರ್​ಗಳಲ್ಲಿ ಸಿನಿಮಾ ಯಶಸ್ಸು ಕಾಣಬೇಕು’ ಎಂದಿದ್ದಾರೆ ಕರಣ್ ಜೋಹರ್.

‘ಸಿನಿಮಾ ಮಾಡುವ ವೆಚ್ಚ ಹೆಚ್ಚಿದೆ. ಹಣ ದುಬ್ಬರ ಇದೆ. ಇದರ ಜೊತೆಗೆ ಸೆಲೆಬ್ರಿಟಿಗಳ ಸಂಭಾವನೆ. ಬಾಲಿವುಡ್​ನಲ್ಲಿ 10 ಹೀರೋಗಳು ದೊಡ್ಡ ಸಂಭಾವನೆ ಕೇಳುತ್ತಿದ್ದಾರೆ. ಅವರು ಸುಮಾರು 35 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಸಿನಿಮಾ ಗಳಿಕೆ ಮಾಡೋದು ಕೇವಲ 3.5 ಕೋಟಿ ರೂಪಾಯಿ. ಹೀಗಾದರೆ ಹೇಗೆ ಸಾಧ್ಯ? ಹೀಗಾದರೆ ಸಿನಿಮಾ ಮಾಡಲು ಸಾಧ್ಯವಿಲ್ಲ’ ಎಂದಿದ್ದಾರೆ.

ಅಕ್ಷಯ್ ಕುಮಾರ್ ಅವರು ಪ್ರತಿ ಚಿತ್ರಕ್ಕೆ 50-100 ಕೋಟಿ ರೂಪಾಯಿ ಪಡೆಯುತ್ತಿದ್ದಾರಂತೆ. ಆದರೆ, ನಿರ್ಮಾಪಕರಿಗೆ ಲಾಭ ಮಾತ್ರ ಆಗುತ್ತಿಲ್ಲ. ಇತ್ತೀಚೆಗೆ ಸಿದ್ದಾರ್ಥ್ ಮಲ್ಹೋತ್ರ ನಟನೆಯ ‘ಯೋಧ’ ಚಿತ್ರ ರಿಲೀಸ್ ಆಯಿತು. ಈ ಸಿನಿಮಾ ಕೂಡ ಹೀನಾಯವಾಗಿ ಸೋತಿತು. ಬಿಗ್ ಬಜೆಟ್​ನಲ್ಲಿ ಸಿನಿಮಾ ಮಾಡಿದ ನಿರ್ಮಾಪಕರು ಕೈ ಸುಟ್ಟುಕೊಂಡರು. ಅದೇ ರೀತಿ ಅಕ್ಷಯ್ ಕುಮಾರ್ ಹಾಗೂ ಟೈಗರ್ ಶ್ರಾಫ್ ನಟನೆಯ ‘ಬಡೇ ಮಿಯಾ ಚೋಟೆ ಮಿಯಾ’ ಚಿತ್ರ ಕೂಡ ಸೋತಿದೆ. ಸತತ ಫ್ಲಾಪ್ ಕೊಟ್ಟ ಟೈಗರ್ ಶ್ರಾಫ್ ಬಳಿ ಸಂಭಾವನೆ ಕಡಿಮೆ ಮಾಡಿಕೊಳ್ಳುವಂತೆ ನಿರ್ಮಾಪಕರು ಸೂಚಿಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ‘ನಾವು ಯಾರಿಗೆ ಹುಟ್ಟಿದ್ದೇವೆ?’; ಕರಣ್ ಜೋಹರ್​ಗೆ ಮಕ್ಕಳಿಂದ ಎದುರಾಗುತ್ತಿದೆ ಉತ್ತರಿಸಲಾಗದ ಪ್ರಶ್ನೆ

ಕರಣ್ ಜೋಹರ್ ಹೇಳಿರೋದು ಕೇವಲ ಬಾಲಿವುಡ್​ಗೆ ಮಾತ್ರ ಸೀಮಿತ ಆಗಿಲ್ಲ. ಕನ್ನಡ, ತೆಲುಗು, ತಮಿಳು ಇಂಡಸ್ಟ್ರಿಯ ಹೀರೋಗಳಿಗೂ ಇದು ಅನ್ವಯ ಆಗುತ್ತದೆ. ತೆಲುಗಿನಲ್ಲಿ ಅನೇಕ ಹೀರೋಗಳು ದೊಡ್ಡ ಸಂಭಾವನೆ ಪಡೆಯುತ್ತಿದ್ದಾರೆ. ಆದರೆ, ಎಲ್ಲಾ ಸಿನಿಮಾಗಳು ಅಂದುಕೊಂಡ ಮಟ್ಟದಲ್ಲಿ ಯಶಸ್ಸು ಕಾಣುತ್ತಿಲ್ಲ. ದರ್ಶನ್ ಅವರು ‘ಡೆವಿಲ್’ ಚಿತ್ರಕ್ಕೆ 22 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದರು. ಅವರು ಜೈಲು ಸೇರಿರುವದರಿಂದ ಸಿನಿಮಾ ಕೆಲಸಗಳು ಅರ್ಧಕ್ಕೆ ನಿಂತಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.