ಆಂಧ್ರ ಪ್ರದೇಶದ ನೆಲ್ಲೋರ್ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಖ್ಯಾತ ಚಿತ್ರ ವಿಮರ್ಶಕ ಕಾತಿ ಮಹೇಶ್ ಅವರು ಸುಮಾರು 15 ದಿನಗಳ ಕಾಲ ಸಾವಿನೊಂದಿಗೆ ಹೋರಾಡಿ ಪ್ರಾಣ ತ್ಯಜಿಸಿದ್ದಾರೆ. ಅವರಿಗೆ 45 ವರ್ಷ ವಯಸ್ಸಾಗಿತ್ತು. ಅಪಘಾತದಲ್ಲಿ ಅವರ ಎರಡೂ ಕಣ್ಣಗಳಿಗೆ ತೀವ್ರ ಸ್ವರೂಪದ ಗಾಯಗಳಾಗಿದ್ದವು ಮತ್ತು ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಚೆನೈನ ಅಪೊಲ್ಲೋ ಆಸ್ಪತ್ರೆಗೆ ತೆಗೆದುಕೊಂಡು ಹೋಗಲಾಗಿತ್ತು. ವೈದ್ಯರ ತಂಡವೊಂದು ಅವರ ಆರೈಕೆಯಲ್ಲಿತ್ತಾದರೂ ಚಿಕಿತ್ಸೆ ಫಲಿಸದೆ ಶನಿವಾರದಂದು ಮಹೇಶ್ ಕೊನೆಯುಸಿರೆಳೆದರು.
ಕೆಲವು ದಿನಗಳ ಹಿಂದೆಯಷ್ಟೇ ಮಹೇಶ್ ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ ಮತ್ತು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವರದಿಯಾಗಿದ್ದ ಹಿನ್ನೆಲೆಯಲ್ಲಿ ಅವರ ಸಾವು ದಿಗ್ಭ್ರಮೆ ಮೂಡಿಸಿದೆ. ಅವರ ಚಿಕಿತ್ಸೆಗೆಂದು ಆಂಧ್ರ ಪ್ರದೇಶ ಸರಕಾರ ರೂ. 17 ಲಕ್ಷ ಬಿಡುಗಡೆ ಮಾಡಿತ್ತು.
ಜೂನ್ 25ರಂದು ಅವರು ಪ್ರಯಾಣಿಸುತ್ತಿದ್ದ ಕಾರು ನೆಲ್ಲೂರಿನ ಚಂದ್ರಶೇಖರಪುರಂ ಎಂಬಲ್ಲಿ ಅಪಘಾತಕ್ಕೀಡಾಗಿತ್ತು. ಚಿಂತಾಜನಕ ಸ್ಥಿತಿಯಲ್ಲಿದ್ದ ಅವರನ್ನು ಕೂಡಲೇ ಅವರನ್ನು ನೆಲ್ಲೂರಿನ ಮೆಡಿಕವರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಸ್ಥಿತಿ ಬಿಗಡಾಯಿಸುತ್ತಿದ್ದಂತೆಯೇ ಅವರನ್ನು ಚೆನೈನ ಆಪೊಲ್ಲೋ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು.
2011 ರಲ್ಲಿ ‘ಏದಾರಿ ವರ್ಷಂ’ ಚಿತ್ರದಲ್ಲಿ ನಟನಾಗಿ ವೃತ್ತಿ ಬದುಕು ಆರಂಭಿಸಿದ ಮಹೇಶ್, ಸಂಭಾಷಣೆಕಾರ ಮತ್ತು ನಿರ್ದೇಶಕನಾಗಿಯೂ ಕೆಲಸ ಮಾಡಿದರು. ಆದರೆ ಅವರು ಹೆಸರು ಮಾಡಿದ್ದು ಮಾತ್ರ ಸಿನಿಮಾ ವಿಮರ್ಶಕನಾಗಿ.
ಸದಭಿರುಚಿಯ ವ್ಯಕ್ತಿಯೆನಿಸಿಕೊಂಡಿದ್ದ ಮಹೇಶ್ಗೆ ವಿವಾದಗಳಲ್ಲಿ ಸಿಲುಕುವ ಹವ್ಯಾಸವೂ ಇತ್ತು. ಜುಲೈ 9, 2018ರಲ್ಲಿ ತೆಲಂಗಾಣ ಸರ್ಕಾರವು ಅವರನ್ನು ತೆಲಂಗಾಣ ಸಮಾಜ-ವಿರೋಧಿ ತಡೆ ಮತ್ತು ಅಪಾಯಕಾರಿ ಚಟುವಟಿಕೆಗಳ ಕಾಯ್ದೆ 1980ರ ಆಡಿಯಲ್ಲಿ 6 ತಿಂಗಳು ಕಾಲ ತೆಲಂಗಾಣ ಪ್ರವೇಶಿಸದಂತೆ ನಿಷೇಧ ಹೇರಿತ್ತು. ಟಿವಿಯಲ್ಲಿ ನಡೆದ ಚರ್ಚಾ ಕಾರ್ಯಕ್ರಮವೊಂದರಲ್ಲಿ ರಾಮನನ್ನು ವಂಚಕ ಮತ್ತು ಸೀತೆ ರಾವಣನ ಜೊತೆಯಿದ್ದರೆ ಸುಖವಾಗಿರುತ್ತಿದ್ದಳು ಎಂದು ಕಾಮೆಂಟ್ ಮಾಡಿದ್ದರಿಂದ ಅವರ ಮೇಲೆ ನಿಷೇಧ ಹೇರಲಾಗಿತ್ತು. ತನಗೆ ವಾಕ್ ಸ್ವಾತಂತ್ರ್ಯ ಇದೆ ಎಂದು ಅವರು ತಮ್ಮನ್ನು ಸಮರ್ಥಿಸಿಕೊಂಡಿದ್ದರು.
ನಂತರ 2020 ರಲ್ಲೂ ಅವರು ರಾಮನಿಗೆ ಉಪಪತ್ನಿಯರಿದ್ದರು ಮತ್ತು ರಾಮ ಬೆನ್ನಟ್ಟಿದ ಚಿನ್ನದ ಜಿಂಕೆಯನ್ನು ತಿನ್ನುವ ಆಸೆಯನ್ನು ಸೀತೆ ವ್ಯಕ್ತಪಡಿಸಿದ್ದಳು ಅಂತ ಹೇಳಿ ಮತ್ತೊಮ್ಮೆ ವಿವಾದಕ್ಕೀಡಾಗಿದ್ದರು.
2017ರಲ್ಲಿ ತೆಲುಗು ಬಿಗ್ ಬಾಸ್ ಸೀಸನ್ 1ನಲ್ಲಿ ಕಾನಿ ಮಹೇಶ್ ಸ್ಪರ್ಧಿಯಾಗಿ ಭಾಗವಹಿಸಿದ್ದರು.
ಇದನ್ನೂ ಓದಿ: ಕಾನ್ಸ್ಟೇಬಲ್ ಮೇಲೆ ಹಲ್ಲೆ ಮಾಡಿದ್ದ ಮಾಜಿ ಸಚಿವಗೆ ಜೈಲು ಶಿಕ್ಷೆ ವಿಧಿಸಿದ ಹೈದರಾಬಾದ್ ಕೋರ್ಟ್
Published On - 7:37 pm, Sat, 10 July 21