‘ದಿ ಕೇರಳ ಸ್ಟೋರಿ 2’ ಸಿನಿಮಾ ವಿವಾದ: ಕೇರಳ ಹೈಕೋರ್ಟ್ ಮಹತ್ವದ ಆದೇಶ

The Kerala Story 2: ‘ದಿ ಕೇರಳ ಸ್ಟೋರಿ 2’ ಸಿನಿಮಾ ಫೆಬ್ರವರಿ 27ರ ಶುಕ್ರವಾರ ಬಿಡುಗಡೆ ಆಗಲಿದೆ. ಆದರೆ 'ದಿ ಕೇರಳ ಸ್ಟೋರಿ 2' ಸಿನಿಮಾಕ್ಕೆ ಹಲವೆಡೆ ತೀವ್ರ ವಿರೋಧ ವ್ಯಕ್ತವಾಗಿದೆ. ಸಿನಿಮಾವು ಕೇರಳ ರಾಜ್ಯವನ್ನು ಕೆಟ್ಟ ರೀತಿಯಲ್ಲಿ ಬಿಂಬಿಸುತ್ತಿದೆ. ಧರ್ಮಗಳ ನಡುವೆ ಸಾಮರಸ್ಯ ಹಾಳು ಮಾಡುವ ಉದ್ದೇಶ ಸಿನಿಮಾಕ್ಕೆ ಇದೆ ಎಂದು ಕೆಲವು ದೂರುಗಳು ಸಹ ದಾಖಲಾಗಿದ್ದು, ಈ ಹಿನ್ನೆಲೆಯಲ್ಲಿ ಕೇರಳ ಹೈಕೋರ್ಟ್ ಮಂಗಳವಾರ ವಿಚಾರಣೆ ನಡೆಸಿದ್ದು, ಪ್ರಮುಖ ಆದೇಶವೊಂದನ್ನು ನೀಡಿದೆ.

‘ದಿ ಕೇರಳ ಸ್ಟೋರಿ 2’ ಸಿನಿಮಾ ವಿವಾದ: ಕೇರಳ ಹೈಕೋರ್ಟ್ ಮಹತ್ವದ ಆದೇಶ
The Kerala Story 2

Updated on: Feb 24, 2026 | 5:58 PM

ದಿ ಕೇರಳ ಸ್ಟೋರಿ 2’ (The Kerala Story 2) ಸಿನಿಮಾದ ಟೀಸರ್ ಇತ್ತೀಚೆಗಷ್ಟೆ ಬಿಡುಗಡೆ ಆಗಿದ್ದು, ಸಿನಿಮಾ ಫೆಬ್ರವರಿ 27ರ ಶುಕ್ರವಾರ ಬಿಡುಗಡೆ ಆಗಲಿದೆ. ಆದರೆ ‘ದಿ ಕೇರಳ ಸ್ಟೋರಿ 2’ ಸಿನಿಮಾಕ್ಕೆ ಹಲವೆಡೆ ತೀವ್ರ ವಿರೋಧ ವ್ಯಕ್ತವಾಗಿದೆ. ಸ್ವತಃ ಕೇರಳ ಸಿಎಂ ಪಿಣರಾಯಿ ವಿಜಯನ್, ‘ದಿ ಕೇರಳ ಸ್ಟೋರಿ 2’ ಸಿನಿಮಾವನ್ನು ಬಹಿಷ್ಕರಿಸುವಂತೆ ಆಗ್ರಹಿಸಿದ್ದಾರೆ. ಸಿನಿಮಾವು ಕೇರಳ ರಾಜ್ಯವನ್ನು ಕೆಟ್ಟ ರೀತಿಯಲ್ಲಿ ಬಿಂಬಿಸುತ್ತಿದೆ. ಧರ್ಮಗಳ ನಡುವೆ ಸಾಮರಸ್ಯ ಹಾಳು ಮಾಡುವ ಉದ್ದೇಶ ಸಿನಿಮಾಕ್ಕೆ ಇದೆ ಎಂದು ಕೆಲವು ದೂರುಗಳು ಸಹ ದಾಖಲಾಗಿದ್ದು, ಈ ಹಿನ್ನೆಲೆಯಲ್ಲಿ ಕೇರಳ ಹೈಕೋರ್ಟ್ ಮಂಗಳವಾರ ವಿಚಾರಣೆ ನಡೆಸಿದ್ದು, ಪ್ರಮುಖ ಆದೇಶವೊಂದನ್ನು ನೀಡಿದೆ.

ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬೆಚು ಕುರಿಯನ್ ಥಾಮಸ್ ಅವರು, ‘ಕೇರಳ ರಾಜ್ಯವು ಸಾಮರಸ್ಯದಿಂದ ಬದುಕುತ್ತಿದೆ. ಆದರೆ ನೀವು ಇಡೀ ಕೇರಳದಲ್ಲೇ ಬಲವಂತದ ಮತಾಂತರದಂಥಹ ಘಟನೆಗಳು ನಡೆಯುತ್ತಿವೆ ಎಂಬಂತೆ ಬಿಂಬಿಸಿದ್ದೀರಿ. ಇದು ತಪ್ಪು ಸಂದೇಶ ರವಾನಿಸುವುದಲ್ಲದೆ, ಜನರ ಭಾವನೆಗಳನ್ನು ಕೆರಳಿಸಬಹುದು’ ಎಂದು ಚಿತ್ರತಂಡಕ್ಕೆ ಚುರುಕು ಮುಟ್ಟಿಸಿದ್ದಾರೆ.

‘ನಾವು ಸಿನಿಮಾಗಳ ವಿಷಯಕ್ಕೆ ಅಡ್ಡಿಪಡಿಸಿಲ್ಲ, ಕಲಾತ್ಮಕ ಸ್ವಾತಂತ್ರ್ಯಕ್ಕೆ ತಾವು ಧಕ್ಕೆ ತುರುವುದಿಲ್ಲ ಎಂದು ಹೇಳಿದ ನ್ಯಾಯಾಧೀಶರು, ಆದರೆ ಇದು ‘ನೈಜ ಘಟನೆಗಳಿಂದ ಪ್ರೇರಿತ’ ಎಂದು ಹೇಳಿರುವುದು ಕೋಮು ಉದ್ವಿಗ್ನತೆಗೆ ಕಾರಣವಾಗಬಹುದು ಎಂಬ ಆತಂಕ ವ್ಯಕ್ತಪಡಿಸಿದರು. ಈ ಹಿನ್ನೆಲೆಯಲ್ಲಿ, ಅಂತಿಮ ತೀರ್ಪು ನೀಡುವ ಮೊದಲು ತಾವೇ ಸ್ವತಃ ಸಿನಿಮಾವನ್ನು ವೀಕ್ಷಿಸುವುದಾಗಿ ತಿಳಿಸಿದ ನ್ಯಾಯಾಲಯ, ಬುಧವಾರ ಮಧ್ಯಾಹ್ನ ತನಗಾಗಿ ವಿಶೇಷ ಪ್ರದರ್ಶನ ಏರ್ಪಡಿಸುವಂತೆ ಕೇಂದ್ರ ಸರ್ಕಾರ ಮತ್ತು ಚಿತ್ರತಂಡಕ್ಕೆ ಸೂಚಿಸಿದೆ.

ಇದನ್ನೂ ಓದಿ:‘ದಿ ಕೇರಳ ಸ್ಟೋರಿ 2’ ಸಿನಿಮಾ ಬಗ್ಗೆ ಜನರಿಗೆ ಎಚ್ಚರಿಕೆ ನೀಡಿದ ಸಿಎಂ ಪಿಣರಾಯಿ ವಿಜಯನ್

ಉಲ್ಕಾ ಗುಪ್ತಾ, ಅದಿತಿ ಭಾಟಿಯಾ ಮತ್ತು ಐಶ್ವರ್ಯಾ ಓಝಾ ಪ್ರಮುಖ ಪಾತ್ರದಲ್ಲಿ ನಟಿಸಿರುವ ಈ ಚಿತ್ರಕ್ಕೆ ಸೆನ್ಸಾರ್ ಮಂಡಳಿಯು ‘ಯು/ಎ’ (U/A) ಪ್ರಮಾಣಪತ್ರ ನೀಡಿದೆ. ಕೇರಳದ ಜೊತೆಗೆ ರಾಜಸ್ಥಾನ ಮತ್ತು ಮಧ್ಯಪ್ರದೇಶದ ಹಿನ್ನೆಲೆಯಲ್ಲಿ ಮತಾಂತರ ಮತ್ತು ಒತ್ತಾಯದ ವಿಷಯಗಳನ್ನು ಈ ಸಿನಿಮಾ ಒಳಗೊಂಡಿದೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಬಿಡುಗಡೆ ಆಗಿರುವ ಟೀಸರ್​​ನಲ್ಲಿ ಹಿಂದೂ ಯುವತಿಗೆ ಮುಸ್ಲಿಂ ಸಮುದಾಯದ ಕೆಲವರು ಬಲವಂತದಿಂದ ಗೋಮಾಂಸ ತಿನ್ನಿಸುತ್ತಿರುವ ದೃಶ್ಯ ಇದೆ.

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಚಿತ್ರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ಧಾರ್ಮಿಕ ಸಾಮರಸ್ಯಕ್ಕೆ ಹೆಸರಾದ ಕೇರಳವನ್ನು ಭಯೋತ್ಪಾದನೆಯ ಕೇಂದ್ರವೆಂದು ಬಿಂಬಿಸುವ ಪ್ರಯತ್ನಗಳನ್ನು ನಾವು ಒಕ್ಕೊರಲಿನಿಂದ ವಿರೋಧಿಸಬೇಕು. ಸುಳ್ಳು ಪ್ರಚಾರದ ಮೂಲಕ ನಮ್ಮ ಜಾತ್ಯತೀತ ಅಡಿಪಾಯವನ್ನು ಹಾಳುಮಾಡಲು ಬಿಡುವುದಿಲ್ಲ’ ಎಂದು ಅವರು ಹೇಳಿಕೆ ನೀಡಿದ್ದಾರೆ. ಹೈಕೋರ್ಟ್ ನಾಳೆ (ಫೆಬ್ರವರಿ 25) ಸಿನಿಮಾ ವೀಕ್ಷಿಸಿದ ಬಳಿಕ ನೀಡುವ ತೀರ್ಪಿನ ಮೇಲೆ ಚಿತ್ರದ ಭವಿಷ್ಯ ಅಡಗಿದೆ. ಶುಕ್ರವಾರ ಸಿನಿಮಾ ತೆರೆಕಾಣಲಿದೆಯೇ ಅಥವಾ ಕಾನೂನು ಅಡೆತಡೆ ಎದುರಾಗಲಿದೆಯೇ ಎಂಬುದು ಕುತೂಹಲ ಮೂಡಿಸಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us