‘ಕೆಜಿಎಫ್: ಚಾಪ್ಟರ್ 2’ ಸಿನಿಮಾ (KGF Chapter 2) ವಿಶ್ವಮಟ್ಟದಲ್ಲಿ ಸಾಕಷ್ಟು ಮೋಡಿ ಮಾಡುತ್ತಿದೆ. ಈ ಚಿತ್ರ ಬಾಲಿವುಡ್ ಮಾರುಕಟ್ಟೆಯಿಂದ 268 ಕೋಟಿ ರೂಪಾಯಿ ಬಾಚಿಕೊಂಡಿದೆ. ಈ ಮೂಲಕ ಹೊಸ ದಾಖಲೆ ಬರೆದಿದೆ. ಈ ವಾರಾಂತ್ಯಕ್ಕೆ ಈ ಸಿನಿಮಾ ಹಿಂದಿಯಲ್ಲಿ 300 ಕೋಟಿ ರೂಪಾಯಿ ಗಳಿಸುವ ಸಾಧ್ಯತೆ ದಟ್ಟವಾಗಿದೆ. ಇದಲ್ಲದೆ, ಇನ್ನೂ ಹಲವು ದಾಖಲೆಗಳನ್ನು ಈ ಚಿತ್ರ (KGF Chapter 2 Records) ಬರೆದಿದೆ. ಈ ಬಗ್ಗೆ ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ. ಹಾಗಾದರೆ, ಆ ದಾಖಲೆಗಳು ಏನು ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ.
ದಕ್ಷಿಣ ಭಾರತದಲ್ಲಿ ಮೊದಲ ವಾರ ಈ ಚಿತ್ರವನ್ನು ಸುಮಾರು 1.5 ಕೋಟಿ ಜನರು ವೀಕ್ಷಿಸಿದ್ದಾರೆ. ಕರ್ನಾಟಕದಲ್ಲಿ 40 ಲಕ್ಷ ಜನರು ಈ ಸಿನಿಮಾ ವೀಕ್ಷಿಸಿದ್ದಾರೆ. ತಮಿಳುನಾಡಿನಲ್ಲಿ 30 ಲಕ್ಷ, ಕೇರಳದಲ್ಲಿ 25 ಲಕ್ಷ ಹಾಗೂ ಆಂಧ್ರ ಮತ್ತು ತೆಲಂಗಾಣದಲ್ಲಿ 50 ಲಕ್ಷ ಮಂದಿ ಸಿನಿಮಾ ನೋಡಿದ್ದಾರೆ ಎಂಬ ಲೆಕ್ಕ ಸಿಕ್ಕಿದೆ. ಪರಭಾಷೆಯಲ್ಲೂ ಚಿತ್ರಕ್ಕೆ ಒಳ್ಳೆಯ ಬೇಡಿಕೆ ಸೃಷ್ಟಿ ಆಗಿದೆ. ಉತ್ತರ ಭಾರತದಲ್ಲೂ ಜನರು ಮುಗಿಬಿದ್ದು ಸಿನಿಮಾ ನೋಡುತ್ತಿದ್ದಾರೆ. ಉತ್ತರ ಭಾರತದಲ್ಲಿ 1.7 ಕೋಟಿ ಮಂದಿ ಈ ಸಿನಿಮಾ ವೀಕ್ಷಿಸಿದ್ದಾರೆ.
ವಿದೇಶದಲ್ಲಿ ಸಿನಿಮಾಗೆ ಒಳ್ಳೆಯ ಮಾರುಕಟ್ಟೆ ಸಿಕ್ಕಿದೆ. ಈ ಸಿನಿಮಾ ಹಿಂದಿ ಚಿತ್ರರಂಗದಿಂದ 268 ಕೋಟಿ ರೂಪಾಯಿ ಹಾಗೂ ವಿದೇಶದಿಂದ 135 ಕೋಟಿ ರೂಪಾಯಿ ಕಲೆ ಹಾಕಿದೆ ಎಂದು ವರದಿ ಆಗಿದೆ. ಮೇ 2ರಂದು ರಂಜಾನ್ ಹಬ್ಬ ಇದೆ. ಈ ಸಂದರ್ಭದಲ್ಲಿ ಸಿನಿಮಾದ ಕಲೆಕ್ಷನ್ ಹೆಚ್ಚುವ ಸಾಧ್ಯತೆ ಇದೆ. ದಕ್ಷಿಣ ಭಾರತದ ಸಿನಿಮಾ ಯುಎಇನಲ್ಲಿ ಇಷ್ಟು ಗಳಿಕೆ ಮಾಡಿದ್ದು ಇದೇ ಮೊದಲು.
ವಿಶ್ವಮಟ್ಟದ ಟ್ರೆಂಡ್ನಲ್ಲಿ ‘ಕೆಜಿಎಫ್ 2’ ಸಿನಿಮಾ ಎರಡನೇ ಸ್ಥಾನ ಪಡೆದುಕೊಂಡಿದೆ. ಈ ದಾಖಲೆಯನ್ನು ಮಾಡಲು ‘ಆರ್ಆರ್ಆರ್’ ಬಳಿಯೂ ಸಾಧ್ಯವಾಗಿರಲಿಲ್ಲ. ಕನ್ನಡದ ಸಿನಿಮಾ ಒಂದು ಈ ರೀತಿಯ ದಾಖಲೆ ಬರೆದಿದ್ದು ಇದೇ ಮೊದಲು. ಮಲೇಷಿಯಾ ಸಿನಿ ಮಾರುಕಟ್ಟೆಯಲ್ಲಿ ಈ ಸಿನಿಮಾ ನಂಬರ್ ಒನ್ ಟ್ರೆಂಡಿಗ್ನಲ್ಲಿದೆ. ತಮಿಳುನಾಡಿನಲ್ಲಿ ‘ಕೆಜಿಎಫ್ 2’ ಕ್ರೇಜ್ ಹೆಚ್ಚುತ್ತಿದ್ದು, ಹೆಚ್ಚುವರಿಯಾಗಿ 150 ಚಿತ್ರಮಂದಿರಗಳಲ್ಲಿ ಈ ಸಿನಿಮಾ ಪ್ರದರ್ಶನ ಕಾಣುತ್ತಿದೆ. ಮೊದಲ ವಾರದಲ್ಲಿ ಈ ಸಿನಿಮಾ ವಿಶ್ವಮಟ್ಟದಲ್ಲಿ 800 ಕೋಟಿ ರೂಪಾಯಿ ಕಲೆ ಹಾಕಿದೆ.
ಇದನ್ನೂ ಓದಿ: ‘ಕೆಜಿಎಫ್: ಚಾಪ್ಟರ್ 2’ ಬಗ್ಗೆ ಉಪೇಂದ್ರ ಮೆಚ್ಚುಗೆ; ಇನ್ನುಳಿದವರ ಮೌನಕ್ಕೆ ಯಶ್ ಫ್ಯಾನ್ಸ್ ತಕರಾರು
‘ಕೆಜಿಎಫ್ 2’ ಸಿನಿಮಾ ನೋಡಿ ಭೇಷ್ ಎಂದ ಅಲ್ಲು ಅರ್ಜುನ್; ಯಶ್ ಪರ್ಫಾರ್ಮೆನ್ಸ್ಗೆ ಸ್ಟೈಲಿಶ್ ಸ್ಟಾರ್ ಫಿದಾ
Published On - 2:23 pm, Fri, 22 April 22