
ದಕ್ಷಿಣ ಭಾರತದ ಖ್ಯಾತ ನಟಿ ಖುಷ್ಬೂ ಎರಡನೇ ಇನ್ನಿಂಗ್ಸ್‌ನಲ್ಲಿ ಪೋಷಕ ನಟಿಯಾಗಿ ಬ್ಯುಸಿಯಾಗಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಅವರು ಚಲನಚಿತ್ರೋದ್ಯಮದಲ್ಲಿನ ತಮ್ಮ ಸುದೀರ್ಘ ಪ್ರಯಾಣ ಹಾಗೂ ಅಂದಿನ ಟಾಪ್ ಹೀರೊಗಳೊಂದಿಗಿನ ಅಪರೂಪದ ಬಾಂಧವ್ಯದ ಕುರಿತು ಹಲವು ಆಸಕ್ತಿದಾಯಕ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.
ತಮ್ಮ ಚಲನಚಿತ್ರ ಪ್ರಯಾಣ ಆರಂಭವಾಗಿದ್ದೇ ‘ಕಲಿಯುಗ ಪಾಂಡವುಲು’ ಚಿತ್ರದ ಮೂಲಕ ಎಂದು ನೆನಪಿಸಿಕೊಂಡ ಖುಷ್ಬೂ, ವಿಕ್ಟರಿ ವೆಂಕಟೇಶ್ ತಮ್ಮ ಮೊದಲ ನಾಯಕ ಮತ್ತು ಮೊದಲ ಸ್ನೇಹಿತ ಎಂದು ಹೇಳಿದ್ದಾರೆ. ವೆಂಕಟೇಶ್ ಅವರನ್ನು ತಮ್ಮ ಭಾವನಾತ್ಮಕ ವ್ಯಕ್ತಿ ಎಂದು ಕರೆದಿರುವ ಅವರು, ನಾವು ಪ್ರತಿದಿನ ಮಾತನಾಡದಿದ್ದರೂ, ಯಾವುದೇ ಸಮಸ್ಯೆ ಎದುರಾದಾಗ ಪರಸ್ಪರ ಬೆಂಬಲವಾಗಿ ನಿಲ್ಲುತ್ತೇವೆ ಎಂದಿದ್ದಾರೆ.
ನಟ ನಾಗಾರ್ಜುನ ಅವರ ಫಿಟ್‌ನೆಸ್ ಮತ್ತು ಸ್ಟೈಲ್ ಅನ್ನು ಖುಷ್ಬೂ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. 1986ರ ‘ಕ್ಯಾಪ್ಟನ್ ನಾಗಾರ್ಜುನ’ ಚಿತ್ರದ ಸಮಯದಲ್ಲಿ ಕಾರ್ಗೋ ಪ್ಯಾಂಟ್‌ನಲ್ಲಿ ಅವರು ಕಾಣಿಸುತ್ತಿದ್ದ ರೀತಿಗೆ ಪ್ರತಿಯೊಬ್ಬ ಮಹಿಳೆಯೂ ಫಿದಾ ಆಗುತ್ತಿದ್ದರು. ನಾಗಾರ್ಜುನ ಇಂದಿಗೂ ಅಷ್ಟೇ ಫಿಟ್ ಮತ್ತು ಹ್ಯಾಂಡ್ಸಮ್ ಆಗಿ ಉಳಿದಿದ್ದಾರೆ ಎಂದು ಅವರು ಬಣ್ಣಿಸಿದ್ದಾರೆ. ಆಗಿನ ಕಾಲದಲ್ಲಿ ಎಲ್ಲಾ ನಾಯಕಿಯರು ಇವರ ಜೊತೆ ರೊಮ್ಯಾನ್ಸ್ ಮಾಡಬೇಕು ಎಂದುಕೊಳ್ಳುತ್ತಿದ್ದರಂತೆ.
ಮೆಗಾಸ್ಟಾರ್ ಚಿರಂಜೀವಿ ಅವರನ್ನು ದಂತಕಥೆ ಎಂದು ಕರೆದಿರುವ ಖುಷ್ಬೂ, ಅವರ ವಿನಮ್ರತೆ ಮತ್ತು ಕೆಲಸದ ಮೇಲಿನ ಸಮರ್ಪಣೆ ಅದ್ಭುತ ಎಂದು ಹೇಳಿದ್ದಾರೆ. ಇಂದಿಗೂ ಪ್ರತಿದಿನ ಸೆಟ್‌ನಲ್ಲಿ ಹೊಸದನ್ನು ಕಲಿಯಲು ಚಿರಂಜೀವಿ ಶ್ರಮಿಸುತ್ತಾರೆ, ಅದಕ್ಕಾಗಿಯೇ ಅವರು ಸದಾ ಮೆಗಾಸ್ಟಾರ್ ಆಗಿ ಮಿಂಚುತ್ತಿದ್ದಾರೆ ಎಂದು ಹೇಳಿದ್ದಾರೆ.
ಹಿರಿಯ ನಟ ರಾಜೇಂದ್ರ ಪ್ರಸಾದ್ ಅವರನ್ನು ತಾವೆಂದೂ ಪ್ರೀತಿಯಿಂದ “ಅಳಿಯ” ಎಂದೇ ಕರೆಯುವುದಾಗಿ ಖುಷ್ಬೂ ತಿಳಿಸಿದ್ದಾರೆ. ಫಿಲ್ಮ್ ಇನ್‌ಸ್ಟಿಟ್ಯೂಟ್‌ನಲ್ಲಿ ಒಟ್ಟಿಗೆ ಓದಿದ ದಿನಗಳಿಂದ ಆರಂಭವಾದ ಇವರ ಸ್ನೇಹ, ಇಂದಿಗೂ ಒಂದು ವಿಶೇಷ ಬಾಂಧವ್ಯವಾಗಿ ಮುಂದುವರಿದಿದೆ ಎಂದಿದ್ದಾರೆ.
ಇದನ್ನೂ ಓದಿ: ಚುನಾವಣೆ ಗೆದ್ದರೆ ಮಾಂಸ ಮಾರಾಟ ಬ್ಯಾನ್ ಮಾಡ್ತಾರಾ ಖುಷ್ಬೂ ಪತಿ ಸುಂದರ್? ಸಿಕ್ತು ಸ್ಪಷ್ಟನೆ
ಕಮಲ್ ಹಾಸನ್ ಅವರನ್ನು ತಮ್ಮ ಆತ್ಮೀಯ ಗೆಳೆಯ ಎಂದು ಕರೆದಿರುವ ಖುಷ್ಬೂ, ಅವರ ಮೇಲಿರುವ ಗೌರವವನ್ನು ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಸೂಪರ್‌ಸ್ಟಾರ್ ರಜನಿಕಾಂತ್ ಅವರ ಸಮಯಪ್ರಜ್ಞೆಯನ್ನು ಕೊಂಡಾಡಿದ ಅವರು, ‘ಬೆಳಿಗ್ಗೆ 7 ಗಂಟೆಗೆ ಕಾಲ್ ಶೀಟ್ ಇದ್ದರೆ, ರಜನಿಕಾಂತ್ 6:50 ರ ಹೊತ್ತಿಗೆ ಮೇಕಪ್ ಮುಗಿಸಿ ಸೆಟ್‌ನಲ್ಲಿರುತ್ತಾರೆ. ನಿರ್ದೇಶಕರು ಬ್ರೇಕ್ ಕೊಟ್ಟರೂ ಸೆಟ್ ಬಿಟ್ಟು ಕದಲದೆ ಚಿತ್ರೀಕರಣದ ಸೂಕ್ಷ್ಮತೆಗಳನ್ನು ಗಮನಿಸುತ್ತಾರೆ’ ಎಂದು ಅವರ ಶಿಸ್ತಿನ ದಿನಗಳನ್ನು ನೆನಪಿಸಿಕೊಂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.