
‘ಕಾಫಿ ವಿತ್ ಕರಣ್’ ಭಾರತೀಯ ಟಿವಿ ಲೋಕದಲ್ಲಿ ಹಲವು ವರ್ಷಗಳಿಂದಲೂ ಪ್ರಸಾರವಾಗುತ್ತಿರುವ ಬಲು ಜನಪ್ರಿಯ ಟಾಕ್ ಶೋ. 2004 ರಲ್ಲಿ ಪ್ರಸಾರ ಆರಂಭಿಸಿದ್ದ ಈ ಶೋಈಗ 22 ವರ್ಷಗಳನ್ನು ಪೂರೈಸಿದೆ. ಹಲವಾರು ವಿವಾದಗಳು, ಹಲವು ಆಪ್ತ ಕ್ಷಣಗಳನ್ನು ನೀಡಿರುವ ಈ ಶೋ ಇದೀಗ ಕೊನೆಗೊಳ್ಳುತ್ತಿದೆ. ಹಲವಾರು ಸಿನಿಮಾ ಸೆಲೆಬ್ರಿಟಿಗಳು ಭಾಗವಹಿಸಿರುವ ಈ ಶೋ 22 ವರ್ಷಗಳ ಬಳಿಕ ಅಂತ್ಯವಾಗುತ್ತಿದ್ದು, ಈ ಶೋನ ಕೊನೆಯ ಸೀಸನ್ ಪ್ರಸಾರದ ಸಮಯ, ದಿನಾಂಕವನ್ನು ಇದೀಗ ಘೋಷಣೆ ಮಾಡಲಾಗಿದೆ.
ಬಾಲಿವುಡ್ ನಿರ್ದೇಶಕ, ನಿರ್ಮಾಪಕ ಕರಣ್ ಜೋಹರ್ ಅವರು 22 ವರ್ಷಗಳಿಂದಲೂ ಈ ಶೋ ನಿರೂಪಣೆ ಮಾಡಿಕೊಂಡು ಬರುತ್ತಿದ್ದಾರೆ. ಶಾರುಖ್ ಖಾನ್, ಸಲ್ಮಾನ್ ಖಾನ್, ಆಮಿರ್ ಖಾನ್, ರಣ್ಬೀರ್, ರಣ್ವೀರ್ ಇನ್ನೂ ಹಲವಾರು ದೊಡ್ಡ ದೊಡ್ಡ ಸ್ಟಾರ್ ನಟ-ನಟಿಯರು ಕಾಫಿ ವಿತ್ ಕರಣ್ ಶೋನಲ್ಲಿ ಭಾಗವಹಿಸಿದ್ದಾರೆ. ಹಲವಾರು ಕ್ರಿಕೆಟಿಗರು ಸಹ ಈ ಶೋನಲ್ಲಿ ಭಾಗಿ ಆಗಿದ್ದುಂಟು. ಈ ವೆರಗೆ ಎಂಟು ಸೀಸನ್ ಪ್ರದರ್ಶನಗೊಂಡಿದೆ. ಇದೀಗ ಒಂಬತ್ತನೇ ಸೀಸನ್ ಪ್ರಸಾರ ಆಗಲಿದೆ. ಸೀಸನ್ನ ಪ್ರಸಾರದ ದಿನಾಂಕ ಘೋಷಣೆಯ ಜೊತೆಗೆ ಕರಣ್ ಜೋಹರ್ ಭಾವುಕ ಸಾಲುಗಳನ್ನು ಹಂಚಿಕೊಂಡಿದ್ದಾರೆ.
‘ಕಾಫಿ ವಿತ್ ಕರಣ್’ ನಿರೂಪಕ ಹಾಗೂ ನಿರ್ದೇಶಕ ಕರಣ್ ಜೋಹರ್ ಅವರು ತಮ್ಮ ಜನಪ್ರಿಯ ಶೋನ 9ನೇ ಸೀಸನ್ ಅನ್ನು ಕೊನೆಯ ಸೀಸನ್ ಎಂದು ಅಧಿಕೃತವಾಗಿ ಘೋಷಿಸಿದ್ದಾರೆ. ‘ಒನ್ ಲಾಸ್ಟ್ ಕಪ್, ಒನ್ ಲಾಸ್ಟ್ ಟೈಮ್’ ಎಂಬ ಟ್ಯಾಗ್‌ಲೈನ್‌ನೊಂದಿಗೆ ಈ ಶೋ ಅಕ್ಟೋಬರ್ 14ರಂದು ಜಿಯೋ ಹಾಟ್‌ಸ್ಟಾರ್ ಒಟಿಟಿ ವೇದಿಕೆಯಲ್ಲಿ ಪ್ರಸಾರವಾಗಲಿದೆ. ಇದು ‘ಕಾಫಿ ವಿತ್ ಕರಣ್’ ಅವರ ಶೋನ ಕೊನೆಯ ಸೀಸನ್ ಆಗಿದೆ. ಈ ಸೀಸನ್ ಬಳಿಕ ‘ಕಾಫಿ ವಿತ್ ಕರಣ್’ ಪ್ರಸಾರ ಆಗುವುದಿಲ್ಲ.
ಇದನ್ನೂ ಓದಿ:‘ಎಚ್2ಓ’ ಜೋಡಿ: ಮತ್ತೆ ಪ್ರಭುದೇವ ಜೊತೆಗೆ ಉಪೇಂದ್ರ ಸಿನಿಮಾ
ಶೋ ಬಗ್ಗೆ ಭಾವುಕ ವಿಷಯ ಹಂಚಿಕೊಂಡಿರುವ ಕರಣ್ ಜೋಹರ್, 22 ವರ್ಷಗಳ ಹಿಂದೆ, ಅಂದರೆ 2004ರ ಜೂನ್‌ನಲ್ಲಿ ನಾನು ನನ್ನ ತಂದೆಗೆ ಈ ಶೋ ಬಗ್ಗೆ ಹೇಳಿದ್ದೆ. ನಾನು ಟಾಕ್ ಶೋ ಮಾಡಬೇಕು ಎಂದುಕೊಂಡಿದ್ದೇನೆ ಎಂದಿದ್ದೆ. ನಿನ್ನ ಗೆಳೆಯರೊಟ್ಟಿಗೆ ನೀನು ಪ್ರತಿದಿನ ಮಾತನಾಡುತ್ತೀಯ, ಅದನ್ನು ರೆಕಾರ್ಡ್ ಮಾಡಿ ಕೊಟ್ಟರೆ ಯಾರು ನಿನಗೆ ದುಡ್ಡು ಕೊಡುತ್ತಾರೆ ಎಂದು ಕೇಳಿದ್ದರು. ನಾನು ತಂದೆಯೊಂದಿಗೆ ಈ ಬಗ್ಗೆ ಚರ್ಚಿಸಿದ್ದ ತಿಂಗಳಲ್ಲೇ ನನ್ನ ತಂದೆ ನಿಧನ ಹೊಂದಿದರು. ಆ ಬಳಿಕ ಆಗಸ್ಟ್ ತಿಂಗಳಲ್ಲಿ ನಾನು ಅದರ ಮೊದಲ ಕಂತನ್ನು ಚಿತ್ರೀಕರಣ ಮಾಡಿದ್ದೆ. ಈ ವರೆಗೆ 161 ಎಪಿಸೋಡ್ ಪ್ರಸಾರ ಆಗಿವೆ. ಹಲವಾರು ಗೆಳೆಯರು, ಆಪ್ತರು, ಕುಟುಂಬಗಳನ್ನು ನಾನು ಶೋಗೆ ಕರೆದು ಮಾತನಾಡಿದ್ದೇನೆ. ಅದೆಲ್ಲ ಅದ್ಭುತ ಅನುಭವ ಎಂದು ಕರಣ್ ಜೋಹರ್ ಹೇಳಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ