ತಮಿಳಿನ ಖ್ಯಾತ ನಟ ಜಯಂ ರವಿ ಅವರು ಡಿವೋರ್ಸ್ ಪಡೆದುಕೊಂಡಿದ್ದಾರೆ. ಪತ್ನಿ ಆರತಿ ಜೊತೆಗಿನ ಸಂಸಾರಕ್ಕೆ ಅವರು ಅಂತ್ಯ ಹಾಡಿದ್ದಾರೆ. ಜಯಂ ರವಿ ಮತ್ತು ಆರತಿ ನಡುವಿನ ದಾಂಪತ್ಯ ಜೀವನಕ್ಕೆ ಪೂರ್ಣ ವಿರಾಮ ಬಿದ್ದಿದೆ. 15 ವರ್ಷಗಳ ಹಿಂದೆ ಜಯಂ ರವಿ ಮತ್ತು ಆರತಿ ಅವರು ಮದುವೆ ಆಗಿದ್ದರು. ಈ ಜೋಡಿಗೆ ಇಬ್ಬರು ಗಂಡು ಮಕ್ಕಳು ಇದ್ದಾರೆ. ಇಷ್ಟು ವರ್ಷಗಳ ಬಳಿಕ ರವಿ ಮತ್ತು ಆರತಿ ಅವರು ಡಿವೋರ್ಸ್ ಪಡೆದಿದ್ದು ಅವರ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ. ಸೋಶಿಯಲ್ ಮೀಡಿಯಾ ಮೂಲಕ ತಮ್ಮ ವಿಚ್ಛೇದನದ ಸುದ್ದಿಯನ್ನು ಜಯಂ ರವಿ ತಿಳಿಸಿದ್ದಾರೆ.
‘ಹಲವು ಅಧ್ಯಾಯಗಳನ್ನು ಹೊಂದಿದ ಪಯಣವೇ ಜೀವನ. ಎಲ್ಲ ಅಧ್ಯಾಯಕ್ಕೂ ಅದರದ್ದೇ ಆದ ಅವಕಾಶ ಮತ್ತು ಸವಾಲುಗಳು ಇವೆ. ನೀವು ನನ್ನ ತೆರೆ ಮೇಲಿನ ಮತ್ತು ತೆರೆ ಹಿಂದಿನ ಜೀವನವನ್ನು ಗಮನಿಸುತ್ತಾ ಬಂದಿದ್ದೀರಿ. ನಾನು ಯಾವಾಗಲೂ ಅಭಿಮಾನಿಗಳು ಮತ್ತು ಮಾಧ್ಯಮದವರ ಜೊತೆ ಪಾರದರ್ಶಕವಾಗಿ ನಡೆದುಕೊಳ್ಳಲು ಪ್ರಯತ್ನಿಸಿದ್ದೇನೆ. ಇಂದು ನಾನು ಭಾರವಾದ ಮನಸ್ಸಿನಿಂದ ವೈಯಕ್ತಿಕ ಜೀವನದ ಈ ವಿಷಯ ತಿಳಿಸುತ್ತಿದ್ದೇನೆ’ ಎಂದು ಜಯಂ ರವಿ ಅವರು ತಮ್ಮ ಬರಹ ಆರಂಭಿಸಿದ್ದಾರೆ.
‘ಸಾಕಷ್ಟು ಯೋಚಿಸಿದ ಬಳಿಕ ಆರತಿ ಜೊತೆ ವಿಚ್ಛೇದನ ಪಡೆಯಲು ನಿರ್ಧರಿಸಿದೆ. ಇದು ಅವಸರದಲ್ಲಿ ತೆಗೆದುಕೊಂಡ ನಿರ್ಧಾರ ಎಲ್ಲ. ಎಲ್ಲರ ಒಳಿತಿಗಾಗಿ ಈ ನಿರ್ಧಾರ. ಈ ಕಷ್ಟದ ಸಂದರ್ಭದಲ್ಲಿ ನನ್ನ ಮತ್ತು ನನ್ನ ಕುಟುಂಬದವರ ಖಾಸಗಿತನವನ್ನು ಗೌರವಿಸಬೇಕು ಎಂದು ನಿಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ. ಈ ವಿಚಾರದಲ್ಲಿ ಯಾವುದೇ ಗಾಸಿಪ್, ವದಂತಿ, ಊಹಾಪೋಹ, ಆರೋಪ ಮಾಡಬೇಡಿ. ಇದು ಖಾಸಗಿಯಾಗಿಯೇ ಇರಲಿ’ ಎಂದು ಜಯಂ ರವಿ ಮನವಿ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: 22 ವರ್ಷದ ಹಿಂದೆ ಡಿವೋರ್ಸ್ ನೀಡಿದ ಮೊದಲ ಪತ್ನಿ ಜತೆ ಈಗ ಆಮಿರ್ ಖಾನ್ ಪಾರ್ಟಿ
‘ಅಭಿಮಾನಿಗಳಿಗೆ ಮನರಂಜನೆ ನೀಡುವುದೇ ನನ್ನ ಮೊದಲ ಆದ್ಯತೆ ಆಗಿರುತ್ತದೆ. ನಾನು ಎಂದೆಂದಿಗೂ ನಿಮ್ಮ ಜಯಂ ರವಿ ಆಗಿರುತ್ತೇನೆ. ನಿಮ್ಮ ಬೆಂಬಲವೇ ನನಗೆ ಸರ್ವಸ್ವ. ಈ ಎಲ್ಲ ವರ್ಷಗಳಲ್ಲಿ ನೀವು ನನಗೆ ನೀಡಿದ ಪ್ರೀತಿಗೆ ಚಿರಋಣಿ. ಅರ್ಥ ಮಾಡಿಕೊಂಡು ಬೆಂಬಲ ಮುಂದುವರಿಸಿದ್ದಕ್ಕೆ ಧನ್ಯವಾದಗಳು’ ಎಂದು ಜಯಂ ರವಿ ಅವರು ಬರಹ ಪೂರ್ಣಗೊಳಿಸಿದ್ದಾರೆ.
Grateful for your love and understanding.
Jayam Ravi pic.twitter.com/FNRGf6OOo8
— Jayam Ravi (@actor_jayamravi) September 9, 2024
ಹಲವಾರು ಸಿನಿಮಾಗಳಲ್ಲಿ ನಟಿಸಿ ಜಯಂ ರವಿ ಅವರು ಫೇಮಸ್ ಆಗಿದ್ದಾರೆ. ಕಾಲಿವುಡ್ನಲ್ಲಿ ಬ್ಯುಸಿ ನಟನಾಗಿ ಅವರು ಸಕ್ರಿಯರಾಗಿದ್ದಾರೆ. ಆರತಿ ಜೊತೆ ಅವರು 2009ರಲ್ಲಿ ಮದುವೆ ಆಗಿದ್ದರು. ಇಂದು (ಸೆಪ್ಟೆಂಬರ್ 9) ಅವರು ತಮ್ಮ ವಿಚ್ಛೇದನವ ವಿಚಾರವನ್ನು ಬಹಿರಂಗಪಡಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.