
ಧನುಶ್, ಭಾರತದ ಸ್ಟಾರ್ ನಟರಲ್ಲಿ ಒಬ್ಬರು. ದಳಪತಿ ವಿಜಯ್, ಅಜಿತ್ ಇನ್ನಿತರೆ ಕೆಲವು ಸ್ಟಾರ್ ನಟರಂತೆ ಮಾಸ್ ಸಿನಿಮಾಗಳ ಹಿಂದೆ ಓಡದೆ ಭಿನ್ನ ರೀತಿಯ ಸಿನಿಮಾಗಳನ್ನು, ಅದರಲ್ಲೂ ದಮನಿತರಿಗೆ ದನಿಯಾಗುವಂಥಹಾ ಸಿನಿಮಾಗಳಲ್ಲೇ ಹೆಚ್ಚಾಗಿ ನಟಿಸುತ್ತಾರೆ. ಸ್ಟಾರ್ ನಟರು ಫೈಟ್, ಡ್ಯಾನ್ಸು, ಐಟಂ ಸಾಂಗು ಇರುವ ಸಿನಿಮಾಗಳನ್ನೇ ಆಯ್ಕೆ ಮಾಡುತ್ತಿದ್ದರೆ ಧನುಶ್ ಮಾತ್ರ ಒಂದಕ್ಕಿಂತಲೂ ಒಂದು ಭಿನ್ನವಾದ ಪಾತ್ರ ಮತ್ತು ಕತೆಯುಳ್ಳ ಸಿನಿಮಾಗಳನ್ನು ಆಯ್ಕೆ ಮಾಡಿ ನಟಿಸುತ್ತಾ ಭೇಷ್ ಎನಿಸಿಕೊಳ್ಳುತ್ತಿದ್ದಾರೆ.
ಇದೀಗ ಧನುಶ್ ನಟನೆಯ ‘ಕುಬೇರ’ ಸಿನಿಮಾ ಬಿಡುಗಡೆ ಆಗಿದೆ. ಸಿನಿಮಾನಲ್ಲಿ ಧನುಶ್, ಭಿಕ್ಷುಕನ ಪಾತ್ರದಲ್ಲಿ ನಟಿಸಿದ್ದಾರೆ. ಕೋಟ್ಯಂತರ ಅಭಿಮಾನಿಗಳನ್ನು ಹೊಂದಿರುವ, ಸೂಪರ್ ಸ್ಟಾರ್ ನಟನೊಬ್ಬ ಭಿಕ್ಷುಕನ ಪಾತ್ರದಲ್ಲಿ ನಟಿಸಲು ಒಪ್ಪಿಕೊಳ್ಳುವುದೇ ಊಹಿಸಲು ಕಷ್ಟ. ಅಂಥಹದ್ದರಲ್ಲಿ ಧನುಶ್, ಭಿಕ್ಷುಕನ ಪಾತ್ರದಲ್ಲಿ ನಟಿಸಿರುವುದು ಮಾತ್ರವಲ್ಲ, ಸೆಟ್ಗಳಲಲ್ಲಿ ಅಲ್ಲದೆ, ನಿಜವಾಗಿಯೂ ರಸ್ತೆ ಬದಿಯ ಕೊಳಕು ಪ್ರದೇಶಗಳಲ್ಲಿ ಕುಳಿತು ನಟನೆ ಮಾಡಿದ್ದಾರೆ.
ಇಂದು ‘ಕುಬೇರ’ ಸಿನಿಮಾ ನೋಡಿದ ಪ್ರತಿಯೊಬ್ಬರೂ ಸಹ ಧನುಶ್ ನಟನೆಯನ್ನು ಮನಸಾರೆ ಕೊಂಡಾಡುತ್ತಿದ್ದಾರೆ. ಧನುಶ್ಗೆ ಮತ್ತೊಂದು ರಾಷ್ಟ್ರಪ್ರಶಸ್ತಿ ಕಟ್ಟಿಟ್ಟ ಬುತ್ತಿ ಎನ್ನುತ್ತಿದ್ದಾರೆ. ಧನುಶ್ ಹೊರತಾಗಿ ಇನ್ಯಾವ ಸ್ಟಾರ್ ನಟರೂ ಸಹ ಇಂಥಹದ್ದೊಂದು ಪಾತ್ರವನ್ನು ಒಪ್ಪಿಕೊಳ್ಳುತ್ತಿರಲಿಲ್ಲ ಎಂಬುದು ನಿಜ, ಆದರೆ ಧನುಶ್ ಸಹ ಭಿಕ್ಷುಕನ ವೇಷ ಧರಿಸಲು ಭಾರಿ ದುಬಾರಿ ಹಣವನ್ನೇ ಪಡೆದುಕೊಂಡಿದ್ದಾರೆ. ‘ಕುಬೇರ’ ಸಿನಿಮಾನಲ್ಲಿ ನಟಿಸಲು ಧನುಶ್ಗೆ 30 ಕೋಟಿ ರೂಪಾಯಿ ಸಂಭಾವನೆ ನೀಡಲಾಗಿದೆಯಂತೆ.
ಇದನ್ನೂ ಓದಿ:‘ಕುಬೇರ’ ಪ್ರಚಾರ: ರಶ್ಮಿಕಾ ಮಂದಣ್ಣ ಕಾಲೆಳೆದ ನಟ ಧನುಶ್
ಧನುಶ್ ಮಾತ್ರವೇ ಅಲ್ಲದೆ ಈ ಸಿನಿಮಾನಲ್ಲಿ ನಟಿಸಿರುವ ಅಕ್ಕಿನೇನಿ ನಾಗಾರ್ಜುನ ಹಾಗೂ ನಟಿ ರಶ್ಮಿಕಾ ಮಂದಣ್ಣ ಅವರುಗಳಿಗೂ ಸಹ ಭಾರಿ ದೊಡ್ಡ ಸಂಭಾವನೆಯನ್ನೇ ನಿರ್ಮಾಪಕರು ನೀಡಿದ್ದಾರೆ. ಧನುಶ್ ಅವರಷ್ಟೆ ಪ್ರಮುಖವಾದ ಪಾತ್ರ ನಿರ್ವಹಿಸಿರುವ ನಾಗಾರ್ಜುನ ಅವರಿಗೆ 14 ಕೋಟಿ ರೂಪಾಯಿ ಸಂಭಾವನೆಯನ್ನು ಈ ಸಿನಿಮಾಕ್ಕಾಗಿ ನೀಡಲಾಗಿದೆಯಂತೆ. ಇನ್ನು ನಾಯಕಿ ರಶ್ಮಿಕಾ ಮಂದಣ್ಣ ಅವರಿಗೆ ನಾಲ್ಕು ಕೋಟಿ ರೂಪಾಯಿ ಹಣವನ್ನು ನೀಡಲಾಗಿದೆ.
ಸಿನಿಮಾದ ಒಟ್ಟು ಬಜೆಟ್ 120 ಕೋಟಿ ರೂಪಾಯಿಗಳಾಗಿದ್ದು, ಸಿನಿಮಾದ ಒಟ್ಟು ಬಜೆಟ್ನ 30% ಹಣವನ್ನು ಧನುಶ್ ಒಬ್ಬರಿಗೇ ನೀಡಲಾಗಿದೆ. ನಿರ್ದೇಶಕ ಶೇಖರ್ ಕಮ್ಮುಲ ಅವರಿಗೆ ನಾಲ್ಕು ಕೋಟಿ ಸಂಭಾವನೆ ನೀಡಲಾಗಿದೆ ಎನ್ನಲಾಗುತ್ತಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ