‘ಸಂಜು ವೆಡ್ಸ್ ಗೀತಾ 2’ ತಂಡದ ಬಣ್ಣ ಬಯಲು ಮಾಡಿದ ರಚಿತಾ ರಾಮ್; ಆರೋಪಗಳಿಗೆ ತಿರುಗೇಟು
ರಚಿತಾ ರಾಮ್ ಅವರು ಪ್ರಚಾರಕ್ಕೆ ಬಂದಿಲ್ಲ ಎಂದು ‘ಸಂಜು ವೆಡ್ಸ್ ಗೀತಾ 2’ ಸಿನಿಮಾ ತಂಡದವರು ಕಿಡಿಕಾರಿದ್ದರು. ಆ ಬಗ್ಗೆ ರಚಿತಾ ಈಗ ಮೌನ ಮುರಿದಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಮೂಲಕ ಅವರು ಅನೇಕ ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ. ‘ಸಂಜು ವೆಡ್ಸ್ ಗೀತಾ 2’ ತಂಡದ ಬಣ್ಣ ಬಯಲು ಮಾಡಿದ್ದಾರೆ.

ನಟಿ ರಚಿತಾ ರಾಮ್ (Rachita Ram) ಅವರ ಮೇಲೆ ‘ಸಂಜು ವೆಡ್ಸ್ ಗೀತಾ 2’ ಮತ್ತು ‘ಉಪ್ಪಿ ರುಪ್ಪಿ’ ತಂಡದವರು ಆರೋಪ ಮಾಡಿದ್ದರು. ಅದಕ್ಕೆ ಈಗ ರಚಿತಾ ಅವರು ಸ್ಪಷ್ಟನೆ ನೀಡಿದ್ದಾರೆ. ‘ಈಗ ಒಂದು ವಾರದಿಂದ ನನ್ನ ಬಗ್ಗೆ ಕೇಳಿಬಂದ ಎರಡು ಆರೋಪಗಳ ಬಗ್ಗೆ ನಾನು ಈಗ ಮಾತನಾಡುತ್ತೇನೆ. ಮೊದಲು ‘ಸಂಜು ವೆಡ್ಸ್ ಗೀತಾ 2’ (Sanju Weds Geetha 2) ಸಿನಿಮಾದಿಂದ ನಾನು ಶುರು ಮಾಡುತ್ತೇನೆ. ಆ ಸಿನಿಮಾದ ನಿರ್ದೇಶಕರು, ನಿರ್ಮಾಪಕರು ಹಾಗೂ ಹೀರೋ ಇತ್ತೀಚೆಗೆ ಕೆಲವು ಸುದ್ದಿಗೋಷ್ಠಿಯಲ್ಲಿ, ಮಾಧ್ಯಮಗಳ ಸಂದರ್ಶನದಲ್ಲಿ ಒಂದಷ್ಟು ವಿಷಯಗಳನ್ನು ನನ್ನ ಬಗ್ಗೆ ಮಾತನಾಡಿದ್ದಾರೆ. ಅವರು ಬಳಸಿದ ಪದಗಳಿಂದ, ಅವರು ನೀಡಿದ ಹೇಳಿಕೆಗಳಿಂದ ನನಗೆ ತುಂಬ ನೋವಾಗಿದೆ’ ಎಂದು ರಚಿತಾ ರಾಮ್ ಹೇಳಿದ್ದಾರೆ.
‘ಅವರು ಹೇಳಿರುವ ಮಾತುಗಳಿಂದ ನನಗೆ ನಿರಾಸೆ ಆಗಿದೆ. ಅದನ್ನು ನಾನು ಸ್ವೀಕರಿಸಲು ಆಗಲ್ಲ. ನಾನು ನಿಮಗೆ (ಜನರಿಗೆ) ಒಂದು ಪ್ರಶ್ನೆ ಕೇಳುತ್ತೇನೆ. ಇದೇ ತಂಡದ ಜೊತೆ ನಾನು ಒಂದು ಮುಕ್ಕಾಲು ವರ್ಷ ಸಿನಿಮಾ ಮಾಡಿರುತ್ತೇನೆ. ಜನವರಿ 17ರಂದು ಈ ಸಿನಿಮಾ ಮೊದಲ ಬಾರಿ ಬಿಡುಗಡೆ ಆಯಿತು. ಹಲವು ಪ್ರೆಸ್ ಮೀಟ್ ಮತ್ತು ಮಾಧ್ಯಮಗಳ ಸಂದರ್ಶನ ಕೂಡ ನಡೆದಿತ್ತು. ಆ ಎಲ್ಲ ವೇದಿಕೆಗಳಲ್ಲಿ ನನ್ನ ಬಗ್ಗೆ ತುಂಬ ಒಳ್ಳೆಯ ಮಾತಾಡುತ್ತಾರೆ. ನನ್ನ ಬದ್ಧತೆ ಮತ್ತು ನಟನೆಗೆ ಮೆಚ್ಚುಗೆ ಸೂಚಿಸುತ್ತಾರೆ. ಸಿನಿಮಾದ ಪ್ರಚಾರದಲ್ಲಿ ತಂಡದ ಜೊತೆ ನಿಂತಿದ್ದಕ್ಕೆ ಧನ್ಯವಾದ ಹೇಳುತ್ತಾರೆ. ಆದರೆ ಅದೇ ನನ್ನ ತಂಡ ಇಂದು ನನ್ನ ಬಗ್ಗೆ ತುಂಬ ಕೆಟ್ಟದಾಗಿ ಮಾತನಾಡುತ್ತಿದೆ’ ಎಂದಿದ್ದಾರೆ ರಚಿತಾ.
‘ನನಗೆ ಇಲ್ಲಿ ಒಂದು ಗೊಂದಲ ಇದೆ. ನನ್ನ ಉಪಸ್ಥಿತಿಯಲ್ಲಿ ಇದೇ ಮಾಧ್ಯಮದವರ ಮುಂದೆ ಈ ಮಾತನ್ನು ಅವತ್ತೇ ಆಡಬೇಕಿತ್ತು. ಅಂದು ಯಾಕೆ ಆಡಲಿಲ್ಲ. ಅಂದು ಯಾಕೆ ಹೊಗಳಿದರು? ಈಗ ಯಾಕೆ ಈ ರೀತಿ ಮಾತನಾಡುತ್ತಿದ್ದಾರೆ? ಸುಳ್ಳು, ನಾಟಕ ಅಂತ ನನಗೆ ಯಾಕೆ ಹೇಳ್ತಾರೆ? ನಿಜಕ್ಕೂ ಸುಳ್ಳು ಹೇಳುತ್ತಾ ಇರುವವರು ಯಾರು’ ಎಂದು ರಚಿತಾ ರಾಮ್ ಪ್ರಶ್ನಿಸಿದ್ದಾರೆ.
‘ನಾನು ಇಲ್ಲಿ ಇನ್ನೊಂದು ವಿಷಯ ಹಂಚಿಕೊಳ್ಳಲು ಬಯಸುತ್ತೇನೆ. ನನ್ನ ಇನ್ನೊಂದು ಸಿನಿಮಾ ಬಿಡುಗಡೆಗೆ ಸಿದ್ಧವಾಗಿರುತ್ತದೆ. ಆ ಇಡೀ ಚಿತ್ರತಂಡ ಪ್ರಚಾರದಲ್ಲಿ ತೊಡಗಿಕೊಂಡಿರುತ್ತದೆ. ನಿರ್ದೇಶಕರು, ನಿರ್ಮಾಪಕರು ನನಗೆ ಕರೆ ಮಾಡುತ್ತಿರುತ್ತಾರೆ. ಒಂದು ದಿನ ನಮಗೆ ಪ್ರಚಾರಕ್ಕೆ ಟೈಮ್ ಕೊಡಿ ಎನ್ನುತ್ತಾರೆ. ನಾನು ನಾಗಶೇಖರ್ ಸರ್ಗೆ ಹಾಗೂ ಕಿಟ್ಟಿ ಅವರಿಗೆ ಕೇಳಿಕೊಂಡೆ. ಒಂದು ದಿನ ಕೂಡ ನನಗೆ ಪ್ರಮೋಷನ್ಗೆ ಹೋಗಲು ಬಿಡಲಿಲ್ಲ. ಯಾಕೆ? ಆ ನಿರ್ಮಾಪಕರದ್ದು ದುಡ್ಡು ಅಲ್ಲವಾ? ಅವರು ಲೇಡಿ ಪ್ರೊಡ್ಯೂಸರ್. ಅವರದ್ದು ಸಿನಿಮಾ ಅಲ್ಲವಾ? ಒಂದು ದಿನ ಕೂಡ ನನ್ನನ್ನು ಪ್ರಚಾರಕ್ಕೆ ಕಳಿಸಲಿಲ್ಲ’ ಎಂದು ರಚಿತಾ ಹೇಳಿದ್ದಾರೆ.
View this post on Instagram
‘ನಾನು ಸಂಜು ವೆಡ್ಸ್ ಗೀತಾ 2 ಸಿನಿಮಾಗೆ ಮಾಡಬೇಕಾಗಿದ್ದನ್ನು ಸಂಪೂರ್ಣವಾಗಿ ಮಾಡಿದ್ದೇನೆ. ಈ ಬಾರಿ ನನಗೆ ಬೇರೆ ಸಿನಿಮಾದ ಕಮಿಟ್ಮೆಂಟ್ ಇದೆ. ಸಂಜು ವೆಡ್ಸ್ ಗೀತಾ 2 ರೀ-ರಿಲೀಸ್ ಆದ್ದರಿಂದ ಪ್ರಸ್ತುತ ಶೂಟಿಂಗ್ ನಡೆಯುತ್ತಿರುವ ಸಿನಿಮಾಗೆ ಆದ್ಯತೆ ನೀಡಬೇಕಿದೆ. ನೀವು ಹೇಳಿ.. ನಾನು ತಪ್ಪು ಮಾಡಿದ್ದೇನಾ? ನಾನು ತಪ್ಪು ಮಾಡಿದ್ದೇನೆ ಅಂತ ನನಗೆ ಅನಿಸುತ್ತಿಲ್ಲ. ನಾನು ಎಲ್ಲ ಪ್ರಚಾರ ಕಾರ್ಯದಲ್ಲಿ ಇದ್ದೆ. ರೀ-ರಿಲೀಸ್ ಸಮಯದಲ್ಲಿ ನನಗೆ ನನ್ನ ಸಿನಿಮಾದ ಕಮಿಟ್ಮೆಂಟ್ ಇತ್ತು. ಅದಕ್ಕಾಗಿ ನಾನು ಪ್ರತಿ ದಿನ ಸ್ಟೋರಿ ಹಾಕುತ್ತಿದ್ದೇನೆ. ರೀಲ್ಸ್ ಕೂಡ ಮಾಡಿದ್ದೇನೆ. ಕೊನೇ ಸಮಯದಲ್ಲಿ ಅವರ ದಿನಾಂಕ ಬದಲಾವಣೆ ಆಗುತ್ತಾ ಇರುತ್ತದೆ. ಅದಕ್ಕೆ ನಾನು ಹೊಣೆನಾ? ಇದಕ್ಕೆ ನಾನು ಏನು ಹೇಳಬೇಕೋ ಗೊತ್ತಿಲ್ಲ. ಜನರಿಗೆ ಬಿಡುತ್ತೇನೆ. ನೀವೇ ನಿರ್ಧರಿಸಿ’ ಎಂದು ರಚಿತಾ ರಾಮ್ ಹೇಳಿದ್ದಾರೆ.
ಇದನ್ನೂ ಓದಿ: ‘ರಶ್ಮಿಕಾ ಕೂಡ ಪ್ರಚಾರಕ್ಕೆ ಬರ್ತಾರೆ, ಆದರೆ ರಚಿತಾ ಬರಲಿಲ್ಲ’: ನಾಗಶೇಖರ್ ಗರಂ
‘ಉಪ್ಪಿ ರುಪ್ಪಿ’ ಸಿನಿಮಾಗೆ ಅಡ್ವಾನ್ಸ್ ಪಡೆದು ಡೇಟ್ಸ್ ಕೊಟ್ಟಿಲ್ಲ ಎಂಬ ಆರೋಪ ಕೂಡ ರಚಿತಾ ರಾಮ್ ಮೇಲಿದೆ. ‘ಈ ವಿಷಯದ ಬಗ್ಗೆ ನಾನು ಮಾತನಾಡುವಂತಿಲ್ಲ. ಇದನ್ನು ಸಾರಾ ಗೋವಿಂದು ನಿಭಾಯಿಸುತ್ತಿದ್ದಾರೆ. ಈ ಕುರಿತು ಮಾತನಾಡುವಂತಿಲ್ಲ ಅಂತ ಅವರು ಹೇಳಿದ್ದಾರೆ. ಅವರಿಗೆ ನಾನು ಗೌರವ ಕೊಟ್ಟು ಈ ಬಗ್ಗೆ ಹೆಚ್ಚಾಗಿ ಮಾತನಾಡಲು ಇಷ್ಟಪಡಲ್ಲ’ ಎಂದಿದ್ದಾರೆ ರಚಿತಾ ರಾಮ್.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.