
ಧನುಶ್ (Dhanush), ರಶ್ಮಿಕಾ ಮಂದಣ್ಣ (Rashmika Mandanna) ಮತ್ತು ನಟ ನಾಗಾರ್ಜುನ ನಟನೆಯ ‘ಕುಬೇರ’ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ತೆಲುಗು ಪ್ಯಾನ್ ಇಂಡಿಯಾ ಸಿನಿಮಾ ಇದಾಗಿದ್ದು, ಸಿನಿಮಾದ ಟ್ರೈಲರ್ ಈಗಾಗಲೇ ಬಹುವಾಗಿ ಗಮನ ಸೆಳೆದಿದೆ. ಸಿನಿಮಾ ಜೂನ್ 20 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ. ಸಿನಿಮಾದ ಸಿಬಿಎಫ್ಸಿ ಪ್ರಮಾಣ ಪತ್ರ ಪ್ರಕ್ರಿಯೆಯೂ ಮುಗಿದಿದೆ. ಸಿನಿಮಾ ಬಿಡುಗಡೆ ಆಗಲು ಇನ್ನೊಂದು ವಾರವಷ್ಟೆ ಉಳಿದಿರುವಾಗ ಜನಪರವಾದ ನಿರ್ಧಾರವೊಂದನ್ನು ‘ಕುಬೇರ’ ಚಿತ್ರತಂಡ ಮಾಡಿದೆ.
ತೆಲುಗಿನ ಯಾವುದೇ ದೊಡ್ಡ ಸಿನಿಮಾ ಅಥವಾ ಸ್ಟಾರ್ ನಟ, ನಟಿಯರು ನಟಿಸಿರುವ ಸಿನಿಮಾ ಬಿಡುಗಡೆ ಆಗಲಿ, ಸರ್ಕಾರಗಳ ಬಳಿ ಹೋಗಿ ಮನವಿ ಮಾಡಿ ಸಿನಿಮಾ ಟಿಕೆಟ್ ದರಗಳನ್ನು ಏರಿಕೆ ಮಾಡಿಸಿಕೊಳ್ಳುತ್ತಿದ್ದಾರೆ. ಪ್ರತಿ ಒಂದು ಅಥವಾ ಎರಡು ವಾರಕ್ಕೊಂದು ಸ್ಟಾರ್ ನಟರ ಸಿನಿಮಾಗಳು ತೆಲುಗಿನಲ್ಲಿ ಬಿಡುಗಡೆ ಆಗುತ್ತದೆ. ಪ್ರತಿ ಸಿನಿಮಾಕ್ಕೂ ಟಿಕೆಟ್ ದರ ಹೆಚ್ಚಳಕ್ಕೆ ಮನವಿ ಹಾಕಿಕೊಂಡು ದುಪ್ಪಟ್ಟು ಬೆಲೆಗೆ ಟಿಕೆಟ್ ಮಾರಾಟ ಮಾಡಿಕೊಳ್ಳಲಾಗುತ್ತಿದೆ.
ಹೀಗೆ ಟಿಕೆಟ್ ದರ ಹೆಚ್ಚಳ ಮಾಡುತ್ತಿರುವ ಬಗ್ಗೆ ಈಗಾಗಲೇ ಪ್ರೇಕ್ಷಕರಲ್ಲಿ ಹಾಗೂ ಸ್ವತಃ ಸರ್ಕಾರಕ್ಕೂ ಬೇಸರ ತರಿಸಿದೆ. ಆದರೆ ‘ಕುಬೇರ’ ಸಿನಿಮಾ ತಂಡ ಈ ಹಾದಿ ಹಿಡಿದಿಲ್ಲ. ಅವಕಾಶ ಇದ್ದರೂ ಸಹ ಅವರು ಸಿನಿಮಾದ ಟಿಕೆಟ್ ದರ ಹೆಚ್ಚಳ ಮಾಡುವ ಬಗ್ಗೆ ಸರ್ಕಾರಕ್ಕೆ ಮನವಿ ಸಲ್ಲಿಸಿಲ್ಲ. ಬದಲಿಗೆ ಉದ್ದೇಶಪೂರ್ವಕವಾಗಿ ಕಡಿಮೆ ಟಿಕೆಟ್ ಬೆಲೆಗೆ ತಮ್ಮ ಸಿನಿಮಾವನ್ನು ಪ್ರದರ್ಶಿಸಲು ಮುಂದಾಗಿದ್ದಾರೆ. ಈ ಬಗ್ಗೆ ತೀವ್ರ ಮೆಚ್ಚುಗೆ ವ್ಯಕ್ತವಾಗಿದೆ.
ಇದನ್ನೂ ಓದಿ:‘ಕುಬೇರ’ ಪ್ರಚಾರ: ರಶ್ಮಿಕಾ ಮಂದಣ್ಣ ಕಾಲೆಳೆದ ನಟ ಧನುಶ್
‘ಕುಬೇರ’ ಸಿನಿಮಾದ ಕತೆಯೇ ಶ್ರೀಮಂತ ಮತ್ತು ಬಡವರ ನಡುವಿನ ವ್ಯತ್ಯಾಸದ ಕುರಿತಾಗಿದೆ. ಹೇಗೆ ಶ್ರೀಮಂತರು ಸರ್ಕಾರಗಳನ್ನು ಇತರೆ ಟೂಲ್ಗಳನ್ನು ಬಳಸಿ ಹಣವಂತರಾಗುತ್ತಿದ್ದಾರೆ ಎಂಬುದನ್ನು ಸಿನಿಮಾ ತೋರಿಸುತ್ತದೆ. ಹೀಗಿರುವಾಗ ತಾವು ಸಹ ಸರ್ಕಾರವನ್ನು ಬಳಸಿಕೊಂಡು ಹೆಚ್ಚಿನ ಬೆಲೆಗೆ ಟಿಕೆಟ್ ಮಾರುವುದು ನೈತಿಕ ಅಲ್ಲ ಎಂದೆನಿಸಿ ಸಿನಿಮಾ ಟಿಕೆಟ್ ಬೆಲೆ ಹೆಚ್ಚಳಕ್ಕೆ ಮನವಿಯನ್ನು ಸಲ್ಲಿಸದಿರಲು ಚಿತ್ರತಂಡ ನಿರ್ಧಾರ ಮಾಡಿದೆ.
‘ಕುಬೇರ’ ಸಿನಿಮಾವನ್ನು ತೆಲುಗಿನ ಖ್ಯಾತ ನಿರ್ದೇಶಕ ಶೇಖರ್ ಕಮ್ಮುಲ ನಿರ್ದೇಶನ ಮಾಡಿದ್ದಾರೆ. ಈ ಹಿಂದೆ ಇವರು ‘ಹ್ಯಾಪಿಡೇಸ್’, ‘ಲೀಡರ್’, ‘ಗೋಧಾವರಿ’, ‘ಆನಂದ್’ ಇನ್ನೂ ಕೆಲವು ಕಲ್ಟ್ ಕ್ಲಾಸಿಕ್ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:49 pm, Sun, 15 June 25