ಲಂಬಾಣಿ ಭಾಷೆಯಲ್ಲಿ ಬರಲಿದೆ ‘ಗೋರ್​ ಗಡ್’ ಸಿನಿಮಾ; ಟೀಸರ್​ ರಿಲೀಸ್ ಮಾಡಿದ ಚಿತ್ರತಂಡ

|

Updated on: Jan 07, 2025 | 7:24 PM

ಲಂಬಾಣಿ ಸಮುದಾಯದ ಕಹಾನಿ ಇರುವ ‘ಗೋರ್​ ಗಡ್’ ಸಿನಿಮಾ ಲಂಬಾಣಿ ಭಾಷೆಯ ಜೊತೆಗೆ ಕನ್ನಡ, ತೆಲುಗು, ತಮಿಳು, ಮರಾಠಿ ಮುಂತಾದ ಭಾಷೆಗಳಲ್ಲೂ ಮೂಡಿಬರಲಿದೆ. ಧನುಷ್ ನಾಯ್ಡು, ತನು, ಗೀತಾ ಮಿಲನ್, ಭವ್ಯಾ ಪ್ರವೀಣ್, ಸೂಪರ್ ಕಮಲ್, ವಿಜಯ್‌ ಕುಮಾರ್, ನಾರಾಯಣ್ ಮುಂತಾದವರು ಅಭಿನಯಿಸಿದ್ದಾರೆ. ಇತ್ತೀಚೆಗೆ ಟೀಸರ್​ ರಿಲೀಸ್ ಆಗಿದೆ.

ಲಂಬಾಣಿ ಭಾಷೆಯಲ್ಲಿ ಬರಲಿದೆ ‘ಗೋರ್​ ಗಡ್’ ಸಿನಿಮಾ; ಟೀಸರ್​ ರಿಲೀಸ್ ಮಾಡಿದ ಚಿತ್ರತಂಡ
Goregad Movie Team
Follow us on

ಮುಖ್ಯವಾಹಿನಿಯ ಸಿನಿಮಾಗಳ ಜೊತೆಯಲ್ಲಿ ಬೇರೆ ಬೇರೆ ಸಮುದಾಯದ ಭಾಷೆಗಳ ಸಿನಿಮಾಗಳು ಕೂಡ ಕೆಲವೊಮ್ಮೆ ಗಮನ ಸೆಳೆಯುತ್ತವೆ. ಈಗ ಲಂಬಾಣಿ ಭಾಷೆಯಲ್ಲಿ ಒಂದು ಸಿನಿಮಾ ಸಿದ್ಧವಾಗುತ್ತಿದೆ. ‘ಗೋರ್​ ಗಡ್​’ ಎಂಬ ಶೀರ್ಷಿಕೆ ಇರುವ ಈ ಸಿನಿಮಾದ ಶೂಟಿಂಗ್ ನಡೆಯುತ್ತಿದೆ. ಜೊತೆಗೆ ಟೀಸರ್​ ಬಿಡುಗಡೆ ಮೂಲಕ ಈ ಚಿತ್ರತಂಡದವರು ಸಿನಿಮಾದ ಬಗ್ಗೆ ಮಾಹಿತಿಯನ್ನು ನೀಡಿದ್ದಾರೆ. ಇತ್ತೀಚೆಗೆ ನಡೆದ ಟೀಸರ್​ ಬಿಡುಗಡೆ ನಂತರ ಚಿತ್ರತಂಡದವರು ಮಾತನಾಡಿದರು. ಲಂಬಾಣಿ ಸಮುದಾಯಕ್ಕೆ ಸಂಬಂಧಿಸಿದ ಕಥೆ ಈ ಚಿತ್ರದಲ್ಲಿ ಇರಲಿದೆ.

ದಾವಣಗೆರೆ ಮೂಲದ ಶಶಿಕುಮಾರ್ ಜೆ.ಕೆ. ಅವರು ‘ಗೋರ್​ ಗಡ್​’ ಸಿನಿಮಾಕ್ಕೆ ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ. ನಿರ್ದೇಶನ ಕೂಡ ಅವರೇ ಮಾಡುತ್ತಿದ್ದಾರೆ. ಇದು ಅವರ 4ನೇ ಸಿನಿಮಾ. ಹೀರೋ ಆಗಿ ಡಿಎಸ್‌ಕೆ ಧನುಷ್ ನಾಯ್ಡು ನಟಿಸುತ್ತಿದ್ದಾರೆ. ‘ಡಿಎಸ್‌ಕೆ ಗ್ರೂಪ್ ಆರಂಭಿಸಿ ಉದ್ಯಮದಲ್ಲಿ ಯಶಸ್ಸು ಕಂಡು, ಸಮಾಜ ಸೇವೆಯಲ್ಲಿ ನಿರತನಾಗಿದ್ದೇನೆ. ಏನಾದರೂ ಮಾಡಬೇಕೆಂಬ ಬಯಕೆಯಿಂದ ಡಿಎಸ್‌ಕೆ ಪ್ರೊಡಕ್ಷನ್ ಮೂಲಕ ಸಿನಿಮಾ ನಿರ್ಮಾಣ ಮಾಡುವ ಜೊತೆಗೆ ನಾಯಕನಾಗಿ ಕೂಡ ನಟಿಸುತ್ತಿದ್ದೇನೆ’ ಎಂದು ಧನುಷ್ ಹೇಳಿದರು.

ನಿರ್ದೇಶಕ ಶಶಿಕುಮಾರ್ ಜೆ.ಕೆ. ಅವರು ಮಾತನಾಡಿ, ‘ಗೋರ್ ಅಂದರೆ ಸಮುದಾಯ. ಅವರು ಸತ್ಯ, ನ್ಯಾಯ, ನೀತಿಗೆ ತಲೆ ಬಾಗುತ್ತಾರೆ. ಗಡ್ ಎಂಬುದು ಸಾಮ್ರಾಜ್ಯ’ ಎಂದು ಶೀರ್ಷಿಕೆ ಬಗ್ಗೆ ವಿವರಣೆ ನೀಡಿದರು. ‘ಬಂಜಾರ ಜನಾಂಗದ ಆಚರಣೆ, ಆಚಾರ-ವಿಚಾರ, ಉಡುಗೆ-ತೊಡುಗೆ, ಪೂಜಿಸುವ ವಿಧಾನ, ಎಲ್ಲಿಯೂ ಸಿಗದಂತಹ ಆಭರಣವನ್ನು ತೊಡುತ್ತಾರೆ. ಆದರೆ ಆಧುನಿಕತೆಯ ಭರಾಟೆಯಲ್ಲಿ ಇವೆಲ್ಲವೂ ನಶಿಸಿ ಹೋಗುತ್ತಿವೆ. ವಿದ್ಯಾವಂತರು ನಗರಕ್ಕೆ ಬರುತ್ತಿದ್ದಾರೆ’ ಎಂದು ಅವರು ಹೇಳಿದರು.

ಇದನ್ನೂ ಓದಿ: ಹಳ್ಳಿಯಿಂದ ಬಂದ ಅಪ್ಪ, ಅಮ್ಮನಿಗೆ ಹೆಮ್ಮೆಯಿಂದ ಬಿಗ್ ಬಾಸ್ ಮನೆ ತೋರಿಸಿದ ಹನುಮಂತ

‘ಕರ್ನಾಟಕದಲ್ಲಿ ಲಂಬಾಣಿಗಳ ಜನಸಂಖ್ಯೆ 45 ಲಕ್ಷಕ್ಕೂ ಅಧಿಕ ಇದೆ. ನಮ್ಮ ಸಂಸ್ಕೃತಿ ಉಳಿಯಬೇಕು. ಅವನತಿಗೆ ಹೋಗುತ್ತಿರುವ ಜನಾಂಗವನ್ನು ಹೇಗೆ ಮುನ್ನೆಲೆಗೆ ತರಬಹುದು ಎಂಬ ಅಂಶವನ್ನು ಈ ಸಿನಿಮಾದಲ್ಲಿ ತೋರಿಸಲಾಗುತ್ತಿದೆ. ದಾವಣಗೆರೆ, ಹೂವಿನ ಹಡಗಲಿ, ಚಿತ್ರದುರ್ಗ, ಹೊಸೂರು, ಹೊಸದುರ್ಗ ಮುಂತಾದ ಕಡೆಗಳಲ್ಲಿ ಚಿತ್ರೀಕರಣ ಮಾಡಲಾಗುವುದು’ ಎಂದು ನಿರ್ದೇಶಕರು ಮಾಹಿತಿ ಹಂಚಿಕೊಂಡರು. ಕುಬೇರ ನಾಯಕ್ ಎಲ್ ಅವರು ಸಂಗೀತ ನೀಡುತ್ತಿದ್ದಾರೆ. ಧನ್‌ಪಾಲ್ ಛಾಯಾಗ್ರಹಣ ಮಾಡುತ್ತಿದ್ದಾರೆ. ರವಿ ರಾಥೋಡ್ ಸಿಕೆ ಅವರು ಸಂಕಲನದ ಜವಾಬ್ದಾರಿ ಹೊತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.