ಇತ್ತೀಚೆಗಷ್ಟೇ ಖ್ಯಾತ ಹಿನ್ನೆಲೆ ಗಾಯಕಿ ಲತಾ ಮಂಗೇಶ್ಕರ್ (Lata Mangeshkar) ಇಹಲೋಕ ತ್ಯಜಿಸಿದ್ದರು. ಅವರ ನಿಧನಕ್ಕೆ ಭಾರತೀಯ ಚಿತ್ರರಂಗ, ಅಪಾರ ಅಭಿಮಾನಿಗಳು ಕಂಬನಿ ಮಿಡಿದಿದ್ದರು. ಸುಮಾರು ಮೂರು ತಲೆಮಾರಿನ ನಟರಿಗೆ ಹಿನ್ನೆಲೆ ಗಾಯನ ಮಾಡಿದ ಕೀರ್ತಿ ಲತಾ ಅವರದ್ದು. ಬಾಲಿವುಡ್ನ ಈಗಿನ ಸೂಪರ್ಸ್ಟಾರ್ಗಳು, ಇದಕ್ಕೂ ಹಿಂದಿನ ಸ್ಟಾರ್ಗಳನ್ನು ಅವರು ಸಣ್ಣ ವಯಸ್ಸಿನಿಂದಲೇ ಗಮನಿಸಿದವರು. ಇದೀಗ ತಾರೆಯರು ಬಾಲ್ಯದ ಚಿತ್ರಗಳನ್ನು ಹಂಚಿಕೊಂಡು ಅಗಲಿದ ಹಿರಿಯ ಗಾಯಕಿಗೆ ನಮನ ಸಲ್ಲಿಸುತ್ತಿದ್ದಾರೆ. ಪ್ರಸ್ತುತ ಬಾಲಿವುಡ್ನಲ್ಲಿ ರಣಬೀರ್ ಕಪೂರ್ ಮುಂಚೂಣಿಯಲ್ಲಿರುವ ನಟ. ಅವರ ತಂದೆ ರಿಶಿ ಕಪೂರ್ ಕೂಡ ಖ್ಯಾತ ನಟ. ರಿಶಿ ಕಪೂರ್ ಮಗುವಾಗಿದ್ದಾಗ ಲತಾ ಮಂಗೇಶ್ಕರ್ ಅವರನ್ನು ಎತ್ತಿಕೊಂಡಿದ್ದ ಫೋಟೋವನ್ನು ರಿಶಿ ಪತ್ನಿ ನೀತು ಕಪೂರ್ (Neetu Kapoor) ಹಂಚಿಕೊಂಡಿದ್ದಾರೆ. ‘ಬಹಳ ದುಃಖವಾಗಿದೆ. ರಿಶಿ ಲತಾ ಅವರ ಮಡಿಲಿನಲ್ಲಿ’ ಎಂದು ಬರೆದುಕೊಂಡು ನೀತು ಕಪೂರ್ ಇನ್ಸ್ಟಾಗ್ರಾಂನಲ್ಲಿ ಫೋಟೋ ಹಂಚಿಕೊಂಡಿದ್ದಾರೆ.
ಶರ್ಮಿಳಾ ಟಾಗೋರ್ ಕಾಲೆಳೆದಿದ್ದ ಲತಾ; ಎಲ್ಲಕ್ಕೂ ಕಾರಣ ಕ್ರಿಕೆಟ್ ಮೇಲಿನ ಪ್ರೀತಿ
ಖ್ಯಾತ ನಟಿ ಶರ್ಮಿಳಾ ಟಾಗೋರ್ ಕ್ರಿಕೆಟ್ ತಾರೆ ಮನ್ಸೂರ್ ಅಲಿ ಖಾನ್ ಪಟೌಡಿಯನ್ನು ವಿವಾಹವಾಗಿದ್ದವರು. ಅವರು ಲತಾ ಕ್ರಿಕೆಟ್ ಕುರಿತು ಎಂತಹ ಪ್ರೀತಿ ಇಟ್ಟುಕೊಂಡಿದ್ದರು ಎನ್ನುವುದನ್ನು ವಿವರಿಸಿದ್ದಾರೆ. ಪತಿ ಕ್ರಿಕೆಟ್ ತಾರೆಯಾಗಿದ್ದರೂ ಕೂಡ ಶರ್ಮಿಳಾಗೆ ಕ್ರಿಕೆಟ್ ಕುರಿತು ಅಷ್ಟೆಲ್ಲಾ ತಿಳಿದಿರಲಿಲ್ಲವಂತೆ. ಈ ಕುರಿತು ಫೀವರ್ ಎಫ್ಎಮ್ಗೆ ನೀಡಿದ ಸಂದರ್ಶನದಲ್ಲಿ ಶರ್ಮಿಳಾ ವಿವರಿಸಿದ್ದಾರೆ.
‘ಲತಾ ಅವರಿಗೆ ಕ್ರಿಕೆಟ್ ಎಂದರೆ ಅಚ್ಚುಮೆಚ್ಚು. ಅವರು ಕೇವಲ ವೀಕ್ಷಕರಲ್ಲ. ಆದರೆ ಕ್ರಿಕೆಟ್ ಬಗ್ಗೆ ಪೂರ್ಣ ತಿಳಿದುಕೊಂಡಿದ್ದರು. ಒಮ್ಮೆ ಅವರು, ಕ್ರಿಕೆಟ್ ಕುರಿತ ಪ್ರಶ್ನೆಯನ್ನು ನನ್ನ ಬಳಿ ಕೇಳಿದ್ದರು. ನನಗೆ ಉತ್ತರ ತಿಳಿದಿರಲಿಲ್ಲ. ಆಗ ಲತಾ ಅವರು ನಿನಗೇಕೆ ತಿಳಿದಿಲ್ಲ? ನೀನು ತಿಳಿದುಕೊಳ್ಳಲೇ ಬೇಕು ಎಂದು ಪ್ರತಿಕ್ರಿಯೆ ನೀಡಿದ್ದರು’ ಎಂದಿದ್ದಾರೆ ಶರ್ಮಿಳಾ.
ಅಲ್ಲದೇ ಲತಾ ಅವರ ಪ್ರತಿಕ್ರಿಯೆಗೆ ಶರ್ಮಿಳಾ, ‘ಹೌದು. ನನ್ನ ಪತಿ ಕ್ರಿಕೆಟರ್. ಆದರೆ ನಾನಲ್ಲ ಎಂದು ತಮಾಷೆಯಾಗಿ ಉತ್ತರಿಸಿದ್ದರಂತೆ. ಅಷ್ಟಕ್ಕೇ ಸುಮ್ಮನಾಗದ ಲತಾ ಮಂಗೇಶ್ಕರ್ ನೀನು ಇದನ್ನೆಲ್ಲವನ್ನೂ ತಿಳಿದುಕೊಳ್ಳಬೇಕು ಎಂದು ಶರ್ಮಿಳಾ ಕಾಲೆಳೆದಿದ್ದರಂತೆ. ಇದನ್ನು ಶರ್ಮಿಳಾ ಸ್ಮರಿಸಿಕೊಂಡಿದ್ದಾರೆ. ಶರ್ಮಿಳಾ ನಟಿಸಿದ ಹಲವು ಚಿತ್ರಗಳಿಗೆ ಲತಾ ಹಿನ್ನೆಲೆ ಗಾಯನ ಮಾಡಿದ್ದರು. ಅವುಗಳಲ್ಲಿ ಚುಪ್ಕೆ ಚುಪ್ಕೆ ಚಿತ್ರದ ‘ಅಬ್ ಕೆ ಸಾಜನ್ ಸಾವನ್ ಮೇನ್’, ಆರಾಧನಾ ಚಿತ್ರದ ‘ಚಂದಾ ಹೈ ತು ಮೇರಾ ತೇರಾ ಹೈ ತೂ’ ಮೊದಲಾದ ಖ್ಯಾತ ಗೀತೆಗಳು ಸೇರಿವೆ. ಶರ್ಮಿಳಾ ಟಾಗೋರ್ ಪುತ್ರಿ ಸಬಾ ಪಟೌಡಿ ಇನ್ಸ್ಟಾಗ್ರಾಂನಲ್ಲಿ ಶರ್ಮಿಳಾ ಹಾಗೂ ಮನ್ಸೂರ್ ಅಲಿ ಖಾನ್ ಲತಾ ಜತೆ ಇರುವ ಚಿತ್ರಗಳನ್ನು ಹಂಚಿಕೊಂಡಿದ್ದರು.
ಲತಾ ಮಂಗೇಶ್ಕರ್ ಅವರಿಗೆ ಕ್ರಿಕೆಟ್ ಕುರಿತು ಬಹಳ ಪ್ರೀತಿಯಿತ್ತು. 1983ರಲ್ಲಿ ಭಾರತ ತಂಡ ವೆಸ್ಟ್ ಇಂಡೀಸ್ಗೆ ಪ್ರಯಾಣ ಬೆಳೆಸಲು ಧನ ಸಹಾಯ ಮಾಡುವ ಉದ್ದೇಶದಿಂದ ಸಹೋದರ ಹೃದಯನಾಥ ಮಂಗೇಶ್ಕರ್ ಅವರೊಂದಿಗೆ ಲತಾ ಕಾರ್ಯಕ್ರಮ ಆಯೋಜಿಸಿದ್ದರು. ಅದರಿಂದ ಬಂದ 20 ಲಕ್ಷ ರೂ ಹಣವನ್ನು ಕಪಿಲ್ ದೇವ್ ನೇತೃತ್ವದ ತಂಡಕ್ಕೆ ನೀಡಿದ್ದರು. ಅಲ್ಲಿಂದ ಮುಂದೆ ನಡೆದಿದ್ದು ಇತಿಹಾಸ. ಕಪಿಲ್ ನೇತೃತ್ವದ ತಂಡ ಮೊದಲ ಬಾರಿಗೆ ವಿಶ್ವಕಪ್ ಮುಡಿಗೇರಿಸಿಕೊಂಡಿತ್ತು.
ಇದನ್ನೂ ಓದಿ:
ಲತಾ ಮಂಗೇಶ್ಕರ್ ಬಿಟ್ಟು ಹೋದ ನೂರಾರು ಕೋಟಿ ಆಸ್ತಿ ಸೇರೋದು ಯಾರಿಗೆ? ಇಲ್ಲಿದೆ ಮಾಹಿತಿ
ಆಸ್ಕರ್ ರೇಸ್ನಿಂದ ‘ಜೈ ಭೀಮ್’ ಚಿತ್ರ ಹೊರಬಿದ್ದರೂ ಸೂರ್ಯ ಫ್ಯಾನ್ಸ್ ಖುಷಿ ಕಡಿಮೆ ಆಗಿಲ್ಲ; ಕಾರಣ ಏನು?