ಇತ್ತೀಚಿಗೆ ಸಿನಿಮಾ ಸೆಲೆಬ್ರಿಟಿಗಳಲ್ಲಿ ವಿಚ್ಛೇದನ (divorce) ಪ್ರಕರಣಗಳು ಹೆಚ್ಚಾಗುತ್ತಿವೆ. ನಟ ನಾಗಚೈತನ್ಯ ಮತ್ತು ಸಮಂತಾ, ಮಂಚು ಮನೋಜ್ ಪ್ರಕರಣಗಳು ತಾಜಾ ಉದಾಹರಣೆ ಎಂದೇ ಹೇಳಬಹುದು. ಸದ್ಯ ಅದೇ ರೀತಿಯಾಗಿ ಮತ್ತೋರ್ವ ತೆಲುಗಿನ ಖ್ಯಾತ ನಟ ಶ್ರೀಕಾಂತ್ ಮೇಕಾ, ಊಹಾ ದಾಂಪತ್ಯ ಜೀವನದ ಕುರಿತು ಕೆಲ ಊಹಾಪೋಹಗಳು (rumours) ಹರಿದಾಡುತ್ತಿವೆ. ನಟ ಶ್ರೀಕಾಂತ್ ಮೇಕಾ ಮತ್ತು ಊಹಾ ದಾಂಪತ್ಯ ಜೀವನದಲ್ಲಿ ಬಿರುಕು ಉಂಟಾಗಿದೆ. ತಮ್ಮ ಪತ್ನಿಗೆ ಅವರು ವಿಚ್ಛೇದನ ನೀಡಲಿದ್ದಾರೆ ಎಂದೆಲ್ಲಾ ಇಲ್ಲಸಲ್ಲದ, ಯಾವುದೇ ಆಧಾರವಿಲ್ಲದೇ ಸುಳ್ಳು ಸುದ್ದಿ ಹಬ್ಬಿಸಲಾಗಿತ್ತು. ಈ ವಿಚಾರ ಟಾಲಿವುಡ್ನಲ್ಲಿ ಚರ್ಚೆಗೂ ಗ್ರಾಸವಾಗಿತ್ತು. ಶ್ರೀಕಾಂತ್ ಮೇಕಾ ಅವರ ಫ್ಯಾನ್ಸ್ ಅಂತೂ ಇದು ನಿಜನಾ, ಸುಳ್ಳಾ ಎಂಬ ಗೊಂದಲಕ್ಕೂ ಒಳಗಾಗಿದ್ದರು. ಸದ್ಯ ಈ ಎಲ್ಲಾ ವದಂತಿಗಳಿಗೆ ನಟ ಶ್ರೀಕಾಂತ್ ಮೇಕಾ ತೆರೆ ಎಳೆದಿದ್ದಾರೆ.
ನಟ ಶ್ರೀಕಾಂತ್ ವದಂತಿ ಕುರಿತಾಗಿ ತೆಲುಗಿನ ಖಾಸಗಿ ವಾಹಿನಿಯೊಂದಿಗೆ ಮಾತನಾಡಿದ್ದು, ತಮ್ಮ ಪತ್ನಿ ಊಹಾ ಅವರಿಗೆ ವಿಚ್ಛೇದನ ನೀಡಲು ಮುಂದಾಗಿದ್ದಾರೆ ಎಂಬ ವದಂತಿಯನ್ನು ತಳ್ಳಿಹಾಕಿದ್ದಾರೆ. ‘ತನ್ನ ವೈಯಕ್ತಿಕ ಜೀವನದ ಬಗ್ಗೆ ಇಂತಹ ಸುಳ್ಳು ಸುದ್ದಿಗಳನ್ನು ಹರಡುವವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು. ಇನ್ನು ಈ ರೀತಿಯ ಸುಳ್ಳು ಸುದ್ದಿಗಳನ್ನು ಹರಡಿರುವುದು ಇದೇ ಮೊದಲೇನಲ್ಲ’ ಎಂದು ಶ್ರೀಕಾಂತ್ ಹೇಳಿದ್ದಾರೆ. ‘ಈ ಹಿಂದೆ ನನ್ನ ಸಾವಿನ ಕುರಿತಾಗಿಯೂ ಸುಳ್ಳು ಸುದ್ದಿ ಹಬ್ಬಿಸಿದ್ದರು. ಇದರಿಂದ ಇಡೀ ನನ್ನ ಕುಟುಂಬ ಆತಂಕಗೊಂಡಿತ್ತು’ ಎಂದರು.
‘ಆದರೆ ಈಗ ಆರ್ಥಿಕ ತೊಂದರೆಯಿಂದಾಗಿ ವಿಚ್ಛೇದನ ನೀಡುತ್ತಿದ್ದಾರೆ ಎಂದು ಹಬ್ಬಿಸಿದ್ದಾರೆ. ಇದರಿಂದಾಗಿ ನನ್ನ ಪತ್ನಿ ಆತಂಕಗೊಂಡಿದ್ದು, ಅವಳಿಗೆ ಕಳುಹಿಸಲಾದ ಮೆಸೇಜ್ಗಳನ್ನು ನನಗೆ ತೋರಿಸಿದ್ದಾಳೆ. ಇದನ್ನು ಗಂಭೀರವಾಗಿ ತೆಗೆದುಕೊಳ್ಳಬೇಡ ಎಂದು ಸಮಾಧಾನ ಮಾಡಿದೆ’ ಎಂದು ಶ್ರೀಕಾಂತ್ ಹೇಳಿದರು. ಯಾರು ಇಂತಹ ವದಂತಿಗಳನ್ನು ಹಬ್ಬಿಸುತ್ತಿದ್ದಾರೆ’ ಎಂದು ಪ್ರಶ್ನಿಸಿದರು.
ಶ್ರೀಕಾಂತ್ ಮತ್ತು ಹಾ 1997 ರಲ್ಲಿ ವಿವಾಹವಾದರು. ದಂಪತಿಗೆ ರೋಷನ್, ರೋಹನ್ ಮತ್ತು ಮೇಧಾ ಹೆಸರಿನ ಮೂವರು ಮಕ್ಕಳಿದ್ದಾರೆ. ಶ್ರೀಕಾಂತ್ ಮೂಲತಃ ಕರ್ನಾಟಕದವರು. ಕನ್ನಡದ ಹಲವು ಚಿತ್ರಗಳಲ್ಲಿ ನಟಿಸಿ ಅವರು ಸೈ ಎನಿಸಿಕೊಂಡಿದ್ದಾರೆ. ಸದ್ಯ ಅವರು ತೆಲುಗು ಚಿತ್ರರಂಗದಲ್ಲಿ ನೆಲೆಯೂರಿದ್ದಾರೆ. ತಂದೆಯ ಹಾದಿಯಂತೆಯೇ ಮಗ ರೋಷನ್ ಕಳೆದ ವರ್ಷ ಟಾಲಿವುಡ್ಗೆ ಪಾದಾರ್ಪಣೆ ಮಾಡಿದ್ದಾರೆ. ನಿರ್ದೇಶಕಿ ಗೌರಿ ರೋಣಂಕಿ ಅವರ ‘ಪೆಳ್ಳಿ ಸಂದಡಿ’ ಚಿತ್ರದಲ್ಲಿ ರೋಷನ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದರು.
ಮತ್ತಷ್ಟು ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:24 pm, Tue, 22 November 22