ಟಾಲಿವುಡ್ ಹೀರೋ ನವದೀಪ್ಗೆ (Navdeep) ಜಾರಿ ನಿರ್ದೇಶನಾಲಯ (ಇಡಿ) ನೋಟಿಸ್ ಜಾರಿ ಮಾಡಿದೆ. ಮಾದಾಪುರ ಡ್ರಗ್ಸ್ ಪ್ರಕರಣದಲ್ಲಿ ನವದೀಪ್ ಹೆಸರು ಕೇಳಿ ಬಂದಿದೆ. ಈ ಪ್ರಕರಣದಲ್ಲಿ ಅವರು 37ನೇ ಆರೋಪಿ ಆಗಿದ್ದಾರೆ. ಈ ಪ್ರಕರಣದಲ್ಲಿ ಮಾದಕವಸ್ತು ನಿಗ್ರಹ ದಳ ತನಿಖೆ ನಡೆಸಿತ್ತು. ಡ್ರಗ್ಸ್ ಪ್ರಕರಣ ಆಧರಿಸಿ ನವದೀಪ್ಗೆ ಇಡಿ ನೋಟಿಸ್ ಜಾರಿ ಮಾಡಿದೆ. ಅಕ್ಟೋಬರ್ 10ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ.
ಸೆಪ್ಟೆಂಬರ್ 14ರಂದು ಹೈದರಾಬಾದ್ನ ನಾರ್ಕೋಟಿಕ್ಸ್ ಬ್ಯೂರೋ ಅಧಿಕಾರಿಗಳು ಮಾದಾಪುರ ಪೊಲೀಸರೊಂದಿಗೆ ನಡೆಸಿದ ಕಾರ್ಯಾಚರಣೆಯಲ್ಲಿ ಒಟ್ಟು ಎಂಟು ಮಂದಿಯನ್ನು ಬಂಧಿಸಲಾಗಿತ್ತು. ಈ ಪೈಕಿ ಬೆಂಗಳೂರಿನ ಮೂವರು, ನೈಜೀರಿಯನ್ ಪ್ರಜೆಗಳು, ನಿರ್ದೇಶಕರು ಇದ್ದರು. ಇವರಿಂದ ಅಪಾರ ಪ್ರಮಾಣದ ಡ್ರಗ್ಸ್ ವಶಪಡಿಸಿಕೊಳ್ಳಲಾಗಿತ್ತು.
ತನಗೂ ಈ ಪ್ರಕರಣಕ್ಕೂ ಸಂಬಂಧ ಇಲ್ಲ ಎಂದು ನವದೀಪ್ ಹೇಳಿದ್ದರು. ಆ ಬಳಿಕ ಅವರು ಕೆಲವು ದಿನ ತಲೆಮರಿಸಿಕೊಂಡಿದ್ದರು. ಇದು ಸಾಕಷ್ಟು ಅನುಮಾನ ಹುಟ್ಟುಹಾಕಿತ್ತು. ನವದೀಪ್ ಗೆಳೆಯ ರಾಮಚಂದರ್ ವಿಚಾರಣೆ ಎದರುಸಿದ್ದರು. ಈ ವೇಳೆ ನವದೀಪ್ ಡ್ರಗ್ ಖರೀದಿಸಿದ ವಿಚಾರವನ್ನು ರಾಮಚಂದರ್ ಹೇಳಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಡ್ರಗ್ ಕೇಸ್ನಲ್ಲಿ ತಲೆಮರೆಸಿಕೊಂಡ ತೆಲುಗು ನಟ; ಶೀಘ್ರವೇ ನವದೀಪ್ ಅರೆಸ್ಟ್?
ಹೀರೋ ನವದೀಪ್ ಅವರನ್ನು ಪೊಲೀಸರು ಇತ್ತೀಚೆಗೆ ವಿಚಾರಣೆಗೆ ಒಳಪಡಿಸಿದ್ದರು. ಅವರ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈಗ ಇಡಿ ಕಡೆಯಿಂದ ನವದೀಪ್ ವಿಚಾರಣೆಗೆ ಹಾಜರಾಗಬೇಕಿದೆ.
ಡ್ರಗ್ಸ್ ಪ್ರಕರಣದಲ್ಲಿ ತಮ್ಮ ಹೆಸರು ಕೇಳಿ ಬರುತ್ತಿದ್ದಂತೆ ನವದೀಪ್ ಹೈಕೋರ್ಟ್ ಮೆಟ್ಟಿಲೇರಿದರು. ನಿರೀಕ್ಷಣಾ ಜಾಮೀನು ಕೋರಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ, ಇದನ್ನು ಕೋರ್ಟ್ ರಿಜೆಕ್ಟ್ ಮಾಡಿತ್ತು. 2004ರಲ್ಲಿ ನವದೀಪ್ ಚಿತ್ರರಂಗಕ್ಕೆ ಕಾಲಿಟ್ಟರು. ಆ ಬಳಿಕ ಹಲವು ತೆಲುಗು ಚಿತ್ರಗಳಲ್ಲಿ ಅವರು ನಟಿಸಿದರು. ಧಾರಾವಾಹಿಗಳಲ್ಲೂ ಅವರು ಬಣ್ಣ ಹಚ್ಚಿದ್ದಾರೆ, ಆದರೆ, ದೊಡ್ಡ ಮಟ್ಟದ ಗೆಲುವು ಸಿಕ್ಕಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:25 pm, Sat, 7 October 23