ಟಾಲಿವುಡ್ ನಟ ಮಹೇಶ್ ಬಾಬು (Mahesh Babu) ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಅದೇ ರೀತಿ ಅವರ ಪತ್ನಿ ಮತ್ತು ಮಕ್ಕಳು ಕೂಡ ಒಂದಿಲ್ಲೊಂದು ಕಾರಣಕ್ಕೆ ಆಗಾಗ ಸುದ್ದಿ ಆಗುತ್ತಾರೆ. ಈಗ ಮಹೇಶ್ ಬಾಬು ಅವರ ಪತ್ನಿ ನಮ್ರತಾ ಶಿರೋಡ್ಕರ್ ಅವರು ಒಂದು ಇಂಟರೆಸ್ಟಿಂಗ್ ವಿಚಾರ ಹಂಚಿಕೊಂಡಿದ್ದಾರೆ. ಅವರ ಪುತ್ರ ಗೌತಮ್ ಘಟ್ಟಮನೇನಿಗೆ ಈಗ 16 ವರ್ಷ ವಯಸ್ಸು. ಅವರು ಶಾಲೆ ಮುಗಿದ ಬಳಿಕ ಕೆಲವು ಆಸ್ಪತ್ರೆಗಳಿಗೆ ಭೇಟಿ ನೀಡುತ್ತಾರೆ. ಹಾಗಂತ ಅವರಿಗೆ ಆರೋಗ್ಯದ ಸಮಸ್ಯೆ ಇದೆ ಅಂತೇನೂ ಅಲ್ಲ. ಗೌತಮ್ ಘಟ್ಟಮನೇನಿ (Gautham Ghattamaneni) ಅವರು ಈ ರೀತಿ ಆಸ್ಪತ್ರೆಗೆ ತೆರಳೋಕೆ ಒಂದು ಪ್ರಮುಖವಾದ ಕಾರಣ ಇದೆ. ಆ ಬಗ್ಗೆ ನಮ್ರತಾ ಶಿರೋಡ್ಕರ್ (Namrata Shirodkar) ಅವರು ವಿವರಿಸಿದ್ದಾರೆ. ತಮ್ಮ ಮಗನ ಈ ಕಾರ್ಯವನ್ನು ಅವರು ಶ್ಲಾಘಿಸಿದ್ದಾರೆ.
ಈಗಾಗಲೇ ತಿಳಿದಿರುವಂತೆ ಮಹೇಶ್ ಬಾಬು ಅವರು ತಮ್ಮದೇ ಚಾರಿಟೇಬಲ್ ಫೌಂಡೇಶನ್ ಹೊಂದಿದ್ದಾರೆ. ‘ಎಂಬಿ ಫೌಂಡೇಶನ್’ ಎಂಬುದು ಇದರ ಹೆಸರು. ಇದರ ಮೂಲಕ ಅನೇಕರಿಗೆ ನೆರವು ನೀಡಲಾಗುತ್ತಿದೆ. ‘ರೇನ್ಬೋ ಮಕ್ಕಳ ಆಸ್ಪತ್ರೆ’ ಜೊತೆಗೆ ಈ ಫೌಂಡೇಶನ್ ಸಹಯೋಗ ಹೊಂದಿದೆ. ಆ ಕಾರಣಕ್ಕಾಗಿ ಗೌತಮ್ ಘಟ್ಟಮನೇನಿ ಅವರು ಈ ಆಸ್ಪತ್ರೆಗಳಿಗೆ ಭೇಟಿ ನೀಡುತ್ತಾರೆ. ಅಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಕ್ಕಳ ಜೊತೆಗೆ ಅವರು ಮಾತನಾಡುತ್ತಾರೆ. ಆ ಮೂಲಕ ಅವರ ಮುಖದಲ್ಲಿ ನಗು ಅರಳಿಸಲು ಪ್ರಯತ್ನಿಸುತ್ತಾರೆ. ಈ ಬಗ್ಗೆ ನಮ್ರತಾ ಶಿರೋಡ್ಕರ್ ಅವರಿಗೆ ಹೆಮ್ಮೆ ಇದೆ.
‘ಗೌತಮ್ ಕೂಡ ನಮ್ಮ ಫೌಂಡೇಶನ್ನ ಮುಖ್ಯ ಭಾಗ. ಶಾಲೆ ಮುಗಿದ ಬಳಿಕ ಅವನು ಆಸ್ಪತ್ರೆಗೆ ತೆರಳುತ್ತಾನೆ. ಅಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಕ್ಕಳ ಮುಖದಲ್ಲಿ ನಗು ಅರಳಿಸುವ ಸಲುವಾಗಿ ಅವರ ಜೊತೆ ಒಂದಷ್ಟು ಸಮಯ ಕಳೆಯುತ್ತಾನೆ. ಮಕ್ಕಳು ಆದಷ್ಟು ಬೇಗ ಚೇತರಿಸಿಕೊಳ್ಳಲು ಈ ರೀತಿಯಲ್ಲಿ ಸಹಾಯ ಮಾಡುತ್ತಿರುವ ಗೌತಮ್ ಘಟ್ಟಮನೇನಿಗೆ ಧನ್ಯವಾದಗಳು’ ಎಂದು ನಮ್ರತಾ ಶಿರೋಡ್ಕರ್ ಅವರು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಅಭಿಮಾನಿಗಳು ಕಮೆಂಟ್ ಮಾಡುವ ಮೂಲಕ ಗೌತಮ್ಗೆ ಮೆಚ್ಚುಗೆ ಸೂಚಿಸಿದ್ದಾರೆ.
ಇದನ್ನೂ ಓದಿ: ಮಹೇಶ್ ಬಾಬು ಪುತ್ರಿ ಸಿತಾರಾ ಚಿತ್ರರಂಗಕ್ಕೆ ಬರೋದು ಯಾವಾಗ? ಮಗಳ ಪರವಾಗಿ ಉತ್ತರಿಸಿದ ನಮ್ರತಾ
ಮಹೇಶ್ ಬಾಬು ಅವರ ಪುತ್ರಿ ಸಿತಾರಾ ಘಟ್ಟಮನೇನಿ ಕೂಡ ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆಗಿದ್ದಾಳೆ. ಆಕೆಗೆ ದೊಡ್ಡ ಅಭಿಮಾನಿ ಬಳಗ ಇದೆ. ಈಗಾಗಲೇ ಕೆಲವು ಪ್ರತಿಷ್ಠಿತ ಕಂಪನಿಗಳಿಗೆ ಸಿತಾರಾ ಪ್ರಚಾರ ರಾಯಭಾರಿ ಆಗಿದ್ದಾಳೆ. ಆ ಮೂಲಕ ಆಕೆಗೆ ದೊಡ್ಡ ಮೊತ್ತದ ಸಂಭಾವನೆ ಸಿಗುತ್ತಿದೆ. ಸದ್ಯ ಮಹೇಶ್ ಬಾಬು ಅವರು ‘ಗಂಟೂರು ಖಾರಂ’ ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಕಾರಣಾಂತರಗಳಿಂದ ಈ ಸಿನಿಮಾದ ಕೆಲಸಗಳು ವಿಳಂಬ ಆಗುತ್ತಿವೆ. ಆ ಬಗ್ಗೆ ಅಭಿಮಾನಿಗಳಿಗೆ ಕೊಂಚ ಬೇಸರ ಇದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.