ಸೆಟ್ಗಳಲ್ಲಿ ಸಿನಿಮಾ ಚಿತ್ರೀಕರಣ ಮಾಡುವುದು ನಟ-ನಟಿಯರಿಗೆ ಬಹಳ ಸುಲಭದ ಕೆಲಸ, ಎಸಿ, ಮಳೆ, ದೂಳಿನಿಂದ ರಕ್ಷಣೆ ಎಲ್ಲವೂ ಇರುತ್ತದೆ. ಆದರೆ ಔಟ್ಡೋರ್ ಶೂಟಿಂಗ್ ಎಂದರೆ ನಟ-ನಟಿಯರಿಗೆ ಬಹುತೇಕ ನರಕವೇ. ಅದರಲ್ಲೂ ಆಕ್ಷನ್ ದೃಶ್ಯಗಳು ಔಟ್ಡೋರ್ನಲ್ಲಿ ಶೂಟ್ ಆದರೆ ಕತೆ ಮುಗಿಯಿತೆಂದೇ ಲೆಕ್ಕ. ಇಂದಿನ ಬಹುತೇಕ ಬಜೆಟ್ ಸಿನಿಮಾಗಳು ಸೆಟ್ಗಳಲ್ಲಿಯೇ ಚಿತ್ರೀಕರಣಗೊಳ್ಳುತ್ತವೆ. ಆದರೆ ಇಂದಿಗೂ ಹಲವು ನಿರ್ದೇಶಕರು ತಮ್ಮ ಸಿನಿಮಾಗಳನ್ನು ಔಟ್ಡೋರ್ನಲ್ಲಿಯೇ ಚಿತ್ರೀಕರಣ ಮಾಡುತ್ತಾರೆ. ಅದರಲ್ಲಿ ಒಬ್ಬರು ಪಾ ರಂಜಿತ್.
ಪಾ ರಂಜಿತ್ ನಿರ್ದೇಶನ ಮಾಡಿರುವ ‘ತಂಗಾಲನ್’ ಸಿನಿಮಾದ ಚಿತ್ರೀಕರಣ ಕರ್ನಾಟಕದ ಕೋಲಾರದಲ್ಲಿ ನಡೆಯಿತು. ಬಹುದಿನಗಳು ಇದೇ ಭಾಗದಲ್ಲಿ ಸಿನಿಮಾದ ಚಿತ್ರೀಕರಣ ಮಾಡಲಾಯ್ತು. ಇದು ಪೀರಿಯಡ್ ಡ್ರಾಮಾ ಆಗಿದ್ದರಿಂದ ಬಿಸಿಲು, ದೂಳಿನಲ್ಲಿ ನಟ-ನಟಿಯರು ಗಂಟೆಗಟ್ಟಲೆ ಮೇಕಪ್ ಧರಿಸಿ ಕೂತಿರಬೇಕಿತ್ತು. ಈ ಸಿನಿಮಾದಲ್ಲಿ ನಟಿಸಿರುವ ನಟಿ ಮಾಳವಿಕ ಮೋಹನನ್, ಸಿನಿಮಾದ ಚಿತ್ರೀಕರಣ ಮುಗಿಸಿದ ಮೇಲೆ ಐದು ಬೇರೆ ಬೇರೆ ವೈದ್ಯರಿಂದ ಚಿಕಿತ್ಸೆ ಪಡೆದುಕೊಳ್ಳಬೇಕಾಯ್ತಂತೆ. ಚಿತ್ರೀಕರಣದ ಸಮಯದಲ್ಲಿ ತಾವು ಅನುಭವಿಸಿದ ಕಷ್ಟಗಳನ್ನು ಅವರು ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದಾರೆ.
‘ಕೋಲಾರದಲ್ಲಿ ಹಲವು ದಿನಗಳ ಕಷ್ಟದ ಶೂಟ್ ಮುಗಿಸಿದ ಬಳಿಕ ನನ್ನ ಆರೋಗ್ಯ ಹದಗೆಟ್ಟಿತು. ಐದು ವೈದ್ಯರುಗಳ ಬಳಿ ನಾನು ಚಿಕತ್ಸೆ ಪಡೆಯಬೇಕಾಗಿ ಬಂತು. ಚರ್ಮ, ಕಣ್ಣು ತಜ್ಞರನ್ನು ಸಹ ಭೇಟಿ ಮಾಡಿ ಪರೀಕ್ಷೆಗೆ ಒಳಪಟ್ಟೆ’ ಎಂದು ಮಾಳವಿಕಾ ಮೋಹನನ್ ಹೇಳಿಕೊಂಡಿದ್ದಾರೆ. ‘ಕೋಲಾರದ ಬಿಸಿಲಿಗೆ ನಾನು ಬಳಲಿಬಿಟ್ಟಿದ್ದೆ. ಪ್ರತಿ ದಿನ ಐದು ಗಂಟೆ ಕಾಲ ಮೇಕಪ್ಗಾಗಿ ಕುಳಿತುಕೊಳ್ಳುತ್ತಿದ್ದೆ. ಅದಾದ ಬಳಿಕವೂ ಬಹುತೇಕ ನಾನು ಬಿಸಿಲಿನಲ್ಲಿಯೇ ಇರಬೇಕಿತ್ತು. ಅಲ್ಲಿ ವಿಪರೀತ ದೂಳು ಬೇರೆ ಆ ದೂಳಿನಲ್ಲಿಯೇ ಚಿತ್ರೀಕರಣ ಮಾಡಬೇಕಿತ್ತು’ ಎಂದು ನೆನಪು ಮಾಡಿಕೊಂಡಿದ್ದಾರೆ ಮಾಳವಿಕ.
ಇದನ್ನೂ ಓದಿ:ಈ ಪರಭಾಷೆ ನಟ-ನಟಿಯರ ವಿದ್ಯಾರ್ಹತೆ ಏನು? ಪ್ರಭಾಸ್, ವಿಕ್ರಂ ಓದಿರುವುದೆಷ್ಟು?
‘ಒಂದು ದಿನ ಮೇಕಪ್ ಎಲ್ಲ ಧರಿಸಿ ಕುಳಿತಿದ್ದೆ. ಆಗ ಸೆಟ್ನಲ್ಲಿ ಒಂದು ದೊಡ್ಡ ಎಮ್ಮೆ ಕಾಣಿಸಿತು. ಅದನ್ನು ತೋರಿಸಿದ ನಿರ್ದೇಶಕ ರಂಜಿತ್, ಎಮ್ಮೆ ಹೇಗಿದೆ ಎಂದು ಕೇಳಿದರು. ಚೆನ್ನಾಗಿದೆ, ದಷ್ಟಪುಷ್ಟವಾಗಿದೆ ಎಂದೆ. ಹೋಗಿ ಅದರ ಮೇಲೆ ಕುಳಿತುಕೊಳ್ಳಿ ಎಂದರು. ನನಗೆ ಮೊದಲು ನಂಬಲಾಗಲಿಲ್ಲ. ಬಳಿಕ ಮತ್ತೊಮ್ಮೆ ರಂಜಿತ್ ಅದನ್ನೇ ಹೇಳಿದಾಗ ನಾನು ಗಾಬರಿಯಾದೆ. ಇಲ್ಲಿಯವರೆಗೆ ನಾನು ಎಮ್ಮೆಯನ್ನು ಮುಟ್ಟಿರಲೂ ಇಲ್ಲ. ಈಗ ಹೋಗಿ ಎಮ್ಮೆ ಮೇಲೆ ಕುಳಿತುಕೊಳ್ಳುವುದು ಹೇಗೆ ಎಂದು ಆತಂಕ ಪಟ್ಟೆ. ಭಯದಲ್ಲೇ ಆ ಶಾಟ್ ಮುಗಿಸಿದೆ’ ಎಂದಿದ್ದಾರೆ ಮಾಳವಿಕಾ ಮೋಹನನ್.
ಮಾಳವಿಕಾ ಮೋಹನನ್, ‘ತಂಗಾಲನ್’ ಸಿನಿಮಾದಲ್ಲಿ ‘ಆರತಿ’ ಹೆಸರಿನ ವಿಚಿತ್ರ ಹೆಂಗಸಿನ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾದ ಕತೆ ನಡೆಯುವ ಪ್ರದೇಶದಲ್ಲಿ ವಾಸವಿರುವ ಜನಾಂಗವನ್ನು ಕಾಡುವ ದೆವ್ವದ ರೀತಿಯ ಪಾತ್ರವದು. ‘ತಂಗಾಲನ್’ ಸಿನಿಮಾದಲ್ಲಿ ವಿಕ್ರಂ ನಾಯಕರಾಗಿ ನಟಿಸಿದ್ದಾರೆ. ಸಿನಿಮಾವನ್ನು ಪಾ ರಂಜಿತ್ ನಿರ್ದೇಶನ ಮಾಡಿದ್ದಾರೆ. ಸಿನಿಮಾವು ಕೋಲಾರದ ಚಿನ್ನದ ಗಣಿಯ ಕುರಿತ ಕತೆ ಒಳಗೊಂಡಿದೆ. ಮೊದಲ ಬಾರಿಗೆ ಬ್ರಿಟೀಷರು ಆ ಭಾಗದಿಂದ ಚಿನ್ನ ಹೇಗೆ ತೆಗೆದರು, ಅದಕ್ಕಾಗಿ ಸ್ಥಳೀಯರ ಮೇಲೆ ಎಂಥಹಾ ದೌರ್ಜನ್ಯ ಮಾಡಿದರು ಎಂಬುದು ಸಿನಿಮಾದ ಕತೆ. ಸಿನಿಮಾ ಆಗಸ್ಟ್ 15 ರಂದು ತೆರೆಗೆ ಬರಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ