
ಮಲಯಾಳಂ ಚಿತ್ರರಂಗದ ಖ್ಯಾತ ನಟ ಟೊವಿನೋ ಥಾಮಸ್ (Tovino Thomas) ಅವರ ಹೆಸರನ್ನು ಬಳಸಿಕೊಂಡು ಸೈಬರ್ ವಂಚಕನೊಬ್ಬ ಜನರ ಬಳಿ ಇಮೇಲ್ ಮೂಲಕ ಸಂವಹನ ನಡೆಸುತ್ತಿದ್ದಾನೆ ಎಂಬುದು ತಿಳಿದುಬಂದಿದೆ. ಈ ಬಗ್ಗೆ ಟೊವಿನೋ ಥಾಮಸ್ ಅವರು ತಮ್ಮ ಅಭಿಮಾನಿಗಳಿಗೆ ಹಾಗೂ ಸಾರ್ವಜನಿಕರಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ. ತಮ್ಮ ಹೆಸರಿನಲ್ಲಿ ಆನ್‌ಲೈನ್ ವಂಚನೆ ನಡೆಯುತ್ತಿರುವ ಕುರಿತು ಅವರು ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ‘ಮಹತ್ವದ ಸೂಚನೆ’ ಎಂದು ಬರೆದುಕೊಂಡು ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.
ಸೈಬರ್ ವಂಚಕರು ಬಳಸುತ್ತಿರುವ ಇಮೇಲ್ ವಿಳಾಸವನ್ನು ಬಹಿರಂಗಪಡಿಸಿರುವ ಟೊವಿನೋ ಥಾಮಸ್ ಅವರು, ‘ನನ್ನ ಹೆಸರನ್ನು ಬಳಸಿಕೊಂಡು ಹಲವು ಜನರಿಗೆ ಅಧಿಕೃತವಲ್ಲದ ಇಮೇಲ್‌ಗಳನ್ನು ಕಳುಹಿಸಲಾಗುತ್ತಿದೆ ಎಂಬ ವಿಷಯ ನನ್ನ ಗಮನಕ್ಕೆ ಬಂದಿದೆ. ಈ ಇಮೇಲ್‌ಗಳು tovinothomas79@ gmail.com ಎಂಬ ವಿಳಾಸದಿಂದ ರವಾನೆಯಾಗುತ್ತಿವೆ. ಈ ಇಮೇಲ್ ಐಡಿಗೂ ನನಗೂ ಯಾವುದೇ ರೀತಿಯ ಸಂಬಂಧವಿಲ್ಲ. ಈ ವಿಳಾಸದ ಮೂಲಕ ನನ್ನ ಪರವಾಗಿ ಮಾತನಾಡಲು ಅಥವಾ ಸಂವಹನ ನಡೆಸಲು ನಾನು ಯಾರಿಗೂ ಅಧಿಕಾರ ನೀಡಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.
ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ ನಟ ಟೊವಿನೋ ಥಾಮಸ್, ಈ ನಕಲಿ ಇಮೇಲ್ ಐಡಿಯಿಂದ ಬರುವ ಯಾವುದೇ ಸಂದೇಶಗಳಿಗೆ ಉತ್ತರಿಸದಂತೆ ಮತ್ತು ತಮ್ಮ ಬ್ಯಾಂಕ್ ವಿವರಗಳು, ಮೊಬೈಲ್ ಸಂಖ್ಯೆಯಂತಹ ವೈಯಕ್ತಿಕ ಮಾಹಿತಿಗಳನ್ನು ಹಂಚಿಕೊಳ್ಳದಂತೆ ಕಟ್ಟುನಿಟ್ಟಿನ ಎಚ್ಚರಿಕೆ ಮಾಡಿದ್ದಾರೆ. ಅಲ್ಲದೆ, ಸಂದೇಶಗಳಲ್ಲಿ ಹಣಕಾಸಿನ ಬೇಡಿಕೆ ಇಟ್ಟರೆ ಅಥವಾ ಲಿಂಕ್‌ಗಳನ್ನು ನೀಡಿದರೆ ಅವುಗಳ ಮೇಲೆ ಕ್ಲಿಕ್ ಮಾಡದೆ ಹಾಗೂ ಯಾವುದೇ ಹಣ ವರ್ಗಾವಣೆ ಮಾಡದೆ ಜಾಗರೂಕರಾಗಿರಲು ತಿಳಿಸಿದ್ದಾರೆ. ಈ ವಿಳಾಸದಿಂದ ಸಂದೇಶಗಳು ಬಂದರೆ ತಕ್ಷಣವೇ ಅದನ್ನು ‘Spam’ ಅಥವಾ ‘Phishing’ ಎಂದು ವರದಿ ಮಾಡಿ ಡಿಲೀಟ್ ಮಾಡಬೇಕು ಎಂದಿರುವ ಅವರು, ಈ ಮಾಹಿತಿಯನ್ನು ಪರಿಚಿತರೊಂದಿಗೆ ಹಂಚಿಕೊಂಡು, ಯಾರೂ ವಂಚನೆಗೆ ಒಳಗಾಗದಂತೆ ತಡೆಯಲು ಕರೆ ನೀಡಿದ್ದಾರೆ.
ಇದನ್ನೂ ಓದಿ: ರಾಜ್ ಬಿ. ಶೆಟ್ಟಿಗೆ ಕೇಳಿ ರಿಷಬ್ ಶೆಟ್ಟಿ ಫೋನ್ ನಂಬರ್ ತಗೊಂಡೆ: ಟೊವಿನೋ ಥಾಮಸ್
2013ರಲ್ಲಿ ‘ಎಬಿಸಿಡಿ’ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಟೊವಿನೋ ಥಾಮಸ್, ಕೊರೊನಾ ಲಾಕ್‌ಡೌನ್ ಸಮಯದಲ್ಲಿ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾದ ‘ಮಿನ್ನಲ್ ಮುರಳಿ’ ಸೂಪರ್‌ಹೀರೋ ಚಿತ್ರದ ಮೂಲಕ ದೇಶಾದ್ಯಂತ ಅಪಾರ ಪ್ರಮಾಣದ ಅಭಿಮಾನಿಗಳನ್ನು ಸಂಪಾದಿಸಿದರು. ಅಲ್ಲದೆ, ‘ಟೊವಿನೋ ಥಾಮಸ್ ಪ್ರೊಡಕ್ಷನ್ಸ್’ ನಿರ್ಮಾಣ ಸಂಸ್ಥೆಯನ್ನು ಹೊಂದಿರುವ ನಿರ್ಮಾಪಕನಾಗಿಯೂ ಸಕ್ರಿಯರಾಗಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.