
ಸಿನಿಮಾ ಸೆಟ್ಗಳಲ್ಲಿ ಅವಘಡಗಳು, ಅಪಘಾತಗಳು ತೀರಾ ಸಾಮಾನ್ಯ. ಕೆಲವರ ಜೀವವೇ ಹೋಗಿಬಿಟ್ಟಿದೆ. ಸ್ಟಂಟ್, ರೋಪ್, ಡ್ಯಾನ್ಸ್, ಆಕ್ಷನ್, ದೊಡ್ಡ ದೊಡ್ಡ ಸೆಟ್ಟು, ಬೆಂಕಿ ಇನ್ನೂ ಹಲವು ಅಪಾಯಕಾರಿ ವಿಭಾಗಗಳ ಕೆಲಸ ಸೆಟ್ನಲ್ಲಿ ನಡೆಯುತ್ತಿರುತ್ತದೆ. ಹಾಗಾಗಿ ಸಿನಿಮಾ ಸೆಟ್ನಲ್ಲಿ ಗಾಯಗೊಳ್ಳುವ ಅಪಾಯ ಹೆಚ್ಚು. ವಿಶೇಷವಾಗಿ ಸಿನಿಮಾದ ಆಕ್ಷನ್ ದೃಶ್ಯಗಳಲ್ಲಿ ನಟರು ಗಾಯಗೊಳ್ಳುವ ಅವಕಾಶ ಬಹಳ ಹೆಚ್ಚಿರುತ್ತದೆ. ನಟ-ನಟಿಯರು ಗಾಯಗೊಂಡಾಗ ಕೆಲ ದಿನ ವಿಶ್ರಾಂತಿ ತೆಗೆದುಕೊಂಡು ಶೂಟಿಂಗ್ಗೆ ಮರಳುತ್ತಾರೆ. ಆದರೆ ಮಲಯಾಳಂ ನಟಿಯೊಬ್ಬರು ಮಾತ್ರ, ಸೆಟ್ನಲ್ಲಿ ಗಾಯವಾಗಿದ್ದಕ್ಕೆ ಪ್ರತಿಯಾಗಿ ತಮಗೆ ಐದು ಕೋಟಿ ರೂಪಾಯಿ ಹಣವನ್ನು ಪರಿಹಾರವನ್ನಾಗಿ ಕೊಡಬೇಕೆಂದು ಪ್ರಕರಣ ದಾಖಲಿಸಿದ್ದಾರೆ.
ಮಲಯಾಳಂ ನಟಿ ಶೀಥಲ್ ತಂಬಿ ಎಂಬುವರು ಮಲಯಾಳಂನ ಜನಪ್ರಿಯ ನಟಿ ಮಂಜು ವಾರಿಯವರ್ ವಿರುದ್ಧ ದೂರು ದಾಖಲಿಸಿದ್ದು, ತಮ್ಮ ಗಾಯಕ್ಕೆ ಪರಿಹಾರವಾಗಿ ಐದು ಕೋಟಿ ರೂಪಾಯಿಗಳನ್ನು ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಶೀಥಲ್ ತಂಬಿ, ‘ಫುಟೇಜ್’ ಹೆಸರಿನ ಮಲಯಾಳಂ ಕ್ರೈಂ ಥ್ರಿಲ್ಲರ್ ಸಿನಿಮಾದಲ್ಲಿ ನಟಿಸುತ್ತಿದ್ದರು. ಸಿನಿಮಾದ ಆಕ್ಷನ್ ದೃಶ್ಯದ ಚಿತ್ರೀಕರಣದ ಸಂದರ್ಭದಲ್ಲಿ ನಡೆದ ಅವಘಡದಲ್ಲಿ ಶೀಥಲ್ಗೆ ಗಾಯವಾಗಿದೆ. ಚಿತ್ರೀಕರಣದ ಸಮಯದಲ್ಲಿ ಸೂಕ್ತ ಎಚ್ಚರಿಕೆ ಕ್ರಮಗಳನ್ನು ಕೈಗೊಂಡಿರಲಿಲ್ಲದ ಕಾರಣವೇ ತಮಗೆ ಗಾಯವಾಗಿದೆ ಎಂದಿರುವ ಶೀಥಲ್, ಗಾಯಗೊಂಡ ದಿನ ತಮಗೆ ಆಂಬುಲೆನ್ಸ್ ಸೇವೆ ಸಹ ನೀಡಲಾಗಿರಲಿಲ್ಲ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ:Nirmal Benny Death: ಹೃದಯಾಘಾತದಿಂದ ಮಲಯಾಳಂ ಕಲಾವಿದ ನಿರ್ಮಲ್ ಬೆನ್ನಿ ನಿಧನ
ಗಾಯಗಿಂದ ತಮ್ಮ ವೃತ್ತಿ ಜೀವನಕ್ಕೆ ಸಮಸ್ಯೆ ಆಗಿದ್ದು, ಇನ್ನು ಮುಂದೆ ನಟಿಸಲು ನನಗೆ ಸಾಧ್ಯ ಆಗದೇ ಹೋಗಬಹುದು ಹಾಗಾಗಿ ಪರಿಹಾರವಾಗಿ ನನಗೆ ಐದು ಕೋಟಿ ರೂಪಾಯಿ ಹಣ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ನಟಿ ಮಂಜು ವಾರಿಯರ್, ‘ಫುಟೇಜ್’ ಸಿನಿಮಾದ ಸಹ ನಿರ್ಮಾಪಕಿ ಆಗಿರುವ ಕಾರಣ, ದೂರಿನಲ್ಲಿ ಅವರ ಹೆಸರನ್ನೂ ಸಹ ಉಲ್ಲೇಖಿಸಲಾಗಿದ್ದು, ತಮಗೆ ಐದು ಕೋಟಿ ನಷ್ಟ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಮಂಜು ವಾರಿಯರ್, ಮಲಯಾಳಂ ಚಿತ್ರರಂಗದ ಜನಪ್ರಿಯ ನಟಿ. ನಟನೆಗೆ ರಾಷ್ಟ್ರಪ್ರಶಸ್ತಿ ಪಡೆದಿರುವ ಮಂಜು ವಾರಿಯರ್. 1995 ರಿಂದಲೂ ಮಲಯಾಳಂ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಮಂಜು ವಾರಿಯರ್ ಮಲಯಾಳಂ ಮಾತ್ರವೇ ಅಲ್ಲದೆ ತಮಿಳಿನ ಕೆಲವು ಸಿನಿಮಾಗಳಲ್ಲಿಯೂ ನಟಸಿದ್ದಾರೆ. ಧನುಶ್ ನಟಿಸಿರುವ ‘ಅಸುರನ್’ ಸಿನಿಮಾದಲ್ಲಿ ಧನುಶ್ ಪತ್ನಿಯ ಪಾತ್ರದಲ್ಲಿ ನಟಿಸಿದ್ದಾರೆ. ಕಳೆದ ವರ್ಷ ಬಿಡುಗಡೆ ಆದ ಅಜಿತ್ ನಟನೆಯ ‘ತುಣಿವು’ ಸಿನಿಮಾದಲ್ಲಿ ನಟಿಸಿದ್ದಾರೆ. ಪ್ರಸ್ತುತ ಹಲವು ತಮಿಳು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ‘ಮಿಸ್ಟರ್ ಎಕ್ಸ್’, ‘ವಿಡುದಲೈ ಪಾರ್ಟ್ 2’, ರಜನೀಕಾಂತ್ ನಟನೆಯ ‘ವೇಟ್ಟಿಯನ್’ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇದರ ಜೊತೆಗೆ ಮೋಹನ್ಲಾಲ್ ನಟನೆಯ ‘ಲುಸಿಫರ್ 2’ ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ