ಸಿನಿಮಾಗಳ ಬಾಕ್ಸ್ ಆಫೀಸ್ ಕಲೆಕ್ಷನ್ ಬಗ್ಗೆ ಆಗಾಗ್ಗೆ ವರದಿಗಳು ಪ್ರಕಟ ಆಗುತ್ತಲೇ ಇರುತ್ತವೆ. ಆ ಸಿನಿಮಾ ಅಷ್ಟು ಸಾವಿರ ಕೋಟಿ ಗಳಿಸಿತಂತೆ, ಈ ಸಿನಿಮಾ ನೂರಾರು ಕೋಟಿ ಗಳಿಸಿತಂತೆ ಎಂಬ ಸುದ್ದಿಗಳು ಹರಿದಾಡುತ್ತಲೇ ಇರುತ್ತವೆ. ಆದರೆ ಸೋತ ಸಿನಿಮಾಗಳ ಬಗ್ಗೆ ಚರ್ಚೆಗಳೇ ಆಗುವುದಿಲ್ಲ. ಅಸಲಿಗೆ ಮೊದಲಿಗೆ ಹೋಲಿಸಿಕೊಂಡರೆ ಈಗ ಸಿನಿಮಾಗಳು ಗೆಲ್ಲುವ ಸರಾಸರಿ ಬಹಳ ಕಡಿಮೆ ಆಗಿದೆ. ಆದರೂ ಸಹ ಪ್ರತಿವರ್ಷ ಹಲವಾರು ಮಂದಿ ಸಿನಿಮಾ ಮಾಡುತ್ತಲೇ ಇದ್ದಾರೆ. ಇದೀಗ ಮಲಯಾಳಂ ಚಿತ್ರರಂಗದ ನಿರ್ಮಾಪಕರು ಸ್ವಯಂ ಪ್ರೇರಿತರಾಗಿ ಈ ವರ್ಷದ ಲಾಭ-ನಷ್ಟದ ವರದಿ ನೀಡಿದ್ದಾರೆ. ನಿರ್ಮಾಪಕರು ನೀಡಿರುವ ಮಾಹಿತಿಯಂತೆ ಮಲಯಾಳಂ ಚಿತ್ರರಂಗ 2024ರಲ್ಲಿ 700 ಕೋಟಿ ನಷ್ಟ ಅನುಭವಿಸಿದೆ.
ಮಲಯಾಳಂ ಚಿತ್ರರಂಗ ಕಳೆದ ಕೆಲವು ವರ್ಷಗಳಿಂದ ಹಿಟ್ ಮೇಲೆ ಹಿಟ್ ಸಿನಿಮಾಗಳನ್ನು ನೀಡುತ್ತಿದೆ. ಈ ವರ್ಷವೂ ಹಲವು ಮಲಯಾಳಂ ಚಿತ್ರರಂಗದಿಂದ ಹಲವು ಸೂಪರ್ ಹಿಟ್ ಸಿನಿಮಾಗಳು ಹೊರಗೆ ಬಂದಿವೆ. ಹಾಗಿದ್ದರೂ ಸಹ ಮಲಯಾಳಂ ಚಿತ್ರರಂಗ ಈ ವರ್ಷ 700 ಕೋಟಿ ನಷ್ಟದಲ್ಲಿದೆಯಂತೆ. ಈ ವರ್ಷ 199 ಮಲಯಾಳಂ ಸಿನಿಮಾಗಳು ಬಿಡುಗಡೆ ಆಗಿದ್ದು, ಅವುಗಳಲ್ಲಿ ಹಾಕಿದ ಬಂಡವಾಳದ ಮೇಲೆ ಲಾಭ ತಂದುಕೊಟ್ಟ ಸಿನಿಮಾಗಳ ಸಂಖ್ಯೆ ಕೇವಲ 26.
ಈ ವರ್ಷ ಮಲಯಾಳಂ ಚಿತ್ರರಂಗದ ಒಟ್ಟು ಬಂಡವಾಳ 1000 ಕೋಟಿ ರೂಪಾಯಿ ದಾಟಿದೆ. ಅಂದರೆ 199 ಸಿನಿಮಾ ನಿರ್ಮಾಣ ಮಾಡಲು 1000 ಕೋಟಿ ಹಣವನ್ನು ಮಲಯಾಳಂ ಚಿತ್ರರಂಗ ಖರ್ಚು ಮಾಡಿದೆ. ಆದರೆ 1000 ಕೋಟಿ ಹೂಡಿಕೆ ಮಾಡಿದ್ದಕ್ಕೆ ವಾಪಸ್ ಬಂದಿರುವುದು ಕೇವಲ 300 ಕೋಟಿ ರೂಪಾಯಿಗಳಂತೆ. ಅಲ್ಲಿಗೆ 700 ಕೋಟಿ ರೂಪಾಯಿ ನಷ್ಟವನ್ನು ಮಲಯಾಳಂ ಚಿತ್ರರಂಗ ಅನುಭವಿಸಿದೆ.
ಇದನ್ನೂ ಓದಿ: ರಾಜ್ ಬಿ ಶೆಟ್ಟಿಯ ಮತ್ತೊಂದು ಮಲಯಾಳಂ ಸಿನಿಮಾ ಬಿಡುಗಡೆಗೆ ರೆಡಿ
‘ಪ್ರೇಮಲು’, ‘ಮಂಜ್ಞುಮೆಲ್ ಬಾಯ್ಸ್’, ‘ಆವೇಷಂ’, ‘ಆಡುಜೀವಿತಂ’, ‘ಎಆರ್ಎಂ’ ಸಿನಿಮಾಗಳು ಮಾತ್ರವೇ 100 ಕೋಟಿಗೂ ಹೆಚ್ಚು ಹಣ ಗಳಿಕೆ ಮಾಡಿವೆ (ಬಂಡವಾಳ ಸೇರಿ). ‘ಕಿಷ್ಕಿಂದಾ ಕಾಂಡಂ’, ‘ಗುರುವಾಯೂರ್ ಅಂಬಾಲನದಯಿಲ್’, ‘ವರ್ಷಂಗಳಕ್ಕು ಶೇಷಂ’ ಸಿನಿಮಾಗಳು 50 ಕೋಟಿಗೂ ಹೆಚ್ಚು ಹಣ ಗಳಿಕೆ ಮಾಡಿವೆ. ‘ಬ್ರಹ್ಮಯುಗಂ’, ‘ನಾನುಕ್ಕುಳಿ’, ‘ಟರ್ಬೊ’ ಇನ್ನೂ ಕೆಲವು ಸಿನಿಮಾಗಳಷ್ಟೆ ಈ ವರ್ಷ ಗೆಲುವು ಕಂಡಿವೆ. ಹಾಗೆ ನೋಡಿದರೆ ಕನ್ನಡ ಚಿತ್ರರಂಗಕ್ಕಿಂತಲೂ ಹೆಚ್ಚಿನ ಗೆಲುವಿನ ಸರಾಸರಿ ಮಲಯಾಳಂ ಚಿತ್ರರಂಗಕ್ಕೆ ಇದೆ. ಆದರೂ ಸಹ ಮಲಯಾಳಂ ಚಿತ್ರರಂಗ 700 ಕೋಟಿ ನಷ್ಟ ಅನುಭವಿಸಿದೆ.
ವರ್ಷದ ಕೊನೆಗೆ ಮೋಹನ್ಲಾಲ್ ನಟನೆಯ ‘ಬಾರೋಜ್’, ‘ಮಾರ್ಕೊ’ ಮತ್ತು ‘ರೈಫಲ್ ಕ್ಲಬ್’ ಮಲಯಾಳಂ ಸಿನಿಮಾಗಳು ಬಿಡುಗಡೆ ಆಗಿದ್ದು, ಈ ಮೂರು ಸಿನಿಮಾಗಳು ಬಾಕ್ಸ್ ಆಫೀಸ್ನಲ್ಲಿ ಉತ್ತಮ ಕಲೆಕ್ಷನ್ ಮಾಡುತ್ತಿವೆ. ಏನೇ ಆದರೂ ಕನಿಷ್ಟ 600 ಕೋಟಿ ನಷ್ಟವಂತೂ ಪಕ್ಕಾ ಎನ್ನಲಾಗುತ್ತಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ