‘ದೃಶ್ಯಂ 3’ ಚಿತ್ರಕ್ಕೆ ಸಿಕ್ಕ ರೆಸ್ಪಾನ್ಸ್ ನೋಡಿ ಕಣ್ಣೀರು ಹಾಕಿದ ನಟ ಮೋಹನ್‌ಲಾಲ್

ಮೋಹನ್​ಲಾಲ್ ನಟನೆಯ ‘ದೃಶ್ಯಂ 3’ ಸಿನಿಮಾ ಎಲ್ಲೆಡೆ ಬಿಡುಗಡೆ ಆಗಿದೆ. ದುಬೈನಲ್ಲಿ ನಡೆದ ಈ ಸಿನಿಮಾದ ವಿಶೇಷ ಪ್ರದರ್ಶನದಲ್ಲಿ ಮೋಹನ್​ಲಾಲ್ ಭಾಗಿಯಾಗಿದ್ದಾರೆ. ಅಲ್ಲಿ ಅಭಿಮಾನಿಗಳು ತೋರಿಸಿದ ಪ್ರೀತಿ ಕಂಡು ಅವರು ಎಮೋಷನಲ್ ಆಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಸಂದರ್ಭದ ವಿಡಿಯೋ ಸಖತ್ ವೈರಲ್ ಆಗಿದೆ.

‘ದೃಶ್ಯಂ 3’ ಚಿತ್ರಕ್ಕೆ ಸಿಕ್ಕ ರೆಸ್ಪಾನ್ಸ್ ನೋಡಿ ಕಣ್ಣೀರು ಹಾಕಿದ ನಟ ಮೋಹನ್‌ಲಾಲ್
Mohanlal

Updated on: May 22, 2026 | 7:28 PM

ಮಾಲಿವುಡ್‌ನ ಸ್ಟಾರ್ ನಟ ಮೋಹನ್‌ಲಾಲ್ ಅಭಿನಯದ ಬಹುನಿರೀಕ್ಷಿತ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ ‘ದೃಶ್ಯಂ 3’ (Drishyam 3) ಇತ್ತೀಚೆಗಷ್ಟೇ ತೆರೆಕಂಡು ಭರ್ಜರಿ ಪ್ರದರ್ಶನ ಕಾಣುತ್ತಿದೆ. ದುಬೈನಲ್ಲಿ ಆಯೋಜಿಸಲಾಗಿದ್ದ ಚಿತ್ರದ ವಿಶೇಷ ಪ್ರದರ್ಶನವೊಂದರಲ್ಲಿ ಅಭಿಮಾನಿಗಳಿಂದ ವ್ಯಕ್ತವಾದ ಅದ್ಭುತ ಪ್ರತಿಕ್ರಿಯೆಯನ್ನು ಕಂಡು ಮೋಹನ್‌ಲಾಲ್ (Mohanlal) ಭಾವುಕರಾಗಿದ್ದು, ಆನಂದಭಾಷ್ಪ ಸುರಿಸಿದ್ದಾರೆ. ಸದ್ಯ ಥಿಯೇಟರ್‌ ಒಳಗಿನ ಈ ಹೃದಯಸ್ಪರ್ಶಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ಅಭಿಮಾನಿಗಳ ಮನ ಗೆಲ್ಲುತ್ತಿದೆ.

ವೈರಲ್ ಆಗಿರುವ ವಿಡಿಯೋದಲ್ಲಿ, ಸಿನಿಮಾ ಮುಗಿಯುತ್ತಿದ್ದಂತೆ ಇಡೀ ಚಿತ್ರಮಂದಿರದಲ್ಲಿದ್ದ ಜನರು ಎದ್ದು ನಿಂತು ಚಪ್ಪಾಳೆ ತಟ್ಟುತ್ತಾ, ಶಿಳ್ಳೆ ಹೊಡೆಯುತ್ತಾ ಮೋಹನ್‌ಲಾಲ್ ಅವರಿಗೆ ಗೌರವ ಸಲ್ಲಿಸಿದರು. ಪ್ರೇಕ್ಷಕರು ತೋರಿದ ಈ ಅಪಾರ ಪ್ರೀತಿಯನ್ನು ಕಂಡು ಮೋಹನ್‌ಲಾಲ್ ತೀವ್ರ ಭಾವುಕರಾಗಿದ್ದಾರೆ. ಅವರು ತಮ್ಮ ಕಣ್ಣೀರನ್ನು ಒರೆಸಿಕೊಳ್ಳುತ್ತಾ, ಮುಖದಲ್ಲಿ ದೊಡ್ಡ ನಗು ಬೀರಿದ ದೃಶ್ಯ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ.

ಆ ಚಿತ್ರಮಂದಿರಲ್ಲಿದ್ದ ಅಭಿಮಾನಿಗಳು ತಮ್ಮ ಮೊಬೈಲ್‌ಗಳಲ್ಲಿ ಈ ಅಪೂರ್ವ ಕ್ಷಣವನ್ನು ಸೆರೆಹಿಡಿದಿದ್ದಾರೆ. ಈ ಘಟನೆ ಮೋಹನ್‌ಲಾಲ್ ಅವರಿಗೆ ಭಾರತ ಮಾತ್ರವಲ್ಲದೆ ಜಾಗತಿಕ ಮಟ್ಟದಲ್ಲೂ ಇರುವ ಭಾರಿ ಕ್ರೇಜ್ ಎಷ್ಟು ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ‘ದೃಶ್ಯಂ’ ಮತ್ತು ‘ದೃಶ್ಯಂ 2’ ಸಿನಿಮಾಗಳ ಬಳಿಕ ‘ದೃಶ್ಯಂ 3’ ಕೂಡ ಜನಮನ ಗೆಲ್ಲುತ್ತಿದೆ.

ಕಳೆದ ಹಲವು ವರ್ಷಗಳಿಂದ ‘ದೃಶ್ಯಂ’ ಸರಣಿಯಲ್ಲಿ ಮೋಹನ್‌ಲಾಲ್ ನಿರ್ವಹಿಸಿರುವ ಜಾರ್ಜ್‌ ಕುಟ್ಟಿ ಪಾತ್ರ ಭಾರತೀಯ ಚಿತ್ರರಂಗದಲ್ಲೇ ಅತ್ಯಂತ ಜನಪ್ರಿಯ ಮತ್ತು ಯಶಸ್ವಿ ಪಾತ್ರಗಳಲ್ಲಿ ಒಂದಾಗಿದೆ. ಜೀತು ಜೋಸೆಫ್ ನಿರ್ದೇಶನದ ‘ದೃಶ್ಯಂ 3’ ಚಿತ್ರದಲ್ಲಿ ಮೀನಾ, ಅನ್ಸಿಬಾ ಹಸನ್, ಎಸ್ತರ್ ಅನಿಲ್, ಮುರಳಿ ಗೋಪಿ, ಸಿದ್ದಿಕ್ ಮತ್ತು ಆಶಾ ಶರತ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: ಡಾ. ರಾಜ್​ಕುಮಾರ್ ಮೇಲಿನ ಅಭಿಮಾನಕ್ಕೆ ಅಮೆರಿಕದಲ್ಲಿ ಕನ್ನಡ ಗೀತೆ ಹಾಡಿದ ಮೋಹನ್​ಲಾಲ್

‘ದೃಶ್ಯಂ 3’ ಮೊದಲ ದಿನವೇ ಬಾಕ್ಸ್ ಆಫೀಸ್‌ನಲ್ಲಿ ದಾಖಲೆಯ ಕಲೆಕ್ಷನ್ ಮಾಡಿದೆ. ಮಲಯಾಳಂ ಆವೃತ್ತಿಯೊಂದರಲ್ಲೇ ಮೊದಲ ದಿನ ಬರೋಬ್ಬರಿ 13.70 ಕೋಟಿ ರೂ. ಕಲೆಕ್ಷನ್ ಮಾಡಿದೆ. ಉಳಿದಂತೆ ತೆಲುಗಿನಲ್ಲಿ 1.50 ಕೋಟಿ ರೂ., ಕನ್ನಡದಲ್ಲಿ 20 ಲಕ್ಷ ರೂ. ಮತ್ತು ತಮಿಳಿನಲ್ಲಿ 45 ಲಕ್ಷ ರೂ. ಗಳಿಸಿದೆ. ಇನ್ನು ವಿದೇಶಿ ಮಾರುಕಟ್ಟೆಯಿಂದಲೇ ಭರ್ಜರಿ 30 ಕೋಟಿ ರೂ. ಬಾಚಿಕೊಂಡಿರುವ ‘ದೃಶ್ಯಂ 3’, ಒಟ್ಟಾರೆಯಾಗಿ ವಿಶ್ವದಾದ್ಯಂತ ಮೊದಲ ದಿನವೇ ಬರೋಬ್ಬರಿ 48.37 ಕೋಟಿ ರೂ. ಕಲೆಕ್ಷನ್ ಮಾಡಿತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us