ಅಪ್ಪನ ಮೇಲೆ ದೂರು ನೀಡಿದ ನಟ, ಈಗ ಅಣ್ಣನ ಮೇಲೂ ಆರೋಪ

| Updated By: ರಾಜೇಶ್ ದುಗ್ಗುಮನೆ

Updated on: Dec 10, 2024 | 12:37 PM

Manchu Manoj: ತೆಲುಗು ಚಿತ್ರರಂಗದ ತಾರಾ ಕುಟುಂಬ ಮಂಚು ಕುಟುಂಬದಲ್ಲಿ ಎಲ್ಲವೂ ಸರಿಯಿಲ್ಲ. ಅಣ್ಣ ತಮ್ಮಂದಿರ ನಡುವೆ ಆಸ್ತಿಗಾಗಿ ಕಿತ್ತಾಟ ನಡೆದಿದೆ. ಮಾತ್ರವಲ್ಲದೆ ಹಿರಿಯ ನಟ ಮೋಹನ್ ಬಾಬು ಕಿರಿಯ ಪುತ್ರ ಮಂಚು ಮನೋಜ್ ಸ್ವಂತ ತಂದೆಯ ವಿರುದ್ಧ ದೂರು ದಾಖಲಿಸಿದ್ದಾರೆ. ಮೋಹನ್​ಬಾಬು, ಪುತ್ರ ಮನೋಜ್ ವಿರುದ್ಧ ದೂರು ದಾಖಲಿಸಿದ್ದಾರೆ.

ಅಪ್ಪನ ಮೇಲೆ ದೂರು ನೀಡಿದ ನಟ, ಈಗ ಅಣ್ಣನ ಮೇಲೂ ಆರೋಪ
ಮಂಚು ಕುಟುಂಬ
Follow us on

ತೆಲುಗು ಚಿತ್ರರಂಗದ ತಾರಾ ಕುಟುಂಬಗಳಲ್ಲಿ ಮಂಚು ಕುಟುಂಬವೂ ಒಂದು. ಹಿರಿಯ ನಟ, ಮಾಜಿ ಸಿಎಂ ಎನ್​ಟಿಆರ್ ಅವರ ಅಪ್ಪಟ ಶಿಷ್ಯ ಎಂದೇ ಕರೆಸಿಕೊಳ್ಳುತ್ತಿದ್ದ ಮೋಹನ್​ಬಾಬು, ತೆಲುಗು ಚಿತ್ರರಂಗದ ಹಿರಿಯ ನಟ ಮತ್ತು ನಿರ್ಮಾಪಕ. ಒಂದು ಸಮಯದಲ್ಲಿ ಮೆಗಾಸ್ಟಾರ್ ಚಿರಂಜೀವಿಗಿಂತಲೂ ಹೆಚ್ಚು ಸಂಭಾವನೆ ಪಡೆಯುತ್ತಿದ್ದರು. ಮೋಹನ್​ಬಾಬು ಅವರ ಮೂವರು ಮಕ್ಕಳೂ ಸಹ ನಟರೇ. ಈಗ ಮೋಹನ್​ಬಾಬು ಅವರ ಇಬ್ಬರು ಗಂಡು ಮಕ್ಕಳು ಆಸ್ತಿ ವಿಷಯಕ್ಕೆ ಪರಸ್ಪರ ಕಿತ್ತಾಡಿಕೊಂಡಿದ್ದು, ಕಿರಿಯ ಮಗ ಮಂಚು ಮನೋಜ್, ಸ್ವಂತ ತಂದೆ ಮೋಹನ್​ಬಾಬು ವಿರುದ್ಧವೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅದರ ಬೆನ್ನಲ್ಲೆ ಹಿರಿಯ ನಟ ಮೋಹನ್ ಬಾಬು ಸಹ ಪುತ್ರ ಮಂಚು ಮನೋಜ್ ವಿರುದ್ಧ ದೂರು ದಾಖಲಿಸಿದ್ದಾರೆ.

ಮಂಚು ಕುಟುಂಬದ ಇಬ್ಬರು ಪುತ್ರರಾದ ಮಂಚು ಮನೋಜ್ ಹಾಗೂ ಮಂಚು ವಿಷ್ಣು ನಡುವೆ ಆಸ್ತಿಗೆ ಸಂಬಂಧಿಸಿದಂತೆ ವಿವಾದಗಳು ನಡೆಯುತ್ತಿದ್ದು, ಮೋಹನ್​ಬಾಬು ಅವರು ಹಿರಿಯ ಪುತ್ರ ಮಂಚು ವಿಷ್ಣು ಪರ ನಿಂತಿದ್ದಾರೆ. ಕುಟುಂಬಕ್ಕೆ ಸೇರಿದ ಶಾಲಾ-ಕಾಲೇಜು ವ್ಯವಹಾರದಲ್ಲಿ ಮಂಚು ಮನೋಜ್ ಕುಟುಂಬಕ್ಕೆ ಮೋಸ ಮಾಡಿ ಹಣಕಾಸು ದುರುಪಯೋಗ ಮಾಡಿಕೊಂಡಿದ್ದಾನೆ ಎಂದು ಆರೋಪಿಸಲಾಗುತ್ತಿದೆ. ಇದೇ ವಿಷಯದಲ್ಲಿ ಅಣ್ಣ-ತಮ್ಮಂದಿರ ನಡುವೆ ಹಲವು ತಿಂಗಳುಗಳಿಂದ ಗಲಾಟೆಗಳು ನಡೆಯುತ್ತಲೇ ಇವೆ.

ಇದೀಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ಬಳಿಕ ವಿವಾದದ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಮಂಚು ಮನೋಜ್, ಅಣ್ಣ ಮಂಚು ವಿಷ್ಣು ಮತ್ತು ಅಪ್ಪ ಮೋಹನ್​ಬಾಬು ವಿರುದ್ಧ ಆರೋಪಗಳನ್ನು ಮಾಡಿದ್ದಾರೆ. ಮೋಹನ್ ಬಾಬು ತಮ್ಮ ವಿರುದ್ಧ ಮಾಡಿರುವ ಸುಳ್ಳು ಎಂದರಿರುವ ಮಂಚು ಮನೋಜ್, ನಮ್ಮ ತಂದೆಯವರ ಕೆಟ್ಟ ನಡವಳಿಕೆಯಿಂದ ಮನೆಯಲ್ಲಿ ಸಮಸ್ಯೆ ಆಗಿದೆಯೆಂದು, ಅವರು ಬಳಸುವ ಅವಾಚ್ಯ ಭಾಷೆಯಿಂದ ಮನೆಯ ಕೆಲಸಗಾರರು ಸಹ ಆತಂಕದಲ್ಲಿಯೇ ಬದುಕುತ್ತಿದ್ದಾರೆ ಎಂದಿದ್ದಾರೆ.

ಇದನ್ನೂ ಓದಿ:Manchu Manoj Wedding: ರಾಜಕಾರಣಿ ಪುತ್ರಿಯೊಟ್ಟಿಗೆ ತೆಲುಗು ನಟ ಮಂಚು ಮನೋಜ್ ಎರಡನೇ ಮದುವೆ

ಆಸ್ತಿ ವಿವಾದದ ಬಗ್ಗೆ ಮಾತನಾಡಿರುವ ಮಂಚು ಮನೋಜ್, ನಾನು ಎಂದಿಗೂ ಆಸ್ತಿಯಲ್ಲಿ ಭಾಗ ಕೇಳಿಲ್ಲ. ಕುಟುಂಬದ ಹಣವನ್ನು ದುರುಪಯೋಗ ಪಡೆಸಿಕೊಂಡಿಲ್ಲ. ಆದರೆ ಇದೇ ಪ್ರಶ್ನೆಗಳನ್ನು ಮಾಧ್ಯಮಗಳವರು ಮಂಚು ವಿಷ್ಣುಗೆ ಕೇಳಬೇಕು ಎಂದಿದ್ದಾರೆ. ನನ್ನನ್ನು ಕುಟುಂಬದಿಂದ ದೂರ ಇಡಲಾಗಿದೆ. ನನ್ನ ಸಿನಿಮಾಗಳನ್ನು ನಿಲ್ಲಿಸಲಾಗಿದೆ. ಆದರೆ ವಿಷ್ಣು ಸಿನಿಮಾಗಳಿಗೆ ಕುಟುಂಬದ ಬೆಂಬಲ ಸಿಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಕೆಲ ದಿನಗಳ ಹಿಂದೆ ನಟ ಮಂಚು ಮನೋಜ್, ರಾಚಕೊಂಡ ಪೊಲೀಸ್ ಠಾಣೆಯಲ್ಲಿ ದೂರೊಂದನ್ನು ದಾಖಲಿಸಿದ್ದರು. ತಮ್ಮ ಮೇಲೆ 10 ಮಂದಿ ಹಲ್ಲೆ ಮಾಡಿದ್ದಾರೆಂದು ದೂರಿನಲ್ಲಿ ಉಲ್ಲೇಖಿಸಿದ್ದರು. ಮಂಚು ಮನೋಜ್, ತಂದೆ ಮೋಹನ್ ಬಾಬು ವಿರುದ್ಧವೇ ದೂರು ನೀಡಿದ್ದಾರೆ ಎಂದು ಸುದ್ದಿಯಾಗಿತ್ತು. ಆದರೆ ಮಂಚು ಮನೋಜ್ ತಮ್ಮ ಮೇಲೆ ಹತ್ತು ಮಂದಿ ಅನಾಮಿಕರು ಹಲ್ಲೆ ಮಾಡಿದ್ದಾರೆಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಆದರೆ ಮೋಹನ್ ಬಾಬು, ನೀಡಿರುವ ಪ್ರತ್ಯೇಕ ದೂರಿನಲ್ಲಿ ತಮಗೆ ಮಗ ಮತ್ತು ಸೊಸೆಯಿಂದ ಜೀವಕ್ಕೆ ಬೆದರಿಕೆ ಇದೆಯೆಂದು ಆರೋಪಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:37 pm, Tue, 10 December 24