ಬಿಗ್ ಬಾಸ್ ಕನ್ನಡ ಸೀಸನ್ 8 ಅರ್ಧಕ್ಕೆ ನಿಂತಿದೆ. ನೂರಾರು ಕನಸು ಕಂಡು ಮನೆ ಸೇರಿದ್ದ ಬಿಗ್ ಬಾಸ್ ಮಂದಿ ಅರ್ಧ ದಾರಿಯಲ್ಲೇ ಹಿಂದಿರುಗುತ್ತಿದ್ದಾರೆ. ಇದು ಸ್ಪರ್ಧಿಗಳಿಗೆ ನುಂಗಲಾರದ ತುತ್ತಾಗಿದೆ. ಅಷ್ಟೇ ಅಲ್ಲ, ಅರ್ಧದಲ್ಲೇ ಬಿಗ್ ಬಾಸ್ ನಿಲ್ಲುತ್ತಿರುವುದಕ್ಕೆ ಅವರು ದುಃಖ ವ್ಯಕ್ತಪಡಿಸಿದ್ದಾರೆ. ಮಂಜು ಪಾವಗಡ ಕೂಡ ತಮ್ಮ ದುರಾದೃಷ್ಟ ನೆನೆದು ಬೇಸರ ಹೊರ ಹಾಕಿದ್ದಾರೆ.
ಮಂಜು ಪಾವಗಡ ಬಿಗ್ ಬಾಸ್ ಫಿನಾಲೆ ತಲುಪಬಹುದು ಎಂಬುದು ಎಲ್ಲರ ಲೆಕ್ಕಾಚಾರವಾಗಿತ್ತು. ಮಧ್ಯದಲ್ಲಿ ಸ್ವಲ್ಪ ಡಲ್ ಆದಂತೆ ಕಂಡರೂ ಕೊನೆಯ ವಾರ ಮತ್ತೆ ಫಾರ್ಮ್ಗೆ ಮರಳಿದ್ದರು. ಮಂಜು ತಾವು ಜೀವನದಲ್ಲಿ ತುಂಬಾನೇ ಕಷ್ಟಪಟ್ಟಿರುವುದಾಗಿ ಬಿಗ್ ಬಾಸ್ ವೇದಿಕೆ ಮೇಲೆ ಹೇಳಿದ್ದರು. ಆರಂಭದಲ್ಲಿ ಒಂದೇ ಹೊತ್ತು ಊಟ ಮಾಡಿಕೊಂಡು ಬದುಕಿದ ಕಥೆಗಳನ್ನು ಅವರು ಬಿಗ್ ಬಾಸ್ ಮನೆಯಲ್ಲಿ ಹೇಳಿದ್ದರು. ಆ ಘಟನೆ ವೀಕ್ಷಕರ ಕಣ್ಣಲ್ಲಿ ನೀರು ತರಿಸಿತ್ತು.
ಈಗ ಬಿಗ್ ಬಾಸ್ ಅರ್ಧಕ್ಕೆ ನಿಂತಿದೆ. ಒಂದೊಮ್ಮೆ ಮಂಜು ಬಿಗ್ ಬಾಸ್ ಸೀಸನ್ 8ರ ಟ್ರೋಫಿ ಗೆದ್ದಿದ್ದರೆ 50 ಲಕ್ಷ ರೂಪಾಯಿ ಅವರದ್ದಾಗುತ್ತಿತ್ತು. ಆ ಹಣದಿಂದ ಅವರು ಜೀವನ ಕಟ್ಟಿಕೊಳ್ಳಬಹುದಿತ್ತು. ಆದರೆ, ಆ ರೀತಿ ಆಗಲೇ ಇಲ್ಲ. ಬಿಗ್ ಬಾಸ್ ಅರ್ಧಕ್ಕೆ ನಿಂತಿದ್ದರಿಂದ ಯಾರನ್ನೂ ವಿಜೇತರು ಎಂದು ಘೋಷಿಸಿಲ್ಲ. ತಮ್ಮ ದುರಾದೃಷ್ಟದ ಬಗ್ಗೆ ಮಂಜು ಮಾತನಾಡಿಕೊಂಡಿದ್ದಾರೆ.
ಹೊರ ಜಗತ್ತಿನಲ್ಲಿ ಏನಾಗುತ್ತಿದೆ ಎಂಬುದನ್ನು ಬಿಗ್ ಬಾಸ್ ಸ್ಪರ್ಧಿಗಳಿಗೆ ಟಿವಿ ಮೂಲಕ ತೋರಿಸಲಾಯಿತು. ಅಲ್ಲದೆ, ಬಿಗ್ ಬಾಸ್ ಅರ್ಧಕ್ಕೆ ನಿಲ್ಲುತ್ತಿದೆ ಎಂಬುದನ್ನು ಘೋಷಿಸಲಾಯಿತು. ಆ ನಂತರ ಪ್ರಿಯಾಂಕಾ ಜತೆ ಮಂಜು ಮಾತನಾಡಿದ್ದಾರೆ.
ಸಾವಿರ ಕನಸು ಹೊತ್ತು ಬಿಗ್ ಬಾಸ್ ಮನೆಗೆ ಬಂದಾಗಲೇ ಹೊರಗಿನ ಪ್ರಪಂಚ ಹೀಗಾಗಬೇಕಾ? ಇಲ್ಲಿಂದ ನಾವು ಜೀವನ ಕಟ್ಟಿಕೊಳ್ಳಬೇಕು ಎಂದು ಬಂದಿದ್ವಿ. ಈಗ ಹೀಗಾಗಿದೆ. ಬಾಕಿಯವರ ಜೀವನ ಸೆಟಲ್ ಆಗಿರಬಹುದು. ಆದರೆ, ನನ್ನ ಜೀವನ ಆ ರೀತಿ ಅಲ್ಲ. ಇಲ್ಲಿಂದ ಏನೋ ಒಂದು ಸಿಗತ್ತೆ ಎಂದುಕೊಂಡು ಬಂದಿದ್ದು. ಆದರೆ, ಹೀಗಾಯ್ತು. ನನಗೆ ತುಂಬಾನೇ ಬೇಸರವಾಗುತ್ತಿದೆ ಎಂದು ಮಂಜು ಭಾವುಕರಾದರು.
ಏನೇನೊ ಅಂದ್ಕೊಂಡು ಬಂದಿದ್ದೆ. ಆದರೆ, ಭಗವಂತ ಹೀಗೆ ಮಾಡಿದ. ಪ್ರತೀ ಬಾರಿ ನಾವೇ ಸಿಕ್ತೀವಾ? ಜೀವನದಲ್ಲಿ ಸಾಕಷ್ಟು ಹೊಡೆಸಿಕೊಂಡು ಬಂದಿದ್ದೇನೆ. ಇಂಥ ದೊಡ್ಡ ವೇದಿಕೆಗೆ ಬಂದರೂ ದುರಾದೃಷ್ಟವೇ ಕೈ ಹಿಡಿಯಿತಲ್ಲ ಅನ್ನೋದು ಬೇಸರದ ಸಂಗತಿ ಎಂದರು ಮಂಜು.
ಇದನ್ನೂ ಓದಿ: Bigg Boss Kannada: ಕೊರೊನಾ ವಿಷಯ ಗೊತ್ತಾಗಿ ಕಣ್ಣೀರು ಹಾಕುತ್ತ ಬಿಗ್ ಬಾಸ್ ಮನೆಯಿಂದ ಹೊರಬಂದ ಸ್ಪರ್ಧಿಗಳು