ತಮಿಳಿನ ಬಳಿಕ ತೆಲುಗಿನಲ್ಲಿಯೂ ಬಿಡುಗಡೆ ಆಗುತ್ತಿದೆ ಮಲಯಾಳಂ ಬ್ಲಾಕ್ಬಸ್ಟರ್ ‘ಮಂಜ್ಞುಮ್ಮೆಲ್ ಬಾಯ್ಸ್’
Manjummel Boys: ಮಲಯಾಳಂ ಹಾಗೂ ತಮಿಳಿನಲ್ಲಿ ಅಬ್ಬರಿಸಿ, ಬಾಕ್ಸ್ ಆಫೀಸ್ನಲ್ಲಿ ದಾಖಲೆಗಳನ್ನು ಬರೆದಿರುವ ‘ಮಂಜ್ಞುಮ್ಮೆಲ್ ಬಾಯ್ಸ್’ ಸಿನಿಮಾ ಇದೀಗ ತೆಲುಗಿನಲ್ಲಿ ಬಿಡುಗಡೆ ಆಗಲಿದೆ. ವಿಶೇಷವೆಂದರೆ ಒಟಿಟಿಯಲ್ಲಿ ಬಿಡುಗಡೆ ಆದ ಮರುದಿನ ಆಂಧ್ರ-ತೆಲಂಗಾಣದ ಚಿತ್ರಮಂದಿರಗಳಲ್ಲಿ ತೆರೆಗೆ ಬರಲಿದೆ ಸಿನಿಮಾ.
ಮಲಯಾಳಂ ಸಿನಿಮಾ ‘ಮಂಜ್ಞುಮ್ಮೆಲ್ ಬಾಯ್ಸ್’ (Manjummel Boys) ಬಾಕ್ಸ್ ಆಫೀಸ್ನಲ್ಲಿ ಸುನಾಮಿ ಎಬ್ಬಿಸಿದೆ. ಕೆಲವೇ ಕೋಟಿ ಬಜೆಟ್ನಲ್ಲಿ ನಿರ್ಮಾಣಗೊಂಡ ಈ ಸಿನಿಮಾ ಈಗಾಗಲೇ ಮಲಯಾಳಂ ಚಿತ್ರರಂಗದ ಈವರೆಗಿನ ಎಲ್ಲ ಬಾಕ್ಸ್ ಆಫೀಸ್ ದಾಖಲೆಗಳನ್ನು ದೂಳೆಬ್ಬಿಸಿದೆ. ಮಲಯಾಳಂನಲ್ಲಿ ಬಿಡುಗಡೆ ಆದ ಕೆಲ ದಿನಗಳ ಬಳಿಕ ತಮಿಳಿನಲ್ಲಿ ಬಿಡುಗಡೆ ಆಗಿ ಅಲ್ಲಿಯೂ ಭರ್ಜರಿ ಕಲೆಕ್ಷನ್ ಮಾಡಿತು. ರಜನೀಕಾಂತ್ ನಟನೆಯ ‘ಲಾಲ್ ಸಲಾಂ’ ಜೊತೆಗೆ ಬಿಡುಗಡೆ ಆದ ಈ ಸಿನಿಮಾ ‘ಲಾಲ್ ಸಲಾಂ’ ಕಲೆಕ್ಷನ್ ಅನ್ನು ಹಿಂದಿಕ್ಕಿ ಸೂಪರ್ ಹಿಟ್ ಎನಿಸಿಕೊಂಡಿದೆ. ಇನ್ನೇನು ಕೆಲವೇ ದಿನಗಳಲ್ಲಿ ಒಟಿಟಿಯಲ್ಲಿಯೂ ಬಿಡುಗಡೆ ಆಗಲಿರುವ ಈ ಸಿನಿಮಾ ಇದೀಗ ತೆಲುಗು ರಾಜ್ಯಗಳಲ್ಲಿ ಬಿಡುಗಡೆ ಆಗುತ್ತಿದೆ.
ನೈಜ ಘಟನೆಯನ್ನು ಆಧರಿಸಿದ ‘ಮಂಜ್ಞುಮ್ಮೆಲ್ ಬಾಯ್ಸ್’ ಸಿನಿಮಾ ಫೆಬ್ರವರಿ 22 ಕ್ಕೆ ಬಿಡುಗಡೆ ಆಗಿತ್ತು. ಬಿಡುಗಡೆ ಆದ ಕೆಲವೇ ದಿನಗಳಲ್ಲಿ ಭರ್ಜರಿ ಗಳಿಕೆ ಕಂಡ ಈ ಸಿನಿಮಾ ಬಳಿಕ ತಮಿಳಿಗೆ ಡಬ್ ಆಗಿ ಬಿಡುಗಡೆ ಆಯ್ತು. ಕಮಲ್ ಹಾಸನ್ರ ‘ಗುಣ’ ಸಿನಿಮಾದ ಲಿಂಕ್ ಸಹ ಈ ಸಿನಿಮಾದಲ್ಲಿರುವ ಕಾರಣ ತಮಿಳು ಪ್ರೇಕ್ಷಕರು ಸಿನಿಮಾವನ್ನು ಬಹುವಾಗಿ ಮೆಚ್ಚಿಕೊಂಡರು. ಸ್ವತಃ ಕಮಲ್ ಹಾಸನ್ ಸಹ ಸಿನಿಮಾ ವೀಕ್ಷಿಸಿ ಚಿತ್ರತಂಡದ ಜೊತೆಗೆ ಸಂವಾದ ನಡೆಸಿ, ಯುವಕರ ಪ್ರಯತ್ನಕ್ಕೆ ಭರಪೂರ ಮೆಚ್ಚುಗೆ ಸೂಚಿಸಿದರು. ಇದೀಗ ತೆಲುಗಿಗೆ ಡಬ್ ಆಗಿ ಬಿಡುಗಡೆ ಆಗುತ್ತಿದೆ ‘ಮಂಜ್ಞುಮ್ಮೆಲ್ ಬಾಯ್ಸ್’.
ಏಪ್ರಿಲ್ 6 ರಂದು ‘ಮಂಜ್ಞುಮ್ಮೆಲ್ ಬಾಯ್ಸ್’ ಸಿನಿಮಾ ಅದೇ ಹೆಸರಿನಲ್ಲಿ ತೆಲುಗು ರಾಜ್ಯಗಳಲ್ಲಿ ಬಿಡುಗಡೆ ಆಗಲಿದ್ದು, ತೆಲುಗಿನ ಟಾಪ್ ನಿರ್ಮಾಣ ಹಾಗೂ ವಿತರಣೆ ಸಂಸ್ಥೆಯಾದ ಮೈತ್ರಿ ಮೂವಿ ಮೇಕರ್ಸ್ ಈ ಸಿನಿಮಾದ ವಿತರಣೆ ಮಾಡಲಿದ್ದಾರೆ. ಕೆಲವು ದಿನಗಳ ಹಿಂದಷ್ಟೆ ಮಲಯಾಳಂನ ಸಣ್ಣ ಬಜೆಟ್ ಸಿನಿಮಾ ‘ಪ್ರೇಮಲು’ ತೆಲುಗಿಗೆ ಡಬ್ ಆಗಿ ಬಿಡುಗಡೆ ಆಗಿ ಸುಮಾರು 100 ಕೋಟಿ ಗಳಿಕೆ ಮಾಡಿತ್ತು. ‘ಪ್ರೇಮಲು’ ಸಿನಿಮಾವನ್ನು ಎಸ್ಎಸ್ ರಾಜಮೌಳಿ ಪುತ್ರ ತೆಲುಗಿಗೆ ತಂದಿದ್ದರು. ಇದೀಗ ‘ಮಂಜ್ಞುಮ್ಮೆಲ್ ಬಾಯ್ಸ್’ ಸಿನಿಮಾವನ್ನು ತೆಲುಗಿಗೆ ತರಲಾಗುತ್ತಿದ್ದು, ಸಿನಿಮಾವನ್ನು ತೆಲುಗು ಪ್ರೇಕ್ಷಕರು ಹೇಗೆ ಸ್ವೀಕರಿಸುತ್ತಾರೆ ಕಾದು ನೋಡಬೇಕಿದೆ.
ಇದನ್ನೂ ಓದಿ:ಒಟಿಟಿಗೆ ಬರೋಕೆ ರೆಡಿ ಆದ ಮಲಯಾಳಂನ ‘ಮಂಜುಮ್ಮೇಲ್ ಬಾಯ್ಸ್’; ಕನ್ನಡದಲ್ಲೂ ವೀಕ್ಷಣೆಗೆ ಲಭ್ಯ
ಇದರ ನಡುವೆಯೇ ‘ಮಂಜ್ಞುಮ್ಮೆಲ್ ಬಾಯ್ಸ್’ ಸಿನಿಮಾ ಒಟಿಟಿ ಬಿಡುಗಡೆ ದಿನಾಂಕ ಸಹ ಘೋಷಣೆಯಾಗಿದೆ. ‘ಮಂಜ್ಞುಮ್ಮೆಲ್ ಬಾಯ್ಸ್’ ಸಿನಿಮಾ ಮಲಯಾಳಂ, ತಮಿಳು, ತೆಲುಗು, ಕನ್ನಡ ಹಾಗೂ ಹಿಂದಿ ಭಾಷೆಯಲ್ಲಿ ಏಪ್ರಿಲ್ 5 ರಿಂದ ಡಿಸ್ನಿ ಪ್ಲಸ್ ಹಾಟ್ಸ್ಟಾರ್ನಲ್ಲಿ ವೀಕ್ಷಣೆಗೆ ಲಭ್ಯವಾಗಲಿದೆ. ವಿಶೇಷವೆಂದರೆ ಒಟಿಟಿಗೆ ಬಿಡುಗಡೆ ಆದ ಮರುದಿನ ಅಂದರೆ ಏಪ್ರಿಲ್ ಆರರಿಂದ ಆಂಧ್ರ-ತೆಲಂಗಾಣದ ಕೆಲವು ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆ ಆಗಲಿದೆ.
ಕೇರಳದ ಕೆಲ ಯುವಕರು ಕಮಲ್ ಹಾಸನ್ ನಟನೆಯ ತಮಿಳಿನ ‘ಗುಣ’ ಸಿನಿಮಾದ ಚಿತ್ರೀಕರಣ ನಡೆದ ಗುಣ ಗುಹೆಗಳನ್ನು ನೋಡಲು ಹೋದಾಗ ಗುಂಪಿನಲ್ಲಿದ್ದ ಯುವಕನೊಬ್ಬ ಅಲ್ಲಿನ ಡೆವಿಲ್ಸ್ ಕಿಚನ್ ಹೆಸರಿನ ಕಂದರದ ಬಿದ್ದಾಗ ಆತನನ್ನು ಯುವಕರ ಗುಂಪು ಹೇಗೆ ರಕ್ಷಣೆ ಮಾಡುತ್ತದೆ ಎಂಬುದೇ ‘ಮಂಜ್ಞುಮ್ಮೆಲ್ ಬಾಯ್ಸ್’ ಸಿನಿಮಾದ ಕತೆ. ನೈಜ ಘಟನೆಯ ಈ ಸಿನಿಮಾವನ್ನು ಅಷ್ಟೇ ನೈಜತೆಯಿಂದ ತೆರೆಗೆ ತಂದಿದ್ದಾರೆ ನಿರ್ದೇಶಕ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ