ಇದು ಸಾವೋ ಅಥವಾ ಕೊಲೆಯೋ? ಬೆಂಗಳೂರಲ್ಲಿ ಸಂಬಂಧಿಕರನ್ನು ಕಳೆದುಕೊಂಡು ಸರ್ಕಾರಕ್ಕೆ ಹಿಡಿಶಾಪ ಹಾಕಿದ ಬಾಲಿವುಡ್ ನಟಿ
ಆಸ್ಪತ್ರೆಯಲ್ಲಿ ಆಕ್ಸಿಜನ್ ಹಾಗೂ ಬೆಡ್ ಸಿಗುವವರೆಗೆ ನಾನು ಜಿಎಸ್ಟಿ ಪಾವತಿಸುವುದಿಲ್ಲ ಎಂದು ಬಿಜೆಪಿ ಇಂಡಿಯಾ ಹಾಗೂ ಪಿಎಂಒ ಇಂಡಿಯಾಗೆ ಟ್ಯಾಗ್ ಮಾಡಿದ್ದಾರೆ ಮೀರಾ.
ನಟಿ ಮೀರಾ ಚೋಪ್ರಾ ಸಿನಿಮಾದಲ್ಲಿ ಅಷ್ಟಾಗಿ ಆ್ಯಕ್ಟಿವ್ ಆಗಿಲ್ಲ. ಆದಾಗ್ಯೂ ಕೆಲ ವಿಚಾರಕ್ಕೆ ಅವರು ಸುದ್ದಿಯಾಗುತ್ತಲೇ ಇರುತ್ತಾರೆ. ಅಭಿಮಾನಿಗಳ ಸಂಪರ್ಕದಲ್ಲಿರುವ ಉದ್ದೇಶದಿಂದ ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿದ್ದಾರೆ. ಈಗ ಕೊರೊನಾದಿಂದ ಕುಟುಂಬದ ಇಬ್ಬರು ಸದಸ್ಯರನ್ನು ಕಳೆದುಕೊಂಡ ಬಗ್ಗೆ ಅವರು ಕಣ್ಣೀರು ಹಾಕಿದ್ದಾರೆ.
ಕೊರೊನಾ ವೈರಸ್ಗೆ ಅನೇಕರು ಬಲಿಯಾಗುತ್ತಿದ್ದಾರೆ. ಸಾಕಷ್ಟು ಸೆಲೆಬ್ರಿಟಿಗಳು ಕೊವಿಡ್ನಿಂದ ಬಲಿಯಾಗಿದ್ದಾರೆ. ಅನೇಕ ನಟ-ನಟಿಯರಿಗೆ ಕೊರೊನಾ ಬಂದಿದ್ದರೂ ಅವರು ಗುಣಮುಖರಾಗಿದ್ದಾರೆ. ಮೀರಾ ಕುಟುಂಬದಲ್ಲೂ ಕೊರೊನಾ ಅಬ್ಬರ ಜೋರಾಗಿದೆ. ಪರಿಣಾಮ ಅವರ ಮನೆಯ ಸದಸ್ಯರು ಮೃತಪಟ್ಟಿದ್ದಾರೆ.
ನನ್ನ ಸೋದರ ಸಂಬಂಧಿ ಬೆಂಗಳೂರಿನಲ್ಲಿರುತ್ತಿದ್ದರು. ಅವರು ಕೊವಿಡ್ನಿಂದ ಮೃತಪಟ್ಟಿದ್ದಾರೆ. ಆಮ್ಲಜನಕ ಮಟ್ಟ ತೀವ್ರವಾಗಿ ಕುಸಿದಿತ್ತು. 24 ಗಂಟೆ ಆದರೂ ಐಸಿಯು ಬೆಡ್ ಸಿಕ್ಕಿಲ್ಲ. ಇನ್ನೇನು ಉಸಿರು ಹೋಗುತ್ತದೆ ಎನ್ನುವಾಗ ಬೆಡ್ ಸಿಕ್ಕಿದೆ. ಪ್ರಯೋಜನ ಏನು? ಇದು ಸಾವೋ ಅಥವಾ ಕೊಲೆಯೋ? ಸರ್ಕಾರದಿಂದಾಗಿ ನಾವು ವೈದ್ಯಕೀಯವಾಗಿ ಅಂಗವಿಕಲರಾಗಿದ್ದೇವೆ’ ಎಂದು ಟ್ವೀಟ್ ಮಾಡಿದ್ದಾರೆ.
ಕಳೆದ ಒಂದು ವಾರದಲ್ಲಿ ನಮ್ಮ ಕುಟುಂಬದಲ್ಲಿ ಇಬ್ಬರು ಮೃತಪಟ್ಟಿದ್ದಾರೆ, ಈ ರೀತಿ ಅಸಹಾಯಕ ಭಾವನೆ ಯಾವಾಗಲೂ ಕಾಡಿರಲಿಲ್ಲ. ನನ್ನ ದೇಹ ಜಡತ್ವ ಪಡೆದುಕೊಂಡು ಕೋಪವೂ ಬರದಂತಾಗಿದೆ ಎಂದು ನೋವು ಹೊರಹಾಕಿದ್ದಾರೆ.
ಆಸ್ಪತ್ರೆಯಲ್ಲಿ ಆಕ್ಸಿಜನ್ ಹಾಗೂ ಬೆಡ್ ಸಿಗುವವರೆಗೆ ನಾನು ಜಿಎಸ್ಟಿ ಪಾವತಿಸುವುದಿಲ್ಲ ಎಂದು ಬಿಜೆಪಿ ಇಂಡಿಯಾ ಹಾಗೂ ಪಿಎಂಒ ಇಂಡಿಯಾಗೆ ಟ್ಯಾಗ್ ಮಾಡಿದ್ದಾರೆ ಮೀರಾ.
ಮೀರಾ ಚೋಪ್ರಾ ಟಾಲಿವುಡ್ನ ಕೆಲ ಸಿನಿಮಾಗಳಲ್ಲಿ ನಟಿಸಿದ್ದಾರೆ. ಪವನ್ ಕಲ್ಯಾಣ್ ನಟನೆಯ ಬಂಗಾರಮ್ ಸೇರಿ ದಕ್ಷಿಣ ಭಾರತದ ಕೆಲವು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ದರ್ಶನ್ ನಟನೆಯ ಅರ್ಜುನ್ ಸಿನಿಮಾದಲ್ಲಿ ಮೀರಾ ನಟಿಸಿದ್ದರು. ಅವರಿಗೆ ಚಿತ್ರರಂಗದಲ್ಲಿ ಹೇಳಿಕೊಳ್ಳುವಂಥ ಯಶಸ್ಸು ಸಿಗಲೇ ಇಲ್ಲ. ಬಾಲಿವುಡ್ ಕೂಡ ಅವರ ಕೈ ಹಿಡಿಯಲಿಲ್ಲ. ಇದೆಲ್ಲದಕ್ಕೂ ಪ್ರಿಯಾಂಕಾ ಚೋಪ್ರಾ ಅವರೇ ಕಾರಣ ಎಂದು ಮೀರಾ ಚೋಪ್ರಾ ಆರೋಪಿಸಿದ್ದರು.
ಇದನ್ನೂ ಓದಿ: ಪ್ರಿಯಾಂಕಾ ಚೋಪ್ರಾ ನನ್ನ ಅವಕಾಶ ಕಿತ್ತುಕೊಂಡರು; ಮೀರಾ ಚೋಪ್ರಾ ಗಂಭೀರ ಆರೋಪ