The Kashmir Files: ಮೀಟುಗೋಲು; ಇದು ಪ್ರಜಾಪ್ರಭುತ್ವದ ಅಪಚಾರವಲ್ಲವೆ?

|

Updated on: Mar 16, 2022 | 10:48 AM

Common Man : ಅವರು ಅಂದು ಸಾರಿಸಿದ ತಿಪ್ಪೆಯನ್ನು ಇಂದು ಕೆದರುವುದಕ್ಕಿಂತ ಅಂದಿನ ನರಮೇಧದಲ್ಲಿ ಹತ್ಯೆಯಾದ ಬೇರೆಬೇರೆ ಧರ್ಮಗಳ ಕುಟುಂಬಗಳು ಇಂದು ಹೇಗಿರಬಹುದು, ಕಂಗೆಟ್ಟು ಓಡಿದ ಸಹಸ್ರಾರು ಜನ ಎಲ್ಲಿರಬಹುದು ಎಂಬುದು ಚರ್ಚೆಯಾಗಬೇಕು.

The Kashmir Files: ಮೀಟುಗೋಲು; ಇದು ಪ್ರಜಾಪ್ರಭುತ್ವದ ಅಪಚಾರವಲ್ಲವೆ?
ಲೇಖಕಿ ನೂತನ ದೋಶೆಟ್ಟಿ
Follow us on

ಮೀಟುಗೋಲು | Meetugoluಇದರ ಇನ್ನೊಂದು ಮುಖವನ್ನು ನಾನು ದೆಹಲಿಯಲ್ಲಿ ಕಂಡೆ. ಅವರು ಕಾಶ್ಮೀರ ವಿಶ್ವವಿದ್ಯಾಲಯದಲ್ಲಿದ್ದ ಪ್ರೊಫೆಸರ್ ಪಂಡಿತ್. 1990ರ ಒಂದು ರಾತ್ರಿ ಮಡದಿ ಹಾಗೂ ಇಬ್ಬರು ಪುಟ್ಟ ಹೆಣ್ಣುಮಕ್ಕಳನ್ನು ಕಟ್ಟಿಕೊಂಡು ಕೇವಲ ತಮ್ಮ ಮಾರ್ಕ್ಸ್ ಕಾರ್ಡುಗಳ ಫೈಲಿನೊಂದಿಗೆ ದೆಹಲಿಗೆ ಬಂದಿಳಿದ್ದಿದ್ದರು. ನಂತರ ದೆಹಲಿಯಲ್ಲಿ ಕೆಲಸ ಹುಡುಕಿ ಅಲ್ಲಿಯೇ ಬದುಕು ಕಟ್ಟಿಕೊಂಡವರು. ವಿದ್ಯೆಯ ಹಾಗೂ ಹಣದ ಬಲವಿರುವ ಅವರು ಮಾತೃಭೂಮಿಯನ್ನು ತೊರೆದು ತಮ್ಮ ಹಾಗೂ ತಮ್ಮವರ ಪ್ರಾಣ ಉಳಿಸಿಕೊಂಡರು. ಅವೆರಡೂ ಇಲ್ಲದ ಹತರಾಗದೇ ಉಳಿದ ಪಂಡಿತರು ಹೇಗೆ ಬದುಕಿದರೋ ತಿಳಿದಿಲ್ಲ. ಇದು ನಾನು ಕಂಡ ಕಾಶ್ಮೀರದ ಇನ್ನೊಂದು ಮುಖ. ಇಂದಿಗೂ ಕಾಶ್ಮೀರದಲ್ಲಿ ಮೂಲ ಸೌಕರ್ಯಗಳು ಇಲ್ಲ. ರಸ್ತೆ, ಸಂಚಾರ ಸಾಗಾಟದ ಅಭಿವೃದ್ಧಿಯಾಗಿಲ್ಲ. ಚಿಕ್ಕಮಕ್ಕಳು ನಡೆದೇ ಶಾಲೆಗೆ ಹೋಗುತ್ತವೆ. ಪ್ರವಾಸೋದ್ಯಮವನ್ನೇ ಅವಲಂಬಿಸಿರುವ ಈ ರಾಜ್ಯದಲ್ಲಿ ಅದಕ್ಕೆ ಅವಕಾಶವೇ ಇರದೆ ಜನ ಹೇಗೆ ಬದುಕುತ್ತಿರಬಹುದು?

 

ಸಿನೆಮಾ : ದಿ ಕಾಶ್ಮೀರ ಫೈಲ್ಸ್ (The Kashmir Files) | ಲೇಖಕಿ : ನೂತನ ದೋಶೆಟ್ಟಿ (Nutan Doshetty

(ಭಾಗ 4)

ಮೂರು ದಶಕಗಳಿಂದ ಸರಿಯಾದ ಶಿಕ್ಷಣವೇ ಸಿಗದ ಇಲ್ಲಿನ ಯುವಜನತೆ ಹಾಗೂ ಮಕ್ಕಳು ಹೇಗೆ ಸಂಪಾದಿಸುವ ದಾರಿಗಳನ್ನು ಕಂಡುಕೊಂಡಿರುಬಹುದು ಎಂಬುದು ಇಂದಿನ ಮುಖ್ಯ ಚರ್ಚೆಯಾಗಬೇಕು. ಕಾಶ್ಮೀರ ಭಾರತದ ಮುಕುಟಮಣಿ. ಅದು ಅಲುಗಾಡದಂತೆ ಕಾಪಾಡಿಕೊಳ್ಳಬೇಕಾದ ಹೊಣೆಗಾರಿಕೆ ಭಾರತದ್ದು. ಅದು ಇಂದಿನ ಮುಖ್ಯ ಗುರಿಯಾಗಬೇಕು. ಇವನ್ನು ಸಾಧಿಸುವ ಪ್ರಯತ್ನ ನಡೆಯಬೇಕಿದೆಯೇ ಹೊರತು ಅಂದು ಮರೆಮಾಚಿದ ಸತ್ಯವನ್ನು ಇಂದು ಹೊರಗೆಡವುದರಿಂದ ರಾಜಕಾರಣಿಗಳಲ್ಲದೇ ಇನ್ನು ಯಾರಿಗೆ ಲಾಭವಿದೆ? ಇಂತಹ ನೂರಾರು ಮರೆಮಾಚಿದ ಸತ್ಯಗಳು ಕಾಲಕಾಲಕ್ಕೆ ಕಾಲಗರ್ಭದಲ್ಲಿ ಅಡಗಿಸಲ್ಪಟ್ಟಿವೆ. ಯಾವ್ಯಾವುದನ್ನು ಹೊರಗೆಡಹುವುದು ಹಾಗೂ ಅದರಿಂದ ಯಾವ ಲಾಭವನ್ನು ನಿರೀಕ್ಷಿಸುವುದು?

ಒಂದು ಮುಖ್ಯ ವಿಚಾರವೆಂದರೆ ಎರಡು ದಶಕಗಳ ಕಾಲ ಕಾಶ್ಮೀರದಲ್ಲಿ ನಡೆದದ್ದನ್ನು ಜಗತ್ತು ನೋಡಿದ್ದು ಮಾಧ್ಯಮದ ಕಣ್ಣುಗಳ ಮೂಲಕ. ಭಾರತೀಯ ಮಾಧ್ಯಮಗಳು ಆಗ ಈಗಿನಂತೆ ಗುಣಗೆಟ್ಟಿರಲಿಲ್ಲ. 90ರ ದಶಕದಲ್ಲಿ ಇಂಡಿಯನ್ ಎಕ್ಸ್ಪ್ರೆಸ್, ಹಿಂದೂ , ಔಟ್ ಲುಕ್, ಇಂಡಿಯಾ ಟುಡೆ, ಫ್ರಂಟ್ ಲೈನ್ ಮೊದಲಾದ ಪತ್ರಿಕೆಗಳು ನಾಲ್ಕನೇ ಅಂಗಗಳಾಗಿ ನಿಯತ್ತಿನಿಂದ ಕೆಲಸ ಮಾಡುತ್ತಿದ್ದವು. ಅವುಗಳು ಇಷ್ಟು ದೊಡ್ಡ ಸುದ್ದಿಯನ್ನು ಪತ್ತೆ ಮಾಡಲಿಲ್ಲವೇ ಅಥವಾ ಅವುಗಳನ್ನು ಸರ್ಕಾರ ನಿಯಂತ್ರಿಸಿತೆ?

ಭಾಗ 2 : The Kashmir Files: ಮೀಟುಗೋಲು; ಸುಟ್ಟ ಮನೆಗಳು, ಅರೆಬಿದ್ದ ಮನೆಗಳಿಗೆ ಆಗ ತಾನೇ ಸರ್ಕಾರ ಮರಮ್ಮತ್ತು ಮಾಡಿತ್ತು

ಹಾಗೊಮ್ಮೆ ಇದ್ದರೆ ಅದೇ ವೇಳೆಯಲ್ಲಿ ಬೋಫೋರ್ಸ್ ಮೊದಲಾದ ದೊಡ್ಡ ಹಗರಣಗಳು ಹೊರ ಬಂದವಲ್ಲ! ಇಂಥ ಅನೇಕ ಗೊಂದಲಗಳನ್ನು ಕಾಶ್ಮೀರ ಫೈಲ್ಸ್ ಚಿತ್ರದ ಬಿಡುಗಡೆ ಎತ್ತುತ್ತಿದೆ. ರಾಜಕೀಯ ಹಾಗೂ ಧಾರ್ಮಿಕ ಮುಖಂಡರು ಎಂಥೆಂಥ ಷಡ್ಯಂತ್ರಗಳನ್ನು ರಚಿಸಿ, ಯಾರನ್ನೋ ದಾಳಗಾಗಿ ಬಳಸಿ, ಯಾರನ್ನೋ ಉಳಿಸಲು ಪ್ರಯತ್ನ ಪಟ್ಟು ಯಶಸ್ವಿಯಾಗಿರಬಹುದು. ಅವರು ಅಂದು ಸಾರಿಸಿದ ತಿಪ್ಪೆಯನ್ನು ಇಂದು ಕೆದರುವುದಕ್ಕಿಂತ ಅಂದು ನಡೆದ ನರಮೇಧದಲ್ಲಿ ಹತ್ಯೆಯಾದ ಬೇರೆ ಬೇರೆ ಧರ್ಮಗಳ ಜನರ ಕುಟುಂಬಗಳು ಇಂದು ಹೇಗಿರಬಹುದು, ದಿಕ್ಕಾಪಾಲಾಗಿ ಕಂಗೆಟ್ಟು ಓಡಿದ ಸಹಸ್ರಾರು ಜನ ಎಲ್ಲಿರಬಹುದು ಎಂಬುದು ಮುಖ್ಯ ಚರ್ಚೆಯಾಗಬೇಕು. ಏಕೆಂದರೆ ಅಂತಿಮ ಸೋಲು ಸದಾ ಸಾಮಾನ್ಯ ಮನುಷ್ಯನದು. ಆದರೆ ಅದು ಎಲ್ಲ ಕಾಲದಲ್ಲೂ ಗೌಣಾತಿಗೌಣ ವಿಷಯ. ಅದಕ್ಕೆ ಕಾಶ್ಮೀರ ಫೈಲ್ಸ್ ಜೀವ ತುಂಬಿದ್ದರೆ, ಅದು ಪ್ರಭುತ್ವದ ಪರವಾಗದೆ ಜನಪರವಾಗಿದ್ದರೆ ಆಗ ಅದು ಜನಮನ್ನಣೆಯನ್ನು ಸಹಜವಾಗಿಯೇ ಗಳಿಸುತ್ತಿತ್ತು. ಆದರೆ ಹಿಂದೆ ನಡೆದ ಸಾಮಾನ್ಯರ ಸಾವನ್ನು ಮುಂದಿಟ್ಟುಕೊಂಡು ಇಂದು ರಾಜಕೀಯ ಮಾಡಹೊರಡುವುದು ಪ್ರಜಾಪ್ರಭುತ್ವದ ಅಪಚಾರವಲ್ಲವೆ?

(ಮುಗಿಯಿತು)

ಪ್ರತಿಕ್ರಿಯೆಗಾಗಿ : tv9kannadadigital@gmail.com

ಎಲ್ಲ ಭಾಗಗಳನ್ನೂ ಇಲ್ಲಿ ಓದಿ : https://tv9kannada.com/tag/meetugolu

Published On - 10:47 am, Wed, 16 March 22