ಮುಂಜಾಗೃತೆಯಿಂದಾಗಿ ದೊಡ್ಡ ಪ್ರಮಾದದಿಂದ ಪಾರಾದ ಬಗ್ಗೆ ಹೇಳಿಕೊಂಡ ನಟ ಚಿರಂಜೀವಿ

Chiranjeevi: ಬಹಿರಂಗವಾಗಿ ಎಂದೂ ಹೇಳಿಕೊಳ್ಳದ ವಿಷಯವನ್ನು ಕಾರ್ಯಕ್ರಮವೊಂದರಲ್ಲಿ ಹೇಳಿಕೊಂಡು ಮುಂಜಾಗೃತೆ ಎಷ್ಟು ಅವಶ್ಯಕ ಎಂದ ಬಗ್ಗೆ ವಿವರಿಸಿದ್ದಾರೆ ನಟ ಚಿರಂಜೀವಿ.

ಮುಂಜಾಗೃತೆಯಿಂದಾಗಿ ದೊಡ್ಡ ಪ್ರಮಾದದಿಂದ ಪಾರಾದ ಬಗ್ಗೆ ಹೇಳಿಕೊಂಡ ನಟ ಚಿರಂಜೀವಿ
ಚಿರಂಜೀವಿ

Updated on: Jun 03, 2023 | 7:39 PM

ಮೆಗಾಸ್ಟಾರ್ ಚಿರಂಜೀವಿಗೆ (Megastar Chiranjeevi) ಈಗ 67 ವರ್ಷ ವಯಸ್ಸು. ಈಗಲೂ ತೆಲುಗು ಚಿತ್ರರಂಗದಲ್ಲಿ (Tollywood) ಬಹು ಸಕ್ರಿಯರಾಗಿದ್ದಾರೆ. ಎರಡೆರಡು ಸಿನಿಮಾಗಳಲ್ಲಿ ಒಟ್ಟಿಗೆ ನಟಿಸುತ್ತಿದ್ದಾರೆ. ಸಿನಿಮಾಗಳು ಮಾತ್ರವೇ ಅಲ್ಲದೆ ಹಲವು ಸಾರ್ವಜನಿಕ ಕಾರ್ಯಕ್ರಮಗಳಲ್ಲಿಯೂ ಭಾಗಿಯಾಗುತ್ತಿರುತ್ತಾರೆ. ಆರೋಗ್ಯದ ಬಗ್ಗೆ ಅತೀವ ಕಾಳಜಿ ಹೊಂದಿರುವ ಚಿರಂಜೀವಿ, ಆರೋಗ್ಯ ಸಂಬಂಧಿ ಸಾಮಾಜಿಕ ಕಾರ್ಯಗಳಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಬ್ಲಡ್ ಬ್ಯಾಂಕ್​ಗಳು, ಉಚಿತ ಆಸ್ಪತ್ರೆ ನಿರ್ಮಾಣವನ್ನು ಚಿರಂಜೀವಿ ಮಾಡಿದ್ದಾರೆ. ಇತ್ತೀಚೆಗೆ ಸ್ಟಾರ್ ಕ್ಯಾನ್ಸರ್ ಸೆಂಟರ್ ಉದ್ಘಾಟನೆ ವೇಳೆ ತಮ್ಮ ಮುಂಜಾಗೃತೆಯಿಂದ ಹೇಗೆ ತಾವು ದೊಡ್ಡ ಆರೋಗ್ಯ ಸಮಸ್ಯೆಯಿಂದ ಪಾರಾದೆ ಎಂಬ ಬಗ್ಗೆ ಚಿರಂಜೀವಿ ಮಾತನಾಡಿದ್ದಾರೆ.

”ನಾನು ಈ ಬಗ್ಗೆ ಯಾರ ಬಳಿಯೂ ಹೇಳಿಕೊಂಡಿಲ್ಲ. ಸಾರ್ವಜನಿಕ ವೇದಿಕೆಯಲ್ಲಿ ಇದೇ ಮೊದಲ ಬಾರಿಗೆ ಈ ಬಗ್ಗೆ ಮಾತನಾಡುತ್ತಿದ್ದೇನೆ” ಎಂದು ಮಾತು ಮುಂದುವರೆಸಿದ ಚಿರಂಜೀವಿ, ”ಮುಂಜಾಗೃತೆ ಎಂಬುದು ಪ್ರತಿಯೊಬ್ಬರಿಲ್ಲಿಯೂ ಇರಬೇಕು. ಇದಕ್ಕೆ ನಾನೇ ಉದಾಹರಣೆ. ನಾನು ಅಂದುಕೊಂಡಿದ್ದೆ ನಾನು ಬಹಳ ಆರೋಗ್ಯವಾಗಿದ್ದೇನೆ ಎಂದು. ಪ್ರತಿದಿನ ವ್ಯಾಯಾಮ ಮಾಡುತ್ತೇನೆ. ಒಳ್ಳೆಯ ಆಹಾರ ತಿನ್ನುತ್ತೇನೆ, ಫೈಬರ್ ಹೆಚ್ಚು ಸೇವನೆ ಮಾಡುತ್ತಿದ್ದೇನೆ, ಸಮತೋಲಿತ ಆಹಾರ ಸೇವನೆ ಮಾಡುತ್ತಿದ್ದೇನೆ. ನನಗೆ ಸಿಗರೇಟು ಅಥವಾ ತಂಬಾಕು ಅಭ್ಯಾಸಗಳಿಲ್ಲ, ಯಾವಾಗಲಾದರೂ ಬಹಳ ಅಪರೂಪಕ್ಕೆ ವೈನ್ ಚೂರು ಸೇವಿಸುತ್ತೇನೆ ಹೊರತಾಗಿ ಇನ್ಯಾವುದೇ ಅಭ್ಯಾಸಗಳಲಿಲ್ಲವಾದ್ದರಿಂದ ನನಗೆ ಏನು ಆಗುವುದಿಲ್ಲ ಎಂದು ಅಂದುಕೊಂಡಿದ್ದೆ” ಎಂದಿದ್ದಾರೆ ಚಿರಂಜೀವಿ.

ಆದರೆ ನನಗೆ ಕೊಲೊನೊ ಕ್ಯಾನ್ಸರ್ ಬಗ್ಗೆ ತಿಳಿಯಿತು. 40-45 ದಾಟಿದ ಬಳಿಕ ಕೊಲೊನೊ ಕ್ಯಾನ್ಸರ್ ಬರುವ ಸಾಧ್ಯತೆ ಇದೆ. ಅದರ ಲಕ್ಷಣಗಳು ಮೊದಲೇ ತಿಳಿಯುವುದಿಲ್ಲ, ನಾಲ್ಕನೇ ಸ್ಟೇಜ್​ಗೆ ಬಂದ ಬಳಿಕವಷ್ಟೆ ಗೊತ್ತಾಗುತ್ತದೆ ಎಂಬುದು ತಿಳಿಯಿತು. ಹಾಗಿದ್ದರೆ ನಾನೇಕೆ ಅದರ ಪರೀಕ್ಷೆ ಮಾಡಿಸಬಾರದು ಎನಿಸಿ ಕೂಡಲೇ ನಾನು ಎಐಜಿ ಆಸ್ಪತ್ರೆಯ ವೈದ್ಯ ನಾಗೇಶ್ವರ ರಾವ್ ಅವರ ಬಳಿ ಹೋದೆ. ಅವರು ಪರೀಕ್ಷೆ ಮಾಡಿದಾಗ ದೊಡ್ಡ ಕರುಳಿನಲ್ಲಿ ಪಾಲಿಬ್ಸ್ ಅಂಶಗಳು ಪತ್ತೆಯಾದವು. ಅವು ಆ ಸಮಯಕ್ಕೆ ಅಪಾಯಕಾರಿ ಅಲ್ಲದಿದ್ದರೂ ಅವು ಮುಂದೆ ಕ್ಯಾನ್ಸರ್ ಜೀವಕಣಗಳಾಗಿ ಪರಿವರ್ತನೆಗೊಳ್ಳುವ ಅಪಾಯ ಇತ್ತು. ಹಾಗಾಗಿ ನಾಗೇಶ್ವರ್ ರಾವ್ ಅವರು ಆಪರೇಷನ್ ಮಾಡಿ ಅವನ್ನು ತೆಗೆದರು” ಎಂದಿದ್ದಾರೆ ಚಿರಂಜೀವಿ.

ಇದನ್ನೂ ಓದಿ:ಚಿರಂಜೀವಿಯನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದ, ಕನ್ನಡದಲ್ಲೂ ಸಿನಿಮಾ ಮಾಡಿದ್ದ ನಿರ್ದೇಶಕ ಕೆ. ವಾಸು ನಿಧನ

”ಒಂದೊಮ್ಮೆ ನಾನು ಆರೋಗ್ಯವಾಗಿದ್ದೇನೆ, ನನಗೆ ಏನೂ ಆಗುವುದಿಲ್ಲ ಎಂದುಕೊಂಡು ಸುಮ್ಮನೆ ಆಗಿಬಿಟ್ಟಿದ್ದಿದ್ದರೆ ಎರಡು ಮೂರು ವರ್ಷದಲ್ಲಿ ನನ್ನ ಪರಿಸ್ಥಿತಿ ಏನಾಗುತ್ತಿತ್ತೊ ಗೊತ್ತಿಲ್ಲ. ಹಾಗಾಗಿ ಆರೋಗ್ಯದ ಬಗ್ಗೆ ಮುಂಜಾಗೃತೆ ಬಹಳ ಅವಶ್ಯಕವಾದುದು. ಮಾತ್ರವಲ್ಲ ಆರೋಗ್ಯ ಸಮಸ್ಯೆಗಳ ಬಗ್ಗೆ ಮುಕ್ತವಾಗಿ ಮಾತನಾಡುವುದು ಸಹ ಬಹಳ ಮುಖ್ಯ. ನನಗೆ ನನ್ನ ಆರೋಗ್ಯ ಸಮಸ್ಯೆಗಳ ಬಗ್ಗೆ ಮಾತನಾಡಲು, ಹೇಳಿಕೊಳ್ಳಲು ಯಾವುದೇ ಮುಜುಗರ ಇಲ್ಲ. ನೀವೂ ಸಹ ಮುಜುಗರ ಪಟ್ಟುಕೊಳ್ಳಬೇಡಿ, ಮುಂಜಾಗೃತೆ ಇರಲಿ. ಮುಂಜಾಗೃತೆಯು ಮುಂದೆ ಬರುವ ದೊಡ್ಡ ಅಪಾಯದಿಂದ ನಿಮ್ಮನ್ನು ಪಾರು ಮಾಡಬಹುದು” ಎಂದಿದ್ದಾರೆ ನಟ ಚಿರಂಜೀವಿ.

ಸಿನಿಮಾ ವಿಷಯಕ್ಕೆ ಮರಳುವುದಾದರೆ ಚಿರಂಜೀವಿ ಪ್ರಸ್ತುತ ಭೋಲಾ ಶಂಕರ್ ಹೆಸರಿನ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ತಮಿಳು ಸಿನಿಮಾದ ರೀಮೇಕ್ ಆಗಿರುವ ಈ ಸಿನಿಮಾದಲ್ಲಿ ಕೀರ್ತಿ ಸುರೇಶ್ ಸಹ ಇದ್ದಾರೆ. ಆ ಸಿನಿಮಾದ ಬಳಿಕ ಆಟೋ ಜಾನಿ ಹೆಸರಿನ ಸಿನಿಮಾದಲ್ಲಿ ನಟಿಸಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ